T20 World Cup: Aus vs Pak: ಪಾಕ್‌ ವಿಶ್ವಕಪ್‌ ವ್ಯಥೆ, 3 ದಶಕಗಳಿಂದ ಪಾಕ್‌ಗೆ ಆಸೀಸ್‌ ನಾಕೌಟ್ ಪಂಚ್‌..!

By Suvarna NewsFirst Published Nov 13, 2021, 7:11 AM IST
Highlights

* ವಿಶ್ವಕಪ್‌ ನಾಕೌಟ್‌ ಪಂದ್ಯಗಳಲ್ಲಿ ಆಸೀಸ್‌ ಎದುರು ಗೆಲ್ಲಲು ಪಾಕ್ ಪರದಾಟ

* 1987ರಿಂದಲೂ ಪಾಕ್‌ಗೆ ನಾಕೌಟ್ ಪಂಚ್ ನೀಡುತ್ತಿದೆ ಅಸೀಸ್

* ಟಿ20 ವಿಶ್ವಕಪ್‌ ಸೆಮೀಸ್‌ನಲ್ಲೂ ಪಾಕ್ ತಂಡವನ್ನು ಹೊರದಬ್ಬಿದ ಕಾಂಗರೂ ಪಡೆ 

ದುಬೈ(ಣ.13): ಸೂಪರ್‌-12 ಹಂತದಲ್ಲಿ ಐದಕ್ಕೆ ಐದು ಪಂದ್ಯ ಗೆದ್ದು ವಿಶ್ವಕಪ್‌ (ICC World Cup) ಗೆಲ್ಲುವ ನೆಚ್ಚಿನ ತಂಡ ಎನಿಸಿಕೊಳ್ಳುತ್ತಿದ್ದ ಪಾಕಿಸ್ತಾನವನ್ನು ಆಸ್ಪ್ರೇಲಿಯಾ ಸೆಮಿಫೈನಲ್‌ನಲ್ಲಿ ಸೋಲಿಸಿ ಮನೆಗೆ ಕಳುಹಿಸಿದೆ. 

ಐಸಿಸಿ ವಿಶ್ವಕಪ್‌ಗಳಲ್ಲಿ ಆಸ್ಪ್ರೇಲಿಯಾದ ಸವಾಲನ್ನು ಮೆಟ್ಟಿನಿಲ್ಲಲು ಪಾಕಿಸ್ತಾನಕ್ಕೆ (Pakistan Cricket) ಈ ಸಲವೂ ಸಾಧ್ಯವಾಗಲಿಲ್ಲ. ಸತತ 5ನೇ ಬಾರಿಗೆ ವಿಶ್ವಕಪ್‌ನ ನಾಕೌಟ್‌ ಪಂದ್ಯದಲ್ಲಿ ಸೋತು ನಿರಾಸೆ ಅನುಭವಿಸಿತು. ಪಾಕಿಸ್ತಾನ ಹಾಗೂ ಆಸ್ಪ್ರೇಲಿಯಾ ನಡುವಿನ ವಿಶ್ವಕಪ್‌ ನಾಕೌಟ್‌ ವೈರತ್ವ ಮೂರು ದಶಕಕ್ಕೂ ಹಳೆಯದ್ದು. ಈ ಎರಡು ತಂಡಗಳು ಮೊದಲ ಬಾರಿಗೆ ನಾಕೌಟ್‌ ಪಂದ್ಯದಲ್ಲಿ (Knock out) ಮುಖಾಮುಖಿಯಾಗಿದ್ದು 1987ರ ಏಕದಿನ ವಿಶ್ವಕಪ್‌ ಸೆಮಿಫೈನಲ್‌ನಲ್ಲಿ. ಅಲ್ಲಿಂದ ಇಲ್ಲಿಯವರೆಗೂ ಪಾಕಿಸ್ತಾನ ನಿರಂತರವಾಗಿ ಆಘಾತ ಅನುಭವಿಸುತ್ತಲೇ ಬಂದಿದೆ.

