T20 World Cup: ಸುಲಭವಾಗಿ ಐರ್ಲೆಂಡ್ ಬೇಟೆಯಾಡಿದ ಲಂಕಾ ಸಿಂಹಗಳು...!

By Naveen KodaseFirst Published Oct 23, 2022, 12:32 PM IST
Highlights

* ಐರ್ಲೆಂಡ್ ಎದುರು ಭರ್ಜರಿ ಜಯ ಸಾಧಿಸಿದ ಶ್ರೀಲಂಕಾ
* ಐರ್ಲೆಂಡ್ ಎದುರು 9 ವಿಕೆಟ್ ಸುಲಭ ಜಯ ಸಾಧಿಸಿದ ಲಂಕಾ ಸಿಂಹಗಳು
* ಸೂಪರ್ 12 ಹಂತದಲ್ಲಿ ಶುಭಾರಂಭ ಮಾಡಿದ ದಶುನ್ ಶನಕಾ ಪಡೆ

ಹೋಬರ್ಟ್‌(ಅ.23): ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಸೂಪರ್ 12 ಹಂತದ ಲಂಕಾ ಪಾಲಿನ ಮೊದಲ ಪಂದ್ಯದಲ್ಲಿ ದಶುನ್ ಶನಕಾ ನೇತೃತ್ವದ ಶ್ರೀಲಂಕಾ ತಂಡವು ಐರ್ಲೆಂಡ್ ವಿರುದ್ದ 9 ವಿಕೆಟ್‌ಗಳ ಸುಲಭ ಗೆಲುವು ದಾಖಲಿಸಿ ಶುಭಾರಂಭ ಮಾಡಿದೆ. ಐರ್ಲೆಂಡ್ ನೀಡಿದ್ದ 129 ರನ್‌ಗಳ ಸಾಧಾರಣ ಗುರಿ ಬೆನ್ನತ್ತಿದ ಲಂಕಾದ ಸಿಂಹಗಳು ಸುಲಭ ಗೆಲುವು ದಾಖಲಿಸಿದೆ. ವಿಕೆಟ್‌ ಕೀಪರ್‌ ಬ್ಯಾಟರ್ ಕುಸಾಲ್ ಮೆಂಡಿಸ್ ಅಜೇಯ ಅರ್ಧಶತಕ ಸಿಡಿಸಿ ತಂಡವನ್ನು ಸುಲಭವಾಗಿ ಗೆಲುವಿನ ದಡ ಸೇರಿಸಿದರು.

ಇಲ್ಲಿನ ಬೆಲ್ಲಿರಿವ್ ಓವೆಲ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಐರ್ಲೆಂಡ್ ನೀಡಿದ್ದ ಸಾಧಾರಣ ಗುರಿ ಬೆನ್ನತ್ತಿದ ಲಂಕಾ ತಂಡಕ್ಕೆ ವಿಕೆಟ್ ಕೀಪರ್ ಬ್ಯಾಟರ್ ಕುಸಾಲ್ ಮೆಂಡಿಸ್ ಹಾಗೂ ಧನಂಜಯ ಡಿ ಸಿಲ್ವಾ ಮೊದಲ ವಿಕೆಟ್‌ಗೆ 63 ರನ್‌ಗಳ ಜತೆಯಾಟವಾಡುವ ಮೂಲಕ ಉತ್ತಮ ಆರಂಭ ಒದಗಿಸಿಕೊಟ್ಟರು. ಚುರುಕಿನ ಬ್ಯಾಟಿಂಗ್ ನಡೆಸಿದ ಧನಂಜಯ ಡಿ ಸಿಲ್ವಾ 25 ಎಸೆತಗಳಲ್ಲಿ 2 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 31 ರನ್‌ ಬಾರಿಸಿ ಡೆಲ್ನೆಗೆ ವಿಕೆಟ್ ಒಪ್ಪಿಸಿದರು. 

Sri Lanka start off their Super 12 campaign in style 👏 | | 📝: https://t.co/g8FzZKEhgT pic.twitter.com/hS7iOYxFMV

— T20 World Cup (@T20WorldCup)

ಗೆಲುವಿನ ದಡ ಸೇರಿಸಿದ ಅಸಲಂಕಾ-ಮೆಂಡಿಸ್ ಜೋಡಿ: ಸಾಧಾರಣ ಗುರಿಯಾಗಿದ್ದರಿಂದ ಧನಂಜಯ ಡಿ ಸಿಲ್ವಾ ವಿಕೆಟ್ ಪತನದ ಬಳಿಕವೂ ಲಂಕಾ ತಂಡವು ಆತಂಕಕ್ಕೆ ಒಳಗಾಗಲಿಲ್ಲ. ಎರಡನೇ ವಿಕೆಟ್‌ಗೆ ಚರಿತ್ ಅಸಲಂಕಾ ಹಾಗೂ ಕುಸಾಲ್ ಮೆಂಡಿಸ್ ಕೇವಲ 40 ಎಸೆತಗಳಲ್ಲಿ ಮುರಿಯದ 70 ರನ್‌ಗಳ ಜತೆಯಾಟವಾಡುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು. ಕುಸಾಲ್ ಮೆಂಡಿಸ್ 43 ಎಸೆತಗಳಲ್ಲಿ 5 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ ಅಜೇಯ 68 ರನ್ ಬಾರಿಸಿದರೆ, ಮತ್ತೊಂದು ತುದಿಯಲ್ಲಿ ಚರಿತ್ ಅಸಲಂಕಾ 22 ಎಸೆತಗಳಲ್ಲಿ 2 ಬೌಂಡರಿ ಸಹಿತ 31 ರನ್ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.

