T20 World Cup: ರೋಹಿತ್‌ ಶರ್ಮ ಮಣಿಕಟ್ಟಿಗೆ ಗಾಯ, ಸೆಮಿಫೈನಲ್‌ ಆಡ್ತಾರಾ ಹಿಟ್‌ಮ್ಯಾನ್‌?

By Santosh NaikFirst Published Nov 8, 2022, 4:58 PM IST
Highlights

ಟಿ20 ವಿಶ್ವಕಪ್‌ನ ಸೆಮಿಫೈನಲ್‌ಗೆ ಸಿದ್ಧತೆ ನಡೆಸುತ್ತಿರುವ ಭಾರತ ತಂಡಕ್ಕೆ ಆಘಾತ ಎದುರಾಗಿದೆ. ಮಂಗಳವಾರ ತಂಡದ ಅಭ್ಯಾಸ ಅವಧಿಯ ವೇಳೆ ಟೀಮ್‌ ಇಂಡಿಯಾ ನಾಯಕ ರೋಹಿತ್‌ ಶರ್ಮ ಅವರ ಮಣಿಕಟ್ಟಿಗೆ ಗಾಯವಾಗಿದೆ. ಇಂಗ್ಲೆಂಡ್‌ ತಂಡದ ವಿರುದ್ಧ ಭಾರತ ತಂಡ ಗುರುವಾರ ಉಪಾಂತ್ಯ ಕದನ ಆಡಲಿದೆ.
 

ಅಡಿಲೇಡ್‌ (ನ,8): ಟೀಮ್‌ ಇಂಡಿಯಾ ನಾಯಕ ರೋಹಿತ್ ಶರ್ಮ ಗಾಯಾಳುವಾಗಿದ್ದಾರೆ. ಇಂಗ್ಲೆಂಡ್‌ ವಿರುದ್ಧ ಟಿ20 ವಿಶ್ವಕಪ್‌ನ ಸೆಮಿಫೈನಲ್‌ ಪಂದ್ಯಕ್ಕೂ ಎರಡು ದಿನ ಮುನ್ನ ರೋಹಿತ್‌ ಗಾಯಾಳುವಾಗಿದ್ದು ತಂಡದ ಆತಂಕಕ್ಕೆ ಕಾರಣವಾಗಿದೆ. ಮಂಗಳವಾರ ಬೆಳಗ್ಗೆ ರೋಹಿತ್ ಶರ್ಮ ನೆಟ್ಸ್‌ನಲ್ಲಿ ಬ್ಯಾಟಿಂಗ್‌ ಮಾಡುತ್ತಿದ್ದ ವೇಳೆ ಅಂದಾಜು ಗಂಟೆಗೆ 150 ಕಿಲೋಮೀಟರ್‌ ವೇಗದಲ್ಲಿ ಬಂದ ಚೆಂಡು ಅವರ ಮಣಿಕಟ್ಟಿಗೆ ಬಡಿದಿದೆ. ಈ ವೇಳೆ ನೋವಿನಿಂದ ಅವರು ಅಲ್ಲಿಯೇ ಕುಸಿದು ಕುಳಿತಿದ್ದರು. ತನ್ನ ಕೈಯನ್ನು ಹಿಡಿದುಕೊಂಡು ತಕ್ಷಣವೇ ನೆಟ್ಸ್‌ನಿಂದ ಹೊರನಡೆದಿದ್ದರು. ಅಂದಾಜು 40 ನಿಮಿಷಗಳ ವಿಶ್ರಾಂತಿಯ ಬಳಿಕ ರೋಹಿತ್‌ ಶರ್ಮ ಮತ್ತು ಬ್ಯಾಟಿಂಗ್ ಆರಂಭಿಸಿದ್ದಾರೆ. ಈ ಕುರಿತಾಗಿ ಬಿಸಿಸಿಐ ಅಧಿಕಾರಿ ಕೂಡ ಮಾತನಾಡಿದ್ದು, ರೋಹಿತ್ ಶರ್ಮ ಅವರ ಗಾಯ ಗಂಭೀರವಲ್ಲ. ಅವರು ಸೆಮಿಫೈನಲ್‌ ಪಂದ್ಯವಾಡಲು ಫಿಟ್‌ ಇದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಇದು ಭಾರತದ ಕ್ರಿಕೆಟ್‌ ಅಭಿಮಾನಿಗಳಿಗೆ ಸಮಾಧಾನ ತಂದ ವಿಚಾರವಾಗಿದೆ. ಭಾರತ ತಂಡ ಟಿ20 ವಿಶ್ವಕಪ್‌ನಲ್ಲಿ ನವೆಂಬರ್‌ 10 ರಂದು ಇಂಗ್ಲೆಂಡ್‌ ವಿರುದ್ಧ ಅಡಿಲೇಡ್‌ನಲ್ಲಿ ಸೆಮುಫೈನಲ್‌ ಪಂದ್ಯ ಆಡಲಿದೆ. ಕ್ಯಾಪ್ಟನ್‌ ಹಾಗೂ ಆರಂಭಿಕ ಆಟಗಾರನಾಗಿ ರೋಹಿತ್‌ ಶರ್ಮ ಅವರ ಪಾತ್ರ ತಂಡದಲ್ಲಿ ಬಹಳ ಪ್ರಮುಖವಾಗಿದೆ.

