* ಆಸ್ಟ್ರೇಲಿಯಾ ಎದುರು ಏಕದಿನ ಸರಣಿ ಜಯಿಸಿದ ಪಾಕಿಸ್ತಾನ ಕ್ರಿಕೆಟ್ ತಂಡ
* 3 ಪಂದ್ಯಗಳ ಏಕದಿನ ಸರಣಿಯಲ್ಲಿ 2-1 ರಲ್ಲಿ ಪಾಕ್ ಜಯ
* ಸರಣಿಯಲ್ಲಿ ಸತತ ಎರಡನೇ ಶತಕ ಬಾರಿಸಿ ಮಿಂಚಿದ ಬಾಬರ್ ಅಜಂ
ಲಾಹೋರ್(ಏ.03): ಸರಣಿಯಲ್ಲಿ ಪಾಕಿಸ್ತಾನ ನಾಯಕ ಬಾಬರ್ ಅಜಂ (Babar Azam) ಬಾರಿಸಿದ ಸತತ ಎರಡನೇ ಶತಕ ಹಾಗೂ ಇಮಾಮ್ ಉಲ್ ಹಕ್ (Imam-ul-Haq) ಬಾರಿಸಿದ ಆಕರ್ಷಕ ಅರ್ಧಶತಕದ ನೆರವಿನಿಂದ ಆಸ್ಟ್ರೇಲಿಯಾ ಎದುರಿನ ಮೂರನೇ ಹಾಗೂ ನಿರ್ಣಾಯಕ ಏಕದಿನ ಪಂದ್ಯದಲ್ಲಿ ಆತಿಥೇಯ ಪಾಕಿಸ್ತಾನ ತಂಡವು 9 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ 2-1 ಅಂತರದಲ್ಲಿ ಟೆಸ್ಟ್ ಸರಣಿ ಜಯಿಸುವುದರ ಜತೆಗೆ ಬರೋಬ್ಬರಿ 20 ವರ್ಷಗಳ ಪಾಕಿಸ್ತಾನ ತಂಡವು ಆಸ್ಟ್ರೇಲಿಯಾ ಎದುರು ಏಕದಿನ ಸರಣಿ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಕೊನೆಯದಾಗಿ ಪಾಕಿಸ್ತಾನ ತಂಡವು 2002ರಲ್ಲಿ ಆಸ್ಟ್ರೇಲಿಯಾ ಎದುರು ಸರಣಿಯನ್ನು ಜಯಿಸಿತ್ತು.
ಇಲ್ಲಿನ ಗಢಾಪಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು ನೀಡಿದ್ದ 211 ರನ್‌ಗಳ ಸಾಧಾರಣ ಗುರಿ ಬೆನ್ನತ್ತಿದ ಪಾಕಿಸ್ತಾನ ತಂಡವು ಆರಂಭದಲ್ಲೇ ಫಖರ್ ಜಮಾನ್ (Fakhar Zaman) ವಿಕೆಟ್ ಕಳೆದುಕೊಂಡಿತು. ಚುರುಕಿನ ಬ್ಯಾಟಿಂಗ್ ನಡೆಸಲು ಮುಂದಾದ ಜಮಾನ್ 12 ಎಸೆತಗಳಲ್ಲಿ 17 ರನ್ ಬಾರಿಸಿ ನೇಥನ್ ಎಲ್ಲೀಸ್‌ಗೆ ವಿಕೆಟ್ ಒಪ್ಪಿಸಿದರು. ಇದಾದ ಬಳಿಕ ಎರಡನೇ ವಿಕೆಟ್‌ಗೆ ಜತೆಯಾದ ಇಮಾಮ್ ಉಲ್ ಹಕ್ ಹಾಗೂ ನಾಯಕ ಬಾಬರ್ ಅಜಂ ಸ್ಪೋಟಕ ಬ್ಯಾಟಿಂಗ್ ನಡೆಸುವ ಮೂಲಕ ಕ್ರಿಕೆಟ್ ಅಭಿಮಾನಿಗಳನ್ನು ರಂಜಿಸಿದರು. ಎರಡನೇ ವಿಕೆಟ್‌ಗೆ ಈ ಜೋಡಿ ಮುರಿಯದ 190 ರನ್‌ಗಳ ಜತೆಯಾಟವಾಡುವ ಮೂಲಕ ತಂಡವನ್ನು ಅನಾಯಾಸವಾಗಿ ಗೆಲುವಿನ ದಡ ಸೇರಿಸಿದರು. ಎರಡನೇ ಏಕದಿನ ಪಂದ್ಯದಲ್ಲಿ ಆಕರ್ಷಕ ಶತಕ ಬಾರಿಸಿದ್ದ ಆರಂಭಿಕ ಬ್ಯಾಟರ್ ಇಮಾಮ್ ಉಲ್ ಹಕ್, ನಿರ್ಣಾಯಕ ಏಕದಿನ ಪಂದ್ಯದಲ್ಲಿ ಅಜೇಯ 89 ರನ್ ಬಾರಿಸಿದರು. ಇನ್ನು ಮತ್ತೊಂದು ತುದಿಯಲ್ಲಿ ಸ್ಪೋಟಕ ಬ್ಯಾಟಿಂಗ್ ನಡೆಸಿದ ನಾಯಕ ಬಾಬರ್ ಅಜಂ 115 ಎಸೆತಗಳನ್ನು ಎದುರಿಸಿ 12 ಬೌಂಡರಿ ಸಹಿತ ಅಜೇಯ 105 ರನ್ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.
ಇದಕ್ಕೂ ಮೊದಲು ಟಾಸ್ ಸೋತರೂ ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಆಸ್ಟ್ರೇಲಿಯಾ ತಂಡವು ಉತ್ತಮ ಆರಂಭ ಪಡೆಯಲು ವಿಫಲವಾಯಿತು. ಆಸ್ಟ್ರೇಲಿಯಾದ ಆರಂಭಿಕ ಬ್ಯಾಟರ್‌ಗಳಾದ ಆ್ಯರೋನ್ ಫಿಂಚ್ ಹಾಗೂ ಟ್ರಾವಿಸ್ ಹೆಡ್ ಖಾತೆ ತೆರೆಯುವ ಮುನ್ನವೇ ಶೂನ್ಯ ಸುತ್ತಿ ಪೆವಿಲಿಯನ್ ಪೆರೇಡ್ ನಡೆಸಿದರು. ಇನ್ನು ಆಸೀಸ್ ನಂಬಿಗಸ್ಥ ಬ್ಯಾಟರ್ ಮಾರ್ನಸ್ ಲಬುಶೇನ್ ಬ್ಯಾಟಿಂಗ್ ಕೇವಲ 4 ರನ್‌ಗಳಿಗೆ ಸೀಮಿತವಾಯಿತು. ಆಸ್ಟ್ರೇಲಿಯಾ ತಂಡವು 6 ರನ್ ಗಳಿಸುವಷ್ಟರಲ್ಲಿ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಬೆನ್ ಮೆಕ್‌ಡರ್ಮೋಟ್ ಹಾಗೂ ಮಾರ್ಕಸ್ ಸ್ಟೋನಿಸ್ ತಂಡಕ್ಕೆ ಕೆಲಕಾಲ ಆಸರೆಯಾಗುವ ಯತ್ನ ನಡೆಸಿದರು. ಬೆನ್ ಮೆಕ್‌ಡರ್ಮೋಟ್ 36 ರನ್ ಬಾರಿಸಿದರೆ, ಆಲ್ರೌಂಡರ್ ಮಾರ್ಕಸ್ ಸ್ಟೋನಿಸ್ 19 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.
ICC Women's World Cup Final: ಇಂಗ್ಲೆಂಡ್ ಎದುರು ಆಸ್ಟ್ರೇಲಿಯಾ ಭರ್ಜರಿ ಆರಂಭ
ಆಸ್ಟ್ರೇಲಿಯಾದ ಅಗ್ರಕ್ರಮಾಂಕದ ಬ್ಯಾಟರ್‌ಗಳು ವೈಫಲ್ಯ ಅನುಭವಿಸಿದ್ದರಿಂದ, ಪ್ರವಾಸಿ ತಂಡವು ಅಲ್ಪಮೊತ್ತಕ್ಕೆ ಕುಸಿಯುವ ಭೀತಿಗೆ ಸಿಲುಕಿತ್ತು. ಈ ವೇಳೆ ವಿಕೆಟ್ ಕೀಪರ್ ಬ್ಯಾಟರ್ ಅಲೆಕ್ಸ್ ಕ್ಯಾರಿ, ಕ್ಯಾಮರೋನ್ ಗ್ರೀನ್ ಹಾಗೂ ಶಾನ್ ಅಬ್ಬೋಟ್ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸುವ ಮೂಲಕ ತಂಡ ಗೌರವಾನ್ವಿತ ಮೊತ್ತ ಕಲೆಹಾಕಲು ನೆರವಾದರು. ಅಲೆಕ್ಸ್ ಕ್ಯಾರಿ 61 ಎಸೆತಗಳನ್ನು ಎದುರಿಸಿ 6 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 56 ರನ್ ಬಾರಿಸಿದರೆ, ಕ್ಯಾಮರೋನ್ ಗ್ರೀನ್ 34 ರನ್ ಬಾರಿಸಿದರು. ಮತ್ತೋರ್ವ ಆಲ್ರೌಂಡರ್ ಶಾನ್ ಅಬ್ಬೋಟ್ 40 ಎಸೆತಗಳಲ್ಲಿ 6 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 49 ರನ್ ಬಾರಿಸಿ ಹ್ಯಾರಿಸ್ ರೌಫ್‌ಗೆ ವಿಕೆಟ್ ಒಪ್ಪಿಸಿದರು.
ಇದಕ್ಕೂ ಮೊದಲು 24 ವರ್ಷಗಳ ಬಳಿಕ ಪಾಕಿಸ್ತಾನ ಪ್ರವಾಸ ಕೈಗೊಂಡಿರುವ ಆಸ್ಟ್ರೇಲಿಯಾ ಕ್ರಿಕೆಟ್ ತಂಡವು 3 ಪಂದ್ಯಗಳ ಟೆಸ್ಟ್ ಸರಣಿಯನ್ನು 1-0 ಅಂತರದಲ್ಲಿ ಜಯಿಸಿತ್ತು. ಮೊದಲೆರಡು ಟೆಸ್ಟ್ ಪಂದ್ಯಗಳು ಡ್ರಾ ಆಗಿದ್ದವು. ಇನ್ನು ಮೂರನೇ ಟೆಸ್ಟ್ ಪಂದ್ಯವನ್ನು ಜಯಿಸುವ ಮೂಲಕ ಟೆಸ್ಟ್ ಸರಣಿಯನ್ನು ಆಸ್ಟ್ರೇಲಿಯಾ ಕೈವಶ ಮಾಡಿಕೊಂಡಿತ್ತು.