ಚಾಂಪಿಯನ್ಸ್ ಫೈನಲ್: 0 ಕಿ.ಮೀ. vs 7048 ಕಿ.ಮೀ.! ಏನಿದು ಲೆಕ್ಕಾಚಾರ? ಭಾರತಕ್ಕೆ ಹೇಗೆ ವರದಾನ?

Published : Mar 08, 2025, 08:17 AM IST
ಚಾಂಪಿಯನ್ಸ್ ಫೈನಲ್: 0 ಕಿ.ಮೀ. vs 7048 ಕಿ.ಮೀ.! ಏನಿದು ಲೆಕ್ಕಾಚಾರ? ಭಾರತಕ್ಕೆ ಹೇಗೆ ವರದಾನ?

ಸಾರಾಂಶ

ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಭಾರತ ದುಬೈನಲ್ಲಿ ಆಡಲಿದೆ, ಕೇವಲ 0 ಕಿ.ಮೀ ಪ್ರಯಾಣಿಸಿದೆ. ಆದರೆ ನ್ಯೂಜಿಲೆಂಡ್ ಸುಮಾರು 7048 ಕಿ.ಮೀ ಪ್ರಯಾಣಿಸಿ ಫೈನಲ್ ತಲುಪಿದೆ. ಭಾರತ ಮತ್ತು ನ್ಯೂಜಿಲೆಂಡ್ 25 ವರ್ಷಗಳ ನಂತರ ಫೈನಲ್‌ನಲ್ಲಿ ಸೆಣಸಾಡಲಿವೆ.

ದುಬೈ: ಭಾರತ ತಂಡ ಈ ಬಾರಿ ಚಾಂಪಿಯನ್ಸ್‌ ಟ್ರೋಫಿಯ ಎಲ್ಲಾ ಪಂದ್ಯಗಳನ್ನು ದುಬೈ ಕ್ರೀಡಾಂಗಣದಲ್ಲೇ ಆಡಿದೆ. ಫೈನಲ್‌ ಪಂದ್ಯ ಕೂಡಾ ದುಬೈನಲ್ಲೇ ನಿಗದಿಯಾಗಿದೆ. ಅಂದರೆ ಆಟಗಾರರು ಭಾರತದಿಂದ ದುಬೈಗೆ ಪ್ರಯಾಣಿಸಿದ ಬಳಿಕ ಒಂದೇ ಕ್ರೀಡಾಂಗಣ, ಒಂದೇ ಹೋಟೆಲ್‌ನಲ್ಲೇ ಉಳಿದುಕೊಂಡಿದ್ದಾರೆ. ಒಂದರ್ಥದಲ್ಲಿ ತಂಡಕ್ಕಿದು ವರದಾನ.

ಆದರೆ ಫೈನಲ್‌ಗೇರಿರುವ ಮತ್ತೊಂದು ತಂಡ ನ್ಯೂಜಿಲೆಂಡ್‌ನ ಪರಿಸ್ಥಿತಿ ಭಿನ್ನ. ಟೂರ್ನಿಯುದ್ದಕ್ಕೂ ನ್ಯೂಜಿಲೆಂಡ್‌ ಆಟಗಾರರು ಅಂದಾಜು 7048 ಕಿ.ಮೀ. ಪ್ರಯಾಣಿಸಿದ್ದಾರೆ. ಟೂರ್ನಿಗೆ ಕೆಲ ದಿನಗಳ ಮುನ್ನ ನ್ಯೂಜಿಲೆಂಡ್‌ನಿಂದ ಪಾಕಿಸ್ತಾನಕ್ಕೆ ಆಗಮಿಸಿದ್ದ ಕಿವೀಸ್‌ ಆಟಗಾರರು, ಫೆ.19ಕ್ಕೆ ಕರಾಚಿಯಲ್ಲಿ ಪಾಕಿಸ್ತಾನ ವಿರುದ್ಧ ಆಡಿ, ಫೆ.24ರ ಬಾಂಗ್ಲಾದೇಶ ವಿರುದ್ಧ ಪಂದ್ಯಕ್ಕಾಗಿ ರಾವಲ್ಪಿಂಡಿಗೆ ತೆರಳಿದ್ದರು. ಆ ಬಳಿಕ ಮಾ.2ರ ಭಾರತ ವಿರುದ್ಧ ಪಂದ್ಯಕ್ಕಾಗಿ ನ್ಯೂಜಿಲೆಂಡ್‌ ತಂಡ ಯುಎಇ ದೇಶದ ದುಬೈಗೆ ಪ್ರಯಾಣಿಸಿದೆ. ಬಳಿಕ ಮಾ.5ರ ಸೆಮಿಫೈನಲ್‌ ಪಂದ್ಯಕ್ಕಾಗಿ ಮತ್ತೆ ಲಾಹೋರ್‌ಗೆ ತೆರಳಿದೆ. ಗುರುವಾರ ಮತ್ತೆ ದುಬೈಗೆ ಪ್ರಯಾಣಿಸಿದ್ದು, ಮಾ.9ರಂದು ಭಾರತ ವಿರುದ್ಧ ಫೈನಲ್‌ ಆಡಲಿದೆ.

