T20 World Cup: ಮ್ಯಾಕ್ಸಿ ಆಕರ್ಷಕ ಫಿಫ್ಟಿ, ಸೆಮೀಸ್‌ ರೇಸ್‌ನಲ್ಲಿ ಉಳಿಯಲು ಆಸೀಸ್‌ಗೆ ಬೇಕಿದೆ ಕನಿಷ್ಠ 62 ರನ್‌ ಅಂತರದ ಗೆಲುವು..

By Naveen KodaseFirst Published Nov 4, 2022, 3:21 PM IST
Highlights

ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿಂದು ಆಸ್ಟ್ರೇಲಿಯಾ-ಆಫ್ಘಾನಿಸ್ತಾನ ಸೆಣಸಾಟ
ಮೊದಲು ಬ್ಯಾಟ್ ಮಾಡಿ 168 ರನ್ ಕಲೆಹಾಕಿದ ಆಸ್ಟ್ರೇಲಿಯಾ ಕ್ರಿಕೆಟ್ ತಂಡ
ಇಂಗ್ಲೆಂಡ್ ನೆಟ್ ರನ್‌ ರೇಟ್ ಹಿಂದಿಕ್ಕಲು ಆಸ್ಟ್ರೇಲಿಯಾಗೆ ಬೇಕಿದೆ ಕನಿಷ್ಠ 62 ರನ್ ಅಂತರದ ಗೆಲುವು

ಅಡಿಲೇಡ್‌(ನ.04): ಆಫ್ಘಾನ್ ಬೌಲರ್‌ಗಳ ಶಿಸ್ತುಬದ್ದ ದಾಳಿಯ ಹೊರತಾಗಿಯೂ, ಗ್ಲೆನ್ ಮ್ಯಾಕ್ಸ್‌ವೆಲ್ ಬಾರಿಸಿದ ಸಮಯೋಚಿತ ಅರ್ಧಶತಕದ ನೆರವಿನಿಂದ ಆಸ್ಟ್ರೇಲಿಯಾ ತಂಡವು ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 168 ರನ್ ಬಾರಿಸಿದ್ದು, ಆಫ್ಘಾನಿಸ್ತಾನ ತಂಡಕ್ಕೆ ಸವಾಲಿನ ಗುರಿ ನೀಡಿದೆ. ಮ್ಯಾಕ್ಸ್‌ವೆಲ್ ಜತೆಗೆ ಮತ್ತೋರ್ವ ಆಲ್ರೌಂಡರ್ ಮಿಚೆಲ್ ಮಾರ್ಶ್ 45 ರನ್ ಬಾರಿಸುವ ಮೂಲಕ ಉಪಯುಕ್ತ ರನ್‌ ಕಾಣಿಕೆ ನೀಡಿದರು. ಒಂದು ವೇಳೆ ಆಸ್ಟ್ರೇಲಿಯಾ 62 ರನ್‌ಗಳ ಅಂತರದ ಗೆಲುವು ದಾಖಲಿಸಿದರೇ ಇಂಗ್ಲೆಂಡ್‌ ನೆಟ್‌ ರನ್‌ರೇಟ್ ಹಿಂದಿಕ್ಕಲಿದೆ.

ಇಲ್ಲಿನ ಅಡಿಲೇಡ್ ಓವಲ್ ಮೈದಾನದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಲಿಳಿದ ಆಸ್ಟ್ರೇಲಿಯಾ ತಂಡವು ಮತ್ತೊಮ್ಮೆ ಉತ್ತಮ ಆರಂಭ ಪಡೆಯಲು ವಿಫಲವಾಯಿತು. ಆ್ಯರೋನ್ ಫಿಂಚ್ ಅನುಪಸ್ಥಿತಿಯಲ್ಲಿ ಆರಂಭಿಕನಾಗಿ ಕಣಕ್ಕಿಳಿದ ಆಲ್ರೌಂಡರ್ ಕ್ಯಾಮರೋನ್ ಗ್ರೀನ್ ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿ ನಿರಾಸೆ ಅನುಭವಿಸಿದರು. ಕ್ಯಾಮರೋನ್ ಗ್ರೀನ್ 2 ರನ್ ಗಳಿಸಿ ಫಜಲ್‌ಹಕ್ ಫಾರೂಕಿಗೆ ವಿಕೆಟ್ ಒಪ್ಪಿಸಿದರು. ಇನ್ನು ಮತ್ತೋರ್ವ ಆರಂಭಿಕ ಬ್ಯಾಟರ್ ಡೇವಿಡ್ ವಾರ್ನರ್ 5 ಬೌಂಡರಿ ಬಾರಿಸುವ ಮೂಲಕ ದೊಡ್ಡ ಮೊತ್ತ ಗಳಿಸುವ ಮುನ್ಸೂಚನೆ ನೀಡಿದರಾದರೂ ನವೀನ್ ಉಲ್ ಹಕ್ ಇದಕ್ಕೆ ಅವಕಾಶ ಮಾಡಿಕೊಡಲಿಲ್ಲ. ವಾರ್ನರ್ 18 ಎಸೆತಗಳಲ್ಲಿ 25 ರನ್ ಬಾರಿಸಿ ಕ್ಲೀನ್ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು.

ಸಿಡಿದ ಮಿಚೆಲ್ ಮಾರ್ಶ್‌: ಡೇವಿಡ್ ವಾರ್ನರ್ ವಿಕೆಟ್ ಪತನದ ಬೆನ್ನಲ್ಲೇ ಟಿಮ್ ಡೇವಿಡ್ ಬದಲಿಗೆ ತಂಡದಲ್ಲಿ ಸ್ಥಾನ ಪಡೆದಿದ್ದ ಅನುಭವಿ ಬ್ಯಾಟರ್ ಸ್ಟೀವ್ ಸ್ಮಿತ್ ಕೂಡಾ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನೆಲೆಯೂರಲು ಆಫ್ಘಾನ್ ಬೌಲರ್ ಅವಕಾಶ ನೀಡಲಿಲ್ಲ. ಸ್ಮಿತ್ ಕೇವಲ 4 ರನ್ ಬಾರಿಸಿ ನವೀನ್ ಉಲ್ ಹಕ್‌ಗೆ ಎರಡನೇ ಬಲಿಯಾದರು. ಈ ವೇಳೆ ಆಸ್ಟ್ರೇಲಿಯಾ ತಂಡವು ಒಂದೇ ಓವರ್‌ನಲ್ಲಿ ಎರಡು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. 54 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡು ಆಘಾತಕ್ಕೊಳಗಾಗಿತ್ತು. ಒಂದು ಕಡೆ ವಿಕೆಟ್ ಉರುಳುತ್ತಿದ್ದರೂ ಮತ್ತೊಂದೆಡೆ ಸ್ಪೋಟಕ ಬ್ಯಾಟಿಂಗ್ ನಡೆಸಿದ ಮಿಚೆಲ್ ಮಾರ್ಶ್ ಕೇವಲ 30 ಎಸೆತಗಳಲ್ಲಿ 3 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 45 ರನ್ ಬಾರಿಸಿ ಮುಜೀಬ್ ಉರ್ ರೆಹಮಾನ್‌ಗೆ ವಿಕೆಟ್ ಒಪ್ಪಿಸಿದರು.

ಫಿಫ್ಟಿ ಬಾರಿಸಿದ ಮ್ಯಾಕ್ಸಿ: ಆಸ್ಟ್ರೇಲಿಯಾದ ಆಲ್ರೌಂಡರ್ ಮಧ್ಯಮ ಕ್ರಮಾಂಕದಲ್ಲಿ ಸ್ಪೋಟಕ ಅರ್ಧಶತಕ ಸಿಡಿಸುವ ಮೂಲಕ ತಂಡ ಸವಾಲಿನ ಮೊತ್ತ ಕಲೆಹಾಕುವಲ್ಲಿ ಯಶಸ್ವಿಯಾದರು. ಬರೋಬ್ಬರಿ 27 ಇನಿಂಗ್ಸ್‌ಗಳ ಬಳಿಕ ಆಸ್ಟ್ರೇಲಿಯಾ ಪರ ಅರ್ಧಶತಕ ಸಿಡಿಸುವಲ್ಲಿ ಮ್ಯಾಕ್ಸ್‌ವೆಲ್ ಯಶಸ್ವಿಯಾದರು. ಮಾರ್ಕಸ್ ಸ್ಟೋನಿಸ್ ಜತೆಗೂಡಿ 53 ರನ್‌ಗಳ ಜತೆಯಾಟವಾಡುವ ಮೂಲಕ ಮ್ಯಾಕ್ಸ್‌ವೆಲ್ ರನ್ ವೇಗಕ್ಕೆ ಚುರುಕು ಮುಟ್ಟಿಸಿದರು. ಮ್ಯಾಕ್ಸ್‌ವೆಲ್ ಕೇವಲ 29 ಎಸೆತಗಳಲ್ಲಿ ಅರ್ಧಶತಕ ಸಿಡಿಸುವಲ್ಲಿ ಯಶಸ್ವಿಯಾದರು. ಅಂತಿಮವಾಗಿ ಮ್ಯಾಕ್ಸ್‌ವೆಲ್ ಕೇವಲ 32 ಎಸೆತಗಳಲ್ಲಿ 6 ಬೌಂಡರಿ ಹಾಗು 2 ಸಿಕ್ಸರ್ ಸಹಿತ ಅಜೇಯ 54 ರನ್ ಗಳಿಸಿದರು.


 

click me!