ಮ್ಯಾಂಚೆಸ್ಟರ್‌ ಯುನೈಟೆಡ್‌ನಿಂದ ಐಪಿಎಲ್‌ ತಂಡ ಖರೀದಿ ಸಾಧ್ಯತೆ!

By Suvarna NewsFirst Published Oct 22, 2021, 9:38 AM IST
Highlights

* ಐಪಿಎಲ್‌ನಲ್ಲಿ ಹೊಸ ತಂಡಗಳನ್ನು ಖರೀದಿಸಲು ಸಾಕಷ್ಟು ಪೈಪೋಟಿ

* ಹೊಸ ತಂಡ ಖರೀದಿಸಲು ಒಲವು ತೋರಿದ ಮ್ಯಾಂಚೆಸ್ಟರ್ ಯುನೈಟೆಡ್ ಮಾಲೀಕರು

* ಅಕ್ಟೋಬರ್ 25ರಂದು ದುಬೈನಲ್ಲಿ ಬಿಡ್ಡಿಂಗ್‌ ನಡೆಯಲಿದೆ

ನವೆದೆಹಲಿ(ಅ.22): 2022ರ ಐಪಿಎಲ್‌ಗೆ (IPL) 2 ಹೊಸ ತಂಡಗಳು ಸೇರ್ಪಡೆಗೊಳ್ಳಲಿದ್ದು, ಅಕ್ಟೋಬರ್ 25ರಂದು ದುಬೈನಲ್ಲಿ ಬಿಡ್ಡಿಂಗ್‌ ನಡೆಯಲಿದೆ. ಕುತೂಹಲಕಾರಿ ವಿಷಯ ಎಂದರೆ ಇಂಗ್ಲಿಷ್‌ ಪ್ರೀಮಿಯರ್‌ ಲೀಗ್‌ ಫುಟ್ಬಾಲ್‌ನ ಅತ್ಯಂತ ಜನಪ್ರಿಯ ತಂಡ ಮ್ಯಾಂಚೆಸ್ಟರ್‌ ಯುನೈಟೆಡ್‌ನ (Manchester United) ಮಾಲಿಕರಾದ ಗ್ಲೇಜರ್‌ ಕುಟುಂಬ ಐಪಿಎಲ್‌ ತಂಡವನ್ನು ಖರೀದಿಸಲು ಆಸಕ್ತಿ ತೋರಿದೆ.

ಗ್ಲೇಜರ್‌ ಕುಟುಂಬವು ಬಿಡ್‌ ಸಲ್ಲಿಸಲು ಟೆಂಡರ್‌ ಪತ್ರಗಳನ್ನು ಪಡೆದಿರುವುದಾಗಿ ಬಿಸಿಸಿಐ (BCCI) ಹಿರಿಯ ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ. ಮ್ಯಾಂಚೆಸ್ಟರ್‌ ಮಾಲಿಕರು ಬಿಡ್‌ನಲ್ಲಿ ಪಾಲ್ಗೊಳ್ಳುತ್ತಾರೆಯೇ ಇಲ್ಲವೇ ಹೊಸ ತಂಡ ಖರೀದಿಸಿದವರೊಂದಿಗೆ ಒಪ್ಪಂದ ಮಾಡಿಕೊಂಡು ಪಾಲುದಾರಿಕೆ ಪಡೆಯುತ್ತಾರೆಯೇ ಎನ್ನುವುದು ತಿಳಿದಿಲ್ಲ ಎಂದು ಅಧಿಕಾರಿ ತಿಳಿಸಿದ್ದಾರೆ. 2,500 ರಿಂದ 3,000 ಸಾವಿರ ಕೋಟಿ ರುಪಾಯಿ ವಾರ್ಷಿಕ ವಹಿವಾಟು ನಡೆಸುವ ಉದ್ಯಮಿಗಳು ಅಥವಾ ಸಂಸ್ಥೆಗಳು ಹೊಸ ತಂಡಗಳು ಖರೀದಿಸಲು ಅರ್ಜಿ ಸಲ್ಲಿಸಬಹುದು ಎನ್ನುವ ಷರತ್ತನ್ನು ಬಿಸಿಸಿಐ ವಿಧಿಸಿತ್ತು.

