ICC Women's World Cup: ಭಾರತದ ಸೆಮೀಸ್ ಕನಸು ಭಗ್ನ, ರೋಚಕ ಸೋಲುಂಡ ಮಿಥಾಲಿ ಪಡೆ

By Naveen KodaseFirst Published Mar 27, 2022, 2:10 PM IST
Highlights

* ಐಸಿಸಿ ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಸೆಮೀಸ್ ಕನಸು ಭಗ್ನ

* ಕೊನೆಯ ಎಸೆತದಲ್ಲಿ ಗೆಲುವಿನ ನಗೆ ಬೀರಿದ ಹರಿಣಗಳು

* ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಮುಗ್ಗರಿಸಿದ ಮಿಥಾಲಿ ರಾಜ್ ಪಡೆ

ಕ್ರೈಸ್ಟ್‌ಚರ್ಚ್‌(ಮಾ.27): ಐಸಿಸಿ ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ (ICC Women's World Cup) ಸೆಮಿಫೈನಲ್ ಪ್ರವೇಶಿಸುವ ಭಾರತ ಮಹಿಳಾ ಕ್ರಿಕೆಟ್ ತಂಡದ (Indian Women's Cricket Team) ಕನಸು ಭಗ್ನವಾಗಿದೆ. ಕ್ರಿಕೆಟ್ ಅಭಿಮಾನಿಗಳನ್ನು ಅಕ್ಷರಶಃ ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿದ್ದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವು ಕೊನೆಯ ಎಸೆತದಲ್ಲಿ ರೋಚಕ ಜಯ ಸಾಧಿಸಿದೆ. ಇದರೊಂದಿಗೆ ಮಿಥಾಲಿ ರಾಜ್(Mthali Raj), ಜೂಲನ್ ಗೋಸ್ವಾಮಿಯವರ (Jhulan Goswami) ವಿಶ್ವಕಪ್‌ ಗೆಲ್ಲುವ ಕನಸು ಮರಿಚಿಕೆಯಾಗಿಯೇ ಉಳಿಯಿತು. ದಕ್ಷಿಣ ಆಫ್ರಿಕಾ ಈ ಗೆಲುವಿನೊಂದಿಗೆ ವೆಸ್ಟ್ ಇಂಡೀಸ್ ತಂಡವು ಸೆಮೀಸ್‌ಗೆ ಅರ್ಹತೆ ಪಡೆದುಕೊಂಡಿತು.

ಇಲ್ಲಿನ ಹೇಗ್ಲೆ ಓವಲ್ ಮೈದಾನದಲ್ಲಿ ಭಾರತ ನೀಡಿದ್ದ 275 ರನ್‌ಗಳ ಸವಾಲಿನ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ತಂಡವು ಆರಂಭದಲ್ಲೇ ಲಿಜೆಲ್ಲೇ ಲೀ ವಿಕೆಟ್ ಕಳೆದುಕೊಂಡಿತು. ಇದಾದ ಬಳಿಕ ಎರಡನೇ ವಿಕೆಟ್‌ಗೆ ಲೌರಾ ವೋಲ್ವರ್ಡ್‌ ಹಾಗೂ ಲಾರಾ ಗುಡಾಲ್‌ 125 ರನ್‌ಗಳ ಜತೆಯಾಟವಾಡುವ ಮೂಲಕ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು. ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಕನ್ನಡತಿ ರಾಜೇಶ್ವರಿ ಗಾಯಕ್ವಾಡ್ ಯಶಸ್ವಿಯಾದರು. ಲಾರಾ ಗುಡಾಲ್‌ 49 ರನ್‌ ಬಾರಿಸಿ ವಿಕೆಟ್ ಒಪ್ಪಿಸಿದರು. ಇನ್ನು ಮತ್ತೊಂದು ತುದಿಯಲ್ಲಿ ಚುರುಕಿನ ಬ್ಯಾಟಿಂಗ್ ನಡೆಸಿದ ಲೌರಾ ವೋಲ್ವರ್ಡ್‌ 79 ಎಸೆತಗಳನ್ನು ಎದುರಿಸಿ 11 ಬೌಂಡರಿ ಸಹಿತ 80 ರನ್‌ ಬಾರಿಸಿ ಹರ್ಮನ್‌ಪ್ರೀತ್ ಕೌರ್ ಬೌಲಿಂಗ್‌ನಲ್ಲಿ ಕ್ಲೀನ್ ಬೌಲ್ಡ್‌ ಆಗಿ ಪೆವಿಲಿಯನ್ ಸೇರಿದರು. 

