ಕಿವೀಸ್‌ ಗೆಲುವಿನ ಬಳಿಕ ಮತ್ತಷ್ಟು ಜೋರಾಯ್ತು ಸೆಮೀಸ್ ಲೆಕ್ಕಾಚಾರ..? ಇಂಗ್ಲೆಂಡ್/ಆಸ್ಟ್ರೇಲಿಯಾ ಯಾರಿಗಿದೆ ಚಾನ್ಸ್?

Published : Nov 04, 2022, 02:37 PM IST
ಕಿವೀಸ್‌ ಗೆಲುವಿನ ಬಳಿಕ ಮತ್ತಷ್ಟು ಜೋರಾಯ್ತು ಸೆಮೀಸ್ ಲೆಕ್ಕಾಚಾರ..? ಇಂಗ್ಲೆಂಡ್/ಆಸ್ಟ್ರೇಲಿಯಾ ಯಾರಿಗಿದೆ ಚಾನ್ಸ್?

ಸಾರಾಂಶ

ನಿರ್ಣಾಯಕ ಘಟ್ಟದತ್ತ ಐಸಿಸಿ ಟಿ20 ವಿಶ್ವಕಪ್ ಟೂರ್ನಿ  ಐರ್ಲೆಂಡ್ ಎದುರು ಗೆದ್ದು ಸೆಮೀಸ್ ಹಾದಿ ಸುಗಮಗೊಳಿಸಿಕೊಂಡ ನ್ಯೂಜಿಲೆಂಡ್ ಸೆಮೀಸ್‌ಗೇರಲು ಆಸ್ಟ್ರೇಲಿಯಾ, ಇಂಗ್ಲೆಂಡ್‌ಗಿದೆ ಸಮಾನ ಅವಕಾಶ

ಅಡಿಲೇಡ್‌(ನ.01): ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಸೂಪರ್ 12 ಹಂತದ ಗ್ರೂಪ್ 1ನಲ್ಲಿ ಐರ್ಲೆಂಡ್ ಎದುರು ನ್ಯೂಜಿಲೆಂಡ್ ತಂಡವು 35 ರನ್ ಅಂತರದ ಗೆಲುವು ದಾಖಲಿಸುವ ಮೂಲಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಇಲ್ಲಿನ ಅಡಿಲೇಡ್ ಓವಲ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಕೇನ್ ವಿಲಿಯಮ್ಸನ್ ಪಡೆ ಸಂಘಟಿತ ಪ್ರದರ್ಶನ ತೋರುವ ಮೂಲಕ ಅರ್ಹ ಗೆಲುವು ದಾಖಲಿಸಿದೆ. ಇದರ ಜತೆಗೆ 7 ಅಂಕಗಳೊಂದಿಗೆ ಗ್ರೂಪ್ ಹಂತದಲ್ಲಿ ನಂ.1 ಸ್ಥಾನ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಅತ್ಯುತ್ತಮ ನೆಟ್ ರನ್ ರೇಟ್ ಹೊಂದಿರುವ ನ್ಯೂಜಿಲೆಂಡ್ ತಂಡವು ಬಹುತೇಕ ಸೆಮೀಸ್ ಸ್ಥಾನವನ್ನು ಖಚಿತಪಡಿಸಿಕೊಂಡಿದೆ. ಇನ್ನು ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ತಂಡಗಳು ತಲಾ 5 ಅಂಕಗಳನ್ನು ಹೊಂದಿದ್ದು, ಎರಡನೇ ತಂಡವಾಗಿ ಸೆಮಿಫೈನಲ್ ಪ್ರವೇಶಿಸಲು ಹಾತೊರೆಯುತ್ತಿವೆ. ಹೀಗಾಗಿ ಗ್ರೂಪ್ 1 ವಿಭಾಗದಲ್ಲಿ ಯಾವ ಎರಡು ತಂಡಗಳು ಸೆಮೀಸ್‌ ಪ್ರವೇಶಿಸಲಿವೆ ಎನ್ನುವ ಕುತೂಹಲ ಹಾಗೂ ಲೆಕ್ಕಾಚಾರ ಇದೀಗ ಮತ್ತಷ್ಟು ಜೋರಾಗಿದೆ.

