T20 World Cup: ಹರಿಣಗಳೆದುರು ಹೀನಾಯ ಸೋಲುಂಡ ಬಾಂಗ್ಲಾದೇಶ

Published : Oct 27, 2022, 12:20 PM ISTUpdated : Oct 27, 2022, 12:26 PM IST
T20 World Cup: ಹರಿಣಗಳೆದುರು ಹೀನಾಯ ಸೋಲುಂಡ ಬಾಂಗ್ಲಾದೇಶ

ಸಾರಾಂಶ

ಬಾಂಗ್ಲಾದೇಶ ಎದುರು ಭರ್ಜರಿ ಜಯ ಸಾಧಿಸಿದ ದಕ್ಷಿಣ ಆಫ್ರಿಕಾ ಆಕರ್ಷಕ ಶತಕ ಸಿಡಿಸಿ ಅಬ್ಬರಿಸಿದ ರಿಲೆ ರೂಸೌ ಬಾಂಗ್ಲಾದೇಶ ಎದುರು 104 ರನ್‌ಗಳ ಜಯ ಸಾಧಿಸಿದ ಹರಿಣಗಳು

ಸಿಡ್ನಿ(ಅ.27): ಎನ್ರಿಚ್ ನೊಕಿಯ ಹಾಗೂ ತಬ್ರಿಜ್ ಶಮ್ಸಿ ಮಾರಕ ದಾಳಿಗೆ ತತ್ತರಿಸಿದ ಬಾಂಗ್ಲಾದೇಶ ತಂಡವು ಕೇವಲ 101 ರನ್‌ಗಳಿಗೆ ಸರ್ವಪತನ ಕಂಡಿದೆ. ಈ ಮೂಲಕ ದಕ್ಷಿಣ ಆಫ್ರಿಕಾ ಎದುರು ಶಕೀಬ್ ಅಲ್ ಹಸನ್ ಪಡೆ 104 ರನ್‌ಗಳ ಹೀನಾಯ ಸೋಲು ಅನುಭವಿಸಿದೆ. ಜಿಂಬಾಬ್ವೆ ಎದುರಿನ ಪಂದ್ಯವು ಮಳೆಯಿಂದ ರದ್ದಾಗಿತ್ತು. ಹೀಗಾಗಿ ಇದೀಗ ಎರಡನೇ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸುವ ಮೂಲಕ ಸೆಮೀಸ್‌ನತ್ತ ದಕ್ಷಿಣ ಆಫ್ರಿಕಾ ತಂಡವು ದಿಟ್ಟ ಹೆಜ್ಜೆಯಿಟ್ಟಿದೆ.

ಇಲ್ಲಿನ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ದಕ್ಷಿಣ ಆಫ್ರಿಕಾ ನೀಡಿದ್ದ 206 ರನ್‌ಗಳ ಸವಾಲಿನ ಗುರಿ ಬೆನ್ನತ್ತಿದ ಬಾಂಗ್ಲಾದೇಶ ತಂಡವು ಮೊದಲ ಓವರ್‌ನಲ್ಲೇ ಸ್ಪೋಟಕ ಆರಂಭವನ್ನೇ ಪಡೆಯಿತು. ಮೊದಲ ಓವರ್‌ನಲ್ಲೇ ಬಾಂಗ್ಲಾದೇಶ ತಂಡವು 17 ರನ್ ಬಾರಿಸುವ ಮೂಲಕ ದಿಟ್ಟ ಆರಂಭವನ್ನು ಪಡೆಯಿತು. ಆದರೆ ವೇಗಿ ಏನ್ರಿಚ್‌ ನೋಕಿಯ ಮಾರಕ ದಾಳಿ ನಡೆಸುವ ಮೂಲಕ ಬಾಂಗ್ಲಾದೇಶಕ್ಕೆ ಬಿಗ್ ಶಾಕ್ ನೀಡಿದರು. ಸೌಮ್ಯ ಸರ್ಕಾರ್ 15 ರನ್ ಬಾರಿಸಿದರೆ, ಮತ್ತೋರ್ವ ಆರಂಭಿಕ ಬ್ಯಾಟರ್ ನಜ್ಮುಲ್ ಹೊಸೈನ್ 9 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಇನ್ನು ಲಿಟನ್ ದಾಸ್ 34 ರನ್ ಬಾರಿಸುವ ಮೂಲಕ ತಂಡಕ್ಕೆ ಕೊಂಚ ಆಸರೆಯಾಗಲು ಯತ್ನಿಸಿದರಾದರೂ, ಮತ್ತೊಂದು ತುದಿಯಲ್ಲಿ ಉತ್ತಮ ಸಾಥ್ ದೊರೆಯಲಿಲ್ಲ.