ಇನ್ನು ಮಧ್ಯಮ ಕ್ರಮಾಂಕದಲ್ಲಿ ನಾಯಕಿ ಸುನೆ ಲೌಸ್‌ 22 ರನ್ ಬಾರಿಸಿ ಹರ್ಮನ್‌ಪ್ರೀತ್ ಕೌರ್‌ಗೆ (Harmanpreet Kaur) ಎರಡನೇ ಬಲಿಯಾದರು. ಆದರೆ ಮಿನ್ಯಾನ್‌ ಡು ಪ್ರೀಜ್ ಹಾಗೂ ಮ್ಯಾರಿಜಾನೆ ಕ್ಯಾಪ್‌ 5ನೇ ವಿಕೆಟ್‌ಗೆ 47 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಮ್ಯಾರಿಜಾನೆ ಕ್ಯಾಪ್‌ 32 ರನ್ ಬಾರಿಸಿ ರನೌಟ್ ಆಗಿ ಪೆವಿಲಿಯನ್ ಸೇರಿದರು. ಚೋಲೆ ಟ್ರಯಾನ್ ಕೇವಲ 9 ಎಸೆತಗಳಲ್ಲಿ 9 ಎಸೆತಗಳಲ್ಲಿ 3 ಬೌಂಡರಿ ಸಹಿತ 17 ರನ್ ಬಾರಿಸಿ ಗಾಯಕ್ವಾಡ್‌ಗೆ ಎರಡನೇ ಬಲಿಯಾದರು. 

Heartbreak for India as South Africa seal a thrilling victory on the last ball 🤯 pic.twitter.com/mrOzp6Fmmc

— ICC (@ICC)

ತುದಿಗಾಲಿನಲ್ಲಿ ನಿಲ್ಲಿಸಿದ ಕೊನೆಯ ಓವರ್‌: ಪಂದ್ಯವನ್ನು ಗೆಲ್ಲಲು ದಕ್ಷಿಣ ಆಫ್ರಿಕಾ ತಂಡಕ್ಕೆ 7 ರನ್‌ಗಳ ಅಗತ್ಯವಿತ್ತು. ದೀಪ್ತಿ ಶರ್ಮಾ ಕೊನೆಯ ಓವರ್‌ ಬೌಲಿಂಗ್ ಮಾಡುವ ಜವಾಬ್ದಾರಿ ವಹಿಸಿಕೊಂಡರು. ಮೊದಲ ಎಸೆತದಲ್ಲಿ ತ್ರಿಶಾ ಚೆಟ್ಟಿ ಒಂದು ರನ್ ಗಳಿಸಿದರು. ಇನ್ನು ಎರಡನೆ ಎಸೆತದಲ್ಲಿ ಮಿನ್ಯಾನ್‌ ಡು ಪ್ರೀಜ್ ಎರಡು ರನ್ ಗಳಿಸುವ ಪ್ರಯತ್ನದಲ್ಲಿ ತ್ರಿಶಾ ಚೆಟ್ಟಿಯನ್ನು ರನೌಟ್ ಮಾಡಿದರು. ಇನ್ನು ಕೊನೆಯ 4 ಎಸೆತಗಳಲ್ಲಿ 5 ರನ್‌ಗಳ ಅಗತ್ಯವಿತ್ತು. ಮೂರು ಹಾಗೂ ನಾಲ್ಕನೇ ಎಸೆತದಲ್ಲಿ ದಕ್ಷಿಣ ಆಫ್ರಿಕಾ ತಲಾ ಒಂದೊಂದು ರನ್ ಗಳಿಸಿದರು. 5ನೇ ಎಸೆತದಲ್ಲಿ ಮಿನ್ಯಾನ್‌ ಡು ಪ್ರೀಜ್ ದೊಡ್ಡ ಹೊಡೆತಕ್ಕೆ ಯತ್ನಿಸಿ ಹರ್ಮನ್‌ಪ್ರೀತ್‌ಗೆ ಕ್ಯಾಚ್‌ ನೀಡಿದರು. ಆದರೆ ಆ ಎಸೆತ ನೋ ಬಾಲ್ ಅಗಿತ್ತು. ಹೀಗಾಗಿ ಕೊನೆಯ 2 ಎಸೆತಗಳಲ್ಲಿ 2 ರನ್‌ಗಳ ಅಗತ್ಯವಿತ್ತು. ಐದನೇ ಎಸೆತದಲ್ಲಿ ಇಸ್ಮಾಯಿಲ್ ಒಂದು ರನ್ ಗಳಿಸಿದರು. ಕೊನೆಯ ಎಸೆತದಲ್ಲಿ ಮಿನ್ಯಾನ್‌ ಡು ಪ್ರೀಜ್ ಬೌಂಡರಿ ಬಾರಿಸುವ ಮೂಲಕ ತಂಡವನ್ನು ರೋಚಕವಾಗಿ ಗೆಲುವಿನ ದಡ ಸೇರಿಸಿದರು.

