T20 World Cup: ಚೊಚ್ಚಲ ಪಂದ್ಯದಲ್ಲೇ ಮುಗ್ಗರಿಸಿದ್ದ ಆಸ್ಟ್ರೇಲಿಯಾಗಿಂದು ಲಂಕಾ ಅಗ್ನಿ ಪರೀಕ್ಷೆ

By Naveen Kodase  |  First Published Oct 25, 2022, 10:20 AM IST

ಟಿ20 ವಿಶ್ವಕಪ್‌ ಟೂರ್ನಿಯಲ್ಲಿಂದು ಆಸೀಸ್‌-ಲಂಕಾ ಸೆಣಸು
ಪರ್ತ್‌ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯ
ಮೊದಲ ಪಂದ್ಯ ಸೋತಿರುವ ಆಸೀಸ್‌ಗೆ ಗೆಲುವಿನ ಲಯಕ್ಕೆ ಬರುವ ಕಾತರ


ಪರ್ತ್(ಅ.25): ಟಿ20 ವಿಶ್ವಕಪ್‌ನ ಆರಂಭಿಕ ಪಂದ್ಯದಲ್ಲಿ ನ್ಯೂಜಿಲೆಂಡ್‌ ವಿರುದ್ಧದ ಹೀನಾಯ ಸೋಲನುಭವಿಸಿ ಆಘಾತದಲ್ಲಿರುವ ಹಾಲಿ ಚಾಂಪಿಯನ್‌ ಆಸ್ಪ್ರೇಲಿಯಾ ಮೊದಲ ಗೆಲುವಿಗೆ ಕಾತರಿಸುತ್ತಿದ್ದು, ಮಂಗಳವಾರ ಶ್ರೀಲಂಕಾ ವಿರುದ್ಧ ಸೆಣಸಾಡಲಿದೆ. ವಿಶ್ವಕಪ್‌ಗೂ ಮುನ್ನ ತವರಿನಲ್ಲಿ ಇಂಗ್ಲೆಂಡ್‌ ವಿರುದ್ಧ ಟಿ20 ಸರಣಿ ಸೋತು, ಬಳಿಕ ಅಭ್ಯಾಸ ಪಂದ್ಯದಲ್ಲಿ ಭಾರತಕ್ಕೆ ಶರಣಾಗಿದ್ದ ಆಸೀಸ್‌ ಗೆಲುವಿಗೆ ಹಳಿಗೆ ಮರಳಬೇಕಾದ ಒತ್ತಡದಲ್ಲಿದೆ. 

ಕಿವೀಸ್‌ ವಿರುದ್ಧದ ಸೋಲು ತಂಡದ ನೆಟ್‌ ರನ್‌ರೇಟ್‌ಗೆ ಪೆಟ್ಟು ನೀಡಿದ್ದು ಸುಧಾರಿತ ಆಟವಾಡದಿದ್ದರೆ ಗುಂಪು ಹಂತದಲ್ಲೇ ಹೊರಬೀಳುವ ಸಾಧ್ಯತೆ ಇದೆ.  ನ್ಯೂಜಿಲೆಂಡ್ ವಿರುದ್ದ ಆಸ್ಟ್ರೇಲಿಯಾದ ತ್ರಿವಳಿ ಮಾರಕ ವೇಗಿಗಳಾದ ಮಿಚೆಲ್ ಸ್ಟಾರ್ಕ್, ಜೋಶ್ ಹೇಜಲ್‌ವುಡ್ ಹಾಗೂ ಪ್ಯಟ್ ಕಮಿನ್ಸ್‌ ದುಬಾರಿಯಾಗಿದ್ದರು. ಇನ್ನು ಮಾರ್ಕಸ್ ಸ್ಟೋನಿಸ್ ಹಾಗೂ ಆಡಂ ಜಂಪಾ ಕೂಡಾ ಸರಿಸುಮಾರು 10ರ ಸರಾಸರಿಯಲ್ಲಿ ರನ್ ಬಿಟ್ಟುಕೊಟ್ಟಿದ್ದರು. ಆಸ್ಟ್ರೇಲಿಯಾ ವಿರುದ್ದ ಕಿವೀಸ್ ಆರಂಭಿಕರು ಸಿಡಿಲ್ಲಬ್ಬರದ ಆರಂಭವನ್ನು ಪಡೆದಿದ್ದರು.

Tap to resize

Latest Videos

undefined

ಇನ್ನು ನ್ಯೂಜಿಲೆಂಡ್ ನೀಡಿದ್ದ 201 ರನ್‌ಗಳ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ತಂಡವು ಉತ್ತಮ ಆರಂಭ ಪಡೆಯಲು ವಿಫಲವಾಗಿತ್ತು.ಡೇವಿಡ್ ವಾರ್ನರ್ ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿದರೆ, ಫಿಂಚ್, ಮಿಚೆಲ್ ಮಾರ್ಶ್, ಸ್ಟೋನಿಸ್ ಹಾಗೂ ಟಿಮ್ ಡೇವಿಡ್ ಕೂಡಾ ಹೊಣೆಯರಿತ ಪ್ರದರ್ಶನ ತೋರಲು ವಿಫಲವಾಗಿದ್ದರು. ಹೀಗಾಗಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ತಂಡವು ಸೆಮೀಸ್‌ಗೇರುವ ಕನಸನ್ನು ಜೀವಂತವಾಗಿರಿಸಿಕೊಳ್ಳಬೇಕಿದ್ದರೇ, ಲಂಕಾ ಎದುರು ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ. 