ಐಪಿಎಲ್ ಹೊಸ 2 ತಂಡಗಳ ಖರೀದಿಗೆ ಭಾರೀ ಡಿಮ್ಯಾಂಡ್‌..!

ಇದೇ ವೇಳೆ ವಿಶ್ವಕಪ್‌ ವಿಜೇತ ಭಾರತ ತಂಡದ ಮಾಜಿ ಕ್ರಿಕೆಟಿಗರೊಬ್ಬರು ತಂಡದಲ್ಲಿ ಪಾಲುದಾರಿಕೆ ಪಡೆಯಲು ಇಚ್ಛಿಸಿದ್ದು, ಐಪಿಎಲ್‌ ತಂಡದ ಸಹ ಮಾಲಿಕತ್ವ ಪಡೆಯಲಿರುವ ಮೊದಲ ಕ್ರಿಕೆಟಿಗರಾಗಲು ಕಾತರಿಸುತ್ತಿದ್ದಾರೆ. ತಂಡದಲ್ಲಿ ಕ್ರಿಕೆಟ್‌ಗೆ ಸಂಬಂಧಿಸಿದ ನಿರ್ಧಾರಗಳನ್ನು ತಾವೇ ಕೈಗೊಳ್ಳಲಿದ್ದು, ಈ ಷರತ್ತಿಗೆ ಒಪ್ಪುವ ಪಾಲುದಾರರನ್ನು ಹುಡುಕುತ್ತಿರುವುದಾಗಿ ತಿಳಿದುಬಂದಿದೆ.

IPL 2021 ಸನ್‌ರೈಸರ್ಸ್‌ ಹೈದರಾಬಾದ್‌ ಅಭಿಮಾನಿಗಳಿಗೆ ಭಾವನಾತ್ಮಕ ಪತ್ರ ಬರೆದ ಡೇವಿಡ್ ವಾರ್ನರ್..!

ಈಗಾಗಲೇ ಹೊಸ ತಂಡಗಳನ್ನು ಖರೀದಿಸುವ ಕುರಿತಂತೆ ಅದಾನಿ ಗ್ರೂಪ್ (Adani Group), ಟೊರೆಂಟ್ ಫಾರ್ಮಾ, ಅರಬಿಂದೋ ಫಾರ್ಮಾ, ಆರ್‌ಪಿ ಸಂಜೀವ್ ಗೋಯೆಂಕಾ ಗ್ರೂಪ್‌, ಹಿಂದೂಸ್ತಾನ್ ಟೈಮ್ಸ್‌ ಮೀಡಿಯಾ, ನವೀನ್ ಜಿಂದಾಲ್ ನೇತೃತ್ವದ ಜಿಂದಾಲ್‌ ಸ್ಟೀಲ್ ಸೇರಿದಂತೆ ಹಲವು ಸಂಸ್ಥೆಗಳು 10 ಲಕ್ಷ ರುಪಾಯಿ ನೀಡಿ ಬಿಸಿಸಿಐನಿಂದ ಟೆಂಡರ್‌ ಪತ್ರಗಳನ್ನು ಪಡೆದುಕೊಂಡಿವೆ ಎಂದು ವರದಿಯಾಗಿದೆ. ಬಿಸಿಸಿಐನಿಂದ ಟೆಂಡರ್ ಪತ್ರಗಳನ್ನು ಪಡೆದುಕೊಳ್ಳಲು ಅಕ್ಟೋಬರ್ 20 ಕಡೆಯ ದಿನಾಂಕವಾಗಿತ್ತು.