ಮೇಲ್ನೋಟಕ್ಕೆ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾಗಿಂತ ಉತ್ತಮ ರನ್‌ ರೇಟ್‌ ಹೊಂದಿರುವ ಇಂಗ್ಲೆಂಡ್ ತಂಡಕ್ಕೆ ಸೆಮೀಸ್‌ಗೇರುವ ಅವಕಾಶ ಜಾಸ್ತಿಯಿದೆ. ಇನ್ನು ಶ್ರೀಲಂಕಾ ತಂಡವು 4 ಅಂಕಗಳೊಂದಿಗೆ ಗ್ರೂಪ್ 1 ವಿಭಾಗದಲ್ಲಿ 4ನೇ ಸ್ಥಾನವನ್ನು ಹೊಂದಿದ್ದು, ಪವಾಡ ನಡೆದರಷ್ಟೇ ಲಂಕಾ ಕೂಡಾ ಸೆಮೀಸ್‌ಗೇರುವ ಅವಕಾಶವಿದೆ. ಸದ್ಯ ಗ್ರೂಪ್ 1 ವಿಭಾಗದಲ್ಲಿ ಇಂಗ್ಲೆಂಡ್, ಆಸ್ಟ್ರೇಲಿಯಾ ಹಾಗೂ ಶ್ರೀಲಂಕಾ ತಂಡಗಳಿಗೆ ಎರಡನೇ ತಂಡವಾಗಿ ಸೆಮೀಸ್‌ಗೇರುವ ಅವಕಾಶವಿದೆ. ಇನ್ನು ಐರ್ಲೆಂಡ್ ಹಾಗೂ ಆಫ್ಘಾನಿಸ್ತಾನ ತಂಡಗಳು ಸೆಮೀಸ್‌ ರೇಸ್‌ನಿಂದ ಹೊರಬಿದ್ದಿವೆ.

ಇಂಗ್ಲೆಂಡ್ ಸೆಮೀಸ್ ಲೆಕ್ಕಾಚಾರ: ಜೋಸ್ ಬಟ್ಲರ್ ನೇತೃತ್ವದ ಇಂಗ್ಲೆಂಡ್ ತಂಡವು ತನ್ನ ಪಾಲಿನ ಕೊನೆಯ ಪಂದ್ಯದಲ್ಲಿ ಶ್ರೀಲಂಕಾ ವಿರುದ್ದ ಗೆಲುವು ದಾಖಲಿಸಿದರೇ ಸೆಮಿಫೈನಲ್‌ಗೆ ಅಧಿಕೃತವಾಗಿ ಲಗ್ಗೆಯಿಡಲಿದೆ. ಒಂದು ವೇಳೆ ಲಂಕಾ ಎದುರು ಮುಗ್ಗರಿಸಿದರೇ ಇಂಗ್ಲೆಂಡ್‌ ತಂಡವು ಬ್ಯಾಗ್ ಪ್ಯಾಕ್ ಮಾಡಿಕೊಂಡು ಮನೆಕಡೆ ಧಾವಿಸಬೇಕಾಗುತ್ತದೆ. 

ಇನ್ನು ಒಂದು ವೇಳೆ ಇಂಗ್ಲೆಂಡ್ ತಂಡವು ಲಂಕಾ ತಂಡವನ್ನು ಸೋಲಿಸಿದರೇ, ಇದೇ ವೇಳೆ ಆಸ್ಟ್ರೇಲಿಯಾ ತಂಡವು ಆಫ್ಘಾನಿಸ್ತಾನ ಎದುರು ಭಾರೀ ಅಂತರದ ಗೆಲುವು ದಾಖಲಿಸದೇ ಹೋದರೂ ಸಹಾ ಜೋಸ್ ಬಟ್ಲರ್ ಪಡೆ ಸೆಮೀಸ್‌ಗೆ ಲಗ್ಗೆಯಿಡಲಿದೆ. ಸದ್ಯ 5 ಅಂಕದ ಜತೆಗೆ +0.547 ರನ್‌ ರೇಟ್‌ ಹೊಂದಿರುವ ಇಂಗ್ಲೆಂಡ್ ತಂಡವು, ಲಂಕಾ ಎದುರು ಭರ್ಜರಿ ಗೆಲುವು ಸಾಧಿಸಿದರೇ ಅನಾಯಾಸವಾಗಿ ಸೆಮೀಸ್‌ಗೆ ಲಗ್ಗೆಯಿಡಲಿದೆ.

