ದುಲೀಪ್‌ ಟ್ರೋಫಿ 2025: ಉತ್ತರ, ಕೇಂದ್ರ ವಲಯ ತಂಡಗಳು ಸೆಮಿಗೆ ಲಗ್ಗೆ!

Published : Sep 01, 2025, 09:13 AM ISTUpdated : Sep 01, 2025, 09:32 AM IST
Bat Ball

ಸಾರಾಂಶ

ದುಲೀಪ್ ಟ್ರೋಫಿ ಕ್ವಾರ್ಟರ್‌ ಫೈನಲ್‌ ಪಂದ್ಯಗಳು ಡ್ರಾ ಆಗಿದ್ದು, ಉತ್ತರ ಮತ್ತು ಕೇಂದ್ರ ವಲಯ ತಂಡಗಳು ಸೆಮಿಫೈನಲ್‌ಗೆ ಪ್ರವೇಶ ಪಡೆದಿವೆ. ಮೊದಲ ಇನ್ನಿಂಗ್ಸ್‌ನಲ್ಲಿ ಮುನ್ನಡೆ ಸಾಧಿಸಿದ್ದೇ ಇವರ ಗೆಲುವಿಗೆ ಕಾರಣ.

ಬೆಂಗಳೂರು: ಉತ್ತರ ವಲಯ ಹಾಗೂ ಕೇಂದ್ರ ವಲಯ ತಂಡಗಳು ದುಲೀಪ್‌ ಟ್ರೋಫಿ ದೇಸಿ ಕ್ರಿಕೆಟ್‌ ಟೂರ್ನಿಯಲ್ಲಿ ಸೆಮಿಫೈನಲ್‌ ಪ್ರವೇಶಿಸಿವೆ. ಬೆಂಗಳೂರಿನಲ್ಲಿರುವ ಬಿಸಿಸಿಐ ಸೆಂಟರ್‌ ಆಫ್‌ ಎಕ್ಸಲೆನ್ಸ್‌ನಲ್ಲಿ ನಡೆದ ಎರಡೂ ಕ್ವಾರ್ಟರ್‌ ಫೈನಲ್‌ ಪಂದ್ಯಗಳು ಡ್ರಾಗೊಂಡವು. ಹೀಗಾಗಿ ಮೊದಲ ಇನ್ನಿಂಗ್ಸ್‌ ಮುನ್ನಡೆ ಆಧಾರದಲ್ಲಿ 2 ತಂಡಗಳು ಸೆಮಿಫೈನಲ್‌ ಪ್ರವೇಶಿಸಿದವು.

833 ರನ್‌ ಲೀಡ್‌:

ಪೂರ್ವ ವಲಯ ವಿರುದ್ಧ ಮೊದಲ ಕ್ವಾರ್ಟರ್‌ ಫೈನಲ್‌ನಲ್ಲಿ ಉತ್ತರ ವಲಯ ಸಂಪೂರ್ಣ ಪ್ರಾಬಲ್ಯ ಸಾಧಿಸಿತು. ಮೊದಲ ಇನ್ನಿಂಗ್ಸ್‌ನಲ್ಲಿ ಉತ್ತರ ವಲಯ 405 ರನ್‌ ಗಳಿಸಿದ್ದರೆ, ಪೂರ್ವ ತಂಡ 230ಕ್ಕೆ ಆಲೌಟಾಗಿತ್ತು. 2ನೇ ಇನ್ನಿಂಗ್ಸ್‌ನಲ್ಲಿ 3ನೇ ದಿನದಂತ್ಯಕ್ಕೆ 2 ವಿಕೆಟ್‌ಗೆ 388 ರನ್‌ ಗಳಿಸಿದ್ದ ಉತ್ತರ ವಲಯ, ಕೊನೆ ದಿನವೂ ಪೂರ್ಣವಾಗಿ ಬ್ಯಾಟ್‌ ಮಾಡಿತು. ತಂಡ 4 ವಿಕೆಟ್‌ಗೆ 658 ರನ್‌ ಗಳಿಸಿ, ಒಟ್ಟು 833 ರನ್‌ ಮುನ್ನಡೆಯಲ್ಲಿದ್ದಾಗ ಎರಡೂ ತಂಡಗಳ ನಾಯಕ ಡ್ರಾಗೆ ಸಮ್ಮತಿಸಿದರು. ನಾಯಕ ಅಂಕಿತ್‌ ಕುಮಾರ್‌(198) ದ್ವಿಶತಕದ ಅಂಚಿನಲ್ಲಿ ಎಡವಿದರು. ಆದರೆ ಆಯುಶ್‌ ಬದೋನಿ ಸ್ಫೋಟಕ ಆಟವಾಡಿ 223 ಎಸೆತಗಳಲ್ಲಿ 204 ರನ್‌ ಸಿಡಿಸಿದರು.

