T20 World Cup: 2021ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಹೊಸ ಚಾಂಪಿಯನ್ ಉದಯ..!

By Suvarna NewsFirst Published Nov 12, 2021, 10:09 AM IST
Highlights

* ರೋಚಕವಾಗಿ ಟಿ20 ವಿಶ್ವಕಪ್ ಫೈನಲ್‌ಗೆ ಲಗ್ಗೆಯಿಟ್ಟ ಅಸ್ಟ್ರೇಲಿಯಾ

* 2021ರ ಟಿ20 ವಿಶ್ವಕಪ್ ಟ್ರೋಫಿಗಾಗಿ ನ್ಯೂಜಿಲೆಂಡ್-ಆಸೀಸ್ ಕಾದಾಟ

* ಯಾರೇ ಟ್ರೋಫಿ ಗೆದ್ದರೂ ಇತಿಹಾಸ ನಿರ್ಮಾಣ 

ಬೆಂಗಳೂರು(ನ.12): ಬಹುನಿರೀಕ್ಷಿತ 2021ನೇ ಸಾಲಿನ ಐಸಿಸಿ ಟಿ20 ವಿಶ್ವಕಪ್ (ICC T20 World Cup) ಟೂರ್ನಿಯ ಫೈನಲ್‌ನಲ್ಲಿ ಪ್ರಶಸ್ತಿಗಾಗಿ ಕಾದಾಡುವ ತಂಡಗಳಾವುವು ಎನ್ನುವ ಕುತೂಹಲಕ್ಕೆ ಕೊನೆಗೂ ತೆರೆ ಬಿದ್ದಿದೆ. ನವೆಂಬರ್ 14ರಂದು ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ (Dubai International Stadium) ನಡೆಯಲಿರುವ ಫೈನಲ್‌ ಪಂದ್ಯದಲ್ಲಿ ನ್ಯೂಜಿಲೆಂಡ್ ಹಾಗೂ ಆಸ್ಟ್ರೇಲಿಯಾ ತಂಡಗಳು ಪ್ರಶಸ್ತಿಗಾಗಿ ಕಾದಾಡಲಿವೆ. 

ನ್ಯೂಜಿಲೆಂಡ್‌ ಹಾಗೂ ಆಸ್ಪ್ರೇಲಿಯಾ ಎರಡೂ ತಂಡಗಳು ಮೊದಲ ಬಾರಿಗೆ ವಿಶ್ವಕಪ್‌ ಗೆಲ್ಲಲು ಎದುರು ನೋಡುತ್ತಿವೆ. ಆಸ್ಪ್ರೇಲಿಯಾ 2010ರಲ್ಲಿ ರನ್ನರ್‌-ಅಪ್‌ ಆಗಿತ್ತು. ನ್ಯೂಜಿಲೆಂಡ್‌ ಚೊಚ್ಚಲ ಬಾರಿಗೆ ಫೈನಲ್‌ ಪ್ರವೇಶಿಸಿದೆ. ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಇಯಾನ್ ಮಾರ್ಗನ್ (Eoin Morgan) ನೇತೃತ್ವದ ಇಂಗ್ಲೆಂಡ್ ಹಾಗೂ ಬಾಬರ್ ಅಜಂ (Babar Azam) ನೇತೃತ್ವದ ಪಾಕಿಸ್ತಾನ ತಂಡಗಳು ಫೈನಲ್ ಪ್ರವೇಶಿಸಬಹುದು ಎಂದು ಕ್ರಿಕೆಟ್ ಪಂಡಿತರು ಭವಿಷ್ಯ ನುಡಿದಿದ್ದರು. ಆದರೆ ಆ ಭವಿಷ್ಯಗಳನ್ನು ಸುಳ್ಳಾಗಿಸುವಲ್ಲಿ ಕೇನ್ ವಿಲಿಯಮ್ಸನ್ (Kane Williamson) ನೇತೃತ್ವದ ನ್ಯೂಜಿಲೆಂಡ್ ಹಾಗೂ ಆರೋನ್ ಫಿಂಚ್ (Aaron Finch) ನೇತೃತ್ವದ ಆಸ್ಟ್ರೇಲಿಯಾ ತಂಡಗಳು ಯಶಸ್ವಿಯಾಗಿದೆ. 

T20 World Cup: Aus vs Pak ಸೆಮೀಸ್‌ ಹಿಂದಿನ ರಾತ್ರಿ ಆಸ್ಪತ್ರೆಗೆ ದಾಖಲಾಗಿದ್ದ ರಿಜ್ವಾನ್‌!

ಅಬುಧಾಬಿಯ ಶೇಕ್ ಜಾಯೆದ್ ಮೈದಾನದಲ್ಲಿ ನಡೆದ ಮೊದಲ ಸೆಮಿಫೈನಲ್‌ ಪಂದ್ಯದಲ್ಲಿ ಬಲಿಷ್ಠ ಇಂಗ್ಲೆಂಡ್ ಎದುರು ನ್ಯೂಜಿಲೆಂಡ್ ತಂಡವು ಒಂದು ಓವರ್‌ ಬಾಕಿ ಇರುವಂತೆಯೇ 5 ವಿಕೆಟ್‌ಗಳ ಜಯ ಸಾಧಿಸಿ ಫೈನಲ್ ಪ್ರವೇಶಿಸಿತ್ತು. ಇನ್ನು ಎರಡನೇ ಸೆಮಿಫೈನಲ್‌ನಲ್ಲೂ ಕಾಕತಾಳೀಯವೆಂಬಂತೆ ಪಾಕಿಸ್ತಾನ ಎದುರು ಆಸ್ಟ್ರೇಲಿಯಾ ತಂಡ ಕೂಡಾ ಭರ್ತಿ ಒಂದು ಓವರ್ ಬಾಕಿ ಇರುವಂತೆಯೇ 5 ವಿಕೆಟ್‌ಗಳ ಜಯ ಸಾಧಿಸಿ ಫೈನಲ್‌ಗೆ ಲಗ್ಗೆಯಿಟ್ಟಿದೆ.