ಇದೇ ವೇಳೆ, ಇಂಗ್ಲೆಂಡ್‌, ಅಫ್ಘಾನಿಸ್ತಾನ ತಂಡಗಳು ಟೂರ್ನಿ ವೇಳೆ 1020 ಕಿ.ಮೀ, ಬಾಂಗ್ಲಾದೇಶ 1953 ಕಿ.ಮೀ., ಆಸ್ಟ್ರೇಲಿಯಾ 2509 ಕಿ.ಮೀ, ಪಾಕಿಸ್ತಾನ 3133 ಕಿ.ಮೀ., ಹಾಗೂ ದಕ್ಷಿಣ ಆಫ್ರಿಕಾ 3286 ಕಿ.ಮೀ. ಪ್ರಯಾಣಿಸಿದೆ.

ಇತ್ತೀಚೆಗೆ ಭಾರತ-ಪಾಕಿಸ್ತಾನ ನಡುವಿನ ಚಾಂಪಿಯನ್ಸ್‌ ಟ್ರೋಫಿ ಗುಂಪು ಹಂತದ ಪಂದ್ಯಕ್ಕೆ ಬಳಸಲಾಗಿದ್ದ ಪಿಚ್‌ನಲ್ಲೇ ಮಾ.9ರಂದು ಭಾರತ-ನ್ಯೂಜಿಲೆಂಡ್‌ ಫೈನಲ್‌ ಪಂದ್ಯ ನಡೆಯಲಿದೆ ಎಂದು ತಿಳಿದುಬಂದಿದೆ. ದುಬೈ ಕ್ರೀಡಾಂಗಣದಲ್ಲಿ 4 ಪಿಚ್‌ಗಳಿವೆ. ಐಸಿಸಿ ಟೂರ್ನಿ ವೇಳೆ ಸಾಮಾನ್ಯವಾಗಿ ಯಾವುದೇ ಕ್ರೀಡಾಂಗಣದ ಪಿಚ್‌ನಲ್ಲಿ ಒಂದು ಪಂದ್ಯ ಮಾತ್ರ ನಡೆಸಲಾಗುತ್ತದೆ. ಒಮ್ಮೆ ಬಳಸಿದ ಪಿಚ್‌ನಲ್ಲಿ ಮತ್ತೊಂದು ಪಂದ್ಯ ನಡೆಸುವುದಿಲ್ಲ. ಆದರೆ ಒಂದು ಪಂದ್ಯಕ್ಕೆ ಪಿಚ್‌ ಬಳಸಿ 2 ವಾರ ಆಗಿದ್ದರೆ ಅದೇ ಪಿಚ್‌ನಲ್ಲಿ ಮತ್ತೊಂದು ಪಂದ್ಯ ನಡೆಸುವ ನಿಯಮವನ್ನು ಎಮಿರೇಟ್ಸ್‌ ಕ್ರಿಕೆಟ್ ಮಂಡಳಿ ಅನುಸರಿಸುತ್ತಿದೆ. ಹೀಗಾಗಿ ಭಾರತ-ಪಾಕ್‌ ಪಂದ್ಯಕ್ಕೆ ಬಳಸಿದ ಪಿಚ್‌ನಲ್ಲೇ ಪಂದ್ಯ ನಡೆಸಲು ನಿರ್ಧರಿಸಿದೆ.

