T20 World Cup ನೆದರ್‌ಲೆಂಡ್ಸ್‌ ಮಣಿಸಿ ಗೆಲುವಿನ ಖಾತೆ ತೆರೆದ ಪಾಕಿಸ್ತಾನ

By Naveen KodaseFirst Published Oct 30, 2022, 3:51 PM IST
Highlights

ನೆದರ್‌ಲೆಂಡ್ಸ್‌ ವಿರುದ್ದ ರೋಚಕ ಗೆಲುವು ದಾಖಲಿಸಿದ ಪಾಕಿಸ್ತಾನ
ಪಾಕಿಸ್ತಾನ ವಿರುದ್ದ 6 ವಿಕೆಟ್‌ಗಳ ರೋಚಕ ಜಯ ಸಾಧಿಸಿದ ಬಾಬರ್ ಅಜಂ
ಸೆಮೀಸ್‌ ರೇಸ್‌ನಿಂದ ಅಧಿಕೃತವಾಗಿ ಹೊರಬಿದ್ದ ನೆದರ್‌ಲೆಂಡ್ಸ್‌

ಪರ್ತ್‌(ಅ.30): ಬೌಲರ್‌ಗಳ ಸಂಘಟಿತ ಪ್ರದರ್ಶನ ಹಾಗೂ ವಿಕೆಟ್ ಕೀಪರ್‌ ಬ್ಯಾಟರ್ ಮೊಹಮ್ಮದ್ ರಿಜ್ವಾನ್(49) ಆಕರ್ಷಕ ಬ್ಯಾಟಿಂಗ್ ನೆರವಿನಿಂದ ನೆದರ್‌ಲೆಂಡ್ಸ್ ವಿರುದ್ದ ಪಾಕಿಸ್ತಾನ ತಂಡವು 6 ವಿಕೆಟ್‌ ಭರ್ಜರಿ ಜಯ ಸಾಧಿಸಿದೆ. ನೆದರ್‌ಲೆಂಡ್ಸ್‌ ನೀಡಿದ್ದ 92 ರನ್‌ಗಳ ಸಾಧಾರಣ ಗುರಿ ಬೆನ್ನತ್ತಿದ ಪಾಕಿಸ್ತಾನ ತಂಡವು ಕೇವಲ 2 ವಿಕೆಟ್ ಕಳೆದುಕೊಂಡು ಇನ್ನೂ 37 ಎಸೆತ ಬಾಕಿ ಇರುವಂತೆ ಗೆಲುವಿನ ನಗೆ ಬೀರಿದೆ. ಇನ್ನು ಈ ಸೋಲಿನೊಂದಿಗೆ ನೆದರ್‌ಲೆಂಡ್ಸ್‌ ತಂಡವು ಮೊದಲ ತಂಡವಾಗಿ ಸೆಮೀಸ್‌ ರೇಸ್‌ನಿಂದ ಹೊರಬಿದ್ದಿದೆ. 

ಇಲ್ಲಿನ ಪರ್ತ್ ಕ್ರಿಕೆಟ್ ಮೈದಾನದಲ್ಲಿ ನೆದರ್‌ಲೆಂಡ್ಸ್‌ ನೀಡಿದ್ದ ಸಾಧಾರಣ ಗುರಿ ಬೆನ್ನತ್ತಿದ ಪಾಕಿಸ್ತಾನ ತಂಡವು ಮತ್ತೊಮ್ಮೆ ಉತ್ತಮ ಆರಂಭ ಪಡೆಯಲು ವಿಫಲವಾಯಿತು. ನಾಯಕ ಬಾಬರ್ ಅಜಂ ಬ್ಯಾಟಿಂಗ್ ವೈಫಲ್ಯ ಮತ್ತೊಮ್ಮೆ ಮುಂದುವರೆದಿದ್ದು, ಕೇವಲ 4 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಬಾಬರ್ ಅಜಂ ಭಾರತ ಎದುರು ಶೂನ್ಯ ಸುತ್ತಿದರೆ, ಜಿಂಬಾಬ್ವೆ ವಿರುದ್ದ 4 ರನ್ ಬಾರಿಸಿ ವಿಕೆಟ್ ಒಪ್ಪಿಸಿದ್ದರು. ಇನ್ನು ಹೈದರ್ ಅಲಿ ಬದಲಿಗೆ ತಂಡ ಕೂಡಿಕೊಂಡ ಅನುಭವಿ ಬ್ಯಾಟರ್ ಫಖರ್ ಜಮಾನ್ ಹಾಗೂ ಮೊಹಮ್ಮದ್ ರಿಜ್ವಾನ್ ಜೋಡಿ  ಎರಡನೇ ವಿಕೆಟ್‌ಗೆ 37 ರನ್‌ಗಳ ಜತೆಯಾಟವಾಡುವ ಮೂಲಕ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು. ಚುರುಕಿನ ಬ್ಯಾಟಿಂಗ್ ನಡೆಸಿದ ಫಖರ್ ಜಮಾನ್ 16 ಎಸೆತಗಳಲ್ಲಿ 3 ಬೌಂಡರಿ ಸಹಿತ 20 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.

