ICC World Cup 2023 ಪಂದ್ಯಗಳ ಟಿಕೆಟ್ ಕೊಂಡುಕೊಳ್ಳುವುದು ಹೇಗೆ?

By Naveen Kodase  |  First Published Jun 29, 2023, 3:21 PM IST

2023ರ ಏಕದಿನ ವಿಶ್ವಕಪ್ ಟೂರ್ನಿಯ ವೇಳಾಪಟ್ಟಿ ಪ್ರಕಟ
ಮೊದಲ ಬಾರಿಗೆ ಸಂಪೂರ್ಣ ಏಕದಿನ ವಿಶ್ವಕಪ್ ಟೂರ್ನಿಗೆ ಭಾರತ ಆತಿಥ್ಯ
ದೇಶದ 10 ನಗರಗಳಲ್ಲಿ ನಡೆಯಲಿದೆ ಕ್ರಿಕೆಟ್ ಮಹಾಸಂಗ್ರಾಮ
ವಿಶ್ವಕಪ್ ವೀಕ್ಷಿಸಲು ಟಿಕೆಟ್ ಖರೀದಿಸುವುದು ಎಲ್ಲಿ ಮತ್ತು ಹೇಗೆ?


ಬೆಂಗಳೂರು(ಜೂ.29): ಬಹುನಿರೀಕ್ಷಿತ 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ದಿನಗಣನೆ ಆರಂಭವಾಗಿದೆ. ಸಂಪೂರ್ಣ ವಿಶ್ವಕಪ್ ಟೂರ್ನಿಗೆ ಭಾರತ ಆತಿಥ್ಯವನ್ನು ವಹಿಸಿದ್ದು, ಅಕ್ಟೋಬರ್ 05ರಿಂದ ನವೆಂಬರ್ 19ರವರೆಗೆ ದೇಶದ 10 ನಗರಗಳಲ್ಲಿ ವಿಶ್ವಕಪ್ ಫೈನಲ್ ಪಂದ್ಯವು ನಡೆಯಲಿದೆ. ಅಕ್ಟೋಬರ್ 5ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಹಾಲಿ ಚಾಂಪಿಯನ್‌ ಇಂಗ್ಲೆಂಡ್‌ ಹಾಗೂ ರನ್ನರ್ ಅಪ್‌ ನ್ಯೂಜಿಲೆಂಡ್‌ ನಡುವಿನ ಪಂದ್ಯದ ಮೂಲಕ ಟೂರ್ನಿಗೆ ಚಾಲನೆ ಸಿಗಲಿದ್ದು, ಇದೇ ಕ್ರೀಡಾಂಗಣದಲ್ಲಿ ಬದ್ಧವೈರಿಗಳಾದ ಭಾರತ ಹಾಗೂ ಪಾಕಿಸ್ತಾನ ತಂಡಗಳು ಅಕ್ಟೋಬರ್ 15ರಂದು ಮುಖಾಮುಖಿಯಾಗಲಿವೆ. ಭಾರತ ಅಕ್ಟೋಬರ್ 8ರಂದು ಚೆನ್ನೈನಲ್ಲಿ ಆಸ್ಟ್ರೇಲಿಯಾ ವಿರುದ್ಧ ಕಣಕ್ಕಿಳಿಯುವ ಮೂಲಕ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ತನ್ನ ಅಭಿಯಾನ ಆರಂಭಿಸಲಿದೆ.

46 ದಿನ, 48 ಪಂದ್ಯ: 46 ದಿನಗಳ ಕಾಲ ನಡೆಯಲಿರುವ ಟೂರ್ನಿಯಲ್ಲಿ 10 ತಂಡಗಳು ಪಾಲ್ಗೊಳ್ಳಲಿದ್ದು, ಫೈನಲ್‌ ಸೇರಿ ಒಟ್ಟು 48 ಪಂದ್ಯಗಳು ನಡೆಯಲಿವೆ. ಭಾರತ, ಆಸ್ಟ್ರೇಲಿಯಾ, ಅಫ್ಘಾನಿಸ್ತಾನ, ಇಂಗ್ಲೆಂಡ್‌, ಬಾಂಗ್ಲಾದೇಶ, ನ್ಯೂಜಿಲೆಂಡ್‌, ಪಾಕಿಸ್ತಾನ ಹಾಗೂ ದಕ್ಷಿಣ ಆಫ್ರಿಕಾ. ಈ 8 ತಂಡಗಳು ನೇರ ಅರ್ಹತೆ ಗಿಟ್ಟಿಸಿಕೊಂಡಿದ್ದು, ಇನ್ನೆರಡು ತಂಡಗಳು ಅರ್ಹತಾ ಸುತ್ತಿನ ಮೂಲಕ ಪ್ರಧಾನ ಸುತ್ತಿಗೇರಲಿವೆ. ಒಂದು ವೇಳೆ ವಿಂಡೀಸ್ ಅರ್ಹತೆ ಪಡೆದು, ಅರ್ಹತಾ ಸುತ್ತಿನ ಫೈನಲಲ್ಲಿ ಸೋತರೂ ಕ್ವಾಲಿಫೈಯರ್‌-1 ಎಂದೇ ಕರೆಸಿಕೊಳ್ಳಲಿದೆ. ಒಂದು ವೇಳೆ ಶ್ರೀಲಂಕಾ ಅರ್ಹತೆ ಪಡೆದು, ಅರ್ಹತಾ ಸುತ್ತಿನ ಫೈನಲಲ್ಲಿ ಗೆದ್ದರೂ ಕ್ವಾಲಿಫೈಯರ್‌-2 ಎಂದೇ ಪರಿಗಣಿಸಲ್ಪಡಲಿದೆ.

