
ದುಬೈ: 'ಇಷ್ಟು ದೊಡ್ಡ ಸಂಖ್ಯೆಯ ಪ್ರೇಕ್ಷಕರು ಮೌನಕ್ಕೆ ಜಾರುವುದನ್ನು ನೋಡುವುದಕ್ಕಿಂತ ಸಂತಸದ ವಿಷಯ ಮತ್ತೊಂದಿಲ್ಲ”. ಮಂಗಳವಾರ ದುಬೈನಲ್ಲಿ ಪ್ಯಾಟ್ ಕಮಿನ್ಸ್ ಇಲ್ಲದೇ ಇರಬಹುದು, ಆದರೆ ನ.18, 2023ರಂದು ಅವರಾಡಿದ ಈ ಮಾತುಗಳು ಭಾರತೀಯ ಆಟಗಾರರು, ಅಭಿಮಾನಿಗಳ ಮನದಲ್ಲಿ ಪ್ರತಿಧ್ವನಿಸಲಿದೆ. ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಮೊದಲ ಸೆಮಿಫೈನಲ್‌ನಲ್ಲಿ ಭಾರತಕ್ಕೆ ಆಸ್ಟ್ರೇಲಿಯಾ ಎದುರಾಗಲಿದ್ದು, 2023ರ ಏಕದಿನ ವಿಶ್ವಕಪ್ ಫೈನಲ್ ಬಳಿಕ ಮೊದಲ ಬಾರಿಗೆ ಮದಗಜಗಳು ಮುಖಾಮುಖಿಯಾಗಲಿವೆ.
ವಿಶ್ವಕಪ್ ಫೈನಲ್ ನಡೆದು ಹಲವು ತಿಂಗಳುಗಳು ಕಳೆದಿವೆ. ಮಂಗಳವಾರದ ಸೆಮಿಫೈನಲ್‌ನಲ್ಲಿ ಕಣಕ್ಕಿಳಿಯಲಿರುವ ಭಾರತ, ಖಂಡಿತವಾಗಿಯೂ ಆಸ್ಟ್ರೇಲಿಯಾಕ್ಕಿಂತ ಬಲಿಷ್ಠವಾಗಿದೆ. ಆದರೆ, ಐಸಿಸಿ ಟೂರ್ನಿಗಳಲ್ಲಿ ಆಸ್ಟ್ರೇಲಿಯಾವನ್ನು ಲಘುವಾಗಿ ಪರಿಗಣಿಸಲು ಸಾಧ್ಯವೇ ಇಲ್ಲ ಎನ್ನುವ ಸತ್ಯ ರೋಹಿತ್ ಶರ್ಮಾ ಪಡೆಗೆ ಚೆನ್ನಾಗೇ ತಿಳಿದಿದೆ.
ಇದನ್ನೂ ಓದಿ: ಕಿವೀಸ್ ಕಿವಿಹಿಂಡಿದ ಬೀದರ್ ಹುಡುಗ ವರುಣ್ ಚಕ್ರವರ್ತಿಯ ಬಗ್ಗೆ ನಿಮಗೆಷ್ಟು ಗೊತ್ತು?
