ಭಾರತ ತಂಡದ ತೊರೆದ ಮೇಲೆ ಗ್ಯಾರಿ ಕರ್ಸ್ಟನ್‌ಗೆ ಏನನ್ನೂ ಗೆಲ್ಲಲು ಆಗಿಲ್ಲ; ಅಚ್ಚರಿ ಹೇಳಿಕೆ ನೀಡಿದ ಸೆಹ್ವಾಗ್..!

By Naveen KodaseFirst Published Jun 29, 2023, 1:52 PM IST
Highlights

ವಿಶ್ವಕಪ್ ಚಾಂಪಿಯನ್ ಕೋಚ್ ಗ್ಯಾರಿ ಕರ್ಸ್ಟನ್‌ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ ವೀರೂ
ನಮ್ಮಿಂದ ಗ್ಯಾರಿ ಕರ್ಸ್ಟನ್‌ ಯಶಸ್ವಿ ಕೋಚ್ ಆಗಿದ್ದು ಎಂದ ಸೆಹ್ವಾಗ್
2011ರಲ್ಲಿ ಕರ್ಸ್ಟನ್‌ ಮಾರ್ಗದರ್ಶನದಲ್ಲಿ ಟೀಂ ಇಂಡಿಯಾ ಏಕದಿನ ವಿಶ್ವಕಪ್ ಚಾಂಪಿಯನ್ ಆಗಿತ್ತು

ನವದೆಹಲಿ(ಜೂ.29): ಬಹುನಿರೀಕ್ಷಿತ 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ಭರದ ಸಿದ್ದತೆಗಳು ಆರಂಭವಾಗಿವೆ. ಹೀಗಿರುವಾಗಲೇ ಕಳೆದ ಮಂಗಳವಾರ(ಜೂ.27)ವಷ್ಟೇ ಐಸಿಸಿ, ಪ್ರತಿಷ್ಠಿತ ಏಕದಿನ ವಿಶ್ವಕಪ್ ಟೂರ್ನಿಗೆ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಸಂಪೂರ್ಣ ಏಕದಿನ ವಿಶ್ವಕಪ್ ಟೂರ್ನಿಗೆ ಈ ಬಾರಿ ಭಾರತ ಆತಿಥ್ಯವನ್ನು ವಹಿಸಿದ್ದು, ಐಸಿಸಿ ಟ್ರೋಫಿ ಬರ ನೀಗಿಸಿಕೊಳ್ಳಲು ರೋಹಿತ್ ಶರ್ಮಾ ಪಡೆ ಎದುರು ನೋಡುತ್ತಿದೆ.

ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಹಾಗೂ ತಂಡದ ಹೆಡ್‌ ಕೋಚ್ ರಾಹುಲ್ ದ್ರಾವಿಡ್ ಮೇಲೆ ಕಪ್ ಗೆಲ್ಲಲೇಬೇಕಾದ ಗುರುತರವಾದ ಜವಾಬ್ದಾರಿ ಇದೆ. ಭಾರತ ಕ್ರಿಕೆಟ್‌ ತಂಡವು 2011ರಲ್ಲಿ ಕೊನೆಯ ಬಾರಿಗೆ ಐಸಿಸಿ ಏಕದಿನ ವಿಶ್ವಕಪ್ ಜಯಿಸಿತ್ತು. ಆಗ ಕ್ರಿಕೆಟ್ ದಂತಕಥೆ ಸಚಿನ್‌ ತೆಂಡುಲ್ಕರ್ ತಮ್ಮ ವೃತ್ತಿಜೀವನದ ಕೊನೆಯ ಏಕದಿನ ಪಂದ್ಯವನ್ನಾಡಿದ್ದರು. ಇದಾದ ಬಳಿಕ ನಡೆದ ಕಳೆದೆರಡು ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡವು ಸೆಮಿಫೈನಲ್‌ನಲ್ಲೇ ಮುಗ್ಗರಿಸುವ ಮೂಲಕ ನಿರಾಸೆ ಅನುಭವಿಸಿದೆ. 

Latest Videos

ಮರುಜನ್ಮ ಪಡೆದು 5 ತಿಂಗಳಾಗಿದೆ: ರಿಷಭ್‌ ಪಂತ್‌ ಭಾವನಾತ್ಮಕ ಸಂದೇಶ!

1983ರಲ್ಲಿ ಟೀಂ ಇಂಡಿಯಾ ಕಪಿಲ್ ದೇವ್ ನಾಯಕತ್ವದಲ್ಲಿ ಬಲಾಢ್ಯ ವೆಸ್ಟ್ ಇಂಡೀಸ್ ತಂಡವನ್ನು ಮಣಿಸಿ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಇದಾದ ಬಳಿಕ ಬರೋಬ್ಬರಿ 28 ವರ್ಷಗಳ ನಂತರ ಅಂದರೆ 2011ರಲ್ಲಿ ಗ್ಯಾರಿ ಕರ್ಸ್ಟನ್‌ ಮಾರ್ಗದರ್ಶನದಲ್ಲಿ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಟೀಂ ಇಂಡಿಯಾ, ಮುಂಬೈ ವಾಂಖೇಡೆ ಮೈದಾನದಲ್ಲಿ ಶ್ರೀಲಂಕಾ ತಂಡವನ್ನು ಬಗ್ಗುಬಡಿದು ಏಕದಿನ ವಿಶ್ವಕಪ್ ಟ್ರೋಫಿಗೆ ಮುತ್ತಿಕ್ಕಿತ್ತು. ಇದಾದ ಬಳಿಕ ಧೋನಿಯ ನಾಯಕತ್ವದ ಕುರಿತಂತೆ ಅಪಾರ ಮೆಚ್ಚುಗೆ ವ್ಯಕ್ತವಾಗಿತ್ತು. ಇದರ ಜತೆಗೆ ಕೋಚ್ ಗ್ಯಾರಿಯ ತಂತ್ರಗಾರಿಯೂ ವ್ಯಾಪಕ ಚರ್ಚೆಯ ವಿಚಾರವಾಗಿ ಹೊರಹೊಮ್ಮಿತ್ತು.