ಆದರೆ ದುಬೈನಲ್ಲಿ ಕೆಲ ದಿನಗಳಿಂದ ವಿಪರೀತ ಬಿಸಿಲು ಇರುವ ಕಾರಣ, ಪಿಚ್‌ ಮತ್ತಷ್ಟು ನಿಧಾನಗತಿ ವರ್ತಿಸಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಫೆ.25ಕ್ಕೆ ನಡೆದಿದ್ದ ಪಂದ್ಯದಲ್ಲಿ ಪಾಕ್‌ 241ಕ್ಕೆ ಆಲೌಟಾಗಿದ್ದರೆ, ಭಾರತ 42.3 ಓವರ್‌ಗಳಲ್ಲೇ ಗುರಿ ಬೆನ್ನತ್ತಿ ಗೆದ್ದಿತ್ತು. 25 ವರ್ಷಗಳ ಬಳಿಕ ಭಾರತ ಮತ್ತು ನ್ಯೂಜಿಲೆಂಡ್‌ ತಂಡಗಳು ಫೈನಲ್‌ನಲ್ಲಿ ಟ್ರೋಫಿಗಾಗಿ ಸೆಣಸಾಡಲಿವೆ.

ಇದನ್ನೂ ಓದಿ: ಅಂತಾರಾಷ್ಟ್ರೀಯ ಫುಟ್ಬಾಲ್ ನಿವೃತ್ತಿ ಹಿಂಪಡೆದ ದಿಗ್ಗಜ ಸುನಿಲ್ ಚೆಟ್ರಿ!

ಏಷ್ಯನ್‌ ಮಹಿಳಾ ಕಬಡ್ಡಿ: ಭಾರತ ಫೈನಲ್‌ಗೆ
ಟೆಹ್ರಾನ್‌(ಇರಾನ್‌): 6ನೇ ಆವೃತ್ತಿಯ ಏಷ್ಯನ್‌ ಮಹಿಳಾ ಕಬಡ್ಡಿ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಫೈನಲ್‌ ಪ್ರವೇಶಿಸಿದೆ. ಗುರುವಾರ ಬಾಂಗ್ಲಾದೇಶ, ಥಾಯ್ಲೆಂಡ್‌ ವಿರುದ್ಧ ಗೆದ್ದಿದ್ದ ಭಾರತ ತಂಡ ಶುಕ್ರವಾರ ಗುಂಪು ಹಂತದ ಕೊನೆ ಪಂದ್ಯದಲ್ಲಿ ಮಲೇಷ್ಯಾ ವಿರುದ್ಧ 73-19 ಅಂಕಗಳಿಂದ ಜಯಗಳಿಸಿ ಅಜೇಯವಾಗಿ ನಾಕೌಟ್‌ ಪ್ರವೇಶಿಸಿತು.

ಬಳಿಕ ಸಂಜೆ ನೇಪಾಳ ವಿರುದ್ಧ ನಡೆದ ಸೆಮಿಫೈನಲ್‌ನಲ್ಲಿ ಭಾರತ 56-18 ಅಂಕಗಳಿಂದ ಭರ್ಜರಿ ಗೆಲುವು ದಾಖಲಿಸಿತು. 4 ಬಾರಿ ಚಾಂಪಿಯನ್‌ ಭಾರತ ತಂಡ ದಾಖಲೆಯ 5ನೇ ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದು, ಶನಿವಾರ ಇರಾನ್‌ ವಿರುದ್ಧ ಸೆಣಸಾಡಲಿದೆ. ಇರಾನ್‌ ತಂಡ ಸೆಮಿಫೈನಲ್‌ನಲ್ಲಿ ಬಾಂಗ್ಲಾದೇಶ ವಿರುದ್ಧ 41-18 ಅಂಕಗಳಿಂದ ಜಯಭೇರಿ ಬಾರಿಸಿ ಫೈನಲ್‌ಗೇರಿದೆ.

ಇದನ್ನೂ ಓದಿ: ಐಸಿಸಿ ಚಾಂಪಿಯನ್ಸ್ ಟ್ರೋಫಿ 2025: ಯಾರ ಪಾಲಾಗುತ್ತೆ ಕಪ್?

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮೇಲ್ಮನವಿ ಅರ್ಜಿ ವಜಾಗೊಳಿಸಿದ ಹೈಕೋರ್ಟ್, ಡಿ.7ಕ್ಕೆ ಕರ್ನಾಟಕ ಕ್ರಿಕೆಚ್ ಸಂಸ್ಥೆ ಚುನಾವಣೆ
ಕಾಂಗರೂ ನಾಡಲ್ಲಿ ಶತಕದ ಬರ ನೀಗಿಸಿಕೊಂಡ ಜೋ ರೂಟ್! ಕೊನೆಗೂ ತಪ್ಪಿದ ಹೇಡನ್ 'ಬೆತ್ತಲೆ ಸೇವೆ'!