
ದುಬೈ(ಅ.23): ಕಳೆದ ಒಂದೆರಡು ತಿಂಗಳಲ್ಲಿ ಮ್ಯಾಂಚೆಸ್ಟರ್‌ನಲ್ಲಿ ನಡೆಯಬೇಕಿದ್ದ ಟೆಸ್ಟ್ ಪಂದ್ಯ ಕೋವಿಡ್‌ನಿಂದಾಗಿ ಮುಂದೂಡಿಯಾಗಿದ್ದನ್ನು ನೋಡಿದ್ದೇವೆ. ಭದ್ರತೆ ಸಮಸ್ಯೆ ಕಾರಣ ನೀಡಿ ನ್ಯೂಜಿಲೆಂಡ್ ತಂಡ ಪಂದ್ಯ ಆರಂಭವಾಗುವ ಕೆಲವೇ ಗಂಟೆಗಳ ಮೊದಲು ಪಾಕಿಸ್ತಾನದಿಂದ ಹೊರಹೋಗಿದ್ದನ್ನು ನೋಡಿದ್ದೇವೆ. ಆಸ್ಪ್ರೇಲಿಯಾದ ಕೆಲವೆಡೆ ಇನ್ನೂ ಲಾಕ್‌ಡೌನ್ ಜಾರಿಯಲ್ಲಿದೆ. ಆದರೆ ಒಂದು ಕಡೆ ಮಾತ್ರ ಕ್ರಿಕೆಟ್ ನಿಲ್ಲದೆ ನಡೆಯುತ್ತಿದೆ ಎಂದರೆ ಅದು ಯುಎಇ.
ಕೋವಿಡ್ 19 (COVID 19), ಭದ್ರತೆ ಯಾವುದೇ ಆತಂಕವಿಲ್ಲದೆ ಒಂದರ ಬೆನ್ನಲ್ಲಿ ಮತ್ತೊಂದು ಮಹತ್ವದ ಟಿ20 ಟೂರ್ನಿಗೆ ಯುಎಇ (UAE) ಆತಿಥ್ಯ ನೀಡುತ್ತಿದೆ. ಐಪಿಎಲ್ (IPL 2021) 14ನೇ ಆವೃತ್ತಿಯ ಭಾಗ-2 ಅನ್ನು ಯಶಸ್ವಿಯಾಗಿ ಆಯೋಜಿಸಿದ ದುಬೈ, ಶಾರ್ಜಾ ಹಾಗೂ ಅಬುಧಾಬಿ, ಐಸಿಸಿ ಟಿ20 ವಿಶ್ವಕಪ್‌ನ (ICC T20 World Cup) ಪಂದ್ಯಗಳಿಗೂ ಸಾಕ್ಷಿಯಾಗಲಿವೆ. ಅರ್ಹತಾ ಸುತ್ತಿನಲ್ಲಿ ಜಯಿಸಿ ಶ್ರೀಲಂಕಾ, ಬಾಂಗ್ಲಾದೇಶ, ಸ್ಕಾಟ್ಲೆಂಡ್ ಹಾಗೂ ನಮೀಬಿಯಾ ಸೂಪರ್-12 ಹಂತಕ್ಕೆ ಪ್ರವೇಶ ಪಡೆದಿವೆ. ಶನಿವಾರ ಸೂಪರ್-12 ಹಂತಕ್ಕೆ ಚಾಲನೆ ಸಿಗಲಿದ್ದು, 30 ರೋಚಕ ಪಂದ್ಯಗಳು ನಡೆಯಲಿವೆ.
T20 World Cup: ಈ 4 ತಂಡಗಳು ಸೆಮಿಫೈನಲ್‌ಗೇರಲಿವೆ ಎಂದ ಬ್ರಾಡ್ ಹಾಗ್..!
12 ತಂಡಗಳನ್ನು ತಲಾ 2 ಗುಂಪುಗಳಾಗಿ ವಿಂಗಡಿಸಲಾಗಿದೆ. ಗುಂಪು 1ರಲ್ಲಿ ಹಾಲಿ ಚಾಂಪಿಯನ್ ವೆಸ್ಟ್‌ಇಂಡೀಸ್, ಆಸ್ಪ್ರೇಲಿಯಾ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ಶ್ರೀಲಂಕಾ ಹಾಗೂ ಬಾಂಗ್ಲಾದೇಶ ಸ್ಥಾನ ಪಡೆದಿವೆ. ಇದೊಂದು ರೀತಿಯಲ್ಲಿ ‘ಗ್ರೂಪ್ ಆಫ್ ಡೆತ್’ ಎಂದೇ ಕರೆಸಿಕೊಳ್ಳುತ್ತಿದೆ. 6 ಬಲಿಷ್ಠ ತಂಡಗಳ ಪೈಕಿ ಕೇವಲ 2 ತಂಡಗಳು ಮಾತ್ರ ಸೆಮಿಫೈನಲ್ ಪ್ರವೇಶಿಸಲಿವೆ.
