T20 World Cup: ವಿರಾಟ್‌ ಕೊಹ್ಲಿಗೆ ವಿಶ್ವದಾಖಲೆ ನಿರ್ಮಿಸಲು ಬೇಕಿದೆ ಕೇವಲ 28 ರನ್‌..!

By Naveen KodaseFirst Published Oct 30, 2022, 2:24 PM IST
Highlights

ಪರ್ತ್ ಕ್ರಿಕೆಟ್ ಮೈದಾನದಲ್ಲಿಂದು ಭಾರತ-ದಕ್ಷಿಣ ಆಫ್ರಿಕಾ ಮುಖಾಮುಖಿ
ದಕ್ಷಿಣ ಆಫ್ರಿಕಾ ವಿರುದ್ದದ ಪಂದ್ಯದಲ್ಲಿ ವಿಶ್ವದಾಖಲೆ ಬರೆಯಲು ಸಜ್ಜಾದ ಕಿಂಗ್ ಕೊಹ್ಲಿ
ಈಗಾಗಲೇ ಮೊದಲೆರಡು ಪಂದ್ಯಗಳಲ್ಲಿ ಅಜೇಯ ಅರ್ಧಶತಕ ಬಾರಿಸಿರುವ ವಿರಾಟ್ ಕೊಹ್ಲಿ

ಪರ್ತ್‌(ಅ.30): ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಸೂಪರ್ 12 ಹಂತದ ಪಂದ್ಯದಲ್ಲಿಂದು ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಮುಖಾಮುಖಿಯಾಗುತ್ತಿದ್ದು, ಈ ಹೈವೋಲ್ಟೇಜ್ ಪಂದ್ಯಕ್ಕೆ ಇಲ್ಲಿನ ಪರ್ತ್ ಕ್ರಿಕೆಟ್ ಮೈದಾನ ಆತಿಥ್ಯವನ್ನು ವಹಿಸಿದೆ. ಇದೀಗ ದಕ್ಷಿಣ ಆಫ್ರಿಕಾ ಎದುರಿನ ಪಂದ್ಯದ ವೇಳೆ ಎಲ್ಲರ ಚಿತ್ತ ವಿರಾಟ್ ಕೊಹ್ಲಿಯತ್ತ ನೆಟ್ಟಿದೆ. ಸದ್ಯ ವಿರಾಟ್ ಕೊಹ್ಲಿ ಅತ್ಯದ್ಭುತ ಫಾರ್ಮ್‌ನಲ್ಲಿದ್ದು, ಕಳೆದೆರಡು ಪಂದ್ಯಗಳಲ್ಲಿ ಅಜೇಯ ಅರ್ಧಶತಕ ಸಿಡಿಸುವ ಮೂಲಕ ಟೀಂ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇದೀಗ ದಕ್ಷಿಣ ಆಫ್ರಿಕಾ ಎದುರಿನ ಪಂದ್ಯದ ವೇಳೆ ವಿಶ್ವದಾಖಲೆ ನಿರ್ಮಿಸಲು ಕಿಂಗ್ ಕೊಹ್ಲಿ ಸಜ್ಜಾಗಿದ್ದಾರೆ.

ಹೌದು, ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ, ಮೆಲ್ಬೊರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆದ ಪಾಕಿಸ್ತಾನ ವಿರುದ್ದದ ಪಂದ್ಯದಲ್ಲಿ ಕೆಚ್ಚೆದೆಯ 82 ರನ್ ಬಾರಿಸುವ ಮೂಲಕ ಟೀಂ ಇಂಡಿಯಾಗೆ ವಿರೋಚಿತ ಗೆಲುವು ತಂದುಕೊಟ್ಟಿದ್ದರು. ಇನ್ನು ನೆದರ್‌ಲೆಂಡ್ಸ್ ವಿರುದ್ದದ ಪಂದ್ಯದ ವೇಳೆಯಲ್ಲೂ ವಿರಾಟ್ ಕೊಹ್ಲಿ ಅಜೇಯ 62 ರನ್ ಬಾರಿಸಿ ಮಿಂಚಿದ್ದರು. ಹೀಗಾಗಿ ವಿರಾಟ್ ಕೊಹ್ಲಿಯ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.

