ಭಾರತಕ್ಕೆ ಬರದೆ ಬಾಂಗ್ಲಾಗೆ ಬೇರೆ ಆಯ್ಕೆಯಿಲ್ಲ? ನಾಡಿದ್ದು ಐಸಿಸಿಯಿಂದ ಅಧಿಕೃತ ಘೋಷಣೆ?

Kannadaprabha News   | Kannada Prabha
Published : Jan 08, 2026, 08:26 AM IST
Bangladesh

ಸಾರಾಂಶ

ಟಿ20 ವಿಶ್ವಕಪ್ ಪಂದ್ಯಗಳನ್ನು ಶ್ರೀಲಂಕಾಕ್ಕೆ ಸ್ಥಳಾಂತರಿಸುವಂತೆ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ) ಮಾಡಿದ ಮನವಿಯನ್ನು ಐಸಿಸಿ ತಿರಸ್ಕರಿಸಿದೆ ಎಂದು ವರದಿಯಾಗಿದೆ. ಭದ್ರತಾ ಸಮಸ್ಯೆ ಇಲ್ಲದ ಕಾರಣ, ಪೂರ್ವನಿಗದಿಯಂತೆ ಟೂರ್ನಿಯಲ್ಲಿ ಪಾಲ್ಗೊಳ್ಳುವಂತೆ ಐಸಿಸಿ ಎಚ್ಚರಿಸಿದೆ ಎನ್ನಲಾಗಿದೆ.

ನವದೆಹಲಿ: ಫೆ.7ರಿಂದ ಆರಂಭಗೊಳ್ಳಲಿರುವ ಐಸಿಸಿ ಟಿ20 ವಿಶ್ವಕಪ್‌ನಲ್ಲಿ ತನ್ನ ಪಂದ್ಯಗಳನ್ನು ಭಾರತದಿಂದ ಶ್ರೀಲಂಕಾಕ್ಕೆ ಸ್ಥಳಾಂತರಿಸಿ ಎಂದು ಬಾಂಗ್ಲಾದೇಶ ಕ್ರಿಕೆಟ್‌ ಮಂಡಳಿ (ಬಿಸಿಬಿ) ಮಾಡಿದ್ದ ಮನವಿಯನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ (ಐಸಿಸಿ) ತಿರಸ್ಕರಿಸಿದೆ ಎಂದು ಪ್ರತಿಷ್ಠಿತ ಕ್ರಿಕೆಟ್‌ ವೆಬ್‌ಸೈಟ್‌ವೊಂದು ವರದಿ ಮಾಡಿದೆ. ಹೀಗಾಗಿ, ವಿಶ್ವಕಪ್‌ನಲ್ಲಿ ಪಾಲ್ಗೊಳ್ಳಲು ಬಾಂಗ್ಲಾದೇಶ ತಂಡ ಭಾರತಕ್ಕೆ ಆಗಮಿಸದೆ ಬೇರೆ ದಾರಿಯೇ ಇಲ್ಲ ಎನ್ನಲಾಗುತ್ತಿದೆ.

ಒಂದೆರಡು ದಿನಗಳ ಹಿಂದೆ ಬಿಸಿಬಿ ಜೊತೆ ಸಭೆ ನಡೆಸಿದ್ದ ಐಸಿಸಿ, ವಿಶ್ವಕಪ್‌ ಆಡಲು ಭಾರತಕ್ಕೆ ಪ್ರಯಾಣಿಸದೆ ಇದ್ದರೆ ಪಂದ್ಯಗಳನ್ನು ಬಿಟ್ಟುಕೊಡಬೇಕಾಗುತ್ತದೆ ಎಂದು ಎಚ್ಚರಿಸಿದೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಹಾಗೇನಾದರೂ ಆದರೆ, ಬಾಂಗ್ಲಾದೇಶ ವಿಶ್ವಕಪ್‌ನಿಂದಲೇ ಹೊರಬಿದ್ದಂತೆ.

