
ಆರ್‌ಸಿಬಿ ವಿರುದ್ಧ 26 ಎಸೆತಗಳಲ್ಲಿ 78 ರನ್ ಚಚ್ಚಿದ ರಾಜಸ್ಥಾನ್ ರಾಯಲ್ಸ್ ತಂಡದ ಕಿರಿಯ ಆಟಗಾರ ವೈಭವ್ ಸೂರ್ಯವಂಶಿಗೆ ವಿರಾಟ್ ಕೊಹ್ಲಿ ವಿಶೇಷ ಟೋಪಿ ಉಡುಗೊರೆ ನೀಡಿದ್ದಾರೆ. ವೈಭವ್ ಈ ವಿಶೇಷ ಕ್ಷಣವನ್ನು ಸಂಭ್ರಮಿಸಿದ್ದು ಹೇಗೆ ಇಲ್ಲಿದೆ ಮಾಹಿತಿ.
ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನದ ರಾಜನಸ್ಥಾನ ರಾಯಲ್ಸ್ ತಂಡವನ್ನು ಗೆಲ್ಲಿಸಿದ 15ರ ಬಾಲಕ ವೈಭವ್ ಸೂರ್ಯವಂಶಿಗೆ ಸ್ವತಃ ಭಾರತ ಕ್ರಿಕೆಟ್ ತಂಡದ ದಿಗ್ಗಜ ವಿರಾಟ್ ಕೊಹ್ಲಿ ವಿಶೇಷ ಉಡುಗೊರೆಯೊಂದನ್ನು ನೀಡಿದ್ದಾರೆ. ಆದರೆ, ವಿರಾಟ್ ಕೊಹ್ಲಿ ಕೊಟ್ಟ ಉಡುಗೊರೆಯನ್ನು ವೈಭವ್ ಸೂರ್ಯವಂಶಿಗೆ ತುಂಬಾ ಆತ್ಮೀಯವಾಗಿ, ಗೌರವದಿಂದ ಹಾಗೂ ಪ್ರೀತಿಯಿಂದ ಎಲ್ಲರಿಗೂ ತೋರಿಸುವ ಮೂಲಕ ಇದೊಂದು ಸಾಧನೆ ಎಂಬಂತೆ ಪ್ರದರ್ಶಿಸಿದ್ದಾರೆ. ವಿರಾಟ್ ಕೊಹ್ಲಿ ಅವರು ಪಂದ್ಯದ ಬಳಿಕ ವೈಭವ್ ಸೂರ್ಯವಂಶಿಯನ್ನು ಭೇಟಿಯಾದ ವಿರಾಟ್ ಕೊಹ್ಲಿ, ಅವರ ಅದ್ಭುತ ಬ್ಯಾಟಿಂಗ್ ಅನ್ನು ಶ್ಲಾಘಿಸಿ, ವೈಭವ್ ಧರಿಸಿದ್ದ ರಾಜಸ್ಥಾನ್ ರಾಯಲ್ಸ್ ಟೋಪಿಯ ಮೇಲೆ 'ಡಿಯರ್ ವೈಭವ್, ವೆಲ್ ಡನ್' (Dear Vaibhav, Well Done) ಎಂದು ಬರೆದು ಸಹಿ ಹಾಕಿ ಶುಭ ಹಾರೈಸಿದ್ದಾರೆ. ಇದನ್ನು ಹಂಚಿಕೊಂಡು ವೈಭವ್ ಸಂಭ್ರಮಿಸಿದ್ದಾರೆ.
ಇನ್ನು ಇದಕ್ಕಿಂತ ಮೊದಲು ಯಾರೇ ಮೆಚ್ಚುಗೆ ವ್ಯಕ್ತಪಡಿಸಿದರೂ, ಹಲವು ಪ್ರಶಸ್ತಿಗಳು ಬಂದಾಗಲೂ ವೈಭವ್ ಸಾಮಾಜಿಕ ಜಾಲತಾಣದಲ್ಲಿ ಈ ಮಟ್ಟಿಗೆ ಆಕ್ಟೀವ್ ಆಗಿ ಫೋಟೋ ಅಥವಾ ವಿಡಿಯೋ ಹಂಚಿಕೊಂಡು ಸಂಭ್ರಮಿಸಿದ್ದನ್ನು ನೋಡಿಲ್ಲ. ವಿರಾಟ್ ಕೊಹ್ಲಿ ಮೆಚ್ಚುಗೆ ವ್ಯಕ್ತಪಡಿಸಿ, ಅವರೇ ಬಂದು ಕ್ಯಾಪ್ ಮೇಲೆ ಸಹಿ ಹಾಕಿದ್ದನ್ನು ವೈಭವ್ ವಿಶೇಷವಾಗಿ ಪರಿಗಣಿಸಿದ್ದಾರೆ. ಹೀಗಾಗಿ, ಆರ್‌ಸಿಬಿ ವಿರುದ್ಧ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನದಿಂದ ತಮಗೆ ಬಂದ ಮ್ಯಾನ್ ಆಫ್ ದಿ ಮ್ಯಾಚ್ ಟ್ರೋಫಿ ಹಾಗೂ ವಿರಾಟ್ ಕೊಹ್ಲಿ ಸಹಿ ಮಾಡಿದ ಕ್ಯಾಪ್ ಜೊತೆಗೆ ಹಾಲಿ ನಡೆಯುತ್ತಿರುವ ಐಪಿಎಲ್ 2026ರ ಸೀಸನ್‌ನಲ್ಲಿ ಅತಿಹೆಚ್ಚು ರನ್ ಗಳಿಸಿದ್ದಕ್ಕೆ ಪಡೆದುಕೊಂಡು ಆರೆಂಜ್ ಕ್ಯಾಪ್ ಅನ್ನು ಜೋಡಿಸಿ ಮುಂದಿಟ್ಟು ಅದನ್ನು ಫೋಟೋ ಹಾಗೂ ವಿಡಿಯೋ ಮಾಡಿ ಹಂಚಿಕೊಳ್ಳುತ್ತಿದ್ದಾರೆ. ಈ ಮೂಲಕ ವಿರಾಟ್ ಕೊಹ್ಲಿಯಿಂದ ವಿಶೇಷ ಗಿಫ್ಟ್ ಅನ್ನು ಪಡೆದಿದ್ದಕ್ಕೆ ಹೆಚ್ಚಾಗಿಯೇ ಸಂಭ್ರಮಿಸುವ ಮೂಲಕ, ಕೊಹ್ಲಿಗೆ ಗೌರವ ಸಲ್ಲಿಸುತ್ತಿದ್ದಾರೆ.
