
ದುಬೈ: ಕ್ರಿಕೆಟ್ ಜಗತ್ತಿನ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಹಾಗೂ ಪಾಕಿಸ್ತಾನ ತಂಡಗಳು ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿಂದು ಮುಖಾಮುಖಿಯಾಗುತ್ತಿವೆ. ಈ ಹೈವೋಲ್ಟೇಜ್ ಪಂದ್ಯಕ್ಕೆ ದುಬೈ ಅಂತಾರಾಷ್ಟ್ರೀಯ ಮೈದಾನ ಆತಿಥ್ಯ ವಹಿಸಿದೆ. ಇಂದು ಮಧ್ಯಾಹ್ನ 2.30ರಿಂದ ಪಂದ್ಯಾಟ ಆರಂಭವಾಗಲಿದೆ. ಇನ್ನು ಈ ಪಂದ್ಯವನ್ನು ಗೆಲ್ಲಲು ಉಭಯ ತಂಡಗಳು ಜಿದ್ದಾಜಿದ್ದಿನ ಪೈಪೋಟಿ ನಡೆಸಲು ಸಜ್ಜಾಗಿವೆ.
ಒಂದು ಕಡೆ ಹಾಲಿ ಚಾಂಪಿಯನ್ ಪಾಕಿಸ್ತಾನ ತಂಡವು ಮೊದಲ ಪಂದ್ಯದಲ್ಲೇ ಕಿವೀಸ್ ಎದುರು ಮುಗ್ಗರಿಸುವ ಮೂಲಕ ಮುಖಭಂಗ ಅನುಭವಿಸಿದ್ದು, ಇದೀಗ ಭಾರತ ಎದುರು ಮಾಡು ಇಲ್ಲವೇ ಮಡಿ ಪಂದ್ಯಕ್ಕೆ ಸಜ್ಜಾಗಿದೆ. ಇನ್ನೊಂದೆಡೆ ರೋಹಿತ್ ಶರ್ಮಾ ಪಡೆ ಮೊದಲ ಪಂದ್ಯ ಗೆದ್ದು ಆತ್ಮವಿಶ್ವಾಸದಿಂದ ಬೀಗುತ್ತಿದ್ದು, 8 ವರ್ಷಗಳ ಹಿಂದೆ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಅನುಭವಿಸಿದ್ದ ಸೋಲಿಗೆ ಸೇಡು ತೀರಿಸಿಕೊಳ್ಳಲು ರೆಡಿಯಾಗಿದೆ. ಭಾರತ ತಂಡವನ್ನು ಮಣಿಸಿ ಸೆಮೀಸ್ ಕನಸು ಜೀವಂತವಾಗಿರಿಸಿಕೊಳ್ಳಲು ಪಾಕಿಸ್ತಾನ ತಂಡವು ತಂತ್ರಗಾರಿಕೆ ನಡೆಸಿದೆ. ಪಾಕ್ ತಂತ್ರಗಾರಿಕೆಗೆ ಟೀಂ ಇಂಡಿಯಾ ರಣತಂತ್ರ ಹೆಣೆದಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.
ಟೀಂ ಇಂಡಿಯಾ ಈ ಮೂರು ದಿಗ್ಗಜ ಕ್ರಿಕೆಟಿಗರಿಗೆ ಪಾಕ್ ಎದುರು ಇದೇ ಕೊನೆಯ ಅಂತಾರಾಷ್ಟ್ರೀಯ ಮ್ಯಾಚ್?
ಪಾಕಿಸ್ತಾನದ ತಂತ್ರ
* ಭಾರತವನ್ನು ಸೋಲಿಸಬೇಕಿದ್ದರೆ ಪಾಕ್‌ನ ತ್ರಿವಳಿ ವೇಗಿಗಳು ಅಬ್ಬರಿಸಬೇಕು. ನ್ಯೂಜಿಲೆಂಡ್ ವಿರುದ್ಧ ಶಾಹೀನ್, ನಸೀಂ, ರೌಫ್ ನಿರೀಕ್ಷಿತ ಯಶಸ್ಸು ಸಾಧಿಸಲಿಲ್ಲ. ರೋಹಿತ್, ಗಿಲ್ ವಿರುದ್ಧ ವೇಗಿಗಳನ್ನು ದಾಳಿಗಿಳಿಸಿ, ಕೊಹ್ಲಿ ವಿರುದ್ಧ ಸ್ಪಿನ್ ಅಸ್ತ್ರ ಬಳಸಲು ಪಾಕ್ ಎದುರು ನೋಡಲಿದೆ.