Latest Videos

undefined

ಭಾರತಕ್ಕೆ 9 ನಗರಗಳಲ್ಲಿ ಪಂದ್ಯ

ಭಾರತ ಲೀಗ್‌ ಹಂತದ 9 ಪಂದ್ಯಗಳನ್ನು 9 ವಿವಿಧ ಕ್ರೀಡಾಂಗಣಲ್ಲಿ ಆಡಲಿದೆ. ತಂಡವು ಲೀಗ್‌ ಹಂತದಲ್ಲಿ ಆಡಲು ಅಂದಾಜು 8,400 ಕಿ.ಮೀ. ಪ್ರಯಾಣಿಸಿದೆ. ಇದು ಟೂರ್ನಿಯಲ್ಲಿ ಆಡುವ ಬೇರೆಲ್ಲಾ ತಂಡಗಳಿಗೆ ಹೋಲಿಸಿದರೆ ಅತಿಹೆಚ್ಚು ಎನಿಸಿದೆ. ಅಕ್ಟೋಬರ್ 8ರಂದು ಆಸ್ಟ್ರೇಲಿಯಾ ವಿರುದ್ಧ ಚೆನ್ನೈನಲ್ಲಿ ಆಡಲಿರುವ ಭಾರತ, ಬಳಿಕ ಪಾಕಿಸ್ತಾನ ವಿರುದ್ಧದ ಹೈವೋಲ್ಟೇಜ್‌ ಪಂದ್ಯವನ್ನು ಅಕ್ಟೋಬರ್ 15ರಂದು ಅಹಮದಾಬಾದ್‌ನಲ್ಲಿ ಆಡಲಿದೆ. ಅಕ್ಟೋಬರ್ 11ರಂದು ದೆಹಲಿಯಲ್ಲಿ ಅಫ್ಘಾನಿಸ್ತಾನ, ಅಕ್ಟೋಬರ್ 19ರಂದು ಪುಣೆಯಲ್ಲಿ ಬಾಂಗ್ಲಾದೇಶ, ಅಕ್ಟೋಬರ್ 22ರಂದು ಧರ್ಮಶಾಲಾದಲ್ಲಿ ನ್ಯೂಜಿಲೆಂಡ್, ಅಕ್ಟೋಬರ್ 29ರಂದು ಲಖನೌನಲ್ಲಿ ಇಂಗ್ಲೆಂಡ್ ವಿರುದ್ಧ ಕಣಕ್ಕಿಳಿಯಲಿದೆ. ಬಳಿಕ ನವೆಂಬರ್ 2ರಂದು ಅರ್ಹತಾ ಸುತ್ತಿನಿಂದ ಬಂದ ತಂಡ(ಕ್ವಾಲಿಫೈಯರ್‌ 2)ದ ವಿರುದ್ಧ ಮುಂಬೈ, ನವೆಂಬರ್ 5ರಂದು ಕೋಲ್ಕತಾದಲ್ಲಿ ದಕ್ಷಿಣ ಆಫ್ರಿಕಾ ಹಾಗೂ ನವೆಂಬರ್ 11ರಂದು ಮತ್ತೊಂದು ಕ್ವಾಲಿಫೈಯರ್‌ ತಂಡ (ಕ್ವಾಲಿಫೈಯರ್‌ 1)ದ ವಿರುದ್ಧ ಬೆಂಗಳೂರಲ್ಲಿ ಸೆಣಸಾಡಲಿದೆ.

ಸಿಗದ ಏಕದಿನ ವಿಶ್ವಕಪ್‌ ಆತಿಥ್ಯ: ಬಿಸಿಸಿಐ ವಿರುದ್ಧ ಹಲವು ರಾಜ್ಯ ಕ್ರಿಕೆಟ್ ಸಂಸ್ಥೆಗಳಿಂದ ಬಹಿರಂಗ ಸಿಟ್ಟು!

