
ದುಬೈ(ಫೆ.16): ಮುಂಬರುವ ಐಸಿಸಿ ಮಹಿಳಾ ಏಕದಿನ ಕ್ರಿಕೆಟ್ ವಿಶ್ವಕಪ್‌ನಲ್ಲಿ (ICC Women's World Cup) ಚಾಂಪಿಯನ್ ಆಗುವ ತಂಡಕ್ಕೆ ಕಳೆದ ಬಾರಿಗಿಂತ ದುಪ್ಪಟ್ಟು ನಗದು ಬಹುಮಾನ ಸಿಗಲಿದೆ. 2017ರಲ್ಲಿ ಪ್ರಶಸ್ತಿ ವಿಜೇತ ಇಂಗ್ಲೆಂಡ್ ತಂಡ 660,000 ಅಮೆರಿಕನ್ ಡಾಲರ್(ಸುಮಾರು 4.96 ಕೋಟಿ ರು.)ಬಹುಮಾನ ಮೊತ್ತ ಪಡೆದಿತ್ತು. ಈ ಬಾರಿ ಚಾಂಪಿಯನ್ ಆಗುವ ತಂಡಕ್ಕೆ 1.32 ಮಿಲಿಯನ್ ಅಮೆರಿಕನ್ ಡಾಲರ್(ಸುಮಾರು 9.94 ಕೋಟಿ ರು.) ಬಹುಮಾನ ಸಿಗಲಿದೆ ಎಂದು ಐಸಿಸಿ (ICC) ಮಂಗಳವಾರ ಪ್ರಕಟಣೆ ಮೂಲಕ ತಿಳಿಸಿದೆ.
ರನ್ನರ್ ಅಪ್ ತಂಡಕ್ಕೆ 4.51 ಕೋಟಿ ರು. ಬಹುಮಾನ ಸಿಗಲಿದ್ದು, ಸೆಮಿಫೈನಲ್‌ನಲ್ಲಿ ಸೋತ ತಂಡಗಳು ತಲಾ 2.25 ಕೋಟಿ ರು. ಪಡೆಯಲಿವೆ. ಟೂರ್ನಿಯ ಒಟ್ಟಾರೆ ಬಹುಮಾನದ ಮೊತ್ತ ಶೇ.75ರಷ್ಟು ಹೆಚ್ಚಳವಾಗಲಿದೆ ಎಂದು ಐಸಿಸಿ ತಿಳಿಸಿದೆ. ವಿಶ್ವಕಪ್ ಮಾರ್ಚ್ 4ರಿಂದ ಏಪ್ರಿಲ್ 3ರ ವರೆಗೆ ನ್ಯೂಜಿಲೆಂಡ್‌ನಲ್ಲಿ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯು ನಿಗದಿಯಾಗಿದೆ.
2022ನೇ ಸಾಲಿನ ಐಸಿಸಿ ಮಹಿಳಾ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಲೀಗ್ ಹಂತದಲ್ಲಿ ಒಟ್ಟು 28 ಪಂದ್ಯಗಳು ನಡೆಯಲಿವೆ. ಲೀಗ್ ಹಂತದ ಪಂದ್ಯಗಳು ರೌಂಡ್ ರಾಬಿನ್ ಮಾದರಿಯಲ್ಲಿರಲಿದ್ದು, ಪ್ರತಿ ತಂಡವು ಉಳಿದೆಲ್ಲಾ ತಂಡಗಳ ವಿರುದ್ದ ಸೆಣಸಾಟ ನಡೆಸಲಿವೆ. ಅಂಕಪಟ್ಟಿಯಲ್ಲಿ ಅಗ್ರ 4 ಸ್ಥಾನ ಪಡೆದ ತಂಡಗಳು ಸೆಮಿಫೈನಲ್‌ಗೆ ಲಗ್ಗೆಯಿಡಲಿವೆ. ಪ್ರತಿ ಪಂದ್ಯದಲ್ಲಿ ಗೆಲುವು ಸಾಧಿಸಿದ ತಂಡವು 2 ಅಂಕ ಪಡೆದರೆ, ಡ್ರಾ, ಟೈ ಅಥವಾ ಪಂದ್ಯದಲ್ಲಿ ಫಲಿತಾಂಶ ಹೊರಬರದೇ ಹೋದರೆ ಉಭಯ ತಂಡಗಳಿಗೆ ತಲಾ ಒಂದು ಅಂಕ ನೀಡಲು ಐಸಿಸಿ ತೀರ್ಮಾನಿಸಿದೆ.