1987ರ ಏಕದಿನ ವಿಶ್ವಕಪ್‌ ಸೆಮೀಸ್‌: ಪಾಕಿಸ್ತಾನಕ್ಕೆ 18 ರನ್‌ ಸೋಲು

ಇಮ್ರಾನ್‌ ಖಾನ್‌ (Imran Khan) ನೇತೃತ್ವದ ಪಾಕಿಸ್ತಾನ ತಂಡವು 1987ರ ವಿಶ್ವಕಪ್‌ನಲ್ಲಿ ಕಪ್‌ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದಾಗಿ ಗುರುತಿಸಿಕೊಂಡಿತ್ತು. ಲಾಹೋರ್‌ನಲ್ಲಿ ನಡೆದ ಪಂದ್ಯದ 50ನೇ ಓವರ್ ಬೌಲಿಂಗ್ ಮಾಡಿದ ಸಲೀಮ್ ಜಾಫರ್‌ಗೆ, ಆಸೀಸ್‌ ಬ್ಯಾಟರ್‌ ಸ್ಟೀವ್ ವಾ 18 ರನ್ ಚಚ್ಚಿದರು. ಇದಾಗಿ 4 ಗಂಟೆಗಳ ಬಳಿಕ, ಅಂದರೆ ಪಾಕಿಸ್ತಾನ ಬ್ಯಾಟಿಂಗ್ ಮಾಡಲಿಳಿಯಿತು. ಆದರೆ 18 ರನ್‌ಗಳ ರೋಚಕ ಸೋಲು ಕಂಡು ಟೂರ್ನಿಯಿಂದ ಹೊರಬಿದ್ದಿತು.

1999ರ ಏಕದಿನ ವಿಶ್ವಕಪ್‌ ಫೈನಲ್‌ನಲ್ಲೂ ಪಾಕ್‌ಗೆ 8 ವಿಕೆಟ್‌ಗಳ ಸೋಲು:

1999ರ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ವಾಸೀಂ ಅಕ್ರಂ (Wasim Akram) ನೇತೃತ್ವದ ಪಾಕಿಸ್ತಾನ ತಂಡವು ಫೈನಲ್‌ ಪ್ರವೇಶಿಸಿತ್ತು. ಲಾರ್ಡ್ಸ್‌ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಅಕ್ರಂ ಮೊದಲು ಬ್ಯಾಟಿಂಗ್ ಮಾಡಲು ತೀರ್ಮಾನಿಸಿದರು. ಶೇನ್‌ ವಾರ್ನ್‌ ಮಾರಕ ದಾಳಿಗೆ ತತ್ತರಿಸಿದ ಪಾಕಿಸ್ತಾನ ಕೇವಲ 132 ರನ್‌ಗಳಿಗೆ ಸರ್ಪಪತನ ಕಂಡಿತು. ಈ ಸಾಧಾರಣ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ, ಸರಿಸುಮಾರು ಇನ್ನೂ 30 ಓವರ್‌(29.5) ಬಾಕಿ ಇರುವಂತೆಯೇ ಗೆಲುವಿನ ನಗೆ ಬೀರುವ ಮೂಲಕ ಪಾಕಿಸ್ತಾನಕ್ಕೆ ಸೋಲುಣಿಸಿತ್ತು. 

Team India ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಸೇರಿ ಇಬ್ಬರು ಕ್ರಿಕೆಟಿಗರಿಂದ ಗ್ಯಾಂಗ್‌ಸ್ಟರ್ ಪತ್ನಿ ಮೇಲೆ ರೇಪ್ ಆರೋಪ..!

2010ರ ಟಿ20 ವಿಶ್ವಕಪ್‌ ಸೆಮೀಸ್‌ ಪಾಕಿಸ್ತಾನಕ್ಕೆ 3 ವಿಕೆಟ್‌ ಸೋಲು:

2010ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಸೆಮಿಫೈನಲ್‌ನಲ್ಲಿ ಕೊನೆಯ ಓವರ್‌ವರೆಗೂ ಪಾಕಿಸ್ತಾನ ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿತ್ತು. ಸೇಂಟ್ ಲೂಸಿಯಾದಲ್ಲಿ ನಡೆದ ಪಂದ್ಯದಲ್ಲಿ ಪಾಕಿಸ್ತಾನ ನೀಡಿದ್ದ 192 ರನ್‌ಗಳ ಕಠಿಣ ಗುರಿ ಬೆನ್ನತ್ತಿದ್ದ ಆಸ್ಟ್ರೇಲಿಯಾಗೆ ಕೊನೆಯ ಓವರ್‌ನಲ್ಲಿ ಗೆಲ್ಲಲು 18 ರನ್‌ಗಳ ಅಗತ್ಯವಿತ್ತು. ಕೊನೆಯ ಓವರ್‌ ಬೌಲಿಂಗ್‌ ಮಾಡಿದ ಸಯೀದ್ ಅಜ್ಮಲ್‌ (Saeed Ajmal) ಗೆ ಆಸೀಸ್ ಎಡಗೈ ಬ್ಯಾಟರ್ ಮೈಕ್ ಹಸ್ಸಿ 3 ಸಿಕ್ಸರ್‌ ಹಾಗೂ ಒಂದು ಬೌಂಡರಿ ಬಾರಿಸುವ ಮೂಲಕ ಇನ್ನೂ ಒಂದು ಎಸೆತ ಬಾಕಿ ಇರುವಾಗಲೇ ಕಾಂಗರೂ ತಂಡವನ್ನು ರೋಚಕವಾಗಿ ಫೈನಲ್‌ಗೇರಿಸಿದ್ದರು.