ಹೆಡ್ ಭಯ: ಎರಡೂ ತಂಡಗಳ ನಡುವಿನ ಅಂತರ, 2023ರ ಫೈನಲ್‌ಗಿಂತ ದೊಡ್ಡದಿದೆ. ಈ ಬಾರಿ ಆಸೀಸ್ ತಂಡದಲ್ಲಿ ಅನುಭವಿ ವೇಗಿಗಳಾದ ಸ್ಟಾರ್ಕ್, ಕಮಿನ್ಸ್, ಹೇಜಲ್‌ವುಡ್ ಇಲ್ಲ, ವಾರ್ನರ್ ರಂಥ ಪ್ರಚಂಡ ಬ್ಯಾಟರ್ ಇಲ್ಲ. ಸ್ಟೋಯಿಸ್‌ರಂಥ ಅಪಾಯಕಾರಿ ಆಲ್ರೌಂಡರ್ ಇಲ್ಲ. ಸಾಲದಕ್ಕೆ ಆಲ್ರೌಂಡರ್ ಆಗಿ ಕೊಡುಗೆ ನೀಡಬಲ್ಲ ಮ್ಯಾಥ್ಯೂ ಶಾರ್ಟ್ ಗಾಯಗೊಂಡು ಹೊರಬಿದ್ದಿದ್ದಾರೆ. ಆದರೂ, ಭಾರತೀಯರಿಗೆ ಒಬ್ಬ ಆಟಗಾರನ ಭಯ ಇದ್ದೇ ಇದೆ. ಆತನೇ ಟ್ರ್ಯಾವಿಸ್ ಹೆಡ್. 2023ರ ಏಕದಿನ ವಿಶ್ವಕಪ್ ಫೈನಲ್, 2023ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ನಲ್ಲಿ ಹೆಡ್ ಕೊಟ್ಟ ಪೆಟ್ಟನ್ನು ಭಾರತೀಯರು ಮರೆಯಲು ಸಾಧ್ಯವಿಲ್ಲ. ಹೀಗಾಗಿ, ಫೈನಲ್‌ಗೇರಬೇಕಿದ್ದರೆ ಆಸ್ಟ್ರೇಲಿಯಾದ ತಲೆ (ಹೆಡ್) ಉರುಳಿಸಬೇಕು ಎನ್ನುವುದು ಭಾರತೀಯರಿಗೆ ಚೆನ್ನಾಗೇ ಗೊತ್ತಿದೆ. ಶಾರ್ಟ್ ಹೊರಬಿದ್ದಿರುವುದರಿಂದ ಜೋಶ್ ಇಂಗ್ಲಿಸ್ ಆರಂಭಿಕನಾಗಿ ಆಡುವ ಸಾಧ್ಯತೆ ಹೆಚ್ಚು. ಆಗ ಆಸ್ಟ್ರೇಲಿಯಾದ ಮಧ್ಯಮ ಕ್ರಮಾಂಕ ಸ್ವಲ್ಪ ದುರ್ಬಲಗೊಳ್ಳಲಿದೆ. ಆದರೂ, ಮ್ಯಾಕ್ಸ್‌ವೆಲ್ ಇದ್ದಾರೆ ಎನ್ನುವುದನ್ನು ಮರೆಯುವಂತಿಲ್ಲ.
ವರುಣ್ ಟ್ರಂಪ್ ಕಾರ್ಡ್: ಭಾರತ ಈ ಪಂದ್ಯದಲ್ಲೂ ಸ್ಪಿನ್ನರ್‌ಗಳ ಮೇಲೆ ಹೆಚ್ಚು ಅವಲಂಬಿತಗೊಳ್ಳಲಿದೆ. ಕಿವೀಸ್ ವಿರುದ್ಧ ಭಾರತದ ನಾಲ್ವರು ಸ್ಪಿನ್ನರ್‌ಗಳು ಒಟ್ಟು 39 ಓವರ್ ಬೌಲ್ ಮಾಡಿ 9 ವಿಕೆಟ್ ಕಬಳಿಸಿದ್ದರು. ನಾಲ್ವರ ಸ್ಟೆಲ್‌ಗಳಲ್ಲಿ ಒಟ್ಟು 128 ಡಾಟ್ ಬಾಲ್‌ಗಳಿದ್ದವು. ಈ ಪಂದ್ಯದಲ್ಲೂ ವರುಣ್ ಚಕ್ರವರ್ತಿಯೇ ಭಾರತದ ಟ್ರಂಪ್ ಕಾರ್ಡ್ ಆದರೆ ಅಚ್ಚರಿಯಿಲ್ಲ.
ಇದನ್ನೂ ಓದಿ: ಏಕದಿನ ಕ್ರಿಕೆಟ್‌ನಲ್ಲಿ ಇಂಡೋ-ಆಸೀಸ್ ಫೈಟ್; ಐಸಿಸಿ ಟೂರ್ನಿಯಲ್ಲಿ ಕಾಂಗರೂ ಮೇಲೆ ಭಾರತದ ರೆಕಾರ್ಡ್ ಹೇಗಿದೆ?