ಕೈಕೊಟ್ಟ ಮಧ್ಯಮ ಕ್ರಮಾಂಕ: ಬೃಹತ್ ಮೊತ್ತ ಬೆನ್ನತ್ತಿದ ಬಾಂಗ್ಲಾದೇಶ ಅಗ್ರಕ್ರಮಾಂಕದಲ್ಲಿ ದಿಢೀರ್ ವಿಕೆಟ್ ಕಳೆದುಕೊಂಡ ಬಾಂಗ್ಲಾದೇಶ ತಂಡವು ಮಧ್ಯಮ ಕ್ರಮಾಂಕದಲ್ಲೂ ಜವಾಬ್ದಾರಿಯುತ ಪ್ರದರ್ಶನ ತೋರಲು ವಿಫಲವಾಯಿತು. ನಾಯಕ ಶಕೀಬ್ ಅಲ್ ಹಸನ್ ಹಾಗೂ ಅಫಿಫ್ ಹೊಸೈನ್‌ ತಲಾ ಒಂದೊಂದು ರನ್ ಬಾರಿಸಿ ವಿಕೆಟ್‌ ಒಪ್ಪಿಸಿಕೊಟ್ಟರು. ಇನ್ನು ಮೆಹದಿ ಹಸನ್(11), ಮೊಸದೆಕ್ ಹೊಸೈನ್(0) ನೂರಲ್ ಹಸನ್ ಕೂಡಾ ಅಲ್ಪ ಮೊತ್ತಕ್ಕೆ ವಿಕೆಟ್ ಒಪ್ಪಿಸುವ ಮೂಲಕ ನಿರಾಸೆ ಅನುಭವಿಸಿದರು.

ದಕ್ಷಿಣ ಆಫ್ರಿಕಾ ತಂಡದ ಪರ ಮಾರಕ ದಾಳಿ ನಡೆಸಿದ ಏನ್ರಿಚ್ ನೊಕಿಯ 10 ರನ್ ನೀಡಿ 4 ವಿಕೆಟ್ ಕಬಳಿಸಿದರೆ, ತಬ್ರಿಜ್ ಶಮ್ಸಿ 3 ಹಾಗೂ ಕೇಶವ್ ಮಹರಾಜ್ ಮತ್ತು ಕಗಿಸೋ ರಬಾಡ ತಲಾ ಒಂದೊಂದು ವಿಕೆಟ್ ಪಡೆದರು.

T20 World Cup: ರೂಸೌ ಸಿಡಿಲಬ್ಬರದ ಶತಕ, ಬಾಂಗ್ಲಾಗೆ ಕಠಿಣ ಗುರಿ ನೀಡಿದ ದಕ್ಷಿಣ ಆಫ್ರಿಕಾ

ಇದಕ್ಕೂ ಮೊದಲು ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ತಂಡದ ನಾಯಕ ತೆಂಬ ಬವುಮಾ ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡರು. ಆದರೆ ದಕ್ಷಿಣ ಆಫ್ರಿಕಾ ತಂಡವು ಮೊದಲ ಓವರ್‌ನ ಕೊನೆಯ ಎಸೆತದಲ್ಲಿ ನಾಯಕ ತೆಂಬಾ ಬವುಮಾ ವಿಕೆಟ್‌ ಕಳೆದುಕೊಂಡು ಆಘಾತಕ್ಕೆ ಒಳಗಾಯಿತು. ವೇಗಿ ಟಸ್ಕಿನ್ ಅಹಮದ್ ಬೌಲಿಂಗ್‌ನಲ್ಲಿ ಬವುಮಾ ನೂರುಲ್ ಹಸನ್‌ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರು.

