ICC Women's World Cup: ಅಲೀಸಾ ಹೀಲಿ ಶತಕ, ಹಾಲಿ ಚಾಂಪಿಯನ್‌ ಇಂಗ್ಲೆಂಡ್‌ಗೆ ಕಠಿಣ ಗುರಿ

Published : Apr 03, 2022, 10:08 AM ISTUpdated : Apr 03, 2022, 10:16 AM IST
ICC Women's World Cup: ಅಲೀಸಾ ಹೀಲಿ ಶತಕ, ಹಾಲಿ ಚಾಂಪಿಯನ್‌ ಇಂಗ್ಲೆಂಡ್‌ಗೆ ಕಠಿಣ ಗುರಿ

ಸಾರಾಂಶ

* ಮಹಿಳಾ ಏಕದಿನ ವಿಶ್ವಕಪ್ ಫೈನಲ್‌ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿದ ಅಲೀಸಾ ಹೀಲಿ * ವಿಶ್ವಕಪ್ ಗೆಲ್ಲಲು 357 ರನ್‌ಗಳ ಗುರಿ ನೀಡಿದ ಆಸ್ಟ್ರೇಲಿಯಾ ತಂಡ * ಅಲೀಸಾ ಹೀಲಿ 170 ರನ್‌ ಬಾರಿಸಿ ಅಬ್ಬರಿಸಿದ ವಿಕೆಟ್ ಕೀಪರ್ ಬ್ಯಾಟರ್

ಕ್ರೈಸ್ಟ್‌ಚರ್ಚ್‌(ಏ.03): 7ನೇ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ (ICC Women's World Cup) ಗೆಲ್ಲುವತ್ತ ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡವು ದಿಟ್ಟ ಹೆಜ್ಜೆಯಿಟ್ಟಿದೆ. ವಿಕೆಟ್‌ ಕೀಪರ್‌ ಬ್ಯಾಟರ್‌ ಅಲೀಸಾ ಹೀಲಿ (Alyssa Healy) (170) ಬಾರಿಸಿದ ವೃತ್ತಿಜೀವನದ ಶ್ರೇಷ್ಠ ಇನಿಂಗ್ಸ್‌ ನೆರವಿನಿಂದ ಬಲಿಷ್ಠ ಆಸ್ಟ್ರೇಲಿಯಾ ತಂಡವು 5 ವಿಕೆಟ್ ಕಳೆದುಕೊಂಡು 365 ರನ್‌ ಬಾರಿಸಿದ್ದು, ಹಾಲಿ ಚಾಂಪಿಯನ್‌ ಇಂಗ್ಲೆಂಡ್‌ ತಂಡಕ್ಕೆ ಕಠಿಣ ಗುರಿ ನೀಡಿದೆ. ಟೂರ್ನಿಯಲ್ಲಿ ಅಜೇಯವಾಗಿ ಫೈನಲ್‌ ಪ್ರವೇಶಿಸಿರುವ ಆಸ್ಟ್ರೇಲಿಯಾ ತಂಡವು ಮತ್ತೊಂದು ಟ್ರೋಫಿಗೆ ಮುತ್ತಿಕ್ಕಲು ತುದಿಗಾಲಿನಲ್ಲಿ ನಿಂತಿದೆ.

ಇಲ್ಲಿನ ಹೇಗ್ಲೇ ಓವಲ್‌ ಮೈದಾನದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಬಲಿಷ್ಠ ಆಸ್ಟ್ರೇಲಿಯಾ ತಂಡವು ಭರ್ಜರಿ ಆರಂಭವನ್ನೇ ಪಡೆಯಿತು. ಮೊದಲ ವಿಕೆಟ್‌ಗೆ ರೇಚಲ್ ಹೇಯ್ನ್ಸ್‌ ಹಾಗೂ ಅಲೀಸಾ ಹೀಲಿ ಶತಕದ ಜತೆಯಾಟವಾಡುವ ಮೂಲಕ ತಂಡಕ್ಕೆ ಭರ್ಜರಿ ಆರಂಭ ಒದಗಿಸಿಕೊಟ್ಟರು. ಮೊದಲ ವಿಕೆಟ್‌ಗೆ ಈ ಜೋಡಿ 175 ಎಸೆತಗಳನ್ನು ಎದುರಿಸಿ 160 ರನ್‌ಗಳ ಜತೆಯಾಟ ನಿಭಾಯಿಸಿದರು. ಟೂರ್ನಿಯಲ್ಲಿ ಭರ್ಜರಿ ಫಾರ್ಮ್‌ ಹೊಂದಿರುವ ರೇಚಲ್ ಹೇಯ್ನ್ಸ್‌ 93 ಎಸೆತಗಳನ್ನು ಎದುರಿಸಿ 7 ಬೌಂಡರಿ ಸಹಿತ 68 ರನ್ ಬಾರಿಸಿ ಎಕೆಲ್‌ಸ್ಟೋನ್‌ಗೆ ವಿಕೆಟ್‌ ಒಪ್ಪಿಸಿದರು.

