T20 World Cup: ಐರ್ಲೆಂಡ್ ಹಣಿದು ಮೊದಲ ತಂಡವಾಗಿ ಸೆಮೀಸ್‌ಗೆ ಲಗ್ಗೆಯಿಟ್ಟ ಕಿವೀಸ್..!

Published : Nov 04, 2022, 12:55 PM ISTUpdated : Nov 04, 2022, 01:06 PM IST
T20 World Cup: ಐರ್ಲೆಂಡ್ ಹಣಿದು ಮೊದಲ ತಂಡವಾಗಿ ಸೆಮೀಸ್‌ಗೆ ಲಗ್ಗೆಯಿಟ್ಟ ಕಿವೀಸ್..!

ಸಾರಾಂಶ

ಐರ್ಲೆಂಡ್ ಎದುರು ಭರ್ಜರಿ ಜಯ ಸಾಧಿಸಿದ ನ್ಯೂಜಿಲೆಂಡ್ 35 ರನ್‌ಗಳ ಗೆಲುವು ದಾಖಲಿಸಿ ಸೆಮೀಸ್‌ ಸ್ಥಾನ ಖಚಿತಪಡಿಸಿಕೊಂಡ ಕೇನ್ ವಿಲಿಯಮ್ಸನ್ ಪಡೆ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಸಂಘಟಿತ ಪ್ರದರ್ಶನ ತೋರಿದ ನ್ಯೂಜಿಲೆಂಡ್

ಅಡಿಲೇಡ್‌(ನ.04): ನಾಯಕ ಕೇನ್‌ ವಿಲಿಯಮ್ಸನ್ ಆಕರ್ಷಕ ಅರ್ಧಶತಕ ಹಾಗೂ ಬೌಲರ್‌ಗಳ ಸಂಘಟಿತ ಪ್ರದರ್ಶನದ ನೆರವಿನಿಂದ ಐರ್ಲೆಂಡ್ ವಿರುದ್ದ ನ್ಯೂಜಿಲೆಂಡ್ ತಂಡವು 35 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಪ್ರಸಕ್ತ ಆವೃತ್ತಿಯ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಗ್ರೂಪ್ 1 ಹಂತದಿಂದ ಮೊದಲ ತಂಡವಾಗಿ ಸೆಮಿಫೈನಲ್ ಪ್ರವೇಶಿಸುವಲ್ಲಿ ನ್ಯೂಜಿಲೆಂಡ್ ತಂಡವು ಯಶಸ್ವಿಯಾಗಿದೆ. ನ್ಯೂಜಿಲೆಂಡ್ ನೀಡಿದ್ದ 185 ರನ್‌ಗಳ ಗುರಿ ಬೆನ್ನತ್ತಿದ ಐರ್ಲೆಂಡ್ ತಂಡವು 9 ವಿಕೆಟ್ ಕಳೆದುಕೊಂಡು 150 ರನ್‌ ಗಳಿಸಲಷ್ಟೇ ಶಕ್ತವಾಗಿದೆ.

ಸೂಪರ್ 12 ಹಂತದ ಗ್ರೂಪ್ 1 ವಿಭಾಗದಲ್ಲಿ ನ್ಯೂಜಿಲೆಂಡ್ ತಂಡವು 5 ಪಂದ್ಯಗಳನ್ನಾಡಿ 3 ಗೆಲುವು, 1 ಸೋಲು ಹಾಗೂ ಒಂದು ರದ್ದಾದ ಪಂದ್ಯದ ಸಹಿತ 7 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದು, ಬಹುತೇಕ ಸೆಮೀಸ್‌ ದಾರಿ ಖಚಿತಕೊಂಡಿದೆ. ನ್ಯೂಜಿಲೆಂಡ್ ತಂಡದ ನೆಟ್‌ ರನ್ ರೇಟ್‌ +2.113 ಇದ್ದು, ಆಸ್ಟ್ರೇಲಿಯಾ ಭಾರೀ ಅಂತರದ ಗೆಲುವು ಸಾಧಿಸಿದರಷ್ಟೇ ಸೆಮೀಸ್ ಪ್ರವೇಶಿಸಲು ಸಾಧ್ಯವಾಗಲಿದೆ. ಇಲ್ಲದಿದ್ದರೇ ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ತಂಡಗಳು ಗ್ರೂಪ್ 1 ವಿಭಾಗದಿಂದ ಸೆಮೀಸ್‌ಗೆ ಲಗ್ಗೆಯಿಡಲಿವೆ.