2015ರ ಏಕದಿನ ವಿಶ್ವಕಪ್‌ ಕ್ವಾರ್ಟರ್‌ ಫೈನಲ್‌ ಪಾಕಿಸ್ತಾನಕ್ಕೆ 6 ವಿಕೆಟ್‌ ಸೋಲು

2015ರ ಏಕದಿನ ವಿಶ್ವಕಪ್ ಟೂರ್ನಿಯ ಪ್ರೀ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಪಾಕಿಸ್ತಾನ ತಂಡವು ಕೇವಲ 213 ರನ್‌ಗಳಿಗೆ ಸರ್ವಪತನ ಕಂಡಿತ್ತು. ಈ ಗುರಿ ಬೆನ್ನತ್ತಿದ ಆಸೀಸ್ ಕೇವಲ 4  ವಿಕೆಟ್ ಕಳೆದುಕೊಂಡು ಸುಲಭ ಗೆಲುವು ದಾಖಲಿಸಿತ್ತು.

2021ರ ಟಿ20 ವಿಶ್ವಕಪ್‌ ಸೆಮೀಸ್‌ ಪಾಕಿಸ್ತಾನಕ್ಕೆ 5 ವಿಕೆಟ್‌ ಸೋಲು

ಇದೀಗ ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆದ ಟಿ20 ಸೆಮಿಫೈನಲ್‌ ಪಂದ್ಯದಲ್ಲಿ ಮ್ಯಾಥ್ಯೂ ವೇಡ್ ಸ್ಪೋಟಕ ಬ್ಯಾಟಿಂಗ್‌ ನಡೆಸುವ ಮೂಲಕ ಪಾಕಿಸ್ತಾನಕ್ಕೆ ಮತ್ತೊಮ್ಮೆ ನಾಕೌಟ್ ಪಂದ್ಯದಲ್ಲಿ ಸೋಲಿನ ಶಾಕ್ ನೀಡಿದ್ದಾರೆ.

ಸತತ 16 ಪಂದ್ಯ ಜಯದ ಓಟಕ್ಕೂ ಬಿತ್ತು ತೆರೆ

ದುಬೈ: ಕಳೆದೊಂದು ದಶಕದಿಂದ ಯುಎಇ ಅನ್ನು ತವರಾಗಿ ಆಯ್ಕೆ ಮಾಡಿಕೊಂಡು ಬಹುತೇಕ ದ್ವಿಪಕ್ಷೀಯ ಸರಣಿಗಳನ್ನು ಅಲ್ಲಿಯೇ ಆಡಿರುವ ಪಾಕಿಸ್ತಾನ ತಂಡ, ಅತಿಹೆಚ್ಚು ಯಶಸ್ಸು ಸಾಧಿಸಿತ್ತು. 

2016ರಿಂದ ಯುಎಇನಲ್ಲಿ ಸತತವಾಗಿ 16 ಟಿ20 ಪಂದ್ಯಗಳನ್ನು ಗೆದ್ದಿದ್ದ ಪಾಕಿಸ್ತಾನಕ್ಕೆ ಟಿ20 ವಿಶ್ವಕಪ್‌ ಸೆಮಿಫೈನಲ್‌ನಲ್ಲಿ ಆಸ್ಪ್ರೇಲಿಯಾ ಆಘಾತ ನೀಡಿತು. ಸೆಮೀಸ್‌ನಲ್ಲಿ ಗೆದ್ದಿದ್ದರೆ ಯುಎಇನಲ್ಲಿ ಸತತವಾಗಿ ಅತಿಹೆಚ್ಚು ಪಂದ್ಯಗಳನ್ನು ಗೆದ್ದಿರುವ ಅಫ್ಘಾನಿಸ್ತಾನದ ದಾಖಲೆಯನ್ನು ಸರಿಗಟ್ಟಬಹುದಾಗಿತ್ತು. ಪಾಕಿಸ್ತಾನ ವಿರುದ್ಧ ಸೂಪರ್‌-12 ಹಂತದಲ್ಲಿ ಸೋಲುವ ಮುನ್ನ ಆಫ್ಘನ್‌ ತಂಡ ಯುಎಇನಲ್ಲಿ ಸತತ 17 ಗೆಲುವುಗಳನ್ನು ಸಾಧಿಸಿತ್ತು.

click me!