ರೋಹಿತ್‌ ಥಂಬ್ಸ್ ಅಪ್‌: ರೋಹಿತ್‌ ಶರ್ಮ ಗಾಯಾಳುವಾಗಿ ನೆಟ್ಸ್‌ನಿಂದ ಹೊರಬಂದ ಬಳಿಕ, 40 ನಿಮಿಷ ವಿಶ್ರಾಂತಿ ಪಡೆದರು. ನೆಟ್ಸ್‌ ಅವಧಿ ಮುಕ್ತಾಯವಾದ ಬಳಿಕ ಮೈದಾನಕ್ಕೆ ಮರಳಿದ ಅವರು, ಬಲಗೈ ಮಣಿಕಟ್ಟಿಗೆ ಬ್ಯಾಂಡೇಜ್‌ ಕಟ್ಟಿಕೊಂಡಿದ್ದರು. ಈ ವೇಳೆ ಅವರು ಕ್ಯಾಮೆರಾಗೆ ಥಂಬ್ಸ್‌ ಅಪ್‌ ಸಿಗ್ನಲ್‌ ನೀಡಿದ್ದಾರೆ. ಗಾಯಗೊಂಡಿದ್ದರೂ, ರೋಹಿತ್‌ ಶರ್ಮ ಅವರಿಗೆ ಸ್ವತಃ ಈ ವಿಚಾರ ಗಂಭೀರವಲ್ಲ ಎಂದು ಅನಿಸಿದೆ. ಹಾಗಾಗಿ ಥಂಬ್ಸ್‌ ಅಪ್‌ ಸಿಗ್ನಲ್‌ ನೀಡಿದ್ದಾರೆ ಎನ್ನಲಾಗಿದೆ.