ಗುವಾಹಟಿಯಲ್ಲಿ ನಡೆದ ಐಪಿಎಲ್ 16ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ನೀಡಿದ 202 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್ ಪರ ವೈಭವ್ ಸೂರ್ಯವಂಶಿ ಅಕ್ಷರಶಃ ರನ್ ಮಳೆ ಹರಿಸಿದರು. ಅನುಭವಿ ಬೌಲರ್‌ಗಳಾದ ಭುವನೇಶ್ವರ್ ಕುಮಾರ್ ಮತ್ತು ಜೋಶ್ ಹ್ಯಾಸಲ್‌ವುಡ್ ಅವರ ಓವರ್‌ಗಳಲ್ಲಿ ಕಿಂಚಿತ್ತೂ ಭಯಪಡದೆ ಬ್ಯಾಟ್ ಬೀಸಿದ ವೈಭವ್, ಕೇವಲ 26 ಎಸೆತಗಳಲ್ಲಿ 78 ರನ್ ಚಚ್ಚಿದರು. ಈ ಸ್ಫೋಟಕ ಇನ್ನಿಂಗ್ಸ್‌ನಲ್ಲಿ 7 ಭರ್ಜರಿ ಸಿಕ್ಸರ್ ಹಾಗೂ 8 ಬೌಂಡರಿಗಳಿದ್ದವು. ವೈಭವ್ ಅವರ ಈ ಆರ್ಭಟದಿಂದಾಗಿ ರಾಜಸ್ಥಾನ್ ರಾಯಲ್ಸ್ ಇನ್ನು 12 ಎಸೆತಗಳು ಬಾಕಿ ಇರುವಂತೆಯೇ 6 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು. ಈ ಗೆಲುವಿನೊಂದಿಗೆ ರಾಜಸ್ಥಾನ್ ರಾಯಲ್ಸ್ ತಂಡವು ಐಪಿಎಲ್ 2026ರ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದೆ.
ವೈಭವ್ ಕೇವಲ 15 ಎಸೆತಗಳಲ್ಲಿ ಅರ್ಧಶತಕ ಪೂರೈಸುವ ಮೂಲಕ ಐಪಿಎಲ್ ಇತಿಹಾಸದಲ್ಲಿ ಹೊಸ ಸಂಚಲನ ಮೂಡಿಸಿದರು. ಈ ಆವೃತ್ತಿಯ 4 ಪಂದ್ಯಗಳಲ್ಲಿ ವೈಭವ್ ಈಗಾಗಲೇ 200 ರನ್ ಪೂರೈಸಿದ್ದು, ಆರೆಂಜ್ ಕ್ಯಾಪ್ ಧರಿಸುವ ಮೂಲಕ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಒಂದು ವೇಳೆ ಈ ಫಾರ್ಮ್ ಮುಂದುವರಿದರೆ, ಐಪಿಎಲ್ ಇತಿಹಾಸದಲ್ಲೇ ಆರೆಂಜ್ ಕ್ಯಾಪ್ ಗೆದ್ದ ಅತ್ಯಂತ ಕಿರಿಯ ಆಟಗಾರ ಎಂಬ ಖ್ಯಾತಿಗೆ ಅವರು ಪಾತ್ರರಾಗಲಿದ್ದಾರೆ. ದ್ವಿತೀಯ ವಿಕೆಟ್‌ಗೆ ಧ್ರುವ್ ಜುರೆಲ್ ಅವರೊಂದಿಗೆ ಸೇರಿ ಕೇವಲ 37 ಎಸೆತಗಳಲ್ಲಿ 108 ರನ್‌ಗಳ ಜೊತೆಯಾಟವಾಡಿದ್ದು ಪಂದ್ಯದ ಹೈಲೈಟ್ ಆಗಿತ್ತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.