ಆಸ್ಟ್ರೇಲಿಯಾದ ಸೆಮೀಸ್ ಲೆಕ್ಕಾಚಾರ: ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ಸೆಮೀಸ್ ಪ್ರವೇಶಿಸಬೇಕಿದ್ದರೇ, ಆಫ್ಘಾನಿಸ್ತಾನ ಎದುರು ಭಾರೀ ಅಂತರದ ಗೆಲುವು ದಾಖಲಿಸಿದರೇ ಮಾತ್ರ ನಾಕೌಟ್ ಹಂತಕ್ಕೇರಲು ಸಾಧ್ಯವಾಗಲಿದೆ. ಇಲ್ಲವೇ ಒಂದು ವೇಳೆ ಇಂಗ್ಲೆಂಡ್ ತಂಡವು ಶ್ರೀಲಂಕಾಗೆ ಶರಣಾದರೇ, ಇದೇ ವೇಳೆ ಆಫ್ಘಾನ್ ಎದುರು ಆಸ್ಟ್ರೇಲಿಯಾ ಸುಲಭ ಗೆಲುವು ದಾಖಲಿಸಿದರೂ ಫಿಂಚ್ ಪಡೆ ಸೆಮೀಸ್‌ಗೆ ಲಗ್ಗೆಯಿಡಲಿದೆ. ಒಂದು ವೇಳೆ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ತಂಡಗಳು ಕೊನೆಯ ಪಂದ್ಯದಲ್ಲಿ ಗೆಲುವು ದಾಖಲಿಸದರೇ, ಯಾವ ತಂಡದ ನೆಟ್ ರನ್‌ ರೇಟ್ ಅತ್ಯುತ್ತಮವಾಗಿರಲಿದೆಯೋ ಆ ತಂಡವು ಸೆಮೀಸ್‌ಗೆ ಲಗ್ಗೆಯಿಡಲಿದೆ. ಸದ್ಯ ಇಂಗ್ಲೆಂಡ್ +0.547 ರನ್‌ ರೇಟ್‌ ಹೊಂದಿದ್ದರೇ, ಆಸ್ಟ್ರೇಲಿಯಾ -0.304 ರನ್‌ರೇಟ್ ಹೊಂದಿದೆ.

T20 World Cup: ಐರ್ಲೆಂಡ್ ಹಣಿದು ಮೊದಲ ತಂಡವಾಗಿ ಸೆಮೀಸ್‌ಗೆ ಲಗ್ಗೆಯಿಟ್ಟ ಕಿವೀಸ್..!

ಶ್ರೀಲಂಕಾ: ದಶುನ್ ಶನಕಾ ನೇತೃತ್ವದ ಶ್ರೀಲಂಕಾ ಕ್ರಿಕೆಟ್ ತಂಡವು ಸೆಮೀಸ್‌ ಪ್ರವೇಶಿಸಬೇಕಿದ್ದರೇ ಈ ಮೊದಲೇ ಹೇಳಿದಂತೆ ಒಂದು ರೀತಿ ಪವಾಡವೇ ನಡೆಯಬೇಕಿದೆ. ಸದ್ಯ ಲಂಕಾ ತಂಡವು ಆಡಿದ 4 ಪಂದ್ಯಗಳ ಪೈಕಿ 2 ಗೆಲುವು ಹಾಗೂ 2 ಸೋಲುಗಳೊಂದಿಗೆ 4 ಅಂಕಗಳ ಸಹಿತ ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ. ಇದೀಗ ಶ್ರೀಲಂಕಾ ತಂಡವು ಕೊನೆಯ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ದ ಗೆಲುವು ಸಾಧಿಸಬೇಕಿದೆ. ಇದರ ಜತೆಗೆ ಆಸ್ಟ್ರೇಲಿಯಾ ತಂಡವು ಆಫ್ಘಾನಿಸ್ತಾನ ಎದುರು ಸೋಲುಂಡರೆ ಲಂಕಾ ಅನಾಯಾಸವಾಗಿ ನಾಕೌಟ್ ಹಂತಕ್ಕೇರಲಿದೆ. ಒಂದು ವೇಳೆ ಇವೆರಡೂ ಆಗದಿದ್ದರೇ ಲಂಕಾ ಗ್ರೂಪ್ ಹಂತದಲ್ಲೇ ತನ್ನ ಅಭಿಯಾನ ಮುಗಿಸಲಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಐಸಿಸಿಗೆ ಬಿಗ್ ಶಾಕ್ ಕೊಟ್ಟ ಮುಕೇಶ್ ಅಂಬಾನಿ ನೇತೃತ್ವದ ಜಿಯೋ ಹಾಟ್‌ಸ್ಟಾರ್!
ಇಂದಿನಿಂದ ಭಾರತ-ದಕ್ಷಿಣ ಆಫ್ರಿಕಾ ಟಿ20 ಕದನ; ಭಾರತಕ್ಕಿದೆ ಬಿಗ್ ಚಾಲೆಂಜ್!