ವಿಶ್ವದಾಖಲೆ ನಿರ್ಮಿಸಲು ಕೊಹ್ಲಿಗೆ ಬೇಕಿದೆ ಕೇವಲ 28 ರನ್:  ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅದ್ಭುತ ಲಯವನ್ನು ಹೊಂದಿರುವ ವಿರಾಟ್ ಕೊಹ್ಲಿ ಈಗಾಗಲೇ ಚುಟುಕು ವಿಶ್ವಕಪ್ ಟೂರ್ನಿಯಲ್ಲಿ 989 ರನ್ ಬಾರಿಸಿದ್ದು, ಇನ್ನು ಕೇವಲ 28 ರನ್‌ ಬಾರಿಸಿದರೆ, ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಗರಿಷ್ಠ ರನ್ ಬಾರಿಸಿದ ಬ್ಯಾಟರ್‌ ಎನ್ನುವ ವಿಶ್ವದಾಖಲೆಯನ್ನು ನಿರ್ಮಿಸಲಿದ್ದಾರೆ. ಸದ್ಯ ಶ್ರೀಲಂಕಾದ ಮಾಜಿ ನಾಯಕ ಮಹೆಲಾ ಜಯವರ್ಧನೆ 1016 ರನ್‌ ಬಾರಿಸಿ, ನಂ.1 ಸ್ಥಾನದಲ್ಲಿದ್ದಾರೆ.

T20 World Cup ಅಗ್ರಸ್ಥಾನಕ್ಕಾಗಿ ಭಾರತ-ದಕ್ಷಿಣ ಆಫ್ರಿಕಾ ಫೈಟ್, ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿ ಟೀಂ ಇಂಡಿಯಾ

ವಿರಾಟ್ ಕೊಹ್ಲಿ, ದಕ್ಷಿಣ ಆಫ್ರಿಕಾ ವಿರುದ್ದ ಇನ್ನು ಕೇವಲ 11 ರನ್ ಬಾರಿಸಿದರೆ, ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಒಂದು ಸಾವಿರ ರನ್ ಬಾರಿಸಿದ ಎರಡನೇ ಬ್ಯಾಟರ್ ಎನ್ನುವ ಹಿರಿಮೆಗೂ ಪಾತ್ರರಾಗಲಿದ್ದಾರೆ. 33 ವರ್ಷದ ವಿರಾಟ್ ಕೊಹ್ಲಿ, ಇದುವರೆಗೂ ಒಟ್ಟು 23 ಟಿ20 ವಿಶ್ವಕಪ್ ಪಂದ್ಯಗಳನ್ನಾಡಿದ್ದು 89.9ರ ಬ್ಯಾಟಿಂಗ್ ಸರಾಸರಿಯಲ್ಲಿ 12 ಅರ್ಧಶತಕ ಸಹಿತ 989 ರನ್ ಬಾರಿಸಿದ್ದಾರೆ. ಇನ್ನು ಕಳೆದ ತಿಂಗಳು ನಡೆದ ಏಷ್ಯಾಕಪ್ ಟಿ20 ಟೂರ್ನಿಯಲ್ಲಿ ಆಫ್ಘಾನಿಸ್ತಾನ ವಿರುದ್ದ ವಿರಾಟ್ ಕೊಹ್ಲಿ ಮೊದಲ ಅಂತಾರಾಷ್ಟ್ರೀಯ ಟಿ20 ಶತಕ ಸಿಡಿಸಿದ್ದರು.

ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಈಗಾಗಲೇ ಮೊದಲೆರಡು ಪಂದ್ಯಗಳನ್ನು ಜಯಿಸುವ ಮೂಲಕ ಗ್ರೂಪ್ 2 ಅಂಕಪಟ್ಟಿಯಲ್ಲಿ 4 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಇದೀಗ ದಕ್ಷಿಣ ಆಫ್ರಿಕಾ ವಿರುದ್ದ ಗೆಲುವು ಸಾಧಿಸುವ ಮೂಲಕ ಸೆಮೀಸ್‌ ಹಾದಿಯನ್ನು ಮತ್ತಷ್ಟು ಸುಗಮಗೊಳಿಸಿಕೊಳ್ಳಲು ಎದುರು ನೋಡುತ್ತಿದೆ. ಇನ್ನು ದಕ್ಷಿಣ ಆಫ್ರಿಕಾ ಬಳಿಕ ಟೀಂ ಇಂಡಿಯಾ, ಸೂಪರ್ 12 ಹಂತದಲ್ಲಿ ಬಾಂಗ್ಲಾದೇಶ ಹಾಗೂ ಜಿಂಬಾಬ್ವೆ ತಂಡವನ್ನು ಎದುರಿಸಲಿದೆ. 

click me!