ಇನ್ನು ಮೊದಲೆರಡು ಪಂದ್ಯಗಳಲ್ಲಿ ಅಲ್ಪಮೊತ್ತಕ್ಕೆ ವಿಕೆಟ್ ಒಪ್ಪಿಸಿದ್ದ ಮೊಹಮ್ಮದ್ ರಿಜ್ವಾನ್, ನೆದರ್‌ಲೆಂಡ್ಸ್‌ ಎದುರು ಜವಾಬ್ದಾರಿಯುತ ಬ್ಯಾಟಿಂಗ್ ನಡೆಸುವ ಮೂಲಕ ತಂಡಕ್ಕೆ ಆಸರೆಯಾದರು. ಮೊಹಮ್ಮದ್ ರಿಜ್ವಾನ್ ಕೇವಲ 39 ಎಸೆತಗಳನ್ನು ಎದುರಿಸಿ 5 ಬೌಂಡರಿ ಸಹಿತ 49 ರನ್ ಬಾರಿಸಿ ವ್ಯಾನ್ ಮೀಕೆರನ್‌ಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದರು. ಇಫ್ತಿಕಾರ್ ಅಹಮ್ಮದ್ ಕೇವಲ 6 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಇನ್ನು ಕೊನೆಯಲ್ಲಿ ಶಾನ್ ಮಸೂದ್(13*) ಸುಲಭವಾಗಿ ಗೆಲುವಿನ ದಡ ಸೇರಿಸಿದರು.

T20 World Cup ಪಾಕಿಸ್ತಾನ ಎದುರು ಟಾಸ್ ಗೆದ್ದ ನೆದರ್‌ಲೆಂಡ್ಸ್ ಬ್ಯಾಟಿಂಗ್ ಆಯ್ಕೆ

ಇದಕ್ಕೂ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡು ನೆದರ್‌ಲೆಂಡ್ಸ್‌ ತಂಡವು ಪಾಕಿಸ್ತಾನದ ಮಾರಕ ದಾಳಿಗೆ ತತ್ತರಿಸಿ ಹೋಯಿತು. ನೆದರ್‌ಲೆಂಡ್ಸ್‌ನ ಅಗ್ರಕ್ರಮಾಂಕದ ನಾಲ್ವರು ಬ್ಯಾಟರ್‌ಗಳು ಕೇವಲ ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿದರು. ಇನ್ನು ಮಧ್ಯಮ ಕ್ರಮಾಂಕದಲ್ಲಿ ಕಾಲಿನ್‌ ಅಕೆರ್‌ಮನ್(15) ಹಾಗೂ ನಾಯಕ ಎಡ್ವರ್ಡ್ಸ್‌(15) ಕೊಂಚ ಪ್ರತಿರೋಧ ತೋರಿದ್ದು ಬಿಟ್ಟರೆ, ಉಳಿದ್ಯಾವ ಬ್ಯಾಟರ್‌ಗಳು ಕೂಡಾ ಎರಡಂಕಿ ಮೊತ್ತ ದಾಖಲಿಸಲು ಯಶಸ್ವಿಯಾಗಲಿಲ್ಲ. 

Pakistan register a comprehensive six-wicket win over the Netherlands 👏 | 📝: https://t.co/9F4Kc8mtIp pic.twitter.com/Fi7KH8BhEO

— T20 World Cup (@T20WorldCup)

ಪಾಕಿಸ್ತಾನ ತಂಡದ ಪರ ಶಿಸ್ತಿನ ದಾಳಿ ನಡೆದ ಶದಾಬ್ ಖಾನ್ ಕೇವಲ 22 ರನ್ ನೀಡಿ 3 ವಿಕೆಟ್ ಪಡೆದರೆ, ಮೊಹಮ್ಮದ್ ವಾಸೀಂ ಜೂನಿಯರ್ 2, ಶಾಹೀನ್ ಅಫ್ರಿದಿ, ನಸೀಂ ಶಾ ಹಾಗೂ ಹ್ಯಾರಿಸ್ ರೌಫ್ ತಲಾ ಒಂದೊಂದು ವಿಕೆಟ್ ಉರುಳಿಸಿದರು.

click me!