
ನವದೆಹಲಿ(ಫೆ.21): ಭಾರತ ಎದುರು ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಪಾಲ್ಗೊಂಡಿರುವ ಆಸ್ಟ್ರೇಲಿಯಾ ತಂಡಕ್ಕೆ ಗಾಯದ ಸಮಸ್ಯೆ ಇನ್ನಿಲ್ಲದಂತೆ ಕಾಡಲಾರಂಭಿಸಿದೆ. ಎಡ ಮೊಣಕೈ ಗಾಯಕ್ಕೆ ಒಳಗಾಗಿರುವ ಆಸ್ಟ್ರೇಲಿಯಾ ತಂಡದ ಸ್ಪೋಟಕ ಆರಂಭಿಕ ಬ್ಯಾಟರ್ ಡೇವಿಡ್ ವಾರ್ನರ್, ಭಾರತ ಎದುರಿನ ಇನ್ನುಳಿದ ಎರಡು ಟೆಸ್ಟ್ ಪಂದ್ಯದಿಂದ ಹೊರಬಿದ್ದಿದ್ದಾರೆ.
ಹೌದು, ಭಾರತ ಎದುರಿನ ಡೆಲ್ಲಿ ಟೆಸ್ಟ್ ಪಂದ್ಯದ ವೇಳೆ ಮೊದಲ ದಿನವೇ ವೇಗಿ ಮೊಹಮ್ಮದ್ ಸಿರಾಜ್ ಎಸೆದ ಬೌನ್ಸರ್ ಚೆಂಡು ನೇರವಾಗಿ ಡೇವಿಡ್ ವಾರ್ನರ್ ಎಡ ಮೊಣಕೈಗೆ ಅಪ್ಪಳಿಸಿತ್ತು. ಡೇವಿಡ್ ವಾರ್ನರ್ 15 ರನ್ ಗಳಿಸಿ ಮೊಹಮ್ಮದ್ ಶಮಿಗೆ ವಿಕೆಟ್ ಒಪ್ಪಿಸಿದ್ದರು. ಇದಾದ ಬಳಿಕ ನಡೆಸಲಾದ ಸ್ಯ್ಯಾನ್‌ನಲ್ಲಿ ವಾರ್ನರ್ ಅವರಿಗೆ ಹೇರ್‌ಲೈನ್ ಇಂಜುರಿಯಾಗಿರುವುದು(ಮೊಣಕೈನಲ್ಲಿ ತೆಳುವಾದ ಬಿರುಕು) ಪತ್ತೆಯಾಗಿತ್ತು.
ಡೇವಿಡ್ ವಾರ್ನರ್ ವಿಕೆಟ್ ಒಪ್ಪಿಸುವ ಮನ್ನ ಚೆಂಡೊಂದು ಅವರ ಹೆಲ್ಮೆಟ್‌ಗೆ ಅಪ್ಪಳಿಸಿತ್ತು. ಹೀಗಾಗಿ ಪ್ರವಾಸಿ ಆಸ್ಟ್ರೇಲಿಯಾ ತಂಡವು ಕನ್‌ಕಷನ್ ರೂಪದಲ್ಲಿ ಮ್ಯಾಟ್ ರೆನ್‌ಶೋ ಅವರನ್ನು ಎರಡನೇ ಇನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡಲು ಕಣಕ್ಕಿಳಿಸಿತ್ತು. ಸದ್ಯ ಡೇವಿಡ್ ವಾರ್ನರ್ ಸಿಡ್ನಿಯತ್ತ ಮುಖ ಮಾಡಿದ್ದು, ಟೆಸ್ಟ್ ಸರಣಿ ಮುಕ್ತಾಯದ ಬಳಿಕ ಮಾರ್ಚ್ 17ರಿಂದ ಭಾರತ ವಿರುದ್ದ ಆರಂಭವಾಗಲಿರುವ ಮೂರು ಪಂದ್ಯಗಳ ಏಕದಿನ ಸರಣಿಗೆ ವಾರ್ನರ್, ಆಸ್ಟ್ರೇಲಿಯಾ ತಂಡ ಕೂಡಿಕೊಳ್ಳುವ ವಿಶ್ವಾಸದಲ್ಲಿದ್ದಾರೆ.
ಗಾಯಕ್ಕೂ ಮುನ್ನವೇ ಡೇವಿಡ್ ವಾರ್ನರ್ ಅವರ ಬ್ಯಾಟಿಂಗ್ ಪ್ರದರ್ಶನ ಅಷ್ಟೇನು ಉತ್ತಮವಾಗಿರಲಿಲ್ಲ. ನಾಗ್ಪುರದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಡೇವಿಡ್ ವಾರ್ನರ್ ಕ್ರಮವಾಗಿ 01, 10 ರನ್ ಬಾರಿಸಿದ್ದರು. ಇನ್ನು ಡೆಲ್ಲಿ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ವಾರ್ನರ್ ಬ್ಯಾಟಿಂಗ್ ಕೇವಲ 15 ರನ್‌ಗಳಿಗೆ ಸೀಮಿತವಾಗಿತ್ತು. ಇನ್ನು ಎರಡನೇ ಇನಿಂಗ್ಸ್‌ನಲ್ಲಿ ಡೇವಿಡ್ ವಾರ್ನರ್ ಕಣಕ್ಕಿಳಿದಿರಲಿಲ್ಲ.