ಇಲ್ಲಿನ ಅಡಿಲೇಡ್ ಓವಲ್‌ ಮೈದಾನದಲ್ಲಿ ಕಿವೀಸ್ ನೀಡಿದ್ದ ಸವಾಲಿನ ಗುರಿ ಬೆನ್ನತ್ತಿದ ಐರ್ಲೆಂಡ್ ತಂಡಕ್ಕೆ ಆರಂಭಿಕ ಬ್ಯಾಟರ್‌ಗಳಾದ ಪೌಲ್ ಸ್ಟರ್ಲಿಂಗ್ ಹಾಗೂ ಆಂಡ್ರ್ಯೂ ಬಲ್ಬ್ರೈನ್ ಭರ್ಜರಿ ಆರಂಭವನ್ನೇ ಒದಗಿಸಿಕೊಟ್ಟರು. ಮೊದಲ 8 ಓವರ್‌ಗಳಲ್ಲಿ ಈ ಜೋಡಿ 68 ರನ್‌ಗಳ ಜತೆಯಾಟವಾಡುವ ಮೂಲಕ ಉತ್ತಮ ಆರಂಭ ಒದಗಿಸಿಕೊಟ್ಟರು. ಆದರೆ ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಮಿಚೆಲ್ ಸ್ಯಾಂಟ್ನರ್ ಯಶಸ್ವಿಯಾದರು. 25 ಎಸೆತಗಳಲ್ಲಿ 3 ಸಿಕ್ಸರ್ ಸಹಿತ 30 ರನ್ ಬಾರಿಸಿದ್ದ ನಾಯಕ ಬಲ್ಬ್ರೈನ್‌ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು.

9ನೇ ಓವರ್‌ನ ಮೊದಲ ಎಸೆತದಲ್ಲಿ ಸ್ಯಾಂಟ್ನರ್‌, ಕಿವೀಸ್‌ ಪಡೆಗೆ ಮೊದಲ ಯಶಸ್ಸು ಗಳಿಸಿಕೊಟ್ಟರೇ, 10ನೇ ಓವರ್‌ನ ಮೊದಲ ಎಸೆತದಲ್ಲಿ ಇಶ್ ಸೋಧಿ, ಐರ್ಲೆಂಡ್‌ನ ಮತ್ತೋರ್ವ ಆರಂಭಿಕ ಬ್ಯಾಟರ್ ಪೌಲ್ ಸ್ಟರ್ಲಿಂಗ್(37) ಅವರನ್ನು ಕ್ಲೀನ್ ಬೌಲ್ಡ್‌ ಮಾಡಿ ಕುಣಿದುಕುಪ್ಪಳಿಸಿದರು. ಇದಾದ ಬಳಿಕ ಐರ್ಲೆಂಡ್ ಪಾಳಯದಲ್ಲಿ ಉತ್ತಮ ಜತೆಯಾಟ ಮೂಡಿ ಬರಲಿಲ್ಲ. ಲಾರ್ಕನ್ ಟಕ್ಕರ್(13), ಗೆರಾತ್ ಡೆಲ್ನೆ(10) ಹಾಗೂ ಜಾರ್ಜ್ ಡಾಕ್ರೆಲ್(23)  ಹೊರತುಪಡಿಸಿ ಉಳಿದ ಬ್ಯಾಟರ್‌ಗಳು ನಿರೀಕ್ಷಿತ ಪ್ರದರ್ಶನ ತೋರಲು ವಿಫಲರಾದರು. ಹೀಗಾಗಿ ಐರ್ಲೆಂಡ್ ತಂಡವು ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 150 ರನ್ ಗಳಿಸಲಷ್ಟೇ ಶಕ್ತವಾಯಿತು.

ಇದಕ್ಕೂ ಮೊದಲು  ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಲಿಳಿದ ನ್ಯೂಜಿಲೆಂಡ್ ತಂಡಕ್ಕೆ ಡೆವೊನ್ ಕಾನ್‌ವೇ ಹಾಗೂ ಫಿನ್ ಆ್ಯಲೆನ್ ಸ್ಪೋಟಕ ಆರಂಭವನ್ನೇ ಒದಗಿಸಿಕೊಟ್ಟರು. ಮೊದಲ ವಿಕೆಟ್‌ಗೆ ಈ ಜೋಡಿ 5.5 ಓವರ್‌ಗಳಲ್ಲಿ 52 ರನ್‌ಗಳ ಜತೆಯಾಟವಾಡುವ ಮೂಲಕ ಭದ್ರ ಬುನಾದಿ ಹಾಕಿ ಕೊಟ್ಟರು. ಸ್ಪೋಟಕ ಬ್ಯಾಟಿಂಗ್ ನಡೆಸಿದ ಫಿನ್ ಆ್ಯಲೆನ್ 18 ಎಸೆತಗಳಲ್ಲಿ 5 ಬೌಂಡರಿ ಹಾಗು 1 ಸಿಕ್ಸರ್ ಸಹಿತ 32 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಇನ್ನು ಮತ್ತೋರ್ವ ಆರಂಭಿಕ ಬ್ಯಾಟರ್ ಡೆವೊನ್ ಕಾನ್‌ವೇ 28 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಇನ್ನು ನಾಯಕನ ಆಟವಾಡಿದ ಕೇನ್ ವಿಲಿಯಮ್ಸನ್‌ ಐರ್ಲೆಂಡ್ ಎದುರು ಸ್ಪೋಟಕ ಅರ್ಧಶತಕ ಸಿಡಿಸುವ ಮೂಲಕ ಮಿಂಚಿದರು. ವಿಲಿಯಮ್ಸನ್ ಕೇವಲ 32 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ಸಂಭ್ರಮಿಸಿದರು. ಒಟ್ಟು 35 ಎಸೆತಗಳನ್ನು ಎದುರಿಸಿದ ಕೇನ್ ವಿಲಿಯಮ್ಸನ್ 5 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 61 ರನ್ ಬಾರಿಸಿ ಜೋಶ್ವಾ ಲಿಟಲ್‌ಗೆ ವಿಕೆಟ್ ಒಪ್ಪಿಸಿದರು.

ಹ್ಯಾಟ್ರಿಕ್ ವಿಕೆಟ್ ಕಬಳಿಸಿ ಮಿಂಚಿದ ಲಿಟಲ್‌: ಐರ್ಲೆಂಡ್ ತಂಡದ ಮಾರಕ ವೇಗಿ ಜೋಶ್ವಾ ಲಿಟಲ್‌, ಮತ್ತೊಮ್ಮೆ ಮಿಂಚಿನ ದಾಳಿ ನಡೆಸುವ ಮೂಲಕ ಆಸರೆಯಾದರು. ಪ್ರಸಕ್ತ ವರ್ಷದ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಗರಿಷ್ಠ ವಿಕೆಟ್ ಕಬಳಿಸಿದ ಸಾಧನೆ ಮಾಡಿರುವ ಜೋಶ್ವಾ ಲಿಟಲ್‌, 19ನೇ ಓವರ್‌ನಲ್ಲಿ ಸತತ 3 ಎಸೆತಗಳಲ್ಲಿ ಕೇನ್ ವಿಲಿಯಮ್ಸನ್, ಜೇಮ್ಸ್ ನೀಶಮ್ ಹಾಗೂ ಮಿಚೆಲ್ ಸ್ಯಾಂಟ್ನರ್ ವಿಕೆಟ್ ಕಬಳಿಸುವ ಮೂಲಕ ಹ್ಯಾಟ್ರಿಕ್ ವಿಕೆಟ್ ಕಬಳಿಸಿದ ಸಾಧನೆ ಮಾಡಿದರು. ಈ ಮೂಲಕ ಪ್ರಸಕ್ತ ಆವೃತ್ತಿಯ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಕಾರ್ತಿಕ್ ಮೇಯಪ್ಪನ್ ಬಳಿಕ ಹ್ಯಾಟ್ರಿಕ್ ವಿಕೆಟ್ ಕಬಳಿಸಿದ ಎರಡನೇ ಬೌಲರ್ ಎನ್ನುವ ಹಿರಿಮೆಗೆ ಜೋಶ್ವಾ ಲಿಟಲ್ ಪಾತ್ರರಾಗಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸೈಲೆಂಟ್ ಆದ ಸೌತ್ ಆಫ್ರಿಕಾ , 74 ರನ್‌ಗೆ ಆಲೌಟ್ ಮಾಡಿ 101 ರನ್ ಗೆಲುವು ದಾಖಲಿಸಿದ ಭಾರತ
100 ಸಿಕ್ಸರ್ ದಾಖಲೆ ಬರೆದ ಹಾರ್ದಿಕ್ ಪಾಂಡ್ಯ, ಸೌತ್ ಆಫ್ರಿಕಾಗೆ 176 ರನ್ ಟಾರ್ಗೆಟ್