ಇದೇ ಮೊದಲ ಬಾರಿಗೆ ಕ್ರಿಕೆಟ್‌ನ ಮೂರೂ ಮಾದರಿಯಲ್ಲಿ ಭಾರತ ನಂ.1

By Santosh NaikFirst Published Feb 15, 2023, 5:11 PM IST
Highlights

ಟೀಂ ಇಂಡಿಯಾ ಕ್ರಿಕೆಟ್‌ನ ಮೂರೂ ಮಾದರಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಟಿ20 ಹಾಗೂ ಏಕದಿನದಲ್ಲಿ ಈಗಾಗಲೇ ನಂ.1 ಸ್ಥಾನದಲ್ಲಿದ್ದ ಭಾರತ ತಂಡ, ಟೆಸ್ಟ್‌ ಕ್ರಿಕೆಟ್‌ ಶ್ರೇಯಾಂಕದಲ್ಲಿ ಆಸ್ಟ್ರೇಲಿಯಾ ತಂಡವನ್ನು ಕೆಳಗಿಳಿಸಿ ನಂ.1 ಆಗಿದೆ. ಆ ಮೂಲಕ ಇದೇ ಮೊದಲ ಬಾರಿಗೆ ಕ್ರಿಕೆಟ್‌ನ ಮೂರೂ ಮಾದರಿಯಲ್ಲಿ ಭಾರತ ತಂಡ ನಂ.1 ಎನಿಸಿದೆ.

ಬೆಂಗಳೂರು (ಫೆ.15): ಆಸ್ಟ್ರೇಲಿಯಾ ತಂಡವನ್ನು ಕೆಳಗಿಳಿಸುವ ಮೂಲಕ ಟೀಂ ಇಂಡಿಯಾ ಟೆಸ್ಟ್‌ ಶ್ರೇಯಾಂಕದಲ್ಲಿ ನಂ.1 ಸ್ಥಾನಕ್ಕೇರಿದೆ. ಬುಧವಾರ ಪ್ರಕಟಗೊಂಡ ಐಸಿಸಿ ಟೆಸ್ಟ್‌ ಶ್ರೇಯಾಂಕದಲ್ಲಿ ಆಸ್ಟ್ರೇಲಿಯಾ ತಂಡವನ್ನು 2ನೇ ಸ್ಥಾನಕ್ಕಿರಿಸಿ ಭಾರತ ನಂ.1 ಆಗಿದೆ. ಆ ಮೂಲಕ ಕ್ರಿಕೆಟ್‌ನಲ್ಲಿ ಮೂರೂ ಮಾದರಿಯಲ್ಲಿ ಭಾರತ ತಂಡ ಇದೇ ಮೊದಲ ಬಾರಿಗೆ ಅಗ್ರಸ್ಥಾನಕ್ಕೇರಿದಂತಾಗಿದೆ. ಟಿ20 ಹಾಗೂ ಏಕದಿನದಲ್ಲಿ ಈಗಾಗಲೇ ನಂ.1 ಆಗಿದ್ದ ಭಾರತ ತಂಡ, ಬಾರ್ಡರ್‌-ಗವಾಸ್ಕರ್‌ ಟ್ರೊಫಿಯ ಮೊದಲ ಟೆಸ್ಟ್‌ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು 132 ರನ್‌ಗಳಿಂದ ಸೋಲಿಸುವ ಮೂಲಕ ಅಗ್ರಸ್ಥಾನಕ್ಕೇರಿದೆ. ಟೆಸ್ಟ್‌ ಶ್ರೇಯಾಂಕದಲ್ಲಿ ಭಾರತ ತಂಡ 115 ಅಂಕದೊಂದಿಗೆ ನಂ.1 ಆಗಿದ್ದರೆ, ಆಸ್ಟ್ರೇಲಿಯಾ 111 ಅಂಕದೊಂದಿಗೆ 2ನೇ ಸ್ಥಾನ, ಇಂಗ್ಲೆಂಡ್‌ (106) ಹಾಗೂ ನ್ಯೂಜಿಲೆಂಡ್‌ (100)ತಂಡಗಳು ನಂತರದ ಸ್ಥಾನದಲ್ಲಿವೆ. ಭಾರತ ತಂಡ ಏಕಕಾಲದಲ್ಲಿ ಕ್ರಿಕೆಟ್‌ನ ಮೂರೂ ಮಾದರಿಯಲ್ಲಿ ಅಗ್ರಸ್ಥಾನಕ್ಕೇರಿರುವುದು ಇದೇ ಮೊದಲು. ಏಕಕಾಲದಲ್ಲಿ ತಂಡವನ್ನು ಮೂರೂ ಮಾದರಿಯಲ್ಲಿ ನಂ.1 ಆಗಿಸಿದ ಟೀಂ ಇಂಡಿಯಾ ಕ್ಯಾಪ್ಟನ್‌ ಎನ್ನುವ ಶ್ರೇಯವೂ ರೋಹಿತ್‌ ಶರ್ಮ ಅವರದ್ದಾಗಿದೆ. ಕಳೆದ ತಿಂಗಳು ತವರಿನಲ್ಲಿ ನ್ಯೂಜಿಲೆಂಡ್ ತಂಡವನ್ನು 3-0 ಅಂತರದಿಂದ ಸೋಲಿಸಿದ ಭಾರತ ಏಕದಿನದಲ್ಲಿ ನಂ.1 ರ ಶ್ರೇಯಾಂಕ ಪಡೆದುಕೊಂಡಿತ್ತು. ಶ್ರೀಲಂಕಾವನ್ನು 3-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿದ ನಂತರ ಭಾರತ ಈ ಗೆಲುವು ಕಂಡಿತ್ತು.

