T20 World Cup: ಉದ್ಘಾಟನಾ ಪಂದ್ಯದಲ್ಲಿ ಆಸೀಸ್‌-ಆಫ್ರಿಕಾ ಫೈಟ್

By Suvarna NewsFirst Published Oct 23, 2021, 9:00 AM IST
Highlights

* ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಆಸೀಸ್‌-ಆಫ್ರಿಕಾ ಮುಖಾಮುಖಿ

* ಶುಭಾರಂಭ ಮಾಡುವ ನಿರೀಕ್ಷೆಯಲ್ಲಿವೆ ಉಭಯ ಕ್ರಿಕೆಟ್ ತಂಡಗಳು

* ಈ ಹೈವೋಲ್ಟೇಜ್ ಪಂದ್ಯ ಇಂದು ಮಧ್ಯಾಹ್ನ 3.30ಕ್ಕೆ ಅಬುಧಾಬಿಯಲ್ಲಿ ಆರಂಭ

ಅಬುಧಾಬಿ(ಅ.23): ಬಲಿಷ್ಠ ಆಸ್ಪ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಸೆಣಸಾಟದೊಂದಿಗೆ 7ನೇ ಆವೃತ್ತಿಯ ಐಸಿಸಿ ಟಿ20 ವಿಶ್ವಕಪ್‌ನ ಸೂಪರ್‌-12 ಹಂತಕ್ಕೆ ಚಾಲನೆ ದೊರೆಯಲಿದೆ. ಆಸ್ಪ್ರೇಲಿಯಾ ಲಯದ ಸಮಸ್ಯೆ ಎದುರಿಸುತ್ತಿದ್ದು, ಆತ್ಮವಿಶ್ವಾಸದ ಅಲೆಯಲ್ಲಿ ತೇಲುತ್ತಿರುವ ದಕ್ಷಿಣ ಆಫ್ರಿಕಾದಿಂದ ಕಠಿಣ ಸವಾಲು ಎದುರಿಸಲಿದೆ.

ಚೊಚ್ಚಲ ಟಿ20 ವಿಶ್ವಕಪ್‌ (ICC T20 World Cup) ಗೆಲ್ಲಲು ಉಭಯ ತಂಡಗಳು ಪಣತೊಟ್ಟಿವೆ. ಆದರೆ ಆಸೀಸ್‌ ಇತ್ತೀಚಿಗೆ ಬಾಂಗ್ಲಾದೇಶ, ವೆಸ್ಟ್‌ಇಂಡೀಸ್‌, ನ್ಯೂಜಿಲೆಂಡ್‌, ಭಾರತ ಹಾಗೂ ಇಂಗ್ಲೆಂಡ್‌ ವಿರುದ್ಧ ದ್ವಿಪಕ್ಷೀಯ ಟಿ20 ಸರಣಿಗಳನ್ನು ಸೋತು ಆಘಾತಕ್ಕೊಳಗಾಗಿದೆ. ತಂಡದ ಪ್ರಮುಖ ಆಟಗಾರರು ಬಹುತೇಕ ಸರಣಿಗಳಲ್ಲಿ ಆಡಿರಲಿಲ್ಲ. ಹೀಗಾಗಿ ಆಸ್ಪ್ರೇಲಿಯಾ ಕೇವಲ 5 ಗೆಲುವು ಸಾಧಿಸಿ,13 ಸೋಲು ಕಂಡಿತ್ತು. ಬಹುತೇಕ ಆಟಗಾರರು ಸರಿಯಾದ ಅಭ್ಯಾಸವಿಲ್ಲದೆ ವಿಶ್ವಕಪ್‌ನಲ್ಲಿ ಆಡಲಿದ್ದಾರೆ.

T20 World Cup: ಇಂದಿನಿಂದ ಅಸಲಿ ಫೈಟ್‌ ಆರಂಭ

ಆರಂಭಿಕ ಬ್ಯಾಟರ್‌ ಹಾಗೂ ಬ್ಯಾಟಿಂಗ್‌ ಆಧಾರಸ್ತಂಭ ಎನಿಸಿರುವ ಡೇವಿಡ್‌ ವಾರ್ನರ್‌ (David Warner) ತೀರಾ ಕಳಪೆ ಲಯದಲ್ಲಿದ್ದು, ತಂಡದ ತಲೆನೋವಿಗೆ ಕಾರಣವಾಗಿದೆ. ವಾರ್ನರ್‌ರನ್ನು ಹೊರಗಿಟ್ಟು ಆಡುವ ಧೈರ್ಯವೂ ಆಸೀಸ್‌ಗೆ ಇದ್ದಂತ್ತಿಲ್ಲ. ಇನ್ನು ನಾಯಕ ಆ್ಯರೋನ್‌ ಫಿಂಚ್‌ ಮಂಡಿ ಶಸ್ತ್ರಚಿಕಿತ್ಸೆ ಬಳಿಕ ಸಂಪೂರ್ಣವಾಗಿ ಚೇತರಿಸಿಕೊಂಡಂತೆ ಕಾಣುತ್ತಿಲ್ಲ. ಉಪನಾಯಕ ಪ್ಯಾಟ್‌ ಕಮಿನ್ಸ್‌ ಸಹ ಐಪಿಎಲ್‌ಗೆ ಗೈರಾದ ಕಾರಣ ಅವರೂ ಲಯದಲಿಲ್ಲ. ಸ್ಟೀವ್‌ ಸ್ಮಿತ್‌ (Steve Smith), ಗ್ಲೆನ್‌ ಮ್ಯಾಕ್ಸ್‌ವೆಲ್‌ (Glenn Maxwell), ಮಿಚೆಲ್ ಸ್ಟಾರ್ಕ್ ಮೇಲೆ ತಂಡ ಹೆಚ್ಚು ಅವಲಂಬಿತಗೊಂಡಿದೆ.