ಅಡಿಲೇಡ್ ಓವಲ್‌ನಲ್ಲಿ ರೋಹಿತ್ ನೆಟ್ಸ್‌ನಲ್ಲಿ ಬ್ಯಾಟಿಂಗ್‌ ಅಭ್ಯಾಸ ಮಾಡಲು ಹೋದಾಗ, ಥ್ರೋಡೌನ್ ಸ್ಪೆಷಲಿಸ್ಟ್‌ ಎಸ್ ರಘು ಸೈಡ್‌ಆರ್ಮ್‌ ಜೊತೆ ಚೆಂಡುಗಳನ್ನು ಎಸೆಯುತ್ತಿದ್ದರು. ಸೆಮಿಫೈನಲ್ ನಲ್ಲಿ ಮಾರ್ಕ್ ವುಡ್ ರಂತಹ ಇಂಗ್ಲಿಷ್ ಬೌಲರ್ ಗಳ ಮುಂದೆ ಯಾವುದೇ ಸಮಸ್ಯೆ ಎದುರಾಗಬಾರದೆಂದು ರಘು 150 ಕಿ.ಮೀ.ಗೂ ಹೆಚ್ಚು ವೇಗದಲ್ಲಿ ರೋಹಿತ್ ಗೆ ಬೌಲಿಂಗ್ ಮಾಡುತ್ತಿದ್ದರು. ಒಂದು ಎಸೆತದ ವೇಳೆ ಅವರು ಫುಲ್‌ಶಾಟ್‌ ಮಾಡಲು ಯತ್ನಿಸಿದ್ದಾರೆ. ಈ ವೇಳೆ ಚೆಂಡು ಅವರ ಬಲಗೈ ಮಣಿಕಟ್ಟಿಗೆ ಬಡಿದಿದೆ.

T20 WORLD CUP: ಮಳೆಯಿಂದ 2 ಸೆಮೀಸ್ ಪಂದ್ಯಗಳು ರದ್ದಾದ್ರೆ, ಯಾವ ತಂಡಗಳಿಗಿವೆ ಫೈನಲ್‌ಗೇರುವ ಅವಕಾಶ?

ಸಾಮಾನ್ಯವಾಗಿ ಪಂದ್ಯ 22 ಯಾರ್ಡ್‌ನ ಪಿಚ್‌ನಲ್ಲಿ ನಡೆಯುತ್ತದೆ. ಆದರೆ, ರೋಹಿತ್‌ ಶರ್ಮ ಮಾತ್ರ 18 ಯಾರ್ಡ್‌ನ ಪಿಚ್‌ನಲ್ಲಿ ರಘು ಅವರಿಂದ ಥ್ರೋಡೌನ್‌ ಎಸೆತಗಳನ್ನು ಎದುರಿಸುವ ಅಭ್ಯಾಸ ಮಾಡುತ್ತಿದ್ದರು. ತಮ್ಮ ಸೈಡ್‌ಆರ್ಮ್‌ನೊಂದಿಗೆ ರಘು ಬೌನ್ಸರ್‌ ಎಸೆತ ಎಸೆದಿದ್ದರು. ಅಂದಾಜು 150 ಕಿ.ಮೀ ವೇಗದಲ್ಲಿ ಈ ಚೆಂಡು ಬಂದಿತ್ತು. ಈ ಎಸೆತವನ್ನು ರೋಹಿತ್‌ ಫುಲ್‌ ಮಾಡಲು ಯತ್ನಿಸಿದ್ದರು. ಆದರೆ, ಚೆಂಡು ಮಿಸ್‌ ಆಗಿ ನೇರವಾಗಿ ಅವರ ಮಣಿಕಟ್ಟಿಗೆ ಬಡಿದಿತ್ತು.  ಚೆಂಡು ಮಣಿಕಟ್ಟಿಗೆ ಬಡಿದ ತಕ್ಷಣ ರೋಹಿತ್ ನೋವಿನಿಂದ ನರಳಲಾರಂಭಿಸಿದರು. ನೆಟ್ಸ್‌ನಲ್ಲಿದ್ದ ವೈದ್ಯಕೀಯ ತಂಡವು ಗಾಯವನ್ನು ತಕ್ಷಣವೇ ಪರೀಕ್ಷಿಸಿತು. ಇದಾದ ಬಳಿಕ ರೋಹಿತ್ ನೆಟ್ ಬಿಟ್ಟು ಹೊರನಡೆದರು.

