* ಭಾರತ-ಪಾಕ್ ಹೈವೋಲ್ಟೇಜ್ ಪಂದ್ಯಕ್ಕೆ ಕ್ಷಣಗಣನೆ
* ಈ ಪಂದ್ಯದ ಜಾಹೀರಾತಿಗೆ ದುಪ್ಪಟ್ಟು ದರ ವಿಧಿಸಿದ ಸ್ಟಾರ್ ಸ್ಪೋರ್ಟ್ಸ್
* ಅಕ್ಟೋಬರ್ 24ರಂದು ನಡೆಯಲಿದೆ ಭಾರತ-ಪಾಕ್ ಟಿ20 ಪಂದ್ಯ
ನವದೆಹಲಿ(ಅ.22): ಬದ್ಧವೈರಿಗಳಾದ ಭಾರತ-ಪಾಕಿಸ್ತಾನ ನಡುವಿನ ಐಸಿಸಿ ಟಿ20 ವಿಶ್ವಕಪ್ (ICC T20 World Cup) ಪಂದ್ಯಕ್ಕೆ ಕೇವಲ 2 ದಿನ ಬಾಕಿ ಇದೆ. ಅಕ್ಟೋಬರ್ 24ರ ಭಾನುವಾರ ಸಂಜೆ ಕ್ರಿಕೆಟ್ ಅಭಿಮಾನಿಗಳು ಟೀವಿ ಮುಂದೆ ಪ್ರತಿಷ್ಠಾಪನೆಗೊಳ್ಳಲಿದ್ದಾರೆ. ವಿಶ್ವಕಪ್‌ಗಳಲ್ಲಿ ಭಾರತ ತಂಡವು ಪಾಕಿಸ್ತಾನ ವಿರುದ್ಧ ಸೋತೇ ಇಲ್ಲ. ಟೀಂ ಇಂಡಿಯಾ (Team India) ತನ್ನ ಅಜೇಯ ಓಟ ಮುಂದುವರಿಸುವ ಪಣತೊಟ್ಟಿದ್ದು, ಈ ಪಂದ್ಯಕ್ಕಾಗಿ ಕ್ರಿಕೆಟ್ ಜಗತ್ತೇ ಕಾದು ಕುಳಿದಿದೆ.
ಭಾರತ-ಪಾಕಿಸ್ತಾನ (India vs Pakistan) ಪಂದ್ಯವೆಂದರೆ ಅಭಿಮಾನಿಗಳಿಗೆ ಮಾತ್ರವಲ್ಲ ಪ್ರಸಾರ ಹಕ್ಕು ಹೊಂದಿರುವ ವಾಹಿನಿಗೆ ಹಬ್ಬವಿದ್ದಂತೆ. ಟಿ20 ವಿಶ್ವಕಪ್‌ನ ಪ್ರಸಾರ ಹಕ್ಕು ಹೊಂದಿರುವ ಸ್ಟಾರ್ ಸ್ಪೋರ್ಟ್ಸ್ (Star Sports) ವಾಹಿನಿಯು ಪಂದ್ಯದ ವೇಳೆ ಪ್ರಸಾರ ಮಾಡುವ ಜಾಹೀರಾತುಗಳನ್ನು ಪ್ರತಿ 10 ಸೆಕೆಂಡ್‌ನ ಸ್ಲಾಟ್‌ಗೆ ಬರೋಬ್ಬರಿ 25ರಿಂದ 30 ಲಕ್ಷ ರುಪಾಯಿಗೆ ಮಾರಾಟ ಮಾಡುತ್ತಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಇದು ಭಾರತೀಯ ಟೀವಿ ಜಗತ್ತಿನಲ್ಲೇ ಅತಿಹೆಚ್ಚು ಮೊತ್ತಕ್ಕೆ ಮಾರಾಟವಾಗುತ್ತಿರುವ ಜಾಹೀರಾತು ಸ್ಲಾಟ್ ಎನಿಸಿದೆ.
undefined
ಓವೈಸಿ ಬೆನ್ನಲ್ಲೇ ಇಂಡೋ-ಪಾಕ್ ಪಂದ್ಯ ಬಹಿಷ್ಕರಿಸಲು ಆಗ್ರಹಿಸಿದ ಕೇಂದ್ರ ಸಚಿವ!
ಈ ವಿಶ್ವಕಪ್‌ನಲ್ಲಿ ಇತರ ಪಂದ್ಯಗಳ, ಅದರಲ್ಲೂ ಪ್ರಮುಖವಾಗಿ ಭಾರತ ತಂಡ ಆಡುವ ಪಂದ್ಯಗಳ ವೇಳೆ ಪ್ರಸಾರವಾಗುವ 10 ಸೆಕೆಂಡ್ ಜಾಹೀರಾತಿಗೆ ಸ್ಟಾರ್ ಸಂಸ್ಥೆ 9ರಿಂದ 10 ಲಕ್ಷ ರುಪಾಯಿ ಶುಲ್ಕ ನಿಗದಿ ಮಾಡಿದೆ. ಈಗಾಗಲೇ ಜಾಹೀರಾತು ಸ್ಲಾಟ್‌ಗಳೆಲ್ಲಾ ಭರ್ತಿಯಾಗಿವೆ ಎಂದು ಮೂಲಗಳು ತಿಳಿಸಿರುವುದಾಗಿ ವರದಿಯಲ್ಲಿ ಹೇಳಲಾಗಿದೆ.
