
ಕೇಪ್ಟೌನ್(ಫೆ.22): 2023ರ ಐಸಿಸಿ ಮಹಿಳಾ ಟಿ20 ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಕಳೆದ ಬಾರಿ ರನ್ನರ್-ಅಪ್ ಭಾರತ ತಂಡಕ್ಕೆ 5 ಬಾರಿ ಚಾಂಪಿಯನ್ ಆಸ್ಪ್ರೇಲಿಯಾ ಸವಾಲು ಎದುರಾಗಲಿದೆ. ಪಂದ್ಯ ಗುರುವಾರ(ಫೆ.23) ನಡೆಯಲಿದೆ.
‘ಬಿ’ ಗುಂಪಿನಲ್ಲಿ ಸ್ಥಾನ ಪಡೆದಿದ್ದ ಹರ್ಮನ್‌ಪ್ರೀತ್ ಕೌರ್ ಬಳಗ 3 ಗೆಲುವು, 1 ಸೋಲಿನೊಂದಿಗೆ 6 ಅಂಕ ಸಂಪಾದಿಸಿ 2ನೇ ಸ್ಥಾನ ಪಡೆಯಿತು. ಆರಂಭಿಕ 2 ಪಂದ್ಯಗಳಲ್ಲಿ ಪಾಕಿಸ್ತಾನ, ವೆಸ್ಟ್ಇಂಡೀಸ್ ವಿರುದ್ಧ ಗೆದ್ದು ಬಳಿಕ ಇಂಗ್ಲೆಂಡ್‌ಗೆ ಶರಣಾದರೂ ಕೊನೆ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ ರೋಚಕ ಜಯ ಸಾಧಿಸಿ ಸೆಮೀಸ್ಗೇರಿದೆ. ಎಲ್ಲಾ 4 ಪಂದ್ಯ ಗೆದ್ದ ಮಾಜಿ ಚಾಂಪಿಯನ್ ಇಂಗ್ಲೆಂಡ್ ಗುಂಪಿನಲ್ಲಿ ಅಗ್ರಸ್ಥಾನಿಯಾಗಿಯೇ ಅಂತಿಮ 4ರ ಘಟ್ಟ ಪ್ರವೇಶಿಸಿತು. ಮತ್ತೊಂದೆಡೆ ಆಸೀಸ್ ಗುಂಪು ಹಂತದಲ್ಲಿ ಆಡಿರುವ ಎಲ್ಲಾ 4 ಪಂದ್ಯಗಳಲ್ಲೂ ಗೆಲುವು ಸಾಧಿಸಿದ್ದು, ‘ಎ’ ಗುಂಪಿನಲ್ಲಿ ನಂ.1 ಸ್ಥಾನ ಪಡೆದು ಉಪಾಂತ್ಯ ತಲುಪಿದೆ.
ಭಾರತ ತಂಡದ ಪರ ಆರಂಭಿಕ ಬ್ಯಾಟರ್ ಸ್ಮೃತಿ ಮಂಧನಾ ಅತ್ಯಂತ ಸ್ಥಿರ ಪ್ರದರ್ಶನದ ಮೂಲಕ ಗಮನ ಸೆಳೆಯುತ್ತಿದ್ದು, ತಂಡಕ್ಕೆ ಭರ್ಜರಿ ಆರಂಭ ಒದಗಿಸಿಕೊಡುತ್ತಿದ್ದಾರೆ. ಮಂಧನಾ 3 ಇನಿಂಗ್ಸ್‌ಗಳನ್ನಾಡಿ ಎರಡು ಅರ್ಧಶತಕ ಸಹಿತ 49.67ರ ಸರಾಸರಿಯಲ್ಲಿ 149 ರನ್ ಬಾರಿಸಿದ್ದಾರೆ. ಈ ಮೂಲಕ ಟೂರ್ನಿಯಲ್ಲಿ ಗರಿಷ್ಠ ರನ್ ಬಾರಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಇನ್ನು ವಿಕೆಟ್ ಕೀಪರ್ ಬ್ಯಾಟರ್ ರಿಚಾ ಘೋಷ್ ಕೂಡಾ 4 ಪಂದ್ಯಗಳನ್ನಾಡಿ 122 ರನ್ ಸಿಡಿಸಿದ್ದಾರೆ. ಇನ್ನುಳಿದಂತೆ ಸೆಮೀಸ್‌ನಲ್ಲಿ ಶಫಾಲಿ ವರ್ಮಾ, ಜೆಮಿಮಾ ರೋಡ್ರಿಗ್ಸ್, ಹರ್ಮನ್‌ಪ್ರೀತ್ ಕೌರ್ ಕೂಡಾ ಜವಾಬ್ದಾರಿಯುತ ಪ್ರದರ್ಶನ ತೋರಿದರೆ, ಆಸೀಸ್ ಎದುರು ಪ್ರಾಬಲ್ಯ ಮೆರೆಯಬಹುದಾಗಿದೆ.
Women's T20 World cup ಐರ್ಲೆಂಡ್ ವಿರುದ್ಧ ಡಕ್‌ವರ್ತ್ ನಿಯಮದನ್ವಯ ಗೆಲುವು, ಸೆಮಿಫೈನಲ್‌ಗೆ ಲಗ್ಗೆ ಇಟ್ಟ ಭಾರತ!
