ದಕ್ಷಿಣ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ನಡುವಿನ 3 ಪಂದ್ಯಗಳ ಟೆಸ್ಟ್ ಸರಣಿ ರದ್ದಾದ ಬೆನ್ನಲ್ಲೇ ನ್ಯೂಜಿಲೆಂಡ್ ತಂಡ ಅನಾಯಾಸವಾಗಿ ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪ್ರವೇಶಿಸಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಬೆಂಗಳೂರು(ಫೆ.03): ಉದ್ಘಾಟನಾ ಆವೃತ್ತಿಯ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ನ್ಯೂಜಿಲೆಂಡ್ ಪ್ರವೇಶಿಸಿದೆ. ಕೋವಿಡ್ ಭೀತಿಯಿಂದಾಗಿ ದಕ್ಷಿಣ ಆಫ್ರಿಕಾ ಪ್ರವಾಸವನ್ನು ಮಂದೂಡುತ್ತಿರುವುದಾಗಿ ಮಂಗಳವಾರ ಕ್ರಿಕೆಟ್ ಆಸ್ಪ್ರೇಲಿಯಾ ಘೋಷಿಸಿದ ಕಾರಣ, ನ್ಯೂಜಿಲೆಂಡ್ ಫೈನಲ್‌ಗೇರಿದ ಮೊದಲ ತಂಡ ಎನಿಸಿಕೊಂಡಿತು.
ಫೈನಲ್‌ನಲ್ಲಿ ಆಡುವ ಮತ್ತೊಂದು ತಂಡ ಯಾವುದು ಎನ್ನುವುದು ಫೆ.5ರಿಂದ ಆರಂಭಗೊಳ್ಳಲಿರುವ ಭಾರತ ಹಾಗೂ ಇಂಗ್ಲೆಂಡ್ ನಡುವಿನ 4 ಪಂದ್ಯಗಳ ಟೆಸ್ಟ್ ಸರಣಿ ನಿರ್ಧರಿಸಲಿದೆ. ಭಾರತ ಹಾಗೂ ಇಂಗ್ಲೆಂಡ್ ಮಾತ್ರವಲ್ಲದೆ ಆಸ್ಪ್ರೇಲಿಯಾಗೂ ಫೈನಲ್‌ಗೇರಲು ಇನ್ನೂ ಅವಕಾಶವಿದೆ. ಜೂ.18ರಿಂದ ವಿಶ್ವ ಚಾಂಪಿಯನ್‌ಶಿಪ್ ಫೈನಲ್ ಪಂದ್ಯ ನಡೆಯಲಿದೆ.
undefined
ಕಿವೀಸ್ ಫೈನಲ್ ಪ್ರವೇಶಿಸಿದ್ದು ಹೇಗೆ?
ಭಾರತ ವಿರುದ್ಧ ಮೆಲ್ಬರ್ನ್‌ನಲ್ಲಿ ನಡೆದ 2ನೇ ಟೆಸ್ಟ್‌ನಲ್ಲಿ ನಿಧಾನಗತಿ ಬೌಲಿಂಗ್ ಮಾಡಿದ್ದಕ್ಕಾಗಿ ಆಸ್ಪ್ರೇಲಿಯಾದ ಒಟ್ಟು ಅಂಕಗಳಿಂದ ಐಸಿಸಿ 4 ಅಂಕಗಳನ್ನು ಕಡಿತಗೊಳಿಸಿತು. ಆ ಬಳಿಕ ಸರಣಿ ಸೋತಿದ್ದರಿಂದ ಆಸ್ಪ್ರೇಲಿಯಾದ ಅಂಕ ಪ್ರತಿಶತ ಶೇ.69.1ಕ್ಕೆ ಇಳಿಯಿತು. ತವರಿನಲ್ಲಿ ವಿಂಡೀಸ್ ಹಾಗೂ ಪಾಕಿಸ್ತಾನ ವಿರುದ್ಧ ಸರಣಿ ಕ್ಲೀನ್ ಸ್ವೀಪ್ ಮಾಡಿದ ನ್ಯೂಜಿಲೆಂಡ್ ಶೇ.70 ಅಂಕ ಪ್ರತಿಶತದೊಂದಿಗೆ ಫೈನಲ್ ಸ್ಥಾನ ಖಚಿತಪಡಿಸಿಕೊಂಡಿದೆ. ಆಸೀಸ್ ನಿಧಾನಗತಿ ಬೌಲಿಂಗ್‌ಗೆ ದಂಡ ಹಾಕಿಸಿಕೊಳ್ಳದಿದ್ದರೆ ಫೈನಲ್‌ಗೇರಿದ ಮೊದಲ ತಂಡವಾಗುತ್ತಿತ್ತು.
ಆಸ್ಟ್ರೇಲಿಯಾ-ದಕ್ಷಿಣ ಆಫ್ರಿಕಾ ಟೆಸ್ಟ್ ಸರಣಿ ರದ್ದು; ಆಸೀಸ್ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಕನಸು ಭಗ್ನ
ಭಾರತ ಫೈನಲ್‌ಗೇರಲು ಏನ್ಮಾಡಬೇಕು?
ಇಂಗ್ಲೆಂಡ್ ವಿರುದ್ಧದ 4 ಪಂದ್ಯಗಳ ಸರಣಿಯಲ್ಲಿ ಭಾರತ 4-0, 3-0, 2-0, 3-1 ಇಲ್ಲವೇ 2-1ರ ಅಂತರದಲ್ಲಿ ಜಯಿಸಿಬೇಕಿದೆ. ಅಂದರೆ ಕನಿಷ್ಠ 2 ಪಂದ್ಯಗಳನ್ನು ಗೆಲ್ಲಲೇಬೇಕು. ಇಂಗ್ಲೆಂಡ್ ತಂಡ 4-0, 3-0 ಇಲ್ಲವೇ 3-1ರಲ್ಲಿ ಸರಣಿ ಗೆದ್ದರೆ ಮಾತ್ರ ಫೈನಲ್‌ಗೇರಲಿದೆ. ಈ ಫಲಿತಾಂಶಗಳನ್ನು ಹೊರತುಪಡಿಸಿ ಉಳಿದ್ಯಾವುದೇ ಅಂತರದ ಫಲಿತಾಂಶ ಹೊರಬಿದ್ದರೆ ಆಗ ಆಸ್ಪ್ರೇಲಿಯಾ ಫೈನಲ್‌ಗೇರಲಿದೆ.