ICC Test Rankings‌: ಶತಕ ಬಾರಿಸಿ 18 ಸ್ಥಾನ ಜಿಗಿದ ಕೆ.ಎಲ್‌.ರಾಹುಲ್‌

By Suvarna NewsFirst Published Jan 6, 2022, 5:50 PM IST
Highlights

* ICC ನೂತನ ಟೆಸ್ಟ್ ಶ್ರೇಯಾಂಕ ಪ್ರಕಟಗೊಂಡಿದ್ದು, ರಾಹುಲ್ ಲಾಂಗ್ ಜಂಪ್

* ಬರೋಬ್ಬರಿ 18 ಸ್ಥಾನ ಜಿಗಿತ ಕಂಡ ಕನ್ನಡಿಗ ಕೆ ಎಲ್ ರಾಹುಲ್

* 9ನೇ ಸ್ಥಾನಕ್ಕೆ ಜಾರಿದ ವಿರಾಟ್ ಕೊಹ್ಲಿ

ದುಬೈ(ಜ.06): ಭಾರತ ಟೆಸ್ಟ್‌, ಏಕದಿನದ ಹಂಗಾಮಿ ನಾಯಕ, ಕನ್ನಡಿಗ ಕೆ.ಎಲ್‌.ರಾಹುಲ್‌ (KL Rahul) ಐಸಿಸಿ ಟೆಸ್ಟ್‌ ಬ್ಯಾಟಿಂಗ್‌ ರ‍್ಯಾಂಕಿಂಗ್‌ನಲ್ಲಿ (ICC Test Batsman Rankings) ಭಾರೀ ಪ್ರಗತಿ ಸಾಧಿಸಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ದದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಆಕರ್ಷಕ ಶತಕ ಚಚ್ಚಿದ ಬೆನ್ನಲ್ಲೆ ನೂತನವಾಗಿ ಪ್ರಕಟಗೊಂಡ ರ‍್ಯಾಂಕಿಂಗ್‌ನಲ್ಲಿ ರಾಹುಲ್‌ 18 ಸ್ಥಾನ ಜಿಗಿತ ಕಂಡು 31ನೇ  ಸ್ಥಾನ ಪಡೆದಿದ್ದಾರೆ. 

ದಕ್ಷಿಣ ಆಫ್ರಿಕಾ ವಿರುದ್ದ ಸೆಂಚೂರಿಯನ್‌ನಲ್ಲಿ ನಡೆದ ಮೊದಲ ಟೆಸ್ಟ್‌ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ 113 ರನ್‌ ಬಾರಿಸಿ ಮಿಂಚಿದ್ದರು. ರಾಹುಲ್ ಶತಕದ ನೆರವಿನಿಂದ ಟೀಂ ಇಂಡಿಯಾ (Team India) ಭರ್ಜರಿ ಗೆಲುವು ಸಾಧಿಸಿತ್ತು. ಈ ಮೂಲಕ 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ 1-0 ಮುನ್ನಡೆ ಸಾಧಿಸಿದೆ. ಮೊದಲ ಟೆಸ್ಟ್ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ಸೆಂಚೂರಿಯನ್‌ನಲ್ಲಿ ಗೆಲುವು ದಾಖಲಿಸಿದ ಏಷ್ಯಾದ ಮೊದಲ ತಂಡ ಎನ್ನುವ ಗೌರವಕ್ಕೆ ಭಾಜನವಾಗಿತ್ತು.

ಆಸ್ಟ್ರೇಲಿಯಾದ ಬ್ಯಾಟರ್‌ ಮಾರ್ನಸ್‌ ಲಬುಶೇನ್ (Marnus Labuschagne) ಮೊದಲ ಸ್ಥಾನದಲ್ಲೇ ಮುಂದುವರೆದಿದ್ದಾರೆ. ವಿರಾಟ್ ಕೊಹ್ಲಿ (Virat Kohli) ಎರಡು ಸ್ಥಾನ ಕುಸಿತ ಕಂಡು 9ನೇ ಸ್ಥಾನಕ್ಕೆ ಜಾರಿದ್ದಾರೆ. ಒಂದು ಸ್ಥಾನ ಏರಿಕೆ ಕಂಡಿರುವ ಮಯಾಂಕ್‌ ಅಗರ್‌ವಾಲ್‌ (Mayank Agarwal) 11ನೇ ಸ್ಥಾನದಲ್ಲಿದ್ದಾರೆ. ಅಜಿಂಕ್ಯ ರಹಾನೆ 2 ಸ್ಥಾನ ಏರಿಕೆ ಕಂಡಿದ್ದು 25ನೇ ಸ್ಥಾನದಲ್ಲಿದ್ದರೆ, ರೋಹಿತ್‌ ಶರ್ಮಾ 5ನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ. 