ಡಿ ಕಾಕ್‌-ರೂಸೌ ಬ್ಯಾಟಿಂಗ್ ಜುಗಲ್ಬಂದಿ: ದಕ್ಷಿಣ ಆಫ್ರಿಕಾ ನಾಯಕ ಬವುಮಾ ಕೇವಲ 2 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಬಳಿಕ ಎರಡನೇ ವಿಕೆಟ್‌ಗೆ ಜತೆಯಾದ ಕ್ವಿಂಟನ್ ಡಿ ಕಾಕ್ ಹಾಗೂ ರಿಲೇ ರೂಸೌ ಆಕರ್ಷಕ ಶತಕದ ಜತೆಯಾಟವಾಡುವ ಮೂಲಕ ಆರಂಭಿಕ ಸಂಕಷ್ಟದಲ್ಲಿದ್ದ ದಕ್ಷಿಣ ಆಫ್ರಿಕಾ ತಂಡವನ್ನು ಬೃಹತ್ ಮೊತ್ತದತ್ತ ಕೊಂಡೊಯ್ಯುವಲ್ಲಿ ಯಸಸ್ವಿಯಾದರು. ಅದರಲ್ಲೂ ರೂಸೌ, ಬಾಂಗ್ಲಾದೇಶ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದರು. ಎರಡನೇ ವಿಕೆಟ್‌ಗೆ ರಿಲೇ ರೂಸೌ ಹಾಗೂ ಕ್ವಿಂಟನ್ ಡಿ ಕಾಕ್ ಜೋಡಿ 168 ರನ್‌ಗಳ ಜತೆಯಾಟವಾಡುವ ಮೂಲಕ ತಂಡ ಮೊತ್ತವನ್ನು 170ರ ಗಡಿ ತಲುಪಿಸಿದರು. ಸ್ಪೋಟಕ ಬ್ಯಾಟಿಂಗ್ ನಡೆಸಿದ ಕ್ವಿಂಟನ್ ಡಿ ಕಾಕ್‌ ಕೇವಲ 38 ಎಸೆತಗಳಲ್ಲಿ 7 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 63 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಇನ್ನು ಭಾರತ ವಿರುದ್ದದ ಕೊನೆಯ ಟಿ20 ಪಂದ್ಯದಲ್ಲಿ ಶತಕ ಚಚ್ಚಿದ್ದ ರೂಸೌ, ಇದೀಗ ತಾವಾಡಿದ ಎರಡನೇ ಇನಿಂಗ್ಸ್‌ನಲ್ಲಿ ಮತ್ತೊಂದು ಆಕರ್ಷಕ ಶತಕ ಸಿಡಿಸಿ ಸಂಭ್ರಮಿಸಿದರು. ರೂಸೌ 56 ಎಸೆತಗಳಲ್ಲಿ 7 ಬೌಂಡರಿ ಹಾಗೂ 8 ಸಿಕ್ಸರ್ ಸಹಿತ 109 ರನ್‌ ಬಾರಿಸಿ ತಂಡಕ್ಕೆ ಆಸರೆಯಾದರು. 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಡಿಕಾಕ್‌ ಡ್ಯಾಶಿಂಗ್‌ ಆಟದ ಮುಂದೆ ಥಂಡಾ ಹೊಡೆದ ಟೀಮ್‌ ಇಂಡಿಯಾ!
ಭಾರತ-ಪಾಕಿಸ್ತಾನ ಟಿ20 ವಿಶ್ವಕಪ್ ಪಂದ್ಯದ ಟಿಕೆಟ್ ಮಾರಾಟ ಆರಂಭ, 450 ರೂಗೆ ಬುಕಿಂಗ್ ಹೇಗೆ?