ಇನ್ನು ಬ್ಯಾಟಿಂಗ್ ವಿಭಾಗದಲ್ಲಿ ರೋಹಿತ್‌ರಿಂದ ದೊಡ್ಡ ಇನ್ನಿಂಗ್ಸ್ ನಿರೀಕ್ಷೆ ಮಾಡಲಾಗುತ್ತಿದೆ. ಗುಂಪು ಹಂತದ ಮೂರೂ ಪಂದ್ಯದಲ್ಲಿ ರೋಹಿತ್ ಸ್ಫೋಟಕ ಆರಂಭನೀಡುವ ಪ್ರಯತ್ನ ನಡೆಸಿದರೂ, ದೊಡ್ಡ ಸ್ಕೋರ್ ಬಂದಿಲ್ಲ. ಈ ಪಂದ್ಯದಲ್ಲಿ ಅವರು ಹೆಚ್ಚು ಕಾಲಕ್ರೀಸ್‌ನಲ್ಲಿ ಉಳಿಯಬೇಕಿದೆ. ಕೊಹ್ಲಿ, ಗಿಲ್, ಶ್ರೇಯಸ್, ರಾಹುಲ್, ಹಾರ್ದಿಕ್, ಅಕ್ಷರ್, ಜಡೇಜಾ ಹೀಗೆ ಭಾರತದ ಬ್ಯಾಟಿಂಗ್ ಪಡೆ ದೊಡ್ಡದಿದ್ದು, ಎಲ್ಲವೂ ಅಂದುಕೊಂಡಂತೆ ನಡೆಯಬೇಕು ಅಷ್ಟೇ.
ಚಾಂಪಿಯನ್ಸ್ ಟ್ರೋಫಿ: 2009ರ ಬಳಿಕ ಮೊದಲ ಮುಖಾಮುಖಿ!
ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಚಾಂಪಿಯನ್ಸ್ ಟ್ರೋಫಿಯಲ್ಲಿ 2009ರ ಬಳಿಕ ಮೊದಲ ಬಾರಿಗೆ ಮುಖಾಮುಖಿಯಾಗಲಿವೆ. ಈ ವರೆಗೂ ಉಭಯ ತಂಡಗಳ ನಡುವೆ ಚಾಂಪಿಯನ್ಸ್ ಟ್ರೋಫಿಯಲ್ಲಿ 4 ಪಂದ್ಯಗಳು ನಡೆದಿದ್ದು, 2ರಲ್ಲಿ ಭಾರತ, 1ರಲ್ಲಿ ಆಸೀಸ್ ಗೆದ್ದಿದೆ. 2009ರ ರ ಪಂದ್ಯ ಮಳೆಗೆ ಬಲಿಯಾಗಿತ್ತು.
ಪಂದ್ಯ: ಮಧ್ಯಾಹ್ನ 2.30ಕ್ಕೆ (ಭಾರತೀಯ ಕಾಲಮಾನ)
ಪ್ರಸಾರ: ಸ್ಟಾರ್‌ಸ್ಟೋರ್ಟ್ಸ್, ಜಿಯೋಹಾಟ್‌ಸ್ಟಾರ್
ಪಿಚ್ ರಿಪೋರ್ಟ್:
ಭಾರತ-ಪಾಕಿಸ್ತಾನ ನಡುವಿನ ಪಂದ್ಯಕ್ಕೆ ಬಳಸಿದ ಪಿಚ್‌ನಲ್ಲಿಯೇ ಈ ಪಂದ್ಯ ನಡೆಯಲಿದೆ ಎಂದು ಹೇಳಲಾಗುತ್ತಿದೆ. ದುಬೈನ ಯಾವುದೇ ಪಿಚ್‌ನಲ್ಲಿ ಪಂದ್ಯ ನಡೆದರೂ, ಪಂದ್ಯ ಸಾಗಿದಂತೆ ಪಿಚ್ ನಿಧಾನಗೊಳ್ಳಲಿದ್ದು, ಸ್ಪಿನ್ನರ್‌ಗಳು ಹೆಚ್ಚು ಪರಿಣಾಮಕಾರಿಯಾಗಲಿದ್ದಾರೆ. ಇಬ್ಬನಿಯ ಸಮಸ್ಯೆ ಇಲ್ಲದಿರುವ ಕಾರಣ, ಟಾಸ್ ಗೆಲ್ಲುವ ತಂಡ ಮೊದಲು ಬ್ಯಾಟ್ ಮಾಡಲು ನಿರ್ಧರಿಸುವ ಸಾಧ್ಯತೆಯೇ ಹೆಚ್ಚು. 270-280 ರನ್ ಗೆಲ್ಲುವ ಸ್ಕೋರ್ ಆಗಬಹುದು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.