* ಪವರ್-ಪ್ಲೇನಲ್ಲಿ ಪಾಕಿಸ್ತಾನ ವೇಗವಾಗಿ ಆಡುವುದನ್ನು ರೂಢಿಸಿಕೊಳ್ಳಬೇಕಿದೆ. ಮೊದಲ 10 ಓವರಲ್ಲಿ ಪಾಕ್ ತೀರಾ ನಿಧಾನವಾಗಿ ಆಡುತ್ತಿರುವುದೇ ತಂಡದ ಹಿನ್ನಡೆಗೆ ಕಾರಣ.
* ಬಾಬರ್ ಆಜಂ ಹೆಚ್ಚು ಜವಾಬ್ದಾರಿಯಿಂದ ಆಡಬೇಕಿದೆ. 2025ರಲ್ಲಿ ಆಡಿರುವ 4 ಏಕದಿನಗಳಲ್ಲಿ ಬಾಬರ್ ಮೊದಲ ಪವರ್-ಪ್ಲೇನಲ್ಲಿ 74ರ ಸ್ಟ್ರೈಕ್‌ರೇಟ್ ಹೊಂದಿದ್ದಾರೆ. ಮೊದಲ ಪಂದ್ಯದಲ್ಲಿ ಕಿವೀಸ್ ವಿರುದ್ಧ ಪಾಕ್ ಸೋಲಲು ಬಾಬರ್‌ರ ನಿಧಾನಗತಿಯ ಆಟವೂ ಒಂದು ಕಾರಣ.
ಪಾಕ್ ಎದುರಿನ ಹೈವೋಲ್ಟೇಜ್ ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ ಒಂದು ಅಚ್ಚರಿ ಚೇಂಜ್?
ಭಾರತದ ರಣತಂತ್ರ
* ಪವರ್-ಪ್ಲೇನಲ್ಲಿ ಸ್ಫೋಟಕ ಆಟವಾಡುವುದು ಭಾರತ ಅಳವಡಿಸಿಕೊಂಡಿರುವ ಹೊಸ ಶೈಲಿಯ ಆಟ. ಪ್ರಮುಖವಾಗಿ ರೋಹಿತ್ ಶರ್ಮಾ ಹೆಚ್ಚು ಆಕ್ರಮಣಕಾರಿಯಾಗಿ ಆಡಲಿದ್ದಾರೆ. 2023ರಿಂದೀಚೆಗೆ ಭಾರತ ಪವರ್-ಪ್ಲೇನಲ್ಲಿ 6.47ರ ರನ್‌ರೇಟ್ ಹೊಂದಿದ್ದು ಇದು ಉಳಿದೆಲ್ಲಾ ತಂಡಗಳಿಗಿಂತ ಹೆಚ್ಚು.
* ಈ ಪಂದ್ಯದಲ್ಲೂ ಭಾರತ ಮೂವರು ಸ್ಪಿನ್ನರ್‌ಗಳನ್ನು ಆಡಿಸುವುದು ಖಚಿತ. ಪಾಕ್‌ನ ಅಗ್ರ 6 ಕ್ರಮಾಂಕಗಳಲ್ಲಿ ಮೂವರು ಎಡಗೈ ಬ್ಯಾಟರ್‌ಗಳು ಇರುವ ಕಾರಣ ವಾಷಿಂಗ್ಟನ್ ಸುಂದರ್‌ಗೆ ಅವಕಾಶ ಸಿಕ್ಕರೂ ಸಿಗಬಹುದು.
* ಮೊಹಮದ್ ಶಮಿ ವೇಗದ ಬೌಲಿಂಗ್ ಪಡೆ ಮುನ್ನಡೆಸಲಿದ್ದು, ಹರ್ಷಿತ್ ರಾಣಾ, ಹಾರ್ದಿಕ್ ಪಾಂಡ್ಯ ಬೆಂಬಲಿಸಲಿದ್ದಾರೆ.
ದುಬೈ ಭಾರತದ ಅದೃಷ್ಟ ತಾಣ!
ದುಬೈ ಅಂ.ರಾ. ಕ್ರೀಡಾಂಗಣದಲ್ಲಿ ಭಾರತ ಉತ್ತಮ ದಾಖಲೆ ಹೊಂದಿದೆ. ಇಲ್ಲಿ ಆಡಿರುವ 7 ಪಂದ್ಯಗಳಲ್ಲಿ 6ರಲ್ಲಿ ಗೆದ್ದಿದೆ. ಮತ್ತೊಂದೆಡೆ ಪಾಕಿಸ್ತಾನ ಇಲ್ಲಿ ಆಡಿರುವ 22ರಲ್ಲಿ 13ರಲ್ಲಿ ಸೋತಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.