T20 World Cup: ಜೋರಾಯ್ತು ಫೈನಲ್ ಕ್ರೇಜ್‌, ಫನ್ನಿ ವೀಡಿಯೋ ಹಂಚಿಕೊಂಡ ಆನಂದ್ ಮಹೀಂದ್ರಾ

ಗಾಯವಾದ ಬಳಿಕ, ನೆಟ್ಸ್‌ನ ಹೊರಗಡೆ ಬಹಳ ಹೊತ್ತು ಐಸ್‌ಪ್ಯಾಕ್‌ ಹಿಡಿದುಕೊಂಡು ಕುಳಿತಿದ್ದರು. ಮಣಿಕಟ್ಟಿನ ಮೇಲೆ ದೊಡ್ಡ ಐಸ್‌ ಬ್ಯಾಗ್‌ಅನ್ನು ಅವರು ಇರಿಸಿಕೊಂಡ ಕೆಲವು ಚಿತ್ರಗಳು ಪ್ರಕಟವಾಗಿದೆ. ಈ ವೇಳೆ ಮೆಂಟಲ್‌ ಕಂಡೀಷನಿಂಗ್‌ ಕೋಚ್ ಪ್ಯಾಡಿ ಆಪ್ಟನ್‌ ಕೂಡ ಅವರೊಂದಿಗೆ ಸಮಾಲೋಚನೆ ನಡೆಸುತ್ತಿದ್ದರು. 40 ನಿಮಿಷದ ಬಳಿಕ ರೋಹಿತ್ ಬ್ಯಾಟಿಂಗ್‌ಗೆ ಮರಳಿದ್ದರು. ಇದು ಅವರ ಗಾಯ ಗಂಭೀರವಲ್ಲ ಎನ್ನುವ ಸೂಚನೆ ನೀಡಿತ್ತು. ರೋಹಿತ್‌ ಮರಳಿ ಬಂದಾಗ ರಘು ಅವರಿಗೆ ವೇಗದಲ್ಲಿ ಬೌಲಿಂಗ್‌ ಮಾಡದಂತೆ ಟೀಮ್‌ ಮ್ಯಾನೇಜ್‌ಮೆಂಟ್‌ ಸೂಚನೆ ನೀಡಿತ್ತು. ರೋಹಿತ್‌ ಕೂಡ ಸಾಕಷ್ಟು ರಕ್ಷಣಾತ್ಮಕವಾಗಿ ಆಟವಾಡಿದರು. ರೋಹಿತ್‌ ಅವರ ಕೈಗಳ ಚಲನೆಯ ಬಗ್ಗೆಯೂ ವೈದ್ಯಕೀಯ ತಂಡ ತಪಾಸಣೆ ಮಾಡಿತು. ಬಿಸಿಸಿಐ ಮೂಲಗಳ ಪ್ರಕಾರ, ರೋಹಿತ್ ವೈದ್ಯಕೀಯ ತಂಡದಿಂದ ಗ್ರೀನ್ ಸಿಗ್ನಲ್ ಪಡೆದಿದ್ದು, ಪಂದ್ಯಕ್ಕೆ ಸಿದ್ಧರಾಗಿದ್ದಾರೆ. ಟಿ20 ವಿಶ್ವಕಪ್‌ನಲ್ಲಿ ರೋಹಿತ್‌ ಪ್ರದರ್ಶನ ವಿಶೇಷವಾಗಿಲ್ಲ. 5 ಲೀಗ್ ಪಂದ್ಯಗಳಲ್ಲಿ 89 ರನ್ ಗಳಿಸಿದ್ದಾರೆ. ಇದರಲ್ಲಿ ಒಂದು ಫಿಫ್ಟಿ ಸೇರಿದೆ. ಆದರೆ, ನಾಯಕನಾಗಿ ರೋಹಿತ್‌ ಶರ್ಮ ಭಾರತಕ್ಕೆ 5 ರಲ್ಲಿ 4 ಪಂದ್ಯಗಳನ್ನು ಗೆಲ್ಲಿಸಿದ್ದಾರೆ,

click me!