ಮೂಲಗಳ ಪ್ರಕಾರ, ಸಭೆಯಲ್ಲಿ ಬಿಸಿಬಿ ಒತ್ತಾಯಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಐಸಿಸಿ, ‘ಭಾರತದಲ್ಲಿ ಯಾವುದೇ ಭದ್ರತೆ ಸಮಸ್ಯೆ ಇಲ್ಲ. ಈಗಾಗಲೇ ಹಲವು ಬಾರಿ ಪರಿಶೀಲನೆ ನಡೆಸಲಾಗಿದೆ. ಯಾವುದೇ ತಕರಾರಿಲ್ಲದೆ ಪೂರ್ವನಿಗದಿಂತೆ ಟೂರ್ನಿಯಲ್ಲಿ ಪಾಲ್ಗೊಳ್ಳಿ’ ಎಂದು ಎಚ್ಚರಿಸಿತು ಎನ್ನಲಾಗಿದೆ.

ಬಾಂಗ್ಲಾದೇಶ ಮನವಿಗೆ ಕ್ಯಾರೆ ಅನ್ನದ ಐಸಿಸಿ

ಮುಸ್ತಾಫಿಜುರ್‌ರನ್ನು ಬಿಸಿಸಿಐ ಐಪಿಎಲ್‌ನಿಂದ ಹೊರಹಾಕಿದ ಬಳಿಕ ಬಾಂಗ್ಲಾದೇಶ ಟಿ20 ವಿಶ್ವಕಪ್‌ ಆಡಲು ಭಾರತಕ್ಕೆ ಪ್ರಯಾಣಿಸುವುದಿಲ್ಲ ಎಂದು ಘೋಷಿಸಿತು. ಬಳಿಕ ತನ್ನ ಪಂದ್ಯಗಳನ್ನು ಶ್ರೀಲಂಕಾಗೆ ಸ್ಥಳಾಂತರಿಸುವಂತೆ ಐಸಿಸಿಗೆ ಮನವಿ ಸಲ್ಲಿಸಿತು. ಈ ಎಲ್ಲಾ ಬೆಳವಣಿಗೆ ಕುರಿತು ಐಸಿಸಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಶನಿವಾರ (ಜ.10) ಐಸಿಸಿ ಬಾಂಗ್ಲಾದೇಶದ ಪಂದ್ಯಗಳ ಬಗ್ಗೆ ಅಧಿಕೃತ ನಿರ್ಧಾರ ಕೈಗೊಂಡು, ಅದನ್ನು ಘೋಷಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಟಿ20 ವಿಶ್ವಕಪ್‌ನಲ್ಲಿ ಬಾಂಗ್ಲಾದೇಶ ‘ಸಿ’ ಗುಂಪಿನಲ್ಲಿದ್ದು, ಮೊದಲ 3 ಪಂದ್ಯಗಳನ್ನು ಕೋಲ್ಕತಾದಲ್ಲಿ, ಕೊನೆ ಪಂದ್ಯವನ್ನು ಮುಂಬೈನಲ್ಲಿ ಆಡಬೇಕಿದೆ. ಫೆ.7ರಂದು ವಿಂಡೀಸ್‌, ಫೆ.9ಕ್ಕೆ ಇಟಲಿ, ಫೆ.14ಕ್ಕೆ ಇಂಗ್ಲೆಂಡ್‌, ಫೆ.17ರಂದು ನೇಪಾಳ ವಿರುದ್ಧ ಪಂದ್ಯ ನಿಗದಿಯಾಗಿದೆ.