ದಾಖಲೆಯ ಶತಕ ಚಚ್ಚಿದ ಅಲೀಸಾ ಹೀಲಿ: ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ವಿಕೆಟ್‌ ಕೀಪರ್ ಬ್ಯಾಟರ್‌ ಅಲೀಸಾ ಹೀಲಿ ಮತ್ತೊಮ್ಮೆ ಮಹತ್ವದ ಪಂದ್ಯದಲ್ಲಿ ಆಕರ್ಷಕ ಶತಕ ಬಾರಿಸುವ ಮೂಲಕ ತಾವೊಬ್ಬರು ಬಿಗ್ ಮ್ಯಾಚ್ ಪ್ಲೇಯರ್ ಎನ್ನುವುದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ಇಂಗ್ಲೆಂಡ್ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ ಹೀಲಿ ಭರ್ಜರಿ ಶತಕ ಸಿಡಿಸಿ ಸಂಭ್ರಮಿಸಿದ್ದಾರೆ. ಸ್ಪೋಟಕ ಬ್ಯಾಟಿಂಗ್ ನಡೆಸಿದ ಅಲೀಸಾ ಹೀಲಿ 138 ಎಸೆತಗಳನ್ನು ಎದುರಿಸಿ 26 ಬೌಂಡರಿ ಸಹಿತ 170 ರನ್‌ ಬಾರಿಸಿ ವಿಕೆಟ್ ಒಪ್ಪಿಸಿದರು. ಈ ಮೂಲಕ ಮಹಿಳಾ ವಿಶ್ವಕಪ್ ಫೈನಲ್‌ ಇತಿಹಾಸದಲ್ಲಿ ಗರಿಷ್ಠ ರನ್ ಬಾರಿಸಿದ ಆಟಗಾರ್ತಿ ಎನ್ನುವ ಕೀರ್ತಿಗೆ ಪಾತ್ರರಾಗಿದ್ದಾರೆ. ಆಸ್ಟ್ರೇಲಿಯಾದ ಮಾರಕ ವೇಗಿ ಹಾಗೂ ಅಲೀಸಾ ಹೀಲಿ ಪತಿ ಮಿಚೆಲ್ ಸ್ಟಾರ್ಕ್‌ ಸ್ಟೇಡಿಯಂಗೆ ಬಂದು ತಮ್ಮ ಪತ್ನಿಯ ಬ್ಯಾಟಿಂಗ್ ಕಣ್ತುಂಬಿಕೊಂಡರು.

ಇದರ ಜತೆಗೆ ಅಲೀಸಾ ಹೀಲಿ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಇತಿಹಾಸದಲ್ಲಿ 500+ ರನ್ ಬಾರಿಸಿದ ಮೊದಲ ಆಟಗಾರ್ತಿ ಎನ್ನುವ ಹಿರಿಮೆಗೆ ಪಾತ್ರರಾಗಿದ್ದಾರೆ. 9 ಪಂದ್ಯಗಳನ್ನಾಡಿರುವ ಅಲೀಸಾ ಹೀಲಿ 56.56ರ ಬ್ಯಾಟಿಂಗ್ ಸರಾಸರಿಯಲ್ಲಿ 509 ರನ್‌ ಬಾರಿಸಿದರು. ಮಹತ್ವದ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸುವಲ್ಲಿ ಅಲೀಸಾ ಹೀಲಿ ಎತ್ತಿದ ಕೈ. 2020ರ ಐಸಿಸಿ ಮಹಿಳಾ ಟಿ20 ವಿಶ್ವಕಪ್‌ ಫೈನಲ್‌ನಲ್ಲಿ ಅಲೀಸಾ ಹೀಲಿ ಕೇವಲ 39 ಎಸೆತಗಳಲ್ಲಿ 75 ರನ್ ಚಚ್ಚಿದ್ದರು. ಭಾರತ ವಿರುದ್ದ ಆಸ್ಟ್ರೇಲಿಯಾ ತಂಡವು ಭರ್ಜರಿ ಗೆಲುವು ದಾಖಲಿಸಿ ಟ್ರೋಫಿಗೆ ಮುತ್ತಿಕ್ಕಿತ್ತು. ಇನ್ನು ಪ್ರಸಕ್ತ ಆವೃತ್ತಿಯ ವಿಶ್ವಕಪ್ ಸೆಮಿಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ಎದುರು ಹೀಲಿ 107 ಎಸೆತಗಳಲ್ಲಿ 129 ರನ್ ಚಚ್ಚಿದ್ದರು. ಇದೀಗ ಫೈನಲ್‌ನಲ್ಲೂ ಹೀಲಿ ಅವರಿಂದ ಆಕರ್ಷಕ ಶತಕ ಮೂಡಿ ಬಂದಿದೆ.

ICC Women's World Cup Final: ಇಂಗ್ಲೆಂಡ್ ಎದುರು ಆಸ್ಟ್ರೇಲಿಯಾ ಭರ್ಜರಿ ಆರಂಭ

ಇನ್ನು ಆಸ್ಟ್ರೇಲಿಯಾದ ಮತ್ತೋರ್ವ ಬ್ಯಾಟರ್‌ ಬೆಥ್ ಮೂನಿ 62 ರನ್‌ ಬಾರಿಸಿದರೆ, ಕೊನೆಯಲ್ಲಿ ಎಲೈಸಾ ಪೆರ್ರಿ 17 ರನ್ ಬಾರಿಸುವ ಮೂಲಕ ತಂಡದ ಮೊತ್ತವನ್ನು 350ರ ಗಡಿ ದಾಟಿಸಿದರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ದೇಶದ ಅಗ್ರ ಟಿ20 ಟೂರ್ನಿಯಲ್ಲೇ ಮ್ಯಾಚ್‌ ಫಿಕ್ಸಿಂಗ್‌, ನಾಲ್ವರು ಕ್ರಿಕೆಟಿಗರ ಸಸ್ಪೆಂಡ್‌ ಮಾಡಿ ತನಿಖೆಗೆ ಆದೇಶಿಸಿದ ಬಿಸಿಸಿಐ!
ಹೃತಿಕ್‌ ರೋಶನ್‌ 'ಕ್ರಿಶ್‌' ಸಿನಿಮಾದಲ್ಲಿ ಬಾಲನಟಿಯಾಗಿದ್ರಾ ಧೋನಿ ಪತ್ನಿ ಸಾಕ್ಷಿ?