ICC Women's World Cup 2022: ಮಹಿಳಾ ವಿಶ್ವಕಪ್ ಟೂರ್ನಿಗೆ ಭಾರತ ತಂಡ ಪ್ರಕಟ
ನ್ಯೂಜಿಲೆಂಡ್‌ನಲ್ಲಿ ನಡೆಯಲಿರುವ ಐಸಿಸಿ ಮಹಿಳಾ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯು ಕಿವೀಸ್‌ನ 6 ವಿವಿಧ ಸ್ಟೇಡಿಯಂನಲ್ಲಿ ಜರುಗಲಿದೆ. ಮಾರ್ಚ್ 4ರಂದು ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ನ್ಯೂಜಿಲೆಂಡ್ ಹಾಗೂ ವೆಸ್ಟ್ ಇಂಡೀಸ್ ತಂಡಗಳು ಸೆಣಸಾಟ ನಡೆಸಲಿವೆ. ಇನ್ನು ಐಸಿಸಿ ಮಹಿಳಾ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯವು ಏಪ್ರಿಲ್ 03ರಂದು ಕ್ರೈಸ್ಟ್‌ಚರ್ಚ್‌ನಲ್ಲಿ ನಡೆಯಲಿದೆ.
ಮಹಿಳಾ ಕ್ರಿಕೆಟ್: ಕಿವೀಸ್ ವಿರುದ್ಧ ಭಾರತಕ್ಕೆ ಸೋಲು
ಕ್ವೀನ್ಸ್‌ಟೌನ್: ನಾಯಕಿ ಮಿಥಾಲಿ ರಾಜ್ (Mithali Raj) ಹಾಗೂ ರಿಚಾ ಘೋಷ್‌ರ ಅರ್ಧಶತಕದ ಹೊರತಾಗಿಯೂ ನ್ಯೂಜಿಲೆಂಡ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಭಾರತ ಮಹಿಳಾ ತಂಡ 3 ವಿಕೆಟ್ ಸೋಲನುಭವಿಸಿದೆ. ಇದರೊಂದಿಗೆ 5 ಪಂದ್ಯಗಳ ಸರಣಿಯಲ್ಲಿ ಆತಿಥೇಯ ಕಿವೀಸ್ 2-0 ಮುನ್ನಡೆ ಸಾಧಿಸಿದೆ.
ಭಾರತ 6 ವಿಕೆಟ್ ನಷ್ಟಕ್ಕೆ 270 ರನ್ ಕಲೆ ಹಾಕಿತು. ಮಿಥಾಲಿ(66) ಸತತ 2ನೇ ಅರ್ಧಶತಕ ಸಿಡಿಸಿದರೆ, ರಿಚಾ 65, ಮೇಘನಾ 49 ರನ್ ಗಳಿಸಿದರು. ಅಮೇಲಿಯಾ ಕೆರ್ (119)ರ ಶತಕದ ನೆರವಿನಿಂದ ನ್ಯೂಜಿಲೆಂಡ್ 49 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು ಗುರಿ ತಲುಪಿತು.
ಮಿಥಾಲಿ ರಾಜ್ ಮತ್ತೊಂದು ದಾಖಲೆ: 39 ವರ್ಷದ ಮಿಥಾಲಿ ಏಕದಿನ ಕ್ರಿಕೆಟ್‌ನಲ್ಲಿ 7500 ರನ್ ಪೂರ್ತಿಗೊಳಿಸಿದ ಮೊದಲ ಮಹಿಳಾ ಕ್ರಿಕೆಟ್ (Women's Cricket) ಎನ್ನುವ ದಾಖಲೆ ಬರೆದಿದ್ದಾರೆ. ಜೊತೆಗೆ ಮಹಿಳಾ ಕ್ರಿಕೆಟ್‌ನಲ್ಲಿ 5000 ರನ್ ಕಲೆ ಹಾಕಿದ ಮೊದಲ ನಾಯಕಿ ಎಂಬ ಹಿರಿಮೆಗೂ ಪಾತ್ರರಾಗಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.