ಈ ನಡುವೆ ಪೂರ್ವ ವಲಯದ ಹಿರಿಯ ವೇಗಿ ಮೊಹಮ್ಮದ್‌ ಶಮಿ ಕೊನೆ ದಿನ ಫೀಲ್ಡ್‌ಗೆ ಇಳಿಯಲಿಲ್ಲ. ಅವರು ಸಣ್ಣ ಪ್ರಮಾಣದ ಗಾಯದಿಂದ ಬಳುತ್ತಿದ್ದಾರೆ ಎಂದು ನಾಯಕ ರಿಯಾನ್‌ ಪರಾಗ್‌ ಹೇಳಿದ್ದಾರೆ.

679 ರನ್‌ ಗುರಿ:

ಮತ್ತೊಂದು ಕ್ವಾರ್ಟರ್‌ ಫೈನಲ್‌ನಲ್ಲಿ ಈಶಾನ್ಯ ವಿರುದ್ಧ ಕೇಂದ್ರ ವಲಯ ಸವಾರಿ ಮಾಡಿತು. ಮೊದಲ ಇನ್ನಿಂಗ್ಸ್‌ನಲ್ಲಿ ಕೇಂದ್ರ 532 ರನ್‌ ಗಳಿಸಿದ್ದರೆ, ಈಶಾನ್ಯ 185ಕ್ಕೆ ಆಲೌಟಾಗಿತ್ತು. 2ನೇ ಇನ್ನಿಂಗ್ಸ್‌ನಲ್ಲಿ 3ನೇ ದಿನದಂತ್ಯಕ್ಕೆ 7 ವಿಕೆಟ್‌ಗೆ 331 ರನ್‌ ಗಳಿಸಿ, 678 ರನ್‌ ಮುನ್ನಡೆ ಪಡೆದಿದ್ದ ಉತ್ತರ ವಲಯ, ಕೊನೆ ದಿನ ಬ್ಯಾಟ್ ಮಾಡದೆ ಡಿಕ್ಲೇರ್‌ ಘೋಷಿಸಿತು. 679 ರನ್‌ಗಳ ಬೃಹತ್‌ ಗುರಿ ಪಡೆದ ಈಶಾನ್ಯ ತಂಡ 6 ವಿಕೆಟ್‌ಗೆ 200 ರನ್‌ ಗಳಿಸಿದ್ದಾಗ ಪಂದ್ಯ ಡ್ರಾಗೊಳಿಸಲಾಯಿತು. ಜೆಹು ಆ್ಯಂಡರ್‌ಸನ್ 64, ನಾಯಕ ರಾಂಗ್ಸನ್‌ ಜೊನಾಥನ್‌ ಔಟಾಗದೆ 60 ರನ್‌ ಗಳಿಸಿದರು.