ಇನ್ನು ದಕ್ಷಿಣ ಆಫ್ರಿಕಾ ವಿಂಡೀಸ್‌, ಐರ್ಲೆಂಡ್‌ ಹಾಗೂ ಶ್ರೀಲಂಕಾ ವಿರುದ್ಧ ಸತತ 3 ಸರಣಿಗಳನ್ನು ಜಯಿಸಿತ್ತು. ಅಲ್ಲದೇ 2 ಅಭ್ಯಾಸ ಪಂದ್ಯಗಳಲ್ಲೂ ಜಯಭೇರಿ ಬಾರಿಸಿತ್ತು. ಫಾಫ್‌ ಡು ಪ್ಲೆಸಿ ಅನುಪಸ್ಥಿತಿಯಲ್ಲೂ ತಂಡ ಮಿಂಚಲು ಎದುರು ನೋಡುತ್ತಿದೆ. ಕ್ವಿಂಟನ್‌ ಡಿ ಕಾಕ್‌ ವರ್ಸಸ್‌ ಸ್ಟಾರ್ಕ್‌, ರಬಾಡ ವರ್ಸಸ್‌ ವಾರ್ನರ್ ನಡುವಿನ ಪೈಪೋಟಿಯನ್ನು ಕಣ್ತುಂಬಿಕೊಳ್ಳಲು ಕ್ರಿಕೆಟ್ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. 

T20 World Cup: ಟೀಂ ಇಂಡಿಯಾ ವಿಶ್ವಕಪ್‌ ಟ್ರೋಫಿ ಗೆಲ್ಲುವ ಫೇವರಿಟ್ ಎಂದ ಆಸೀಸ್‌ ಕ್ರಿಕೆಟಿಗ..!

ಎರಡೂ ತಂಡಗಳಲ್ಲಿದ್ದಾರೆ ತಾರಾ ಆಟಗಾರರ ದಂಡು: ಇದೇ ಮೊದಲ ಬಾರಿಗೆ ಎಬಿ ಡಿವಿಲಿಯರ್ಸ್, ಡೇನ್ ಸ್ಟೇನ್ ಹಾಗೂ ಫಾಫ್ ಡು ಪ್ಲೆಸಿಸ್‌ ಅವರ ಅನುಪಸ್ಥಿತಿಯಲ್ಲಿ ದಕ್ಷಿಣ ಆಫ್ರಿಕಾ ತಂಡವು ಟಿ20 ವಿಶ್ವಕಪ್‌ನಲ್ಲಿ ಪಾಲ್ಗೊಳ್ಳುತ್ತಿದೆ. ಹಾಗಂತ ಹರಿಣಗಳ ಪಡೆಯಲ್ಲಿ ತಾರಾ ಆಟಗಾರರ ಸಂಖ್ಯೆಗೇನು ಕಡಿಮೆಯಿಲ್ಲ. ಕ್ವಿಂಟನ್ ಡಿ ಕಾಕ್‌, ತೆಂಬಾ ಬವುಮಾ, ಏನ್ರಿಚ್ ನೊಕಿಯ, ಕಗಿಸೋ ರಬಾಡ, ವ್ಯಾನ್ ಡರ್ ಡುಸೇನ್, ಡೇವಿಡ್‌ ಮಿಲ್ಲರ್ ಅವರಂತಹ ಟಿ20 ಸ್ಪೆಷಲಿಸ್ಟ್‌ಗಳ ಬಲ ಆಫ್ರಿಕಾ ತಂಡಕ್ಕಿದೆ.

T20 World Cup ಇಂಡೋ-ಪಾಕ್‌ ಪಂದ್ಯದ ಜಾಹೀರಾತು: 10 ಸೆಕೆಂಡ್‌ಗೆ 30 ಲಕ್ಷ ರೂ..!

ಇನ್ನೊಂದು ಕಡೆ ಆಸ್ಟ್ರೇಲಿಯಾ ಆಟಗಾರರು ಲಯ ಕಳೆದುಕೊಂಡಿದ್ದರೂ, ಯಾವುದೇ ಕ್ಷಣದಲ್ಲಾದರೂ ತಿರುಗೇಟು ನೀಡುವ ಸಾಮರ್ಥ್ಯ ಹೊಂದಿದ್ದಾರೆ. ಫಿಂಚ್, ವಾರ್ನರ್ ಮಾತ್ರವಲ್ಲದೇ ಸ್ಟೀವ್ ಸ್ಮಿತ್, ಗ್ಲೆನ್ ಮ್ಯಾಕ್ಸ್‌ವೆಲ್, ಆಸ್ಟನ್ ಅಗರ್, ಮಾರ್ಕಸ್‌ ಸ್ಟೋಯ್ನಿಸ್, ಮಿಚೆಲ್ ಸ್ಟಾರ್ಕ್‌ ಅವರನ್ನು ಹೆಚ್ಚಾಗಿ ನೆಚ್ಚಿಕೊಂಡಿದೆ.

ಪಂದ್ಯ: ಮಧ್ಯಾಹ್ನ 3.30ಕ್ಕೆ, 
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌

click me!