ಮಹಿಳಾ ವಿಶ್ವಕಪ್: ಬಾಂಗ್ಲಾದೇಶ ವಿರುದ್ದ ಒದ್ದಾಡಿ ಗೆಲುವು ಸಾಧಿಸಿದ ಇಂಗ್ಲೆಂಡ್!

Published : Oct 08, 2025, 08:49 AM IST
England vs Bangladesh in Women's World Cup 2025

ಸಾರಾಂಶ

ಐಸಿಸಿ ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ, ಬಾಂಗ್ಲಾದೇಶ ವಿರುದ್ಧ ಇಂಗ್ಲೆಂಡ್ ಪ್ರಯಾಸದ ಗೆಲುವು ದಾಖಲಿಸಿದೆ. ಬಾಂಗ್ಲಾ ನೀಡಿದ 179 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಇಂಗ್ಲೆಂಡ್, ಹೀಥರ್ ನೈಟ್ ಅವರ ಅಜೇಯ 79 ರನ್‌ಗಳ ನೆರವಿನಿಂದ ಗೆಲುವಿನ ದಡ ಸೇರಿತು.

ಗುವಾಹಟಿ: ಐಸಿಸಿ ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಸೋಮವಾರ ಮಾಜಿ ಚಾಂಪಿಯನ್ ಇಂಗ್ಲೆಂಡ್ ತಂಡ ಬಾಂಗ್ಲಾದೇಶ ವಿರುದ್ಧ ಪ್ರಯಾಸದ ಗೆಲುವು ಸಾಧಿಸಿದೆ. ಸುಲಭ ಗೆಲುವಿನ ವಿಶ್ವಾಸದಲ್ಲಿದ್ದ ಇಂಗ್ಲೆಂಡ್, ಬಾಂಗ್ಲಾ ನೀಡಿದ್ದ 179 ರನ್ ಗಳ ಗುರಿಯನ್ನು ಬೆನ್ನತ್ತಲು 46.1 ಓವರ್ ತೆಗೆದುಕೊಂಡಿತು. ಸತತ 2ನೇ ಗೆಲುವಿನೊಂದಿಗೆ ಇಂಗ್ಲೆಂಡ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಬಾಂಗ್ಲಾದೇಶ ಮೊದಲ ಸೋಲು ಕಂಡಿತು.

ಮೊದಲು ಬ್ಯಾಟ್ ಮಾಡಿದ ಬಾಂಗ್ಲಾ 49.4 ಓವರ್‌ಗಳಲ್ಲಿ 178 ರನ್‌ಗೆ ಸರ್ವಪತನ ಕಂಡಿತು. ಶೋಭನಾ(108 ಎಸೆತಗಳಲ್ಲಿ 60 ರನ್) ಏಕಾಂಗಿ ಹೋರಾಟ ಪ್ರದರ್ಶಿಸಿದರು. ಕೊನೆಯಲ್ಲಿ ರಬೇಯಾ ಖಾನ್ 27 ಎಸೆತಗಳಲ್ಲಿ ಔಟಾಗದೆ 43 ರನ್ ಗಳಿಸಿ, ತಂಡಕ್ಕೆ ನೆರವಾದರು. ಶರ್ಮಿನ್ ಅಖ್ತರ್ 30 ರನ್ ಕೊಡುಗೆ ನೀಡಿದರು. ಇಂಗ್ಲೆಂಡ್ ಪರ ಸೋಫಿ ಎಕ್ಲೆಸ್ಟೋನ್ 3, ಚಾರ್ಲಿ ಡೀನ್, ಅಲೈಸ್ ಕ್ಯಾಪ್ಸಿ, ಲಿನ್ಸೆ ಸ್ಮಿತ್ ತಲಾ 2 ವಿಕೆಟ್ ಪಡೆದರು.