T20 World Cup: ಟೀಂ ಇಂಡಿಯಾ ವಿಶ್ವಕಪ್ ಟ್ರೋಫಿ ಗೆಲ್ಲುವ ಫೇವರಿಟ್ ಎಂದ ಆಸೀಸ್ ಕ್ರಿಕೆಟಿಗ..!
ಇನ್ನು ಗುಂಪು 2ರಲ್ಲಿ ಭಾರತ, ನ್ಯೂಜಿಲೆಂಡ್, ಪಾಕಿಸ್ತಾನ, ಅಫ್ಘಾನಿಸ್ತಾನ, ನಮೀಬಿಯಾ ಹಾಗೂ ಸ್ಕಾಟ್ಲೆಂಡ್ ತಂಡಗಳಿವೆ. ಭಾರತ, ನ್ಯೂಜಿಲೆಂಡ್ ಹಾಗೂ ಪಾಕಿಸ್ತಾನ ನಡುವೆ ನೇರಾನೇರ ಪೈಪೋಟಿ ಇದ್ದರೂ, ಭಾರತ ಸೆಮಿಫೈನಲ್‌ಗೇರುವ ನೆಚ್ಚಿನ ತಂಡ ಎನಿಸಿದೆ. ಇನ್ನು ಆಫ್ಘನ್ ತಂಡ ಅಚ್ಚರಿಯ ಫಲಿತಾಂಶಗಳಿಗೆ ಕಾರಣವಾಗಬಲ್ಲ ಸಾಮರ್ಥ್ಯ ಹೊಂದಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.
ನವೆಂಬರ್ 10ರಂದು ಮೊದಲ ಸೆಮೀಸ್ ನಡೆಯಲಿದ್ದು, ನವೆಂಬರ್ 11ಕ್ಕೆ 2ನೇ ಸೆಮಿಫೈನಲ್ ನಡೆಯಲಿದೆ. ನವೆಂಬರ್ 14ರಂದು ದುಬೈ (Dubai) ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ಫೈನಲ್ ಪಂದ್ಯ ನಡೆಯಲಿದ್ದು, 7ನೇ ಐಸಿಸಿ ಟಿ20 ವಿಶ್ವಕಪ್ ಚಾಂಪಿಯನ್ ಆಗುವ ತಂಡವನ್ನು ನಿರ್ಧರಿಸಲಿದೆ. 23 ದಿನಗಳ ಕಾಲ ಒಟ್ಟು 33 ಪಂದ್ಯಗಳು ನಡೆಯಲಿದ್ದು, ದುಬೈ, ಶಾರ್ಜಾ ಹಾಗೂ ಅಬುಧಾಬಿ ತಲಾ 11 ಪಂದ್ಯಗಳಿಗೆ ಆತಿಥ್ಯ ನೀಡಲಿವೆ.
T20 World Cup ಇಂಡೋ-ಪಾಕ್ ಪಂದ್ಯದ ಜಾಹೀರಾತು: 10 ಸೆಕೆಂಡ್‌ಗೆ 30 ಲಕ್ಷ ರೂ..!
ಸೂಪರ್ 12 ಹಂತದ ಉದ್ಘಾಟನಾ ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಸೆಣಸಾಟ ನಡೆಸಲಿವೆ. ಈ ಪಂದ್ಯಕ್ಕೆ ಅಬುಧಾಬಿಯ ಶೇಕ್ ಜಾಯೆದ್ ಮೈದಾನ ಆತಿಥ್ಯವನ್ನು ವಹಿಸಲಿದ್ದು, ಇಂದು ಮಧ್ಯಾಹ್ನ 3.30ಕ್ಕೆ ಪಂದ್ಯಾವಳಿಗಳು ಆರಂಭವಾಗಲಿವೆ. ಇನ್ನು ಎರಡನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ ವೆಸ್ಟ್ ಇಂಡೀಸ್ ಹಾಗೂ ರನ್ನರ್ ಅಪ್ ಇಂಗ್ಲೆಂಡ್ ತಂಡಗಳು ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ಸೆಣಸಾಟ ನಡೆಸಲಿವೆ. ಸಂಜೆ 7.30ರಿಂದ ಆರಂಭವಾಗಲಿರುವ ಈ ಪಂದ್ಯಕ್ಕೆ ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನ ಸಾಕ್ಷಿಯಾಗಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.