ಏಕದಿನ ವಿಶ್ವಕಪ್ ಜಯಿಸಿದ ಬಳಿಕ ಸಾಕಷ್ಟು ತಾರಾ ಕ್ರಿಕೆಟಿಗರು ಗ್ಯಾರಿ ಕರ್ಸ್ಟನ್‌ ಅವರ ಕೋಚಿಂಗ್ ಕುರಿತಂತೆ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್, ಗುರು ಗ್ಯಾರಿ ಕುರಿತಂತೆ ಅಚ್ಚರಿಯ ಹೇಳಿಕೆ ನೀಡಿದ್ದು, ಆಟಗಾರರಾದ ನಾವೆಲ್ಲರೂ ಸೇರಿ ಗ್ಯಾರಿ ಕರ್ಸ್ಟನ್‌ ಅವರನ್ನು ಮಾಡಿದ್ದೇವೆ ಎಂದು ಹೇಳಿದ್ದಾರೆ.

"ಕೋಚ್ ಅವರ ಗೌರವ ಮೈದಾನದಲ್ಲಿ ಯಾರೆಲ್ಲ ಆಡುತ್ತಿದ್ದಾರೆ ಎನ್ನುವುದನ್ನು ಅವಲಂಬಿಸಿರುತ್ತದೆ. ಒಂದು ವೇಳೆ ಮೈದಾನದಲ್ಲಿರುವ ಆಟಗಾರರು ಚೆನ್ನಾಗಿ ಆಡಿದರೆ ಅದರ ಶ್ರೇಯ ಕೋಚ್‌ಗೆ ಸಲ್ಲುತ್ತದೆ. ಅದೇ ರೀತಿ ಆಟಗಾರರು ಚೆನ್ನಾಗಿ ಆಡದಿದ್ದರೆ, ಉಲ್ಟಾ ಆಗುತ್ತದೆ. ನಾವೆಲ್ಲರೂ ಸೇರಿ ವಿಶ್ವಕಪ್ ಗೆಲ್ಲುವ ಮೂಲಕ ಗ್ಯಾರಿ ಕರ್ಸ್ಟನ್‌ ಅವರನ್ನು ವಿಶ್ವಕಪ್ ವಿಜೇತ ತಂಡದ ಕೋಚ್‌ ಆಗುವಂತೆ ಮಾಡಿದೆವು. ಅವರು ಭಾರತ ತಂಡವನ್ನು ತೊರೆದ ಬಳಿಕ ಏನನ್ನೂ ಮಾಡಲು ಸಾಧ್ಯವಾಗಲಿಲ್ಲ. 2011ರ ಏಕದಿನ ವಿಶ್ವಕಪ್ ಬಳಿಕ ಅವರು ಹಲವಾರು ತಂಡದ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದಾರೆ, ಆದರೆ ಅವರು ಯಶಸ್ವಿಯಾಗಲು ಸಾಧ್ಯವಾಗಲಿಲ್ಲ" ಎಂದು ಸೆಹ್ವಾಗ್ ಅಭಿಪ್ರಾಯಪಟ್ಟಿದ್ದಾರೆ.

2011ರ ಏಕದಿನ ವಿಶ್ವಕಪ್ ಟೂರ್ನಿ ಮುಕ್ತಾಯದ ಬಳಿಕ ಗ್ಯಾರಿ ಕರ್ಸ್ಟನ್‌, ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸಿದರು. ಇದಾದ ಬಳಿಕ ಜಗತ್ತಿನಾದ್ಯಂತ ಹಲವಾರು ಟಿ20 ಲೀಗ್‌ಗಳಲ್ಲಿ ಹೆಡ್‌ ಕೋಚ್ ಆಗಿ ಕಾರ್ಯನಿರ್ವಹಿಸಿದರು. ಆದರೆ ಹೆಡ್‌ ಕೋಚ್‌ ಆಗಿ ತಂಡವನ್ನು ಚಾಂಪಿಯನ್‌ ಪಟ್ಟಕ್ಕೇರಿಸಲು ವಿಫಲವಾಗಿದ್ದರು. ಆದರೆ 2022ರಲ್ಲಿ ನಡೆದ ಐಪಿಎಲ್‌ ಟೂರ್ನಿಯಲ್ಲಿ ಗ್ಯಾರಿ ಕರ್ಸ್ಟನ್‌, ಗುಜರಾತ್ ಟೈಟಾನ್ಸ್ ತಂಡದ ಮೆಂಟರ್‌ ಆಗಿದ್ದರು. 2022ರ ಐಪಿಎಲ್ ಟೂರ್ನಿಯಲ್ಲಿ ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟಾನ್ಸ್ ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿತ್ತು.

click me!