ಬೌಲಿಂಗ್‌ ರ‍್ಯಾಂಕಿಂಗ್‌ನಲ್ಲಿ ವೇಗಿ ಜಸ್‌ಪ್ರೀತ್‌ ಬುಮ್ರಾ ಅಗ್ರ 10ರಲ್ಲಿ ಸ್ಥಾನ ಪಡೆದಿದ್ದಾರೆ. 3 ಸ್ಥಾನ ಮೇಲಕ್ಕೇರಿದ ಅವರು 9ನೇ ಸ್ಥಾನದಲ್ಲಿದ್ದು, ಮೊಹಮದ್‌ ಶಮಿ 17ನೇ ಸ್ಥಾನ ಪಡೆದಿದ್ದಾರೆ. ಇನ್ನುಳಿದಂತೆ ಪ್ಯಾಟ್‌ ಕಮಿನ್ಸ್‌ ಮೊದಲ ಸ್ಥಾನ ಮುಂದುವರೆದಿದ್ದಾರೆ. ರವಿಚಂದ್ರನ್ ಅಶ್ವಿನ್‌ (Ravichandran Ashwin) ಎರಡನೇ ಸ್ಥಾನ ಉಳಿಸಿಕೊಂಡಿದ್ದಾರೆ. ಆಲ್ರೌಂಡರ್ ವಿಭಾಗದಲ್ಲಿ ವೆಸ್ಟ್‌ ಇಂಡೀಸ್‌ನ ಜೇಸನ್ ಹೋಲ್ಡರ್ ಮೊದಲ ಸ್ಥಾನದಲ್ಲಿದ್ದರೆ, ರವಿಚಂದ್ರನ್ ಅಶ್ವಿನ್ ಎರಡನೇ ಸ್ಥಾನ ಕಾಯ್ದುಕೊಂಡಿದ್ದಾರೆ. 

ಸೌರವ್ ಗಂಗೂಲಿ ಪುತ್ರಿ, ಗ್ಲೆನ್‌ ಮ್ಯಾಕ್ಸ್‌ವೆಲ್‌ಗೆ ಸೋಂಕು

ಕೋಲ್ಕತಾ: ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ (Sourav Ganguly) ಕೋವಿಡ್‌ಗೆ ತುತ್ತಾಗಿ, ಚೇತರಿಸಿಕೊಂಡ ಬಳಿಕ ಅವರ ಪುತ್ರಿ, ಮೂವರು ಕುಟುಂಬಸ್ಥರಿಗೆ ಸೋಂಕು ದೃಢಪಟ್ಟಿದೆ. ಪುತ್ರಿ, 20 ವರ್ಷದ ಸನಾ, ಚಿಕ್ಕಪ್ಪ ದೆಬಾಶಿಶ್‌ ಗಂಗೂಲಿ ಹಾಗೂ ಇತರೆ ಇಬ್ಬರಲ್ಲಿ ಮಂಗಳವಾರ ಸೋಂಕು ಪತ್ತೆಯಾಗಿದೆ. ಅವರನ್ನು ಮನೆಯಲ್ಲೇ ಐಸೋಲೇಷನ್‌ನಲ್ಲಿ ಇರಿಸಲಾಗಿದೆ. 

Ind vs SA Test: ರೋಚಕಘಟ್ಟ ತಲುಪಿದ ಜೋಹಾನ್ಸ್‌ಬರ್ಗ್‌ ಟೆಸ್ಟ್..! ಗೆಲುವು ಯಾರಿಗೆ.?

ಇನ್ನು ಆಸ್ಪ್ರೇಲಿಯಾದ ತಾರಾ ಕ್ರಿಕೆಟಿಗ, ಬಿಗ್‌ಬ್ಯಾಶ್‌ ಟಿ20 ಲೀಗ್‌ನ ಮೆಲ್ಬರ್ನ್‌ ಸ್ಟಾ​ರ್ಸ್ಸ್‌ ನಾಯಕ ಗ್ಲೆನ್‌ ಮ್ಯಾಕ್ಸ್‌ವೆಲ್‌ಗೂ (Glenn Maxwell) ಸೋಂಕು ಖಚಿತವಾಗಿದೆ. ಇತರೆ ತಂಡಗಳ ಆಟಗಾರರಲ್ಲೂ ಸೋಂಕು ಪತ್ತೆಯಾಗಿದ್ದರಿಂದ ಬುಧವಾರದ ಬ್ರಿಸ್ಬೇನ್‌ ಹೀಟ್ಸ್‌-ಸಿಡ್ನಿ ಸಿಕ್ಸ​ರ್ಸ್ಸ್ ಬಿಗ್‌ಬ್ಯಾಶ್‌ ಪಂದ್ಯವನ್ನು ಮುಂದೂಡಲಾಗಿದೆ.

ಲೀಗ್‌ ಪಂದ್ಯಗಳನ್ನು ಮುಂದೂಡಿದ ಕೆಎಸ್‌ಸಿಎ

ಬೆಂಗಳೂರು: ಕೊರೋನಾ ಸೋಂಕು (Coronavirus) ಹೆಚ್ಚಳವಾಗುತ್ತಿರುವ ಕಾರಣ ರಾಜ್ಯ ಸರ್ಕಾರ ವಾರಾಂತ್ಯದ ಕರ್ಫ್ಯೂ ಹಾಗೂ ಕಠಿಣ ನಿಯಮಗಳನ್ನು ಜಾರಿ ಮಾಡಿರುವ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ(ಕೆಎಸ್‌ಸಿಎ) ತನ್ನ ಲೀಗ್‌ ಪಂದ್ಯಗಳನ್ನು ಮುಂದೂಡಿದೆ. 

ಪ್ರಥಮ ದರ್ಜೆಯಿಂದ ಹಿಡಿದು ಐದನೇ ದರ್ಜೆ ವರೆಗಿನ ಲೀಗ್‌ಗಳು ಜ.8ರಿಂದ ಹಾಗೂ ಅಂಡರ್‌-14 ಅಂತರ ಕ್ಲಬ್‌ ಟೂರ್ನಿಗಳನ್ನು ಜ.6ರಿಂದ ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ ಎಂದು ಕೆಎಸ್‌ಸಿಎ ಪ್ರಕಟಣೆ ತಿಳಿಸಿದೆ.
 

click me!