
ಬೆನೋನಿ: ದಕ್ಷಿಣ ಆಫ್ರಿಕಾ ಅಂಡರ್ 19 ತಂಡದ ವಿರುದ್ಧದ ಯೂತ್ ಏಕದಿನ ಸರಣಿಯ ಮೂರನೇ ಪಂದ್ಯದಲ್ಲಿ ಭಾರತ ಅಂಡರ್ 19 ತಂಡದ ನಾಯಕ ವೈಭವ್ ಸೂರ್ಯವಂಶಿ ಮತ್ತು ಕೇರಳದ ಆಟಗಾರ ಆರೋನ್ ಜಾರ್ಜ್ ಸ್ಫೋಟಕ ಶತಕ ಸಿಡಿಸಿದ್ದಾರೆ. ಮೂರನೇ ಏಕದಿನ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುತ್ತಿರುವ ಭಾರತ ಬೃಹತ್ ಮೊತ್ತ ಕಲೆಹಾಕುವಲ್ಲಿ ಯಶಸ್ವಿಯಾಗಿದೆ. ನಿಗದಿತ 50 ಓವರ್‌ಗಳಲ್ಲಿ ಭಾರತ ಅಂಡರ್ 19 ತಂಡವು 7 ವಿಕೆಟ್ ಕಳೆದುಕೊಂಡು 388 ರನ್ ಬಾರಿಸಿದ್ದು, ದಕ್ಷಿಣ ಆಫ್ರಿಕಾ ಅಂಡರ್-19 ತಂಡಕ್ಕೆ ಕಠಿಣ ಗುರಿ ನೀಡಿದೆ.
ಟಾಸ್ ಸೋತು ಕ್ರೀಸ್‌ಗಿಳಿದ ಭಾರತದ ಪರ ವೈಭವ್ ಮತ್ತು ಆರೋನ್ ಜಾರ್ಜ್ ಸ್ಫೋಟಕ ಆರಂಭ ನೀಡಿದರು. ಎದುರಿಸಿದ ಮೊದಲ ಎಸೆತವನ್ನೇ ಬೌಂಡರಿಗಟ್ಟಿದ ವೈಭವ್, 24 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ವೈಭವ್ 63 ಎಸೆತಗಳಲ್ಲಿ ಶತಕ ಪೂರೈಸಿದರು. ಶತಕದ ನಂತರವೂ ತಮ್ಮ ಅಬ್ಬರ ಮುಂದುವರಿಸಿದ ವೈಭವ್, 9 ಬೌಂಡರಿ ಮತ್ತು 10 ಸಿಕ್ಸರ್‌ಗಳ ನೆರವಿನಿಂದ 74 ಎಸೆತಗಳಲ್ಲಿ 127 ರನ್ ಗಳಿಸಿ ಔಟಾದರು. ಮೊದಲ ವಿಕೆಟ್‌ಗೆ ವೈಭವ್ ಸೂರ್ಯವಂಶಿ ಹಾಗೂ ಆರೋನ್ ಜಾರ್ಜ್ ಕೇವಲ 25.4 ಓವರ್‌ನಲ್ಲಿ 227 ರನ್‌ಗಳ ಜತೆಯಾಟವಾಡಿತು.
ಇನ್ನು ಮತ್ತೊಂದು ತುದಿಯಲ್ಲಿ ಕೇರಳ ಮೂಲದ ಆರಂಭಿಕ ಬ್ಯಾಟರ್ ಆರೋನ್ ಜಾರ್ಜ್ ಕೇವಲ 91 ಎಸೆತಗಳಲ್ಲಿ ಆಕರ್ಷಕ ಶತಕ ಸಿಡಿಸಿದರು. ಅಂತಿಮವಾಗಿ ಅರೋನ್ ಜಾರ್ಜ್ 106 ಎಸೆತಗಳನ್ನು ಎದುರಿಸಿ 16 ಬೌಂಡರಿ ಸಹಿತ 118 ರನ್ ಸಿಡಿಸಿ ವಿಕೆಟ್ ಒಪ್ಪಿಸಿದರು.
ವೈಭವ್ ಸೂರ್ಯವಂಶಿ ಹಾಗೂ ಆರೋನ್ ಜಾರ್ಜ್ ವಿಕೆಟ್ ಪತನದ ಬಳಿಕ ಉಳಿದ ಬ್ಯಾಟರ್‌ಗಳು ಕೂಡಾ ದೊಡ್ಡ ಇನ್ನಿಂಗ್ಸ್ ಕಟ್ಟಲು ಯಶಸ್ವಿಯಾಗಲಿಲ್ಲ. ವೇದಾಂತ್ ತ್ರಿವೇದಿ 34 ರನ್ ಗಳಿಸಿದ್ದೇ ಮೂರನೇ ದೊಡ್ಡ ಸ್ಕೋರ್ ಎನಿಸಿಕೊಂಡಿತು. ಕೊನೆಯಲ್ಲಿ ಮೊಹಮ್ಮದ್ ಎನಾನ್ 28 ಹಾಗೂ ಹೆನಿಲ್ ಪಟೇಲ್ 19 ರನ್ ಸಿಡಿಸಿ ತಂಡದ ಮೊತ್ತವನ್ನು ನಾನೂರರ ಸಮೀಪ ಕೊಂಡೊಯ್ದರು.
ಮೂರು ಪಂದ್ಯಗಳ ಸರಣಿಯ ಮೊದಲ ಎರಡು ಪಂದ್ಯಗಳನ್ನು ಗೆದ್ದಿರುವ ಭಾರತ ಅಂಡರ್ 19 ತಂಡ ಒಂದು ಪಂದ್ಯ ಬಾಕಿ ಇರುವಂತೆಯೇ ಸರಣಿಯನ್ನು ವಶಪಡಿಸಿಕೊಂಡಿದೆ. ಇದೀ ಮೂರನೇ ಏಕದಿನ ಪಂದ್ಯವನ್ನೂ ಗೆದ್ದು ಸರಣಿ ಕ್ಲೀನ್ ಸ್ವೀಪ್ ಮಾಡುವುದು ಭಾರತದ ಗುರಿಯಾಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.