ಅಗ್ರಸ್ಥಾನವನ್ನು ಇನ್ನಷ್ಟು ಗಟ್ಟಿ ಮಾಡಿಕೊಳ್ಳುವುದು ಹಾಗೂ ಜೂನ್‌ನಲ್ಲಿ ಇಂಗ್ಲೆಂಡ್‌ನಲ್ಲಿ ನಡೆಯಲಿರುವ ವರ್ಲ್ಡ್‌ ಟೆಸ್ಟ್‌ ಚಾಂಪಿಯನ್‌ಷಿಪ್‌ (World Test Championship) ಫೈನಲ್‌ಗೆ ಅರ್ಹತೆ ಪಡೆಯಬೇಕಿದ್ದರೆ ಟೀಮ್‌ ಇಂಡಿಯಾ ನವದೆಹಲಿಯಲ್ಲಿ ನಡೆಯಲಿರುವ 2ನೇ ಟೆಸ್ಟ್‌ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು ಮಣಿಸಬೇಕಿದೆ. ಹಾಗೇನಾದರೂ ನಾಲ್ಕು ಪಂದ್ಯಗಳ ಟೆಸ್ಟ್‌ ಸರಣಿಯನ್ನು ಭಾರತ 3-1 ಅಥವಾ 4-0ಯಿಂದ ಜಯಿಸಿದಲ್ಲಿ ಭಾರತ ಶ್ರೇಯಾಂಕದಲ್ಲಿ ದೊಡ್ಡ ಅಂತರವನ್ನು ಸಂಪಾದಿಸಿಕೊಳ್ಳಲಿದೆ.

ಇನ್ನು ವೈಯಕ್ತಿಕ ಶ್ರೇಯಾಂಕದಲ್ಲೂ ಭಾರತದ ಆಟಗಾರರು ಉತ್ತಮ ಸಾಧನೆ ತೋರಿದ್ದಾರೆ. ಟೆಸ್ಟ್‌ನ ಬೌಲರ್‌ಗಳ ಶ್ರೇಯಾಂಕದಲ್ಲಿ ರವಿಚಂದ್ರನ್‌ ಅಶ್ವಿನ್‌ (Ravichandran Ashwin) 2ನೇ ಸ್ಥಾನಕ್ಕೇರಿದ್ದಾರೆ. ಅಗ್ರಸ್ಥಾನದಲ್ಲಿರುವ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್‌ ಕಮ್ಮಿನ್ಸ್‌ಗಿಂತ 21 ಅಂಕಗಳ ಹಿನ್ನಡೆಯಲಿದ್ದಾರೆ. ನಾಗ್ಪುರ ಟೆಸ್ಟ್‌ನಲ್ಲಿ ತೋರಿದ ನಿರ್ವಹಣೆಯನ್ನೇ ಪುನಾವರ್ತಿಸಿದಲ್ಲಿ 2017ರ ಬಳಿಕ ಮೊದಲ ಬಾರಿಗೆ ಅಶ್ವಿನ್‌ ಟೆಸ್ಟ್‌ ಶ್ರೇಯಾಂಕದಲ್ಲಿ ನಂ.1 ಸ್ಥಾನಕ್ಕೆ ಮರಳಲಿದ್ದಾರೆ.