ಇನ್ನು ಬೌಲಿಂಗ್ ವಿಭಾಗದಲ್ಲಿ ಭಾರತ ಕೊಂಚ ದುರ್ಬಲವಾಗಿ ಗುರುತಿಸಿಕೊಂಡಿದ್ದು, ರೇಣುಕಾ ಸಿಂಗ್ ಹೊರತುಪಡಿಸಿ, ಉಳಿದ ಬೌಲರ್‌ಗಳು ಮಾರಕ ದಾಳಿ ನಡೆಸಲು ವಿಫಲವಾಗಿದ್ದಾರೆ. ದೀಪ್ತಿ ಶರ್ಮಾ, ಪೂಜಾ ವಸ್ತ್ರಾಕರ್, ರಾಜೇಶ್ವರಿ ಗಾಯಕ್ವಾಡ್ ಅವರು ಜವಾಬ್ದಾರಿಯುತ ಪ್ರದರ್ಶನ ತೋರಬೇಕಿದೆ.
ಇಂಗ್ಲೆಂಡ್ ವಿಶ್ವ ದಾಖಲೆ!
ಕೇಪ್ಟೌನ್: ಮಹಿಳಾ ಟಿ20 ವಿಶ್ವಕಪ್ ಇತಿಹಾಸದಲ್ಲೇ ಮೊದಲ ಬಾರಿ 200 ರನ್ ಕಲೆಹಾಕಿ ದಾಖಲೆ ಬರೆದ ಇಂಗ್ಲೆಂಡ್ ತಂಡ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ 114 ರನ್ ಗೆಲುವು ಸಾಧಿಸಿತು. ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ನ್ಯಾಥಲಿ ಸ್ಕೀವರ್ (40 ಎಸೆತಗಳಲ್ಲಿ 81), ಡ್ಯಾನಿಲ್ ವ್ಯಾಟ್(33 ಎಸೆತಗಳಲ್ಲಿ 59)ರ ಅಬ್ಬರದಿಂದಾಗಿ 5 ವಿಕೆಟ್ಗೆ 213 ರನ್ ಕಲೆಹಾಕಿತು. ಪಾಕಿಸ್ತಾನ 9 ವಿಕೆಟ್ಗೆ 99 ರನ್ ಗಳಿಸಿ ಸೋಲೊಪ್ಪಿಕೊಂಡಿತು.
ರ‍್ಯಾಂಕಿಂಗ್: ರಿಚಾಗೆ 20ನೇ, ರೇಣುಕಾಗೆ 5ನೇ ಸ್ಥಾನ
ದುಬೈ: ಭಾರತದ ವಿಕೆಟ್ ಕೀಪರ್ ಬ್ಯಾಟರ್ ರಿಚಾ ಘೋಷ್ ಐಸಿಸಿ ಮಹಿಳಾ ಟಿ20 ಬ್ಯಾಟರ್‌ಗಳ ರ‍್ಯಾಂಕಿಂಗ್ ಪಟ್ಟಿಯಲ್ಲಿ 16 ಸ್ಥಾನ ಜಿಗಿದು ಮೊದಲ ಬಾರಿಗೆ ಅಗ್ರ 20ರಲ್ಲಿ ಸ್ಥಾನ ಪಡೆದಿದ್ದಾರೆ. ಟಿ20 ವಿಶ್ವಕಪ್‌ನಲ್ಲಿ ವಿಂಡೀಸ್ ವಿರುದ್ಧ 41, ಇಂಗ್ಲೆಂಡ್ ವಿರುದ್ಧ 47 ರನ್ ಗಳಿಸಿದ್ದ ರಿಚಾ ವೃತ್ತಿಬದುಕಿನ ಶ್ರೇಷ್ಠ 20ನೇ ಸ್ಥಾನ ಪಡೆದಿದ್ದಾರೆ. ರಿಚಾ ಘೋಷ್ ಅಗ್ರ 20ರಲ್ಲಿರುವ ಭಾರತದ 5ನೇ ಆಟಗಾರ್ತಿ ಎನಿಸಿದ್ದಾರೆ. ಸ್ಮೃತಿ 3ನೇ ಸ್ಥಾನದಲ್ಲಿದ್ದರೆ, ಶಫಾಲಿ 10, ಜೆಮಿಮಾ 12, ಹರ್ಮನ್‌ಪ್ರೀತ್ 13ನೇ ಸ್ಥಾನದಲ್ಲಿದ್ದಾರೆ. ಇದೇ ವೇಳೆ ಬೌಲರ್‌ಗಳ ರಾರಯಂಕಿಂಗ್ ಪಟ್ಟಿಯಲ್ಲಿ ರೇಣುಕಾ ಸಿಂಗ್ 7 ಸ್ಥಾನ ಏರಿಕೆ ಕಂಡು ವೃತ್ತಿಬದುಕಿನ ಶ್ರೇಷ್ಠ 5ನೇ ಸ್ಥಾನ ಪಡೆದಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.