ಪಾಕ್‌ ಮನವಿಗೆ ಒಪ್ಪಿದಂತೆ ನಮ್ಮ ಮನವಿಯನ್ನೂ ಪರಿಗಣಿಸಿ: ಬಿಸಿಬಿ

ಬಾಂಗ್ಲಾದೇಶಕ್ಕೆ ಐಸಿಸಿ ಎಚ್ಚರಿಸಿದೆ ಎನ್ನುವ ಮಾಧ್ಯಮ ವರದಿಗಳನ್ನು ಬಾಂಗ್ಲಾ ಕ್ರಿಕೆಟ್‌ ಮಂಡಳಿ ತಿರಸ್ಕರಿಸಿದೆ. ಬುಧವಾರ ಸುದ್ದಿಗೋಷ್ಠಿ ನಡೆಸಿದ ಬಿಸಿಬಿ ಅಧ್ಯಕ್ಷ ಅಮಿನುಲ್‌ ಇಸ್ಲಾಂ ಹಾಗೂ ಕ್ರೀಡಾ ಸಚಿವಾಲಯದ ಸಲಹೆಗಾರ ಆಸಿಫ್‌ ನಜ್ರುಲ್‌, ‘ಬಾಂಗ್ಲಾದೇಶ ತಂಡ ಟಿ20 ವಿಶ್ವಕಪ್‌ನಲ್ಲಿ ಆಡಬೇಕು ಎನ್ನುವುದು ಐಸಿಸಿ ಇಚ್ಛೆ. ನಮಗೆ ಮನವಿಗೆ ಸ್ಪಂದಿಸುವುದಾಗಿ ಐಸಿಸಿ ಭರವಸೆ ನೀಡಿದೆ’ ಎಂದು.

‘ಇತ್ತೀಚೆಗೆ ಚಾಂಪಿಯನ್ಸ್‌ ಟ್ರೋಫಿ ಆಡಲು ಭಾರತ ತಂಡ ಪಾಕಿಸ್ತಾನಕ್ಕೆ ಹೋಗದಿರಲು ನಿರ್ಧರಿಸಿದಾಗ ಅದಕ್ಕೆ ಐಸಿಸಿ ಒಪ್ಪಿಗೆ ನೀಡಿ, ಹೈಬ್ರಿಡ್‌ ಮಾದರಿಯಲ್ಲಿ ಟೂರ್ನಿ ನಡೆಸಿತು. ಭಾರತದಲ್ಲಿ ಟಿ20 ವಿಶ್ವಕಪ್ ಆಡಲು ಹೋಗಲ್ಲ ಎಂದು ಪಾಕಿಸ್ತಾನ ಹೇಳಿದಾಗ, ಆ ದೇಶದ ಪಂದ್ಯಗಳನ್ನು ಶ್ರೀಲಂಕಾದಲ್ಲಿ ನಡೆಸಲು ಐಸಿಸಿ ಒಪ್ಪಿತು. ಅದೇ ರೀತಿ ನಮ್ಮ ಮನವಿಯನ್ನೂ ಐಸಿಸಿ ಪರಿಗಣಿಸಬೇಕು. ಭಾರತದಲ್ಲಿ ನಮಗೆ ಭದ್ರತಾ ಸಮಸ್ಯೆ ಇದೆ. ಇದು ಬಾಂಗ್ಲಾದೇಶದ ಮರ್ಯಾದೆ, ಆತ್ಮಗೌರವದ ಪ್ರಶ್ನೆ ಎಂದು ಐಸಿಸಿಗೆ ಮನವರಿಕೆ ಮಾಡಿಕೊಡಲು ಮತ್ತೊಮ್ಮೆ ಪ್ರಯತ್ನಿಸುತ್ತೇವೆ. ನಮ್ಮ ಪಂದ್ಯಗಳನ್ನು ಸ್ಥಳಾಂತರಿಸಲು ಐಸಿಸಿಯನ್ನು ಒಪ್ಪಿಸುತ್ತೇವೆ’ ಎಂದು ಅಮಿನುಲ್‌ ಹಾಗೂ ಆಸಿಫ್‌ ಹೇಳಿದರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಅರ್ಜುನ್ ತೆಂಡೂಲ್ಕರ್ ಮದುವೆ ಡೇಟ್ ಫಿಕ್ಸ್; ಹಸೆಮಣೆ ಏರಲು ರೆಡಿಯಾದ ಸಚಿನ್ ಪುತ್ರ!
ಮತ್ತೊಮ್ಮೆ ಸ್ಪೋಟಕ ಶತಕ ಸಿಡಿಸಿದ ವೈಭವ್ ಸೂರ್ಯವಂಶಿ; ಹರಿಣಗಳೆದುರು ಬೃಹತ್ ಮೊತ್ತ ದಾಖಲಿಸಿದ ಭಾರತ ಯುವ ಪಡೆ