Ind vs Pak ಮತ್ತೆ ಮತ್ತೆ ನೋಡಬೇಕೆನಿಸುವ ಆ ಕೊನೆಯ 8 ಎಸೆತ..! ಕಿಂಗ್ ಕೊಹ್ಲಿಗೆ ಸೆಲ್ಯೂಟ್, ವಿಡಿಯೋ ವೈರಲ್ ..!

ಮತ್ತೊಂದೆಡೆ ಅರ್ಹತಾ ಸುತ್ತಿನ ಆರಂಭಿಕ ಆಘಾತದಿಂದ ಚೇತರಿಸಿಕೊಂಡು ಪ್ರಧಾನ ಸುತ್ತಿಗೇರಿರುವ ಶ್ರೀಲಂಕಾ ಮೊದಲ ಪಂದ್ಯದಲ್ಲಿ ಐರ್ಲೆಂಡ್‌ ವಿರುದ್ಧ ಗೆದ್ದಿದ್ದು, ಮತ್ತೊಂದು ಗೆಲುವಿಗೆ ಎದುರು ನೋಡುತ್ತಿದೆ. ಬಲಿಷ್ಠ ಆಸ್ಟ್ರೇಲಿಯಾ ಎದುರು ಶ್ರೀಲಂಕಾ ತಂಡವು ಗೆಲುವು ದಾಖಲಿಸಬೇಕಿದ್ದರೆ ಸಂಘಟಿತ ಪ್ರದರ್ಶನ ತೋರಬೇಕಿದೆ. ಕುಸಾಲ್ ಮೆಂಡಿಸ್, ಧನಂಜಯ ಡಿ ಸಿಲ್ವಾ, ಚರಿತ್ ಅಸಲಂಕಾ ಜತೆಗೆ ಮಧ್ಯಮ ಕ್ರಮಾಂಕದಲ್ಲಿ ಭನುಕಾ ರಾಜಪಕ್ಸಾ ಹಾಗೂ ದಶುನ್ ಶನಕಾ ಕೂಡಾ ಬ್ಯಾಟಿಂಗ್‌ನಲ್ಲಿ ತಂಡಕ್ಕೆ ಆಸರೆಯಾಗಬೇಕಿದೆ. ಇನ್ನು ಬೌಲಿಂಗ್‌ನಲ್ಲಿ ತಂಡದ ಟ್ರಂಪ್ ಕಾರ್ಡ್ ಸ್ಪಿನ್ನರ್ ಎನಿಸಿಕೊಂಡಿರುವ ವನಿಂದು ಹಸರಂಗ ಹಾಗೂ ಮಹೀಶ್ ತೀಕ್ಷಣ ಜತೆಗೆ ವೇಗಿಗಳಾದ ಲಹಿರು ಕುಮಾರ, ಬಿನುರಾ ಫರ್ನಾಂಡೋ ಮತ್ತು ಚಮಿಕ ಕರುಣರತ್ನೆ ಮಾರಕ ದಾಳಿ ನಡೆಸಿದರೆ, ಕಾಂಗರೂ ಪಡೆಯನ್ನು ಮಣಿಸುವುದು ಕಷ್ಟವೇನಲ್ಲ.

ಸಂಭಾವ್ಯ ತಂಡಗಳು ಹೀಗಿವೆ ನೋಡಿ

ಆಸ್ಟ್ರೇಲಿಯಾ: ಆ್ಯರೋನ್ ಫಿಂಚ್(ನಾಯಕ), ಡೇವಿಡ್ ವಾರ್ನರ್, ಮಿಚೆಲ್ ಮಾರ್ಶ್, ಗ್ಲೆನ್ ಮ್ಯಾಕ್ಸ್‌ವೆಲ್‌, ಮಾರ್ಕಸ್ ಸ್ಟೋನಿಸ್, ಟಿಮ್ ಡೇವಿಡ್, ಮ್ಯಾಥ್ಯೂ ವೇಡ್(ವಿಕೆಟ್ ಕೀಪರ್), ಪ್ಯಾಟ್ ಕಮಿನ್ಸ್‌, ಮಿಚೆಲ್ ಸ್ಟಾರ್ಕ್, ಆಡಂ ಜಂಪಾ, ಜೋಶ್ ಹೇಜಲ್‌ವುಡ್.

ಶ್ರೀಲಂಕಾ: ಪಥುಮ್ ನಿಸ್ಸಾಂಕ, ಕುಸಾಲ್ ಮೆಂಡಿಸ್(ವಿಕೆಟ್ ಕೀಪರ್), ಧನಂಜಯ ಡಿ ಸಿಲ್ವಾ, ಚರಿತ್ ಅಸಲಂಕಾ, ಭನುಕಾ ರಾಜಪಕ್ಸಾ, ದಶುನ್ ಶನಕಾ(ನಾಯಕ), ವನಿಂದು ಹಸರಂಗ, ಚಮಿಕಾ ಕರುಣರತ್ನೆ, ಮಹೀಶ್ ತೀಕ್ಷಣ, ಬಿನುರಾ ಫರ್ನಾಂಡೊ, ಲಹಿರು ಕುಮಾರ.

ಪಂದ್ಯ ಆರಂಭ: ಸಂಜೆ 4.30ಕ್ಕೆ, 
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌

click me!