ದಾಖಲೆ ವೀಕ್ಷಣೆ ನಿರೀಕ್ಷೆ
ಭಾರತ-ಪಾಕಿಸ್ತಾನ ನಡುವಿನ 2016ರ ಟಿ20 ವಿಶ್ವಕಪ್ ಪಂದ್ಯವನ್ನು ಭಾರತದಲ್ಲೇ 73 ಕೋಟಿ ವೀಕ್ಷಕರು ವೀಕ್ಷಿಸಿದ್ದರು ಎಂದು ಸಮೀಕ್ಷೆಗಳು ಅಂದಾಜಿಸಿದ್ದವು. ಹಿಂದಿನ ಆವೃತ್ತಿಗೆ ಹೋಲಿಸಿದರೆ ವೀಕ್ಷಕರ ಸಂಖ್ಯೆಯಲ್ಲಿ ಶೇ.114ರಷ್ಟು ಏರಿಕೆ ಆಗಿತ್ತು. ಈ ಬಾರಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಜನ ಪಂದ್ಯ ವೀಕ್ಷಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಸ್ಟಾರ್ ಸ್ಪೋರ್ಟ್ಸ್ ವಾಹಿನಿಯು ಇಂಗ್ಲೀಷ್, ಹಿಂದಿ, ಕನ್ನಡ ಸೇರಿದಂತೆ ವಿವಿಧ ಭಾಷೆಗಳಲ್ಲಿ ಪಂದ್ಯವನ್ನು ಪ್ರಸಾರ ಮಾಡಲಿದ್ದು, ತನ್ನ ಆನ್‌ಲೈನ್ ವೇದಿಕೆಯಾದ ಡಿಸ್ನಿ+ಹಾಟ್‌ಸ್ಟಾರ್‌ನಲ್ಲೂ ದೊಡ್ಡ ಸಂಖ್ಯೆಯಲ್ಲಿ ವೀಕ್ಷಕರನ್ನು ಸೆಳೆಯಲು ಯೋಜನೆ ರೂಪಿಸಿದೆ. ಈ ಬಾರಿ ಇಂಡೋ-ಪಾಕ್ ಮ್ಯಾಚ್ ಸಾರ್ವಕಾಲಿಕ ದಾಖಲೆ ವೀಕ್ಷಣೆಯಾಗುವ ನಿರೀಕ್ಷೆ ಇದೆ.
ಮ್ಯಾಂಚೆಸ್ಟರ್ ಯುನೈಟೆಡ್‌ನಿಂದ ಐಪಿಎಲ್ ತಂಡ ಖರೀದಿ ಸಾಧ್ಯತೆ!
1,200 ಕೋಟಿ ರು ಒಪ್ಪಂದ!
ಸ್ಟಾರ್ ಸಂಸ್ಥೆಯು 16 ಪ್ರಾಯೋಜಕರೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ. ಈ ಪ್ರಾಯೋಜಕ ಸಂಸ್ಥೆಗಳ ಜಾಹೀರಾತು ಒಪ್ಪಂದದ ಮೌಲ್ಯವೇ 1,200 ಕೋಟಿ ರುಪಾಯಿಗೆ ಹೆಚ್ಚಿದೆ. ಸ್ಟಾರ್ ಸ್ಪೋರ್ಟ್ಸ್ ವಾಹಿನಿಯಲ್ಲಿ ಪ್ರಸಾರವಾಗುವ ಜಾಹೀರಾತುಗಳಿಂದ ಅಂದಾಜು 900 ಕೋಟಿ ರುಪಾಯಿ, ಡಿಸ್ನಿ+ಹಾಟ್‌ಸ್ಟಾರ್ (hot star) ಆನ್‌ಲೈನ್ ಮಾಧ್ಯಮದಿಂದ ಅಂದಾಜು 275 ಕೋಟಿ ರು. ಹಣ ನಿರೀಕ್ಷೆ ಮಾಡುತ್ತಿದೆ.
T20 World Cup: ಈ 4 ತಂಡಗಳು ಸೆಮಿಫೈನಲ್‌ಗೇರಲಿವೆ ಎಂದ ಬ್ರಾಡ್ ಹಾಗ್..!
ಕಾಳಸಂತೆಯಲ್ಲಿ ಟಿಕೆಟ್ 4-5 ಪಟ್ಟು ದುಬಾರಿ?
ಭಾರತ-ಪಾಕಿಸ್ತಾನ ನಡುವಿನ ಪಂದ್ಯದ ವೇಳೆ ಜಾಹೀರಾತಿಗೆ ಮಾತ್ರವಲ್ಲ, ಪಂದ್ಯದ ಟಿಕೆಟ್ (Match Tickets) ಗೂ ಭಾರೀ ಬೇಡಿಕೆ ಶುರುವಾಗಿದೆ. ಈಗಾಗಲೇ ಟಿಕೆಟ್‌ಗಳು ಸೋಲ್ಡ್ ಔಟ್ ಆಗಿವೆ. ಆದರೂ ಕಾಳಸಂತೆಯಲ್ಲಿ 4-5 ಪಟ್ಟು ಹೆಚ್ಚು ಮೊತ್ತಕ್ಕೆ ಮಾರಾಟ ಮಾಡಲಾಗುತ್ತಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.