ICC Women's World Cup: ನಿರ್ಣಾಯಕ ಪಂದ್ಯದಲ್ಲಿ ಹರಿಣಗಳಿಗೆ ಸವಾಲಿನ ಗುರಿ ನೀಡಿದ ಭಾರತ

ಇದಕ್ಕೂ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತ ತಂಡ ಉತ್ತಮ ಆರಂಭವನ್ನೇ ಪಡೆಯಿತು. ಮೊದಲ ವಿಕೆಟ್‌ಗೆ ಶಫಾಲಿ ವರ್ಮಾ ಹಾಗೂ ಸ್ಮೃತಿ ಮಂಧನಾ ಉತ್ತಮ ಆರಂಭವನ್ನು ಒದಗಿಸಿಕೊಟ್ಟರು. ಮೊದಲ ವಿಕೆಟ್‌ಗೆ ಈ ಜೋಡಿ 91 ಎಸೆತಗಳನ್ನು ಎದುರಿಸಿ 91 ರನ್‌ಗಳ ಜತೆಯಾಟ  ಒದಗಿಸಿಕೊಟ್ಟಿತು. ಇದು ಈ ಟೂರ್ನಿಯಲ್ಲಿ ಭಾರತ ಪರ ಮೊದಲ ವಿಕೆಟ್‌ಗೆ ಮೂಡಿಬಂದ ಗರಿಷ್ಟ ಜತೆಯಾಟ ಎನಿಸಿತು. ಶಫಾಲಿ ವರ್ಮಾ 46 ಎಸೆತಗಳನ್ನು ಎದುರಿಸಿ 8 ಬೌಂಡರಿ ಸಹಿತ 53 ರನ್ ಬಾರಿಸಿ ರನೌಟ್ ಆದರು.

West Indies are through to the semi-finals 👏 pic.twitter.com/MIbM3DoSmM

— ICC (@ICC)

ಇನ್ನು ಮತ್ತೋರ್ವ ಆರಂಭಿಕ ಬ್ಯಾಟರ್‌ ಸ್ಮೃತಿ ಮಂಧನಾ ಹಾಗೂ ನಾಯಕಿ ಮಿಥಾಲಿ ರಾಜ್ ಮೂರನೇ ವಿಕೆಟ್‌ಗೆ 80 ರನ್‌ಗಳ ಜತೆಯಾಟವಾಡುವ ಮೂಲಕ ತಂಡದ ಮೊತ್ತವನ್ನು 175 ರನ್‌ಗಳ ಗಡಿ ದಾಟಿಸಿದರು. ಅದ್ಭುತ ಫಾರ್ಮ್‌ನಲ್ಲಿರು ಸ್ಮೃತಿ ಮಂಧನಾ ಮತ್ತೊಂದು ಆಕರ್ಷಕ ಅರ್ಧಶತಕ ಸಿಡಿಸಿದರು. ಎಡಗೈ ಬ್ಯಾಟರ್ ಮಂಧನಾ 84 ಎಸೆತಗಳನ್ನು ಎದುರಿಸಿ 6 ಬೌಂಡರಿ ಹಾಗೂ ಒಂದು ಸಿಕ್ಸರ್‌ ಸಹಿತ 71 ರನ್‌ ಬಾರಿಸಿ ವಿಕೆಟ್ ಒಪ್ಪಿಸಿದರು. 

ಇನ್ನು ಮತ್ತೊಂದು ತುದಿಯಲ್ಲಿ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದ ನಾಯಕಿ ಮಿಥಾಲಿ ರಾಜ್ ಕೂಡಾ ಆಕರ್ಷಕ ಅರ್ಧಶತಕ ಚಚ್ಚಿದರು. ಇದು ಮಿಥಾಲಿ ರಾಜ್ ಬಾರಿಸಿದ 51ನೇ ಏಕದಿನ ಅರ್ಧಶತಕ ಎನಿಸಿತು. ಮಿಥಾಲಿ ರಾಜ್ ಒಟ್ಟು 84 ಎಸೆತಗಳನ್ನು ಎದುರಿಸಿ 8 ಬೌಂಡರಿ ಸಹಿತ 68 ರನ್‌ ಬಾರಿಸಿ ಕ್ಲಾಸ್‌ಗೆ ವಿಕೆಟ್‌ ಒಪ್ಪಿಸಿದರು.  

ಕೊನೆಯಲ್ಲಿ ವಿಕೆಟ್ ಕೀಪರ್ ಬ್ಯಾಟರ್ ರಿಚಾ ಘೋಷ್ ಹಾಗೂ ಆಲ್ರೌಂಡರ್ ಪೂಜಾ ವಸ್ತ್ರಾಕರ್ ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿದರು. ಆದರೆ ಮಧ್ಯಮ ಕ್ರಮಾಂಕದ ಆಟಗಾರ್ತಿ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದ ಹರ್ಮನ್‌ಪ್ರೀತ್‌ ಕೌರ್ ಆಕರ್ಷಕ 48 ರನ್‌ ಬಾರಿಸುವ ಮೂಲಕ ತಂಡ ಸವಾಲಿನ ಮೊತ್ತ ಕಲೆಹಾಕಲು ನೆರವಾದರು

click me!