
ಮಹಿಳಾ ಏಕದಿನ ವಿಶ್ವಕಪ್‌ನ ಬಹುಮಾನ ಹಣವನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಭಾರೀ ಪ್ರಮಾಣದಲ್ಲಿ ಹೆಚ್ಚಿಸಿದೆ. ಬಹುನಿರೀಕ್ಷಿತ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯು ಸೆಪ್ಟೆಂಬರ್ 30 ರಂದು ಟೂರ್ನಮೆಂಟ್ ಆರಂಭವಾಗಲಿರುವಾಗಲಿದೆ.
ಈ ಬಾರಿಯ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯ ಒಟ್ಟು ಬಹುಮಾನ ಮೊತ್ತ ಬರೋಬ್ಬರಿ 13.8 ಮಿಲಿಯನ್ ಅಮೇರಿಕನ್ ಡಾಲರ್ (122.37 ಕೋಟಿ ರೂಪಾಯಿ). ನ್ಯೂಜಿಲೆಂಡ್ ಆತಿಥ್ಯ ವಹಿಸಿದ್ದ 2022ರ ಮಹಿಳಾ ಏಕದಿನ ವಿಶ್ವಕಪ್‌ನ ಒಟ್ಟು ಬಹುಮಾನ ಮೊತ್ತ ಕೇವಲ 3.5 ಮಿಲಿಯನ್ ಅಮೇರಿಕನ್ ಡಾಲರ್ (30.85 ಕೋಟಿ ರೂಪಾಯಿ). 297% ಹೆಚ್ಚಳವಾಗಿದೆ. ಪುರುಷರ ಏಕದಿನ ವಿಶ್ವಕಪ್‌ಗೆ ಒಟ್ಟು ಬಹುಮಾನ ಮೊತ್ತ 10 ಮಿಲಿಯನ್ ಅಮೇರಿಕನ್ ಡಾಲರ್ (85 ಕೋಟಿ ರೂಪಾಯಿ).
ಮಹಿಳಾ ವಿಶ್ವಕಪ್ ಚಾಂಪಿಯನ್ ತಂಡಕ್ಕೆ ಈ ಬಾರಿ 4.48 ಮಿಲಿಯನ್ ಅಮೇರಿಕನ್ ಡಾಲರ್ (39.5 ಕೋಟಿ ರೂಪಾಯಿ) ಸಿಗಲಿದೆ. ಕಳೆದ ಬಾರಿಗಿಂತ 239% ಹೆಚ್ಚಳವಾಗಿದೆ. 2022ರ ವಿಶ್ವಕಪ್‌ನಲ್ಲಿ ವಿಜೇತರಾದ ಆಸ್ಟ್ರೇಲಿಯಾಕ್ಕೆ 1.32 ಮಿಲಿಯನ್ ಅಮೇರಿಕನ್ ಡಾಲರ್ (11.63 ಕೋಟಿ ರೂಪಾಯಿ) ಸಿಕ್ಕಿತ್ತು. 2023ರಲ್ಲಿ ಪುರುಷರ ಏಕದಿನ ವಿಶ್ವಕಪ್ ಗೆದ್ದ ಆಸ್ಟ್ರೇಲಿಯಾಕ್ಕೆ 4 ಮಿಲಿಯನ್ ಯುಎಸ್ ಡಾಲರ್ (35.2 ಕೋಟಿ ರೂಪಾಯಿ) ಬಹುಮಾನವಾಗಿ ಸಿಕ್ಕಿತ್ತು.
ಫೈನಲ್‌ನಲ್ಲಿ ಸೋಲುಂಡು ರನ್ನರ್ ಅಪ್ ಪಡೆಯುವ ತಂಡಕ್ಕೆ 2.24 ಮಿಲಿಯನ್ ಅಮೇರಿಕನ್ ಡಾಲರ್ (19.75 ಕೋಟಿ ರೂಪಾಯಿ) ಸಿಗಲಿದೆ. 2022ರ ಆವೃತ್ತಿಗಿಂತ 273% ಹೆಚ್ಚಳವಾಗಿದೆ. ಸೆಮಿಫೈನಲಿಸ್ಟ್‌ಗಳಿಗೆ 1.12 ಮಿಲಿಯನ್ ಅಮೇರಿಕನ್ ಡಾಲರ್ (9.87 ಕೋಟಿ ರೂಪಾಯಿ) ಸಿಗಲಿದೆ. ಐದು ಮತ್ತು ಆರನೇ ಸ್ಥಾನ ಪಡೆಯುವವರಿಗೆ ತಲಾ 6.1 ಕೋಟಿ ರೂಪಾಯಿ ಸಿಗಲಿದೆ. ಏಳು ಮತ್ತು ಎಂಟನೇ ಸ್ಥಾನ ಪಡೆಯುವವರಿಗೆ ತಲಾ 2.4 ಕೋಟಿ ರೂಪಾಯಿ ಸಿಗಲಿದೆ. ಭಾಗವಹಿಸುವ ಎಲ್ಲಾ ತಂಡಗಳಿಗೆ ಐಸಿಸಿ 2.2 ಕೋಟಿ ರೂಪಾಯಿ ನೀಡಲಿದೆ.
