
ಅಬುಧಾಬಿ(ನ.06): ಜೋಶ್ ಹೇಜಲ್‌ವುಡ್ ಮಾರಕ ದಾಳಿಯ ಹೊರತಾಗಿಯೂ, ನಾಯಕ ಕೀರನ್ ಪೊಲ್ಲಾರ್ಡ್ ಸಮಯೋಚಿತ ಬ್ಯಾಟಿಂಗ್ ನೆರವಿನಿಂದ ವೆಸ್ಟ್ ಇಂಡೀಸ್ ತಂಡವು 7 ವಿಕೆಟ್ ಕಳೆದುಕೊಂಡು 157 ರನ್ ಬಾರಿಸಿದ್ದು, ಆಸ್ಟ್ರೇಲಿಯಾಗೆ ಗೆಲ್ಲಲು ಸ್ಪರ್ಧಾತ್ಮಕ ಗುರಿ ನೀಡಿದೆ. ಸೆಮೀಸ್ ಪ್ರವೇಶಿಸುವ ದೃಷ್ಠಿಯಿಂದ ಈ ಪಂದ್ಯದಲ್ಲಿ ಗೆಲುವು ಸಾಧಿಸುವುದು ಆಸ್ಟ್ರೇಲಿಯಾ ಪಾಲಿಗೆ ಸಾಕಷ್ಟು ಮಹತ್ವದ್ದೆನಿಸಿದೆ.
ಇಲ್ಲಿನ ಶೇಕ್ ಜಾಯೆದ್ ಮೈದಾನದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ವೆಸ್ಟ್ ಇಂಡೀಸ್ ಸ್ಫೋಟಕ ಆರಂಭವನ್ನೇ ಪಡೆಯಿತು. ಮೊದಲ 2.2 ಓವರ್‌ನಲ್ಲಿ ವಿಂಡೀಸ್ 30 ರನ್ ಕಲೆಹಾಕಿತು. ಯೂನಿವರ್ಸೆಲ್ ಬಾಸ್ ಖ್ಯಾತಿಯ ಕ್ರಿಸ್ ಗೇಲ್ ಕೇವಲ 9 ಎಸೆತಗಳಲ್ಲಿ 2 ಸಿಕ್ಸರ್ ಸಹಿತ 15 ರನ್ ಬಾರಿಸಿ ಪ್ಯಾಟ್ ಕಮಿನ್ಸ್ ಬೌಲಿಂಗ್‌ನಲ್ಲಿ ಕ್ಲೀನ್ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು. ಇನ್ನು ವಿಕೆಟ್ ಕೀಪರ್ ಬ್ಯಾಟರ್ ನಿಕೋಲಸ್ ಪೂರನ್ 4 ರನ್ ಬಾರಿಸಿ ಹೇಜಲ್‌ವುಡ್‌ಗೆ ವಿಕೆಟ್ ಒಪ್ಪಿಸಿದರೆ, ರೋಸ್ಟನ್ ಚೇಸ್ ಶೂನ್ಯ ಸುತ್ತಿ ಹೇಜಲ್‌ವುಡ್‌ಗೆ ಎರಡನೇ ಬಲಿಯಾದರು. ಈ ವೇಳೆ ವಿಂಡೀಸ್ 3.3 ಓವರ್‌ಗಳಲ್ಲಿ ಕೇವಲ 35 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.
ನಾಲ್ಕನೇ ವಿಕೆಟ್‌ಗೆ ಎವಿನ್ ಲೆವಿಸ್ ಹಾಗೂ ಶಿಮ್ರೋನ್ ಹೆಟ್ಮೇಯರ್ ಜೋಡಿ 35 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. 26 ಎಸೆತಗಳಲ್ಲಿ 5 ಬೌಂಡರಿ ಸಹಿತ 29 ರನ್ ಬಾರಿಸಿ ಅಪಾಯಕಾರಿಯಾಗುವ ಮುನ್ಸೂಚನೆ ನೀಡಿದ್ದ ಎವಿನ್ ಲೆವಿಸ್ ಅವರನ್ನು ಬಲಿಪಡೆಯುವಲ್ಲಿ ಆಡಂ ಜಂಪಾ ಯಶಸ್ವಿಯಾದರು. ಇದರ ಬೆನ್ನಲ್ಲೇ ಶಿಮ್ರೊನ್ ಹೆಟ್ಮೇಯರ್ 27 ರ್ ಬಾರಿಸಿ ಹೇಜಲ್‌ವುಡ್‌ಗೆ ಮೂರನೇ ಬಲಿಯಾದರು.
ಪೊಲ್ಲಾರ್ಡ್-ಬ್ರಾವೋ ಜತೆಯಾಟ: 91 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡಿದ್ದ ವಿಂಡೀಸ್ ತಂಡಕ್ಕೆ ನಾಯಕ ಕೀರನ್ ಪೊಲ್ಲಾರ್ಡ್ ಹಾಗೂ ವೃತ್ತಿಜೀವನದ ಕೊನೆಯ ಅಂತಾರಾಷ್ಟ್ರೀಯ ಪಂದ್ಯವನ್ನಾಡುತ್ತಿರುವ ಡ್ವೇನ್ ಬ್ರಾವೋ ಆರನೇ ವಿಕೆಟ್‌ಗೆ 35 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಬ್ರಾವೋ 12 ಎಸೆತಗಳನ್ನು ಎದುರಿಸಿ ಒಂದು ಸಿಕ್ಸರ್ ಸಹಿತ 10 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.
ನಾಯಕನ ಆಟವಾಡಿದ ಪೊಲ್ಲಾರ್ಡ್: ಅಗ್ರಕ್ರಮಾಂಕದ ಬ್ಯಾಟರ್‌ಗಳು ಉತ್ತಮ ಆರಂಭ ಪಡೆದ ಹೊರತಾಗಿಯೂ, ದೊಡ್ಡ ಮೊತ್ತವನ್ನಾಗಿ ಪರಿವರ್ತಿಸಲು ವಿಫಲವಾಗಿದ್ದರು. ಆದರೆ ಮಧ್ಯಮ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ಪೊಲ್ಲಾರ್ಡ್ ಸಮಯೋಚಿತ ಬ್ಯಾಟಿಂಗ್ ನಡೆಸುವ ಮೂಲಕ ತಂಡಕ್ಕೆ ಆಸರೆಯಾದರು. ಪೊಲ್ಲಾರ್ಡ್ 31 ಎಸೆತಗಳನ್ನು ಎದುರಿಸಿ 4 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 44 ರನ್ ಬಾರಿಸಿ 20ನೇ ಓವರ್‌ನಲ್ಲಿ ಸ್ಟಾರ್ಕ್‌ಗೆ ವಿಕೆಟ್ ಒಪ್ಪಿಸಿದರು. ಕೊನೆಯಲ್ಲಿ ಆಂಡ್ರೆ ರಸೆಲ್ ಸತತ 2 ಸಿಕ್ಸರ್ ಸಿಡಿಸುವ ಮೂಲಕ ತಂಡದ ಮೊತ್ತವನ್ನು 155ರ ಗಡಿ ದಾಟಿಸಿದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.