ಔಟ್‌ ಇಲ್ಲದಿದ್ದರೂ ಹೊರನಡೆದ ವಾರ್ನರ್‌!

ಆಸ್ಪ್ರೇಲಿಯಾ ತನ್ನ ಆರಂಭಿಕ ಬ್ಯಾಟ್ಸ್‌ಮನ್‌ ಡೇವಿಡ್‌ ವಾರ್ನರ್‌ (David Warner) ಮೇಲೆ ಭಾರೀ ನಂಬಿಕೆ ಇರಿಸಿತ್ತು. ವಾರ್ನರ್‌ ಸಹ ನಂಬಿಕೆಗೆ ತಕ್ಕ ಆಟವಾಡುತ್ತಿದ್ದರು. ಆದರೆ ವಾರ್ನರ್, ಔಟ್ ಇಲ್ಲದಿದ್ದರೂ ಮೈದಾನ ತೊರೆದು ಅಚ್ಚರಿ ಮೂಡಿಸಿದರು. ಹೌದು, ಶದಾಬ್‌ ಎಸೆದ ಇನ್ನಿಂಗ್ಸ್‌ನ 11ನೇ ಓವರ್‌ನ ಮೊದಲ ಎಸೆತದಲ್ಲಿ ವಾರ್ನರ್‌ ವಿರುದ್ಧ ಕೀಪರ್‌ ಕ್ಯಾಚ್‌ಗೆ ಮನವಿ ಸಲ್ಲಿಸಲಾಯಿತು. ಅಂಪೈರ್‌ ಮನವಿಯನ್ನು ಪುರಸ್ಕರಿಸಿದರು. ವಾರ್ನರ್‌ ಡಿಆರ್‌ಎಸ್‌ ಸಹಾಯ ಪಡೆಯದೆ ಹೊರನಡೆದರು. ಬಳಿಕ ಟೀವಿ ರೀಪ್ಲೇಗಳಲ್ಲಿ ಚೆಂಡು ಬ್ಯಾಟ್‌ಗೆ ತಗುಲಿರಲಿಲ್ಲ ಎನ್ನುವುದು ದೃಢಪಟ್ಟಿತು.

2015ರ ಏಕದಿನ ಫೈನಲ್‌ನಲ್ಲಿ ಎದುರಾಗಿದ್ದ ಆಸೀಸ್‌-ಕಿವೀಸ್‌!

ಆಸ್ಪ್ರೇಲಿಯಾ (Australia Cricket Team) ಹಾಗೂ ನ್ಯೂಜಿಲೆಂಡ್‌ (New Zealand Cricket Team) ನಡುವೆ 2015ರ ಏಕದಿನ ವಿಶ್ವಕಪ್‌ನ ಫೈನಲ್‌ ಪಂದ್ಯ ನಡೆದಿತ್ತು. ಆ ಪಂದ್ಯದಲ್ಲಿ ಆಸ್ಪ್ರೇಲಿಯಾ ಭರ್ಜರಿ ಗೆಲುವು ಸಾಧಿಸಿ 5ನೇ ಬಾರಿಗೆ ವಿಶ್ವ ಚಾಂಪಿಯನ್‌ ಆಗಿತ್ತು. ಇದೀಗ ಆ ಸೋಲಿಗೆ ಸೇಡು ತೀರಿಸಿಕೊಳ್ಳಲು ಕೇನ್‌ ವಿಲಿಯಮ್ಸನ್ ನೇತೃತ್ವದ ನ್ಯೂಜಿಲೆಂಡ್ ತಂಡವು ಎದುರು ನೋಡುತ್ತಿದೆ.

ನಾಡಿದ್ದು ಆಸ್ಪ್ರೇಲಿಯಾ, ನ್ಯೂಜಿಲೆಂಡ್‌ ಫೈನಲ್‌

ನವೆಂಬರ್ 14ರಂದು ಭಾನುವಾರ ನಡೆಯಲಿರುವ ಟಿ20 ವಿಶ್ವಕಪ್‌ ಫೈನಲ್‌ನಲ್ಲಿ ಆಸ್ಪ್ರೇಲಿಯಾ ಹಾಗೂ ನ್ಯೂಜಿಲೆಂಡ್‌ ಸೆಣಸಲಿವೆ. ಎರಡೂ ತಂಡಗಳು 2015ರ ಏಕದಿನ ವಿಶ್ವಕಪ್‌ ಫೈನಲ್‌ನಲ್ಲಿ ಮುಖಾಮುಖಿಯಾಗಿದ್ದವು. ಸೂಪರ್‌-12 ಹಂತದ ಗುಂಪು-1ರಲ್ಲಿ ಅಗ್ರಸ್ಥಾನ ಪಡೆದಿದ್ದ ಇಂಗ್ಲೆಂಡ್‌ ತಂಡವನ್ನು ಸೆಮೀಸ್‌ನಲ್ಲಿ ಸೋಲಿಸಿ ಕಿವೀಸ್‌ ಫೈನಲ್‌ಗೇರಿದರೆ, ಗುಂಪು-2ರಲ್ಲಿ ಅಗ್ರಸ್ಥಾನ ಪಡೆದಿದ್ದ ಪಾಕಿಸ್ತಾನವನ್ನು ಸೋಲಿಸಿ ಆಸೀಸ್‌ ಫೈನಲ್‌ಗೇರಿದೆ.
 

click me!