
ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೇಟ್ ಅಸೋಸಿಯೇಷನ್ (ಕೆಎಸ್‌ಸಿಎ) ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿರುವ ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಗುರುವಾರ ಬೆಳಗ್ಗೆವರೆಗೆ ಪ್ರಕಟಿಸದಂತೆ ಚುನಾವಣಾಧಿಕಾರಿಗೆ ಹೈಕೋರ್ಟ್ ಸೂಚಿಸಿದೆ.
ಕೆಎಸ್‌ಸಿಎ ಅಧ್ಯಕ್ಷ ಸ್ಥಾನಕ್ಕೆ ತಾವು ಸಲ್ಲಿಸಿದ್ದ ನಾಮಪತ್ರ ತಿರಸ್ಕರಿಸಿರುವ ಕೆಎಸ್‌ಸಿಎ, ಚುನಾವಣಾಧಿಕಾರಿಗಳ ಕ್ರಮ ಪ್ರಶ್ನಿಸಿ ಕೆ.ಎನ್. ಶಾಂತಕುಮಾರ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜು ಅವರ ಪೀಠ, ನಾಮಪತ್ರ ಹಿಂಪಡೆದಿರುವವರನ್ನೂ ಸೇರಿಸಿದಂತೆ ಕಣದಲ್ಲಿರುವ ಅಭ್ಯರ್ಥಿಗಳ ಅಂತಿಮ ಪಟ್ಟಿ ಪ್ರಕಟಿಸಬಾರದು. ಅರ್ಜಿದಾರ ನಾಮಪತ್ರ ಸಲ್ಲಿಸಿರುವ ಮತ್ತು ನಾಮಪತ್ರ ಪರಿಶೀಲನೆ ನಡೆಸಿರುವ ಎಲ್ಲ ಪ್ರಕ್ರಿಯೆಗಳ ವಿಡಿಯೋ ತುಣುಕು ಮತ್ತು ಬಾಕಿ ಚಂದ ಹಣ ಪಾವತಿಸಿರುವ ಮಾಹಿತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಸೂಚಿಸಿದೆ.
ಅಲ್ಲದೆ, ಕೆಎಸ್‌ಸಿಎ, ಅಧ್ಯಕ್ಷ ಸ್ಥಾನಕ್ಕೆ ಅರ್ಜಿ ಸಲ್ಲಿಸಿರುವ ವೆಂಕಟೇಶ್ ಪ್ರಸಾದ್, ಕಲ್ಪನಾ ವೆಂಕಟಾಚಾರ್ ಮತ್ತು ಚುನಾವಣಾಧಿಕಾರಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಅರ್ಜಿದಾರರು ಪ್ರತಿನಿಧಿಸುವ ಪ್ರಜಾವಾಣಿ- ಡೆಕನ್ ಹೆರಾಲ್ಡ್ ಸ್ಪೋರ್ಟ್ ಕ್ಲಬ್‌ನ 200 ರು. ಚಂದಾದಾರಿಕೆ ಬಾಕಿ ಉಳಿಸಿಕೊಳ್ಳಲಾಗಿದೆ ಎಂಬ ಕಾರಣ ನೀಡಿ ಕೆಎಸ್‌ಸಿಎ ಅಧ್ಯಕ್ಷ ಸ್ಥಾನಕ್ಕೆ ಕೆ.ಎನ್.ಶಾಂತಕುಮಾರ್ ಅವರ ಸಲ್ಲಿಸಿದ್ದ ನಾಮಪತ್ರವನ್ನು ತಿರಸ್ಕರಿಸಲಾಗಿದೆ. 200 ರು. ದೊಡ್ಡ ಮೊತ್ತವಲ್ಲ. ಅದು ಆರ್ಥಿಕ ಹಗರಣ ಅಥವಾ ಗಂಭೀರವಾದ ಉಲ್ಲಂಘನೆಯೂ ಅಲ್ಲ. 200 ರು. ಗಿಂತ ಹೆಚ್ಚಿನ ಮೌಲ್ಯದ ಅಧ್ಯಕ್ಷೀಯ ನಾಮಪತ್ರವನ್ನು ತಿರಸ್ಕರಿಸುವುದು ಸರಿಯಲ್ಲ. ನಾಮಪತ್ರ ಪರಿಶೀಲನೆಗೂ ಮುನ್ನ ಅರ್ಜಿದಾರರು ಎಲ್ಲ ಬಾಕಿ ಮೊತ್ತ ಪಾವತಿಸಿದ್ದಾರೆ ಎಂದು ನ್ಯಾಯಾಲಯಕ್ಕೆ ವಿವರಿಸಿದರು.
ಕೆಎಸ್‌ಸಿಎ ಪರ ವಕೀಲರು, ನಾಮಪತ್ರ ಸಲ್ಲಿಸಿದ ದಿನವೇ ಚಂದಾ ಹಣ ಪಾವತಿಸಿರುವ ರಸೀದಿ ಸಲ್ಲಿಸುವುದು ಕಡ್ಡಾಯ. ಚುನಾವಣಾ ಪ್ರಕ್ರಿಯೆಯ ಉಸ್ತುವಾರಿಗೆ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಸುಭಾಷ್ ಅಡಿ ಅವರನ್ನು ನೇಮಿಸಲಾಗಿದೆ. ಶಾಂತಕುಮಾರ್ ಅವರು ಚಂದಾ ಹಣ ಪಾವತಿಸಿದ್ದರೆ, ಆ ಕುರಿತ ದಾಖಲೆಯನ್ನು ನ್ಯಾ. ಅಡಿ ಅವರ ಮುಂದೆ ಇಡಬಹುದಿತ್ತು. ಅದನ್ನು ಮಾಡದಕ್ಕೆ ಅವರ ನಾಮಪತ್ರ ತಿರಸ್ಕರಿಸಲಾಗಿದೆ. ಆ ಕ್ರಮ ಸರಿಯಾಗಿದೆ ಎಂದು ಪ್ರತಿಪಾದಿಸಿದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.