ಕೊನೆಗೂ ಪಾಕಿಸ್ತಾನ ತಂಡಕ್ಕೆ ವೀಸಾ ಅನುಮತಿಸಿದ ಕೇಂದ್ರ, ಸೆ.27ಕ್ಕೆ ಭಾರತಕ್ಕೆ ಆಗಮನ!

By Suvarna News  |  First Published Sep 25, 2023, 9:10 PM IST

ಭಾರತ ಆತಿಥ್ಯವಹಿಸಿರುವ ವಿಶ್ವಕಪ್ ಟೂರ್ನಿಗೆ ತಂಡಗಳು ಭಾರತಕ್ಕೆ ಆಗಮಿಸುತ್ತಿದೆ. ಆದರೆ ಪಾಕಿಸ್ತಾನ ತಂಡಕ್ಕೆ ವೀಸಾ ಅನುಮತಿ ಸಿಕ್ಕಿರಲಿಲ್ಲ. ಭಾರತದ ವಿಳಂಬ ನೀತಿ ವಿರುದ್ದ ಪಾಕಿಸ್ತಾನ ಭಾರಿ ವಿರೋಧ ವ್ಯಕ್ತಪಡಿಸಿತ್ತು. ಇದೀಗ ಕೇಂದ್ರ ಸರ್ಕಾರ ಪಾಕ್ ತಂಡದ ಭಾರತ ಪ್ರವಾಸಕ್ಕೆ ಗ್ರೀನ್ ಸಿಗ್ನಲ್ ನೀಡಿದೆ. ಆದರೆ ವಿಶ್ವಕಪ್ ಆರಂಭಕ್ಕೂ ಕೆಲವೇ ದಿನ ಮೊದಲು ಪಾಕ್ ತಂಡ ಭಾರತಕ್ಕೆ ಆಗಮಿಸಲಿದೆ.


ನವದೆಹಲಿ(ಸೆ.25) ಏಕದಿನ ವಿಶ್ವಕಪ್ ಟೂರ್ನಿ ಆರಂಭಕ್ಕೆ ಕೆಲ ದಿನಗಳು ಮಾತ್ರ ಬಾಕಿ. ಅಕ್ಟೋಬರ್ 5 ರಂದು ವಿಶ್ವಕಪ್ ಟೂರ್ನಿ ಆರಂಭಗೊಳ್ಳುತ್ತಿದೆ. ಆದರೆ ಭಾರತ ಪ್ರವಾಸಕ್ಕೆ ಸಜ್ಜಾಗಿದ್ದ ಪಾಕಿಸ್ತಾನಕ್ಕೆ ವೀಸಾ ಸಮಸ್ಯೆ ಎದುರಾಗಿತ್ತು. ಕೆಲ ಕಾನೂನು ತೊಡಕಿನ ಕಾರಣ ಕೇಂದ್ರ ಸರ್ಕಾರದ ಪಾಕಿಸ್ತಾನ ತಂಡಕ್ಕೆ ವೀಸಾ ನೀಡಲು ವಿಳಂಬ ಮಾಡಿತ್ತು. ಇದನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿ ವಿರೋಧಿಸಿತ್ತು. ಈ ಹಗ್ಗಜಗ್ಗಾಟದ ನಡುವೆ ಇದೀಗ ಕೇಂದ್ರ ಸರ್ಕಾರ ಪಾಕಿಸ್ತಾನ ತಂಡದ ಭಾರತ ಪ್ರವಾಸಕ್ಕೆ ಗ್ರೀನ್ ಸಿಗ್ನಲ್ ನೀಡಿದೆ. ಕೇಂದ್ರ ಸರ್ಕಾರ ಪಾಕಿಸ್ತಾನ ಆಟಗಾರರಿಗೆ ಭಾರತದ ವೀಸಾ ಅನುಮತಿಸಿದೆ. ಇದೀಗ ಪಾಕಿಸ್ತಾನ ತಂಡ ಸೆಪ್ಟೆಂಬರ್ 27ರಂದು ಭಾರತಕ್ಕೆ ಆಗಮಿಸಲಿದೆ. 

ವಿಶ್ವಕಪ್ ಟೂರ್ನಿ ಆರಂಭಕ್ಕೂ ಕೆಲವೇ ದಿನಗಳ ಮುನ್ನ ಪಾಕಿಸ್ತಾನ ತಂಡ ಭಾರತಕ್ಕೆ ಆಗಮಿಸಲಿದೆ. ಸೆಪ್ಟೆಂಬರ್ 19 ರಂದೇ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಭಾರತ ಪ್ರವಾಸಕ್ಕಾಗಿ ವೀಸಾ ಅನುಮತಿ ಕೋರಿತ್ತು. ಭಾರತದ ನಿಯಮದ ಪ್ರಕಾರ ವೀಸಾ ಅನುಮತಿಸಲು 5 ವರ್ಕಿಂಗ್ ದಿನಗಳ ಅಗತ್ಯವಿದೆ. ಇದರ ನಡುವೆ ಸರ್ಕಾರಿ ರಜಾದಿನ ಹಾಗೂ ಕೆಲ ಕಾನೂನು ತೊಡಕಿನ ಕಾರಣ ವಿಳಂವಾಗಿತ್ತು. ಭಾರತ ಉದ್ದೇಶಪೂರ್ವಕವಾಗಿ ವೀಸಾ ವಿಳಂಬ ಮಾಡುತ್ತಿದೆ ಎಂದು ಪಿಸಿಬಿ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಗೆ ದೂರು ನೀಡಿತ್ತು.

