
ಗುವಾಹಟಿ: ಭಾರತ ಕ್ರಿಕೆಟ್ ತಂಡವು ದಕ್ಷಿಣ ಆಫ್ರಿಕಾ ಎದುರಿನ ಎರಡನೇ ಟೆಸ್ಟ್ ಪಂದ್ಯದಲ್ಲಿ 408 ರನ್ ಅಂತರದ ಹೀನಾಯ ಸೋಲು ಅನುಭವಿಸಿದೆ. ಇದರೊಂದಿಗೆ ತವರಿನಲ್ಲಿ ಗೌತಮ್ ಗಂಭೀರ್ ಮಾರ್ಗದರ್ಶನದಲ್ಲಿಯೇ ಎರಡನೇ ಬಾರಿಗೆ ವೈಟ್‌ವಾಷ್ ಮುಖಭಂಗ ಅನುಭವಿಸಿದೆ. ಕೋಲ್ಕತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಗಿಲ್ ನೇತೃತ್ವದ ಟೀಂ ಇಂಡಿಯಾ, ಕೇವಲ ಮೂರು ದಿನಗಳಲ್ಲೇ ಹರಿಣಗಳ ಎದುರು ಮಂಡಿಯೂರಿತ್ತು. ಇದೀಗ ಎರಡನೇ ಟೆಸ್ಟ್‌ನ ಐದೂ ದಿನವೂ ತೆಂಬಾ ಬವುಮಾ ಪಡೆ ಪಂದ್ಯದ ಮೇಲೆ ಹಿಡಿತ ಸಾಧಿಸುವ ಮೂಲಕ ಅನಾಯಾಸವಾದ ಗೆಲುವಿನ ನಗೆ ಬೀರಿತು. ಈ ಮೂಲಕ 2000-01ರ ಬಳಿಕ ಭಾರತದಲ್ಲಿ ಟೆಸ್ಟ್ ಸರಣಿ ಗೆಲ್ಲುವಲ್ಲಿ ದಕ್ಷಿಣ ಆಫ್ರಿಕಾ ತಂಡವು ಯಶಸ್ವಿಯಾಗಿದೆ. ಇನ್ನು ಇದಷ್ಟೇ ಅಲ್ಲದೇ ಟೆಸ್ಟ್ ಪಂದ್ಯವೊಂದರಲ್ಲಿ ಭಾರತದ ನೆಲದಲ್ಲಿ 400ಕ್ಕೂ ಹೆಚ್ಚು ರನ್ ಅಂತರದಲ್ಲಿ ಗೆದ್ದ ಮೊದಲ ತಂಡ ಎನ್ನುವ ಹೆಗ್ಗಳಿಕೆಗೆ ದಕ್ಷಿಣ ಆಫ್ರಿಕಾ ಪಾತ್ರವಾಗಿದೆ. ಭಾರತ ಟೆಸ್ಟ್ ಕ್ರಿಕೆಟ್ ತಂಡವು ಹಿಂದೆಂದೂ ಕಂಡು ಕೇಳರಿಯದಂತ ಪಾತಾಳಕ್ಕೆ ಕುಸಿದ ಬೆನ್ನಲ್ಲೇ ಗೌತಮ್ ಗಂಭೀರ್ ಅವರ ತಲೆದಂಡಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಆಗ್ರಹ ಜೋರಾಗಿದೆ.
ಭಾರತ ಕ್ರಿಕೆಟ್ ತಂಡವು ಈ ಗುವಾಹಟಿ ಟೆಸ್ಟ್ ಪಂದ್ಯಕ್ಕೂ ಮೊದಲು, 2004ರಲ್ಲಿ ನಾಗ್ಪುರದಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಎದುರು 342 ರನ್ ಅಂತರದ ಸೋಲು ಅನುಭವಿಸಿತ್ತು. ಇದು ಭಾರತ ಟೆಸ್ಟ್ ತಂಡ ಅನುಭವಿಸಿದ್ದ ಅತಿದೊಡ್ಡ ಸೋಲು ಎನಿಸಿಕೊಂಡಿತ್ತು
408 ರನ್: ದಕ್ಷಿಣ ಆಫ್ರಿಕಾ ವಿರುದ್ದ 2025ರಲ್ಲಿ
342 ರನ್: ಆಸ್ಟ್ರೇಲಿಯಾ ವಿರುದ್ದ 2004