ಇನ್ನು ಕ್ರಿಕೆಟ್ ಜಗತ್ತಿನ ಸಾಂಪ್ರದಾಯಿಕ ಎದುರಾಳಿಗಳೆಂದು ಕರೆಸಿಕೊಳ್ಳುತ್ತಿರುವ ಭಾರತ-ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯ ಕಣ್ತುಂಬಿಕೊಳ್ಳಲು ಕ್ರಿಕೆಟ್ ಜಗತ್ತು ತುದಿಗಾಲಿನಲ್ಲಿ ನಿಂತಿದೆ. ವಿಶ್ವಕಪ್‌ನ ಭಾರತ-ಪಾಕ್‌ ಪಂದ್ಯ ಹಾಗೂ ಫೈನಲ್‌ ಪಂದ್ಯ ಅಹಮದಾಬಾದ್‌ನ ಮೋದಿ ಕ್ರೀಡಾಂಗಣದಲ್ಲಿ ನಡೆಯುವುದು ಖಚಿತಗೊಂಡ ಬೆನ್ನಲ್ಲೇ ನಗರದ ಹೋಟೆಲ್‌ ರೂಂಗಳ ಬೆಲೆ ಗಗನಕ್ಕೇರಿದೆ. ಸಾಮಾನ್ಯವಾಗಿ ಪಂಚತಾರಾ ಹೋಟೆಲ್‌ಗಳಲ್ಲಿ ಒಂದು ರಾತ್ರಿಗೆ 6,500-10,000 ರು. ಇರುವ ಬೆಲೆ ಅ.13ರಿಂದ 16ರ ನಡುವೆ ಬರೋಬ್ಬರಿ 50 ಸಾವಿರದಿಂದ 1 ಲಕ್ಷ ರು. ವರೆಗೂ ಏರಿಕೆಯಾಗಿದೆ ಎಂದು ತಿಳಿದುಬಂದಿದೆ. ಬೆಲೆ ಗಗನಕ್ಕೇರಿದ್ದರೂ ನಗರದ ಹೋಟೆಲ್‌ಗಳು ಶೇ.80ರಷ್ಟು ಮುಂಗಡ ಬುಕಿಂಗ್‌ ಆಗಿವೆ ಎಂದು ವರದಿಯಾಗಿದೆ.

ವಿಶ್ವಕಪ್ ಟೂರ್ನಿಗೆ ಟಿಕೆಟ್ ಕೊಳ್ಳುವುದು ಹೇಗೆ?

ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ಈಗಾಗಲೇ ಅಧಿಕೃತ ವೇಳಾಪಟ್ಟಿ ಪ್ರಕಟಗೊಂಡಿದ್ದರೂ ಸಹಾ, ಪಂದ್ಯ ವೀಕ್ಷಿಸಲು ಇನ್ನೂ ಟಿಕೆಟ್ ದರ ಹಾಗೂ ಎಲ್ಲಿ ಟಿಕೆಟ್ ಖರೀದಿಸಬಹುದು ಎನ್ನುವ ವಿಚಾರ ಇನ್ನೂ ಅಧಿಕೃತವಾಗಿಲ್ಲ. ಆದರೆ ಈ ಹಿಂದಿನ ಇತಿಹಾಸವನ್ನು ಗಮನಿಸಿದರೆ, ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ಟಿಕೆಟ್‌ಗಳನ್ನು PayTM, PayTM ಇನ್‌ಸೈಡರ್‌ ಹಾಗೂ ಬುಕ್‌ ಮೈ ಶೋ ಅಪ್ಲಿಕೇಷನ್‌ಗಳಲ್ಲಿ ಖರೀದಿಸಲು ಅವಕಾಶ ಕಲ್ಪಿಸುವ ಸಾಧ್ಯತೆ ದಟ್ಟವಾಗಿದೆ. 

ಇನ್ನು ಇದಷ್ಟೇ ಅಲ್ಲದೇ ICC Cricket World Cup 2023 ಈ ಐಸಿಸಿ ಅಧಿಕೃತ ಅಪ್ಲಿಕೇಷನ್‌ನಲ್ಲಿಯೂ ವಿಶ್ವಕಪ್ ಟೂರ್ನಿಯ ಟಿಕೆಟ್‌ಗಳು ಲಭ್ಯವಿರುವ ಸಾಧ್ಯತೆಯಿದೆ. ಯಾಕೆಂದರೆ, ಹಾಲಿ ನಡೆಯುತ್ತಿರುವ ಐಸಿಸಿ ಅರ್ಹತಾ ಸುತ್ತಿನ ಪಂದ್ಯಗಳ ಟಿಕೆಟ್‌ಗಳು ಈ ಅಧಿಕೃತ ವಿಶ್ವಕಪ್ ಅಪ್ಲಿಕೇಷನ್‌ನಲ್ಲಿ ಲಭ್ಯವಿವೆ.

click me!