ತಿಣುಕಾಡಿ ಗೆದ್ದ ಇಂಗ್ಲೆಂಡ್

ಸುಲಭ ಗುರಿ ಸಿಕ್ಕರೂ ಇಂಗ್ಲೆಂಡ್ ಒದ್ದಾಡಿ ಗೆಲುವಿನ ದಡ ಸೇರಿತು. 29 ರನ್‌ಗೆ 2 ವಿಕೆಟ್ ಕಳೆದುಕೊಂಡ ತಂಡಕ್ಕೆ ಹೀಥರ್‌ ನೈಟ್ ಆಸರೆಯಾದರು. 103 ರನ್‌ಗೆ 6 ವಿಕೆಟ್ ಕಳೆದುಕೊಂಡಿದ್ದಾಗ ಹೀಥರ್ ಹಾಗೂ ಡೀನ್ 79 ರನ್ ಜೊತೆಯಾಟವಾಡಿದರು. ಡೀನ್ ಔಟಾಗದೆ 27 ರನ್ ಸಿಡಿಸಿದರು. ಸೀವರ್ ಬ್ರಂಟ್ 32, ಕ್ಯಾಪ್ಸಿ 20 ರನ್ ಕೊಡುಗೆ ನೀಡಿದರು. ಒಂದು ಕಡೆ ವಿಕೆಟ್ ಉರುಳುತ್ತಿದ್ದರೂ ಗಟ್ಟಿಯಾಗಿ ಕ್ರೀಸ್ ನಲ್ಲಿ ನೆಲೆಯೂರಿದ ಹೀಥರ್, 111 ಎಸೆತಗಳಲ್ಲಿ ಔಟಾಗದೆ 79 ರನ್ ಸಿಡಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.

ಪಾಕಿಸ್ತಾನ ವಿರುದ್ಧ ಜಯದ ನಿರೀಕ್ಷೆಯಲ್ಲಿ ಆಸ್ಟ್ರೇಲಿಯಾ

ಕೊಲಂಬೊ: 7 ಬಾರಿ ಚಾಂಪಿಯನ್ ಆಸ್ಟ್ರೇಲಿಯಾ ತಂಡ ಈ ಬಾರಿ ಟೂರ್ನಿಯಲ್ಲಿ ಸತತ 2ನೇ ಗೆಲುವಿನ ವಿಶ್ವಾಸದಲ್ಲಿದ್ದು, ಬುಧವಾರ ಪಾಕಿಸ್ತಾನ ವಿರುದ್ಧ ಸೆಣಸಾಡಲಿದೆ. ಪಂದ್ಯಕ್ಕೆ ಕೊಲಂಬೊ ಕ್ರೀಡಾಂಗಣ ಆತಿಥ್ಯ ವಹಿಸಲಿದೆ.

ಟೂರ್ನಿಯ ಮೊದಲ ಪಂದ್ಯದಲ್ಲಿ ಆಸೀಸ್ ತಂಡ ನ್ಯೂಜಿಲೆಂಡ್ ವಿರುದ್ಧ 89 ರನ್ ಗೆಲುವು ಸಾಧಿಸಿತ್ತು. ಆದರೆ ಶ್ರೀಲಂಕಾ ವಿರುದ್ಧ 2ನೇ ಪಂದ್ಯ ಮಳೆಯಿಂದಾಗಿ ರದ್ದುಗೊಂಡಿತ್ತು. ಪಾಕ್ ವಿರುದ್ಧ ಗೆಲ್ಲುವ ಮೂಲಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಲು ಕಾಯುತ್ತಿದೆ. ಮತ್ತೊಂದೆಡೆ ಪಾಕ್ ತಂಡ ಆರಂಭಿಕ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಸೋತಿದ್ದು, 2ನೇ ಪಂದ್ಯದಲ್ಲಿ ಬದ್ಧವೈರಿ ಭಾರತಕ್ಕೆ ಶರಣಾಗಿತ್ತು. ಎರಡೂ ಪಂದ್ಯಗಳಲ್ಲಿ ತಂಡ ಬ್ಯಾಟಿಂಗ್, ಬೌಲಿಂಗ್‌ನಲ್ಲಿ ವೈಫಲ್ಯ ಕಂಡಿತ್ತು. ಸುಧಾರಿತ ಪ್ರದರ್ಶನ ನೀಡುವ ಮೂಲಕ ಆಸೀಸ್‌ಗೆ ಸವಾಲು ಒಡ್ಡುವ ವಿಶ್ವಾಸದಲ್ಲಿದೆ.