T20 World Cup: ಲಂಕಾ ಎದುರು ಟಾಸ್ ಗೆದ್ದ ಐರ್ಲೆಂಡ್ ಬ್ಯಾಟಿಂಗ್ ಆಯ್ಕೆ

ಇದಕ್ಕೂ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಐರ್ಲೆಂಡ್ ತಂಡವು ಉತ್ತಮ ಆರಂಭ ಪಡೆಯಲು ವಿಫಲವಾಯಿತು. ಅರ್ಹತಾ ಸುತ್ತಿನ ಕೊನೆಯ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ದ 9 ವಿಕೆಟ್‌ ಜಯ ದಾಖಲಿಸಿದ್ದ ಐರ್ಲೆಂಡ್ ತಂಡವು, ಲಂಕಾ ಎದುರು ಅದೇ ರೀತಿಯ ಪ್ರದರ್ಶನ ಮರುಕಳಿಸಲು ವಿಫಲವಾಯಿತು. ನಾಯಕ ಆಂಡ್ರ್ಯೂ ಬಲ್ಬೈರ್ನಿ ಒಂದು ರನ್ ಬಾರಿಸಿ ಲಹಿರು ಕುಮಾರಗೆ ವಿಕೆಟ್ ಒಪ್ಪಿಸಿದರೆ, ವಿಕೆಟ್ ಕೀಪರ್ ಬ್ಯಾಟರ್ ಲಾರ್ಕನ್ ಟಕ್ಕರ್ 10 ರನ್ ಬಾರಿಸಿ ಮಿಸ್ಟ್ರಿ ಸ್ಪಿನ್ನರ್ ಖ್ಯಾತಿಯ ಮಹೀಶ್ ತೀಕ್ಷಣ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸಿದರು. ಇನ್ನು 25 ಎಸೆತಗಳಲ್ಲಿ 34 ರನ್ ಬಾರಿಸಿ ಅಪಾಯಕಾರಿಯಾಗುವ ಮುನ್ಸೂಚನೆ ನೀಡಿದ್ದ ಐರ್ಲೆಂಡ್ ಸ್ಪೋಟಕ ಆರಂಭಿಕ ಬ್ಯಾಟರ್ ಪೌಲ್ ಸ್ಟರ್ಲಿಂಗ್ ಅವರಿಗೆ ಧನಂಜಯ ಡಿ ಸಿಲ್ವಾ ಪೆವಿಲಿಯನ್ ಹಾದಿ ತೋರಿಸಿದರು.

ಇನ್ನು ಮಧ್ಯಮ ಕ್ರಮಾಂಕದಲ್ಲಿ ಹ್ಯಾರಿ ಟೆಕ್ಟರ್ 42 ಎಸೆತಗಳನ್ನು ಎದುರಿಸಿ 45 ರನ್ ಬಾರಿಸುವ ಮೂಲಕ ಅಲ್ಪಮೊತ್ತಕ್ಕೆ ಕುಸಿಯುವ ಭೀತಿಯಲ್ಲಿದ್ದ ಐರ್ಲೆಂಡ್ ತಂಡಕ್ಕೆ ಆಸರೆಯಾದರು. ಟೆಕ್ಟರ್‌ಗೆ ಮತ್ತೊಂದು ತುದಿಯಲ್ಲಿ ಉತ್ತಮ ಸಾಥ್ ದೊರೆಯಲಿಲ್ಲ. ಪರಿಣಾಮ ಐರ್ಲೆಂಡ್ ತಂಡವು ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು ಕೇವಲ 128 ರನ್ ಗಳಿಸಲಷ್ಟೇ ಶಕ್ತವಾಯಿತು.

ಶ್ರೀಲಂಕಾ ಕ್ರಿಕೆಟ್ ತಂಡದ ಪರ ಮಿಸ್ಟ್ರಿ ಸ್ಪಿನ್ನರ್‌ಗಳಾದ ವನಿಂದು ಹಸರಂಗ ಹಾಗೂ ಮಹೀಶ್ ತೀಕ್ಷಣ ತಲಾ ಎರಡು ವಿಕೆಟ್ ಉರುಳಿಸಿದರೆ, ಧನಂಜಯ ಡಿ ಸಿಲ್ವಾ, ಲಹಿರು ಕುಮಾರ, ಚಮಿಕಾ ಕರುಣರತ್ನೆ ಮತ್ತು ಧನಂಜಯ ಡಿ ಸಿಲ್ವಾ ತಲಾ ಒಂದೊಂದು ವಿಕೆಟ್ ಪಡೆದರು.

click me!