ಸೆಮಿಫೈನಲ್ ವೇಳಾಪಟ್ಟಿ

ದಿನಾಂಕ ಪಂದ್ಯ ಸ್ಥಳ

ಸೆ.4-7 ದಕ್ಷಿಣ-ಉತ್ತರ - ಬೆಂಗಳೂರು

ಸೆ.4-7 ಕೇಂದ್ರ-ಪೂರ್ವ - ಬೆಂಗಳೂರು

ಸೆಮೀಸ್‌ನಲ್ಲಿ ದಕ್ಷಿಣಕ್ಕೆ ಅಜರುದ್ದೀನ್‌ ನಾಯಕ

ಕೇರಳ ಬ್ಯಾಟರ್‌ ಮೊಹಮ್ಮದ್‌ ಅಜರುದ್ದೀನ್‌ ದಕ್ಷಿಣ ವಲಯ ತಂಡಕ್ಕೆ ನಾಯಕನಾಗಿ ನೇಮಕಗೊಂಡಿದ್ದಾರೆ. ಮೊದಲಿಗೆ ತಿಲಕ್‌ ವರ್ಮಾ ನಾಯಕ, ಅಜರುದ್ದೀನ್‌ ಉಪನಾಯಕರಾಗಿ ಆಯ್ಕೆಯಾಗಿದ್ದರು. ಆದರೆ ತಿಲಕ್‌ ಏಷ್ಯಾಕಪ್‌ಗೆ ಭಾರತ ತಂಡಕ್ಕೆ ಆಯ್ಕೆಯಾದ ಕಾರಣ, ದುಲೀಪ್‌ ಟ್ರೋಫಿ ಸೆಮಿಫೈನಲ್‌ಗೆ ಲಭ್ಯವಿಲ್ಲ. ಹೀಗಾಗಿ ಸೆಮಿಫೈನಲ್‌ನಲ್ಲಿ ದಕ್ಷಿಣ ವಲಯವನ್ನು ಅಜರುದ್ದೀನ್‌ ಮುನ್ನಡೆಸಲಿದ್ದಾರೆ. ಇನ್ನು, ಸ್ಪಿನ್ನರ್‌ ಸಾಯಿ ಕಿಶೋರ್‌ ಗಾಯದಿಂದ ಚೇತರಿಸಿಕೊಳ್ಳದ ಕಾರಣ ಸೆಮಿಫೈನಲ್‌ನಿಂದ ಹೊರಬಿದ್ದಿದ್ದಾರೆ. ಇವರಿಬ್ಬರ ಬದಲು ಅಂಕಿತ್‌ ಶರ್ಮಾ ಹಾಗೂ ಶೇಖ್‌ ರಶೀದ್‌ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ.

ಗಾಯ: ದುಲೀಪ್‌ ಟ್ರೋಫಿ ಸೆಮೀಸ್‌ಗಿಲ್ಲ ಸರ್ಫರಾಜ್‌

ಬೆಂಗಳೂರು: ದುಲೀಪ್‌ ಟ್ರೋಫಿಯಲ್ಲಿ ಆಡುವ ಮೂಲಕ ಭಾರತ ತಂಡಕ್ಕೆ ಕಮ್‌ಬ್ಯಾಕ್‌ ಮಾಡಲು ಕಾತರಿಸುತ್ತಿದ್ದ ಯುವ ಬ್ಯಾಟರ್‌ ಸರ್ಫರಾಜ್‌ ಖಾನ್‌ ಗಾಯಕ್ಕೆ ತುತ್ತಾಗಿದ್ದು, 3 ವಾರಗಳ ಕಾಲ ಕ್ರಿಕೆಟ್‌ನಿಂದ ದೂರ ಉಳಿಯಲಿದ್ದಾರೆ. ಸೆ.4ರಿಂದ ಕೇಂದ್ರ ವಲಯ ವಿರುದ್ಧ ನಡೆಯಬೇಕಿರುವ ಸೆಮಿಫೈನಲ್‌ನಲ್ಲಿ ಸರ್ಫರಾಜ್‌, ಹಾಲಿ ಚಾಂಪಿಯನ್‌ ಪಶ್ಚಿಮ ವಲಯ ಪರ ಆಡಬೇಕಿತ್ತು. ಆದರೆ ಅವರು ಬುಚ್ಚಿಬಾಬು ಟೂರ್ನಿ ವೇಳೆ ತೊಡೆಯ ಭಾಗದ ಗಾಯಕ್ಕೆ ತುತ್ತಾಗಿದ್ದು, ಇನ್ನೂ ಚೇತರಿಸಿಕೊಂಡಿಲ್ಲ. ಸದ್ಯ ಅವರು ಬೆಂಗಳೂರಿನ ಸೆಂಟರ್‌ ಆಫ್‌ ಎಕ್ಸಲೆನ್ಸ್‌ನಲ್ಲಿ ಪುನಶ್ಚೇತನ ಶಿಬಿರದಲ್ಲಿದಲ್ಲಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮೇಲ್ಮನವಿ ಅರ್ಜಿ ವಜಾಗೊಳಿಸಿದ ಹೈಕೋರ್ಟ್, ಡಿ.7ಕ್ಕೆ ಕರ್ನಾಟಕ ಕ್ರಿಕೆಚ್ ಸಂಸ್ಥೆ ಚುನಾವಣೆ
ಕಾಂಗರೂ ನಾಡಲ್ಲಿ ಶತಕದ ಬರ ನೀಗಿಸಿಕೊಂಡ ಜೋ ರೂಟ್! ಕೊನೆಗೂ ತಪ್ಪಿದ ಹೇಡನ್ 'ಬೆತ್ತಲೆ ಸೇವೆ'!