 

'ಕ್ರಿಕೆಟ್‌ ಹುಡುಗ್ರ ಆಟ, ನೀನ್‌ ಆಡೋದ್‌ ಬೇಡ..' ಎಂದಿದ್ದ ತಂದೆಗೆ ಸವಾಲೆಸಿದ್ದ ಮಿನ್ನು ಮಣಿ ಈಗ ಮನೆಯ ಧಣಿ!

ನಾಗ್ಪುರ ಟೆಸ್ಟ್‌ನ (Nagpur Test)  ಮೂರನೇ ದಿನದ ಒಂದೇ ಸೆಷನ್‌ನ ಆಟದಲ್ಲಿ ಆಸ್ಟ್ರೇಲಿಯಾ (Australia) ತಂಡವನ್ನು ಆಲೌಟ್‌ ಮಾಡುವ ನಿಟ್ಟಿನಲ್ಲಿ ಅಶ್ವಿನ್‌ ಪ್ರಮುಖ ಪಾತ್ರ ವಹಿಸಿದ್ದರು. ಅನುಭವಿಸಿ ಸ್ಪಿನ್ನರ್‌ 2ನೇ ಇನ್ನಿಂಗ್ಸ್‌ನಲ್ಲಿ 37 ರನ್‌ಗೆ 5 ವಿಕೆಟ್‌ ಉರುಳಿಸಿದರೆ, ಮೊದಲ ಇನ್ನಿಂಗ್ಸ್‌ನಲ್ಲಿ 42 ರನ್‌ಗೆ 3 ವಿಕೆಟ್‌ ಸಂಪಾದನೆ ಮಾಡಿದ್ದರು. ಆರ್.ಅಶ್ವಿನ್‌ ಪಂದ್ಯದ ಕೊನೆಯ ಸೆಷನ್‌ನಲ್ಲಿ ಮಿಂಚಿದರೆ, ಪಂದ್ಯದ ಮೊದಲ ದಿನ ರವೀಂದ್ರ ಜಡೇಜಾ ಗಮನಸೆಳೆದಿದ್ದರು. ಸ್ಟೀವನ್‌ ಸ್ಮಿತ್‌ ಹಾಗೂ ಮಾರ್ನಸ್‌ ಲಬುಶೇನ್‌ ವಿಕೆಟ್‌ಗಳೊಂದಿಗೆ 47 ರನ್‌ಗೆ 5 ವಿಕೆಟ್‌ ಸಾಧನೆ ಮಾಡಿದ್ದರು.

ರಾಂಜನಾ ಚಿತ್ರದ ಹಾಡಿಗೆ ಸೂಪರ್‌ ಸ್ಟೆಪ್ಸ್‌, ಮಗನ ಮುಂದೆ ಹಾರ್ದಿಕ್‌ ಮತ್ತೊಂದ್‌ ಮದುವೆ!

ನಾಗ್ಪುರ ಟೆಸ್ಟ್‌ನಲ್ಲಿ ಶತಕ ಬಾರಿಸುವ ಮೂಲಕ ಗಮನಸೆಳೆದಿದ್ದ ನಾಯಕ ರೋಹಿತ್‌ ಶರ್ಮ, ಬ್ಯಾಟಿಂಗ್‌ ಶ್ರೇಯಾಂಕದಲ್ಲಿ 10 ರಿಂದ 8ನೇ ಸ್ಥಾನಕ್ಕೆ ಜಿಗಿದಿದ್ದಾರೆ. ಮೊದಲ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ 177 ರನ್‌ಗೆ ಆಲೌಟ್‌ ಆದ ಬಳಿಕ ಮೈದಾನಕ್ಕೆ ಇಳಿದಿದ್ದ ರೋಹಿತ್‌ ಶರ್ಮ (Rohit Sharma) ಆಕರ್ಷಕ 120 ರನ್‌ ಬಾರಿಸುವ ಮೂಲಕ ಮಿಂಚಿದ್ದರು.

 

 

click me!