ಇನ್ನು ಡೇವಿಡ್ ವಾರ್ನರ್ ಅನುಪಸ್ಥಿತಿಯಲ್ಲಿ ಆಸ್ಟ್ರೇಲಿಯಾ ಆರಂಭಿಕರಾಗಿ ಕಣಕ್ಕಿಳಿದ ಟ್ರಾವಿಸ್ ಹೆಡ್, ಆಸ್ಟ್ರೇಲಿಯಾ ತಂಡಕ್ಕೆ ಸ್ಪೋಟಕ ಆರಂಭ ಒದಗಿಸಿಕೊಟ್ಟಿದ್ದರು. ಡೆಲ್ಲಿ ಟೆಸ್ಟ್ ಪಂದ್ಯದಲ್ಲಿ ಟ್ರಾವಿಸ್ ಹೆಡ್ ಚುರುಕಿನ 43 ರನ್ ಗಳಿಸಿದ್ದರು. ಇದೀಗ ಆಸ್ಟ್ರೇಲಿಯಾ ತಂಡದ ಹೆಡ್ ಕೋಚ್ ಆಂಡ್ರ್ಯೂ ಮೆಕ್‌ಡೊನಾಲ್ಡ್, ಡೇವಿಡ್ ವಾರ್ನರ್ ಅನುಪಸ್ಥಿತಿಯಲ್ಲಿ ಟ್ರಾವಿಸ್ ಹೆಡ್, ಆಸ್ಟ್ರೇಲಿಯಾ ಟೆಸ್ಟ್ ತಂಡದ ಆರಂಭಿಕರಾಗಿ ಮುಂದುವರೆಯಲಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.
'ತವರಿನಲ್ಲಿ ಟೀಂ ಇಂಡಿಯಾ ಸೋಲಿಸೋದು ಸುಲಭವಲ್ಲ' ರೋಹಿತ್ ಪಡೆ ಕೊಂಡಾಡಿದ ಪಾಕ್ ಕ್ರಿಕೆಟಿಗ
"ನಾವಿಲ್ಲಿಗೆ ಬರುವ ಮುನ್ನವೇ , ಆಸ್ಟ್ರೇಲಿಯಾದ ಆರಂಭಿಕರು ಯಾರಾದರೂ ಗಾಯಗೊಂಡರೆ, ಆರಂಭಿಕರನ್ನಾಗಿ ಟ್ರಾವಿಸ್ ಹೆಡ್ ಅವರನ್ನು ಕಣಕ್ಕಿಳಿಸಬೇಕಿ ಎಂದು ಈ ಮೊದಲೇ ತೀರ್ಮಾನಿಸಿದ್ದೆವು. ಯಾಕೆಂದರೆ, ಉಪಖಂಡದಲ್ಲಿನ ವಾತಾವರಣದಲ್ಲಿ ಅವರು ತುಂಬಾ ವೇಗವಾಗಿ ರನ್ ಗಳಿಸುವ ಕ್ಷಮತೆ ಹೊಂದಿದ್ದಾರೆ" ಎಂದು ಮೆಕ್‌ಡೊನಾಲ್ಡ್ ಹೇಳಿದ್ದಾರೆ.
ಎಲ್ಲಾ ವಾತಾವರಣದಲ್ಲೂ ಟ್ರಾವಿಡ್ ಹೆಡ್ ಅವರು ಆರಂಭಿಕರಾಗಿರಲಿದ್ದಾರೆ ಎಂದು ಹೇಳಲಾಗುವುದಿಲ್ಲ. ಆದರೆ ಉಪಖಂಡದ ಪ್ರವಾಸದಲ್ಲಿ ಅವರು ಆರಂಭಿಕರಾಗಿರಲಿದ್ದಾರೆ. ಇನ್ನುಳಿದ ಸರಣಿಗಳಲ್ಲಿ ಅವರು ಮಧ್ಯಮ ಕ್ರಮಾಂಕದ ಬ್ಯಾಟರ್ ಆಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಆಂಡ್ರ್ಯೂ ಮೆಕ್‌ಡೊನಾಲ್ಡ್ ಹೇಳಿದ್ದಾರೆ.
ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ 4 ಪಂದ್ಯಗಳ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಆಸ್ಟ್ರೇಲಿಯಾ ಆಘಾತಕಾರಿ ಸೋಲು ಅನುಭವಿಸಿದೆ. ಇನ್ನುಳಿದ ಎರಡು ಪಂದ್ಯಗಳಲ್ಲಿ ಕಮ್‌ಬ್ಯಾಕ್ ಮಾಡಲು ಆಸ್ಟ್ರೇಲಿಯಾ ತಂಡವು ಎದುರು ನೋಡುತ್ತಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.