ಐಪಿಎಲ್‌ ಮಾಧ್ಯಮ ಹಕ್ಕು 36000 ಕೋಟಿ ರುಪಾಯಿಗೆ ಬಿಕರಿ?

ನವದೆಹಲಿ: ಮುಂದಿನ ವಾರ 2 ಹೊಸ ಐಪಿಎಲ್‌ ತಂಡಗಳ ಮಾರಾಟದಿಂದ ಅಂದಾಜು 7,000-10,000 ಕೋಟಿ ರುಪಾಯಿ ಹಣ ಸಂಪಾದಿಸುವ ನಿರೀಕ್ಷೆಯಲ್ಲಿರುವ ಬಿಸಿಸಿಐ, ಸದ್ಯದಲ್ಲೇ 2023-2027ರ ಅವಧಿಗೆ ಐಪಿಎಲ್‌ ಮಾಧ್ಯಮ ಹಕ್ಕು ಮಾರಾಟ ನಡೆಸಲಿದೆ. ಇದರಿಂದ ಬರೋಬ್ಬರಿ 5 ಬಿಲಿಯನ್‌ ಅಮೆರಿಕನ್‌ ಡಾಲರ್‌ (ಅಂದಾಜು 36,000 ಕೋಟಿ ರು.) ಗಳಿಸಲು ಎದುರು ನೋಡುತ್ತಿದೆ ಎಂದು ಪ್ರತಿಷ್ಠಿತ ಮಾಧ್ಯಮವೊಂದು ವರದಿ ಮಾಡಿದೆ.

IPL 2021 ಡೇನಿಯಲ್‌ ಕ್ರಿಶ್ಚಿಯನ್ ಗರ್ಭಿಣಿ ಪತ್ನಿಯನ್ನು ಕೀಳಾಗಿ ಟೀಕಿಸಿದ ಫ್ಯಾನ್ಸ್‌, ಕಿಡಿಕಾರಿದ ಮ್ಯಾಕ್ಸ್‌ವೆಲ್‌..!

ಸದ್ಯ ಚಾಲ್ತಿಯಲ್ಲಿರುವ ಒಪ್ಪಂದವು 2018-2022ರ ವರೆಗಿನದ್ದಾಗಿದ್ದು ಮಾಧ್ಯಮ ಹಕ್ಕು ಹೊಂದಿರುವ ಸ್ಟಾರ್‌ ಸಂಸ್ಥೆಯು ಬಿಸಿಸಿಐಗೆ 5 ವರ್ಷಕ್ಕೆ 16,347.5 ಕೋಟಿ ರುಪಾಯಿ ಪಾವತಿಸುತ್ತಿದೆ. ಪ್ರತಿಷ್ಠಿತ ಸಂಸ್ಥೆಯೊಂದು ಸಮೀಕ್ಷೆ ನಡೆಸಿ, ಈಗ ಗಳಿಸುತ್ತಿರುವ ಹಣಕ್ಕಿಂತ ದುಪ್ಪಟ್ಟು ಗಳಿಸಬಹುದು ಎಂದು ವರದಿ ನೀಡಿದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ವರದಿಯಲ್ಲಿದೆ.

2022ನೇ ಸಾಲಿನ ಐಪಿಎಲ್ ಟೂರ್ನಿಯಲ್ಲಿ 2 ಹೊಸ ತಂಡಗಳ ಸೇರ್ಪಡೆಯಿಂದ ಒಟ್ಟು ಪಂದ್ಯಗಳ ಸಂಖ್ಯೆ 74ಕ್ಕೆ ಏರಿಕೆಯಾಗಲಿದೆ. ಜೊತೆಗೆ ವೀಕ್ಷಕರ ಸಂಖ್ಯೆಯೂ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿರುವ ಕಾರಣ, ಮಾಧ್ಯಮ ಹಕ್ಕಿನ ಮೊತ್ತವೂ ದುಪ್ಪಟ್ಟಾಗಲಿದೆ ಎನ್ನಲಾಗಿದೆ.

click me!