ಐಸಿಸಿ ಮಹಿಳಾ ಏಕದಿನ ರ್‍ಯಾಂಕಿಂಗ್‌ನಲ್ಲಿ ಅಗ್ರಸ್ಥಾನ ಕಾಯ್ದುಕೊಂಡ ಮಂಧನಾ

ದುಬೈ: ಐಸಿಸಿ ಮಹಿಳಾ ಏಕದಿನ ರ್‍ಯಾಂಕಿಂಗ್‌ನಲ್ಲಿ ಭಾರತದ ತಾರಾ ಆಟಗಾರ್ತಿ ಸ್ಮೃತಿ ಮಂಧನಾ ಅಗ್ರಸ್ಥಾನ ಕಾಯ್ದು ಕೊಂಡಿದ್ದಾರೆ. ಮಂಗಳವಾರ ಪ್ರಕಟಗೊಂಡ ನೂತನ ರ್‍ಯಾಂಕಿಂಗ್‌ ಪಟ್ಟಿಯಲ್ಲಿ ಮಂಧನಾ 791 ರೇಟಿಂಗ್ ಹೊಂದಿದ್ದು, 2ನೇ ಸ್ಥಾನದಲ್ಲಿರುವ ಇಂಗ್ಲೆಂಡ್‌ನ ಸೀವರ್ ಬ್ರಂಟ್‌ಗಿಂತ 60 ಅಂಕಗಳಿಂದ ಮುಂದಿದ್ದಾರೆ.

ಆಸ್ಟ್ರೇಲಿಯಾದ ಬೆಥ್ ಮೂನಿ 3ನೇ ಸ್ಥಾನದಲ್ಲಿದ್ದಾರೆ. ಹರ್ಮನ್‌ ಪ್ರೀತ್ ಕೌರ್ 16ನೇ, ಜೆಮಿಮಾ ರೋಡ್ರಿಗ್ಸ್ 21ನೇ ಸ್ಥಾನಕ್ಕೆ ಕುಸಿದಿದ್ದಾರೆ. ಬೌಲರ್‌ಗಳ ವಿಭಾಗದಲ್ಲಿ ದೀಪ್ತಿ ಶರ್ಮಾ(6ನೇ ಸ್ಥಾನ) ಅಗ್ರ-10ರಲ್ಲಿರುವ ಏಕೈಕ ಭಾರತೀಯ ಆಟಗಾರ್ತಿ ಎನಿಸಿಕೊಂಡಿದ್ದಾರೆ. ಆಲ್ರೌಂಡರ್‌ಗಳ ಪಟ್ಟಿಯಲ್ಲಿ ದೀಪ್ತಿ 4ನೇ ಸ್ಥಾನದಲ್ಲೇ ಮುಂದುವರಿದಿದ್ದಾರೆ. ಈ ಬಾರಿಯ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ದೀಪ್ತಿ ಅದ್ಭುತ ಆಲ್ರೌಂಡ್ ಪ್ರದರ್ಶನ ಮುಂದುವರೆಸಿದ್ದಾರೆ.

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕೊನೆಗೂ ಮದುವೆಗೆ ರೆಡಿ ಆದ್ರಾ ಸ್ಮೃತಿ ಮಂಧನಾ-ಪಲಾಶ್‌ ಮುಚ್ಚಾಲ್‌?
ಮೇಲ್ಮನವಿ ಅರ್ಜಿ ವಜಾಗೊಳಿಸಿದ ಹೈಕೋರ್ಟ್, ಡಿ.7ಕ್ಕೆ ಕರ್ನಾಟಕ ಕ್ರಿಕೆಚ್ ಸಂಸ್ಥೆ ಚುನಾವಣೆ