Latest Videos

undefined

ಯಾರು ಟೀಂ ಇಂಡಿಯಾವನ್ನು ಸೋಲಿಸ್ತಾರೋ ಅವರೇ 2023ರ ವಿಶ್ವಕಪ್ ಗೆಲ್ತಾರೆ: ಇಂಗ್ಲೆಂಡ್ ಮಾಜಿ ನಾಯಕನ ಭವಿಷ್ಯ

ವೀಸಾ ವಿಳಂಬ ಮಾಡುತ್ತಿರುವುದರಿಂದ ಪಾಕಿಸ್ತಾನ ತಂಡದ ಅಭ್ಯಾಸಕ್ಕೆ ಸಮಸ್ಯೆಯಾಗುತ್ತಿದೆ. ಸೆಪ್ಟೆಂಬರ್ 19ರಂದೇ ಅನುಮತಿ ಕೋರಲಾಗಿದೆ. ಆದರೆ ಭಾರತ ಸುಖಾಸುಮ್ಮನೆ ವಿಳಂಬ ಮಾಡಿ ತಂಡವನ್ನು ಒತ್ತಡಕ್ಕೆ ತಳ್ಳುತ್ತಿದೆ. ಇದು ಪಾಕಿಸ್ತಾನ ತಂಡದ ವಿಶ್ವಕಪ್ ಟೂರ್ನಿ ತಯಾರಿಗೆ ಹಿನ್ನಡೆ ತರುತ್ತಿದೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ದೂರಿನಲ್ಲಿ ಹೇಳಿತ್ತು.

ವೀಸಾ ಪಡೆದಿರುವ ಪಾಕಿಸ್ತಾನ ಆಟಗಾರರು ಇದೀಗ ಸೆಪ್ಟೆಂಬರ್ 26 ರಂದು ದುಬೈಗೆ ತೆರಳಿ, ಅಲ್ಲಿಂದ ಭಾರತಕ್ಕೆ ಆಗಮಿಸಲಿದ್ದಾರೆ. ಇನ್ನು ಸೆಪ್ಟೆಂಬರ್ 29 ರಂದು ಪಾಕಿಸ್ತಾನ ತಂಡ ನ್ಯೂಜಿಲೆಂಡ್ ವಿರುದ್ದ ಅಭ್ಯಾಸ ಪಂದ್ಯ ಆಡಲಿದೆ.ಪಾಕ್‌ ತಂಡ ಕೊನೆ ಬಾರಿ 2016ರಲ್ಲಿ ಭಾರತಕ್ಕೆ ಆಗಮಿಸಿತ್ತು.  

'ಎಂತ ಹೊಡೆತ..!': ಗಿಲ್ ಬ್ಯಾಟಿಂಗ್‌ಗೆ ತೆಂಡುಲ್ಕರ್ ಪುತ್ರಿ ಸಾರಾ ದಿಲ್ ಖುಷ್..!

ಏಷ್ಯಾಕಪ್ ಟೂರ್ನಿಗೆ ಆತಿಥ್ಯ ವಹಿಸಿದ್ದ ಪಾಕಿಸ್ತಾನಕ್ಕೆ ಪ್ರವಾಸ ಮಾಡಲು ಭಾರತ ನಿರಾಕರಿಸಿತ್ತು. ಹೀಗಾಗಿ ಏಷ್ಯಾಕಪ್ ಟೂರ್ನಿ ಕೆಲ ಪಂದ್ಯಗಳು ಮಾತ್ರ ಪಾಕಿಸ್ತಾನದಲ್ಲಿ ಆಯೋಜನೆ ಗೊಂಡರೆ ಉಳಿದ ಪಂದ್ಯಗಳು ಶ್ರೀಲಂಕಾದಲ್ಲಿ ಆಯೋಜಿಸಲಾಗಿತ್ತು. ಭಾರತ ಪ್ರವಾಸ ನಿರಾಕರಿಸಿದ ಕಾರಣ, ಪಾಕಿಸ್ತಾನ ಏಕದಿನ ವಿಶ್ವಕಪ್ ಟೂರ್ನಿ ಬಹಿಷ್ಕರಿಸುವುದಾಗಿ ಎಚ್ಚರಿಸಿತ್ತು. ಭಾರತ ಪ್ರವಾಸ ಮಾಡುವುದಿಲ್ಲ ಎಂದಿತ್ತು. ಬಳಿಕ ಪಾಕಿಸ್ತಾನ ತನ್ನ ಪಟ್ಟು ಸಡಿಲಿಸಿತ್ತು.

click me!