ಶ್ರೀಲಂಕಾ ಮತ್ತು ಭಾರತ ಆತಿಥ್ಯ ವಹಿಸಲಿರುವ ಮಹಿಳಾ ವಿಶ್ವಕಪ್ ಐದು ಕ್ರೀಡಾಂಗಣಗಳಲ್ಲಿ ನಡೆಯಲಿದೆ. ಭಾರತದಲ್ಲಿ ಗುವಾಹಟಿ, ಇಂದೋರ್, ನವಿ ಮುಂಬೈ, ವಿಶಾಖಪಟ್ಟಣಂ ಮತ್ತು ಶ್ರೀಲಂಕಾದ ಕೊಲಂಬೊದಲ್ಲಿ ಪಂದ್ಯಗಳು ನಡೆಯಲಿವೆ. ಪಾಕಿಸ್ತಾನ ಆಡುವ ಪಂದ್ಯಗಳಿಗೆ ಶ್ರೀಲಂಕಾದ ಕೊಲಂಬೋ ಮೈದಾನ ಆತಿಥ್ಯ ವಹಿಸಲಿದೆ.
ಭಾರತ ಮಹಿಳಾ ಕ್ರಿಕೆಟ್ ತಂಡವು ಇದುವರೆಗೂ ಐಸಿಸಿ ವಿಶ್ವಕಪ್ ಟ್ರೋಫಿ ಗೆಲ್ಲಲು ಸಾಧ್ಯವಾಗಿಲ್ಲ. ಭಾರತ ಮಹಿಳಾ ಕ್ರಿಕೆಟ್ ತಂಡವು 2005 ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿತ್ತು. ಆದರೆ ಫೈನಲ್‌ನಲ್ಲಿ ಆಸ್ಟ್ರೇಲಿಯಾ ಎದುರು 98 ರನ್ ಅಂತರದ ಸೋಲು ಕಾಣುವ ಮೂಲಕ ನಿರಾಸೆ ಮೂಡಿಸಿತ್ತು. ಇದಾದ ಬಳಿಕ 2017ರಲ್ಲಿ ಮತ್ತೊಮ್ಮೆ ಮಿಥಾಲಿ ರಾಜ್ ನೇತೃತ್ವದ ಟೀಂ ಇಂಡಿಯಾ ಫೈನಲ್ ಪ್ರವೇಶಿಸಿತ್ತಾದರೂ, ಲಾರ್ಡ್ಸ್‌ನಲ್ಲಿ ಮತ್ತೆ ಪ್ರಶಸ್ತಿ ಸುತ್ತಿನಲ್ಲಿ ಮುಗ್ಗರಿಸಿತ್ತು. ಇದೀಗ ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಭಾರತ ಮಹಿಳಾ ಕ್ರಿಕೆಟ್ ತಂಡವು ಐಸಿಸಿ ಟ್ರೋಫಿ ಬರ ನೀಗಿಸಿಕೊಳ್ಳಲು ಎದುರು ನೋಡುತ್ತಿದೆ.
2025ರ ಐಸಿಸಿ ಮಹಿಳಾ ಏಕದಿನ ವಿಶ್ವಕಪ್‌ಗೆ ಭಾರತ ತಂಡ ಹೀಗಿದೆ ನೋಡಿ:
ಹರ್ಮನ್‌ಪ್ರೀತ್ ಕೌರ್(ನಾಯಕಿ), ಸ್ಮೃತಿ ಮಂಧನಾ(ಉಪನಾಯಕಿ), ಪ್ರತೀಕ್ ರಾವಲ್, ಹರ್ಲೀನ್ ಡಿಯೋಲ್, ದೀಪ್ತಿ ಶರ್ಮಾ, ಜೆಮಿಯಾ ರೋಡ್ರಿಗ್ಸ್, ರೇಣುಕಾ ಸಿಂಗ್ ಠಾಕೂರ್, ಅರುಂದತಿ ರೆಡ್ಡಿ, ರಿಚಾ ಘೋಷ್(ವಿಕೆಟ್ ಕೀಪರ್), ಕ್ರಾಂತಿ ಗೌಡ್, ಅಮನ್‌ಜೋತ್ ಕೌರ್, ರಾಧಾ ಯಾದವ್, ಶ್ರೀ ಚರಣಿ, ಯಾಶ್ತಿಕಾ ಭಾಟಿಯಾ(ವಿಕೆಟ್ ಕೀಪರ್) ಹಾಗೂ ಸ್ನೆಹ್ ರಾಣಾ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.