ICC T20 World Cup ಚಾಂಪಿಯನ್‌ ವಿಂಡೀಸ್‌ಗಿಂದು ವಿಶ್ವ ನಂ.1 ಇಂಗ್ಲೆಂಡ್‌ ಸವಾಲು..!

By Suvarna NewsFirst Published Oct 23, 2021, 9:43 AM IST
Highlights

* ಸೂಪರ್‌ 12ನೇ ಎರಡನೇ ಪಂದ್ಯದಲ್ಲಿ ವೆಸ್ಟ್ ಇಂಡೀಸ್‌ ಹಾಗೂ ಇಂಗ್ಲೆಂಡ್ ಮುಖಾಮುಖಿ

* ಹೈವೋಲ್ಟೇಜ್ ಪಂದ್ಯಕ್ಕೆ ದುಬೈನ ಅಂತಾರಾಷ್ಟ್ರೀಯ ಮೈದಾನ ಆತಿಥ್ಯ

* ಹಾಲಿ ಚಾಂಪಿಯನ್ ವಿಂಡೀಸ್‌ಗೆ ಇಂಗ್ಲೆಂಡ್ ಅಗ್ನಿ ಪರೀಕ್ಷೆ

ದುಬೈ(ಅ.23): 2 ಬಾರಿ ಚಾಂಪಿಯನ್‌ ವೆಸ್ಟ್‌ಇಂಡೀಸ್‌ (West Indies Cricket) ಲಯದ ಸಮಸ್ಯೆಯೊಂದಿಗೆ ಟಿ20 ವಿಶ್ವಕಪ್‌ಗೆ (T20 World Cup) ಕಾಲಿಟ್ಟಿದ್ದು, ಶನಿವಾರ ಸೂಪರ್‌-12 ಹಂತದ ಮೊದಲ ಪಂದ್ಯದಲ್ಲೇ ವಿಶ್ವ ನಂ.1 ಇಂಗ್ಲೆಂಡ್‌ (England Cricket Team) ವಿರುದ್ಧ ಸೆಣಸಲಿದೆ. 

ಟಿ20 ಕ್ರಿಕೆಟ್‌ನ ತಜ್ಞರ ದಂಡನ್ನೇ ಹೊಂದಿರುವ ವಿಂಡೀಸ್‌, ಅಭ್ಯಾಸ ಪಂದ್ಯಗಳಲ್ಲಿ ಪಾಕಿಸ್ತಾನ ಹಾಗೂ ಆಫ್ಘಾನಿಸ್ತಾನ ವಿರುದ್ಧ ಪರಾಭವಗೊಂಡಿತ್ತು. ಆ ಸೋಲುಗಳ ಆಘಾತದಿಂದ ತಂಡ ಹೊರಬರಬೇಕಿದೆ. ಎರಡೂ ಪಂದ್ಯಗಳಲ್ಲಿ ವಿಂಡೀಸ್‌, ಬ್ಯಾಟಿಂಗ್‌ ವೈಫಲ್ಯದಿಂದಾಗಿಯೇ ಸೋಲುಂಡಿತ್ತು. ಪಾಕಿಸ್ತಾನ ವಿರುದ್ಧ 130 ರನ್‌ ಕಲೆಹಾಕಿದ್ದ ಪೊಲ್ಲಾರ್ಡ್‌ ಪಡೆ, ಆಫ್ಘನ್‌ ವಿರುದ್ಧ 189 ರನ್‌ ಗುರಿ ಬೆನ್ನತ್ತಿದ್ದ ವಿಂಡೀಸ್‌, ಕೇವಲ 133 ರನ್‌ ಗಳಿಸಲು ಶಕ್ತವಾಗಿತ್ತು.

ವೆಸ್ಟ್‌ ತಂಡಕ್ಕೆ ಕ್ರಿಸ್‌ ಗೇಲ್‌ (Chris Gayls), ಆ್ಯಂಡ್ರೆ ರಸೆಲ್‌, ಕೀರನ್‌ ಪೊಲ್ಲಾರ್ಡ್‌, ಎವಿನ್‌ ಲೆವಿಸ್‌, ನಿಕೋಲಸ್‌ ಪೂರನ್‌, ಲೆಂಡ್ಲ್‌ ಸಿಮನ್ಸ್‌, ಶಿಮ್ರೊನ್‌ ಹೆಟ್ಮೇಯರ್‌ರಂತಹ ಘಟಾನುಘಟಿ ಬ್ಯಾಟರ್‌ಗಳ ಬಲವಿದ್ದು, ವಿಂಡೀಸ್‌ ಸ್ಫೋಟಕ ಆಟವಾಡಿ ಶುಭಾರಂಭ ಮಾಡುವ ನಿರೀಕ್ಷೆಯಲ್ಲಿದೆ. ತಂಡದ ಬೌಲಿಂಗ್‌ ಪಡೆ ಹೆಚ್ಚು ಅನುಭವ ಹೊಂದಿಲ್ಲ. ಇದು ಹಿನ್ನಡೆಗೆ ಕಾರಣವಾಗಬಹುದು.

T20 World Cup: ಉದ್ಘಾಟನಾ ಪಂದ್ಯದಲ್ಲಿ ಆಸೀಸ್‌-ಆಫ್ರಿಕಾ ಫೈಟ್

ಇನ್ನು ಇಂಗ್ಲೆಂಡ್‌ 2016ರ ಫೈನಲ್‌ನ ಸೋಲಿಗೆ ಸೇಡು ತೀರಿಸಿಕೊಳ್ಳಲು ಕಾಯುತ್ತಿದೆ. 2016ರ ಐಸಿಸಿ ಟಿ20 ವಿಶ್ವಕಪ್ ಫೈನಲ್‌ನಲ್ಲಿ ವೆಸ್ಟ್ ಇಂಡೀಸ್ ಹಾಗೂ ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗಿದ್ದವು. ಕೋಲ್ಕತದ ಈಡನ್ ಗಾರ್ಡನ್‌ ಮೈದಾನದಲ್ಲಿ ನಡೆದ ಫೈನಲ್‌ನಲ್ಲಿ ಕೊನೆಯ ಓವರ್ ಎಸೆದ ಬೆನ್ ಸ್ಟೋಕ್ಸ್‌ (Ben Stokes) ಬೌಲಿಂಗ್‌ನಲ್ಲಿ ವಿಂಡೀಸ್‌ನ ಕಾರ್ಲೋಸ್ ಬ್ರಾಥ್‌ವೇಟ್ ಸತತ 4 ಸಿಕ್ಸರ್ ಸಿಡಿಸಿ ತಂಡವನ್ನು ರೋಚಕವಾಗಿ ಗೆಲುವಿನ ದಡ ಸೇರಿಸಿದ್ದರು. ಈ ಬಾರಿ ಬೆನ್‌ ಸ್ಟೋಕ್ಸ್‌, ಜೋಫ್ರಾ ಆರ್ಚರ್‌, ಸ್ಯಾಮ್‌ ಕರ್ರನ್‌ರ ಅನುಪಸ್ಥಿತಿಯಲ್ಲೂ ಇಂಗ್ಲೆಂಡ್ ತಂಡ ಬಲಿಷ್ಠವಾಗಿದೆ. ಭಾರತ ವಿರುದ್ಧ ಅಭ್ಯಾಸ ಪಂದ್ಯದಲ್ಲಿ ಸೋತಿದ್ದ ಇಂಗ್ಲೆಂಡ್‌, 2ನೇ ಅಭ್ಯಾಸ ಪಂದ್ಯದಲ್ಲಿ ನ್ಯೂಜಿಲೆಂಡ್‌ ವಿರುದ್ಧ ಜಯಿಸಿ ಲಯಕ್ಕೆ ಮರಳಿತ್ತು. ಇಯಾನ್‌ ಮಾರ್ಗನ್ ನೇತೃತ್ವದ ಇಂಗ್ಲೆಂಡ್ ತಂಡವು ಕಪ್‌ ಗೆಲ್ಲಬಲ್ಲ ನೆಚ್ಚಿನ ತಂಡಗಳಲ್ಲಿ ಒಂದು ಎಂದು ಗುರುತಿಸಿಕೊಂಡಿದೆ. 

T20 World Cup: ಇಂದಿನಿಂದ ಅಸಲಿ ಫೈಟ್‌ ಆರಂಭ

ಇಂಗ್ಲೆಂಡ್ ಅಗ್ರಕ್ರಮಾಂಕದಲ್ಲಿ ಜೇಸನ್ ರಾಯ್, ಜೋಸ್ ಬಟ್ಲರ್ (Jos Buttler), ಜಾನಿ ಬೇರ್‌ಸ್ಟೋವ್ ಅವರಂತಹ ಬಲಾಢ್ಯ ಬ್ಯಾಟ್ಸ್‌ಮನ್‌ಗಳನ್ನು ಹೊಂದಿದೆ. ಇನ್ನು ಮಧ್ಯಮ ಕ್ರಮಾಂಕದಲ್ಲಿ ಡೇವಿಡ್ ಮಲಾನ್‌, ಮೋಯಿನ್ ಅಲಿ, ಇಯಾನ್‌ ಮಾರ್ಗನ್‌ ಅವರನ್ನು ನೆಚ್ಚಿಕೊಂಡಿದೆ. ಇಯಾನ್‌ ಮಾರ್ಗನ್‌ (Eoin Morgan) ಐಪಿಎಲ್‌ನಲ್ಲಿ ದಯಾನೀಯ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದರು. ಹೀಗಾಗಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಫಾರ್ಮ್‌ಗೆ ಮರಳುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ. ಇನ್ನು ಬೌಲಿಂಗ್‌ನಲ್ಲಿ ಮಾರ್ಕ್ ವುಡ್‌, ಕ್ರಿಸ್ ವೋಕ್ಸ್, ಆದಿಲ್ ರಶೀದ್‌ ಕಮಾಲ್ ಮಾಡಲು ಎದುರು ನೋಡುತ್ತಿದ್ದಾರೆ.

2007ರಿಂದ 2021ರ ಅವಧಿಯಲ್ಲಿ ವೆಸ್ಟ್ ಇಂಡೀಸ್ ಹಾಗೂ ಇಂಗ್ಲೆಂಡ್ ತಂಡಗಳು ಒಟ್ಟು 18 ಬಾರಿ ಮುಖಾಮುಖಿಯಾಗಿದ್ದು, ಈ ಪೈಕಿ ಕೆರಿಬಿಯನ್ ಪಡೆ ಕೊಂಚ ಮೇಲುಗೈ ಸಾಧಿಸಿದೆ. 18 ಪಂದ್ಯಗಳ ಪೈಕಿ 11 ಪಂದ್ಯಗಳಲ್ಲಿ ವೆಸ್ಟ್ ಇಂಡೀಸ್ ತಂಡವು ಗೆಲುವು ದಾಖಲಿಸಿದ್ದರೆ, 8 ಪಂದ್ಯಗಳಲ್ಲಿ ಇಂಗ್ಲೆಂಡ್ ತಂಡವು ಗೆಲುವಿನ ನಗೆ ಬೀರಿದೆ. 

ಪಂದ್ಯ ಆರಂಭ: ಮಧ್ಯಾಹ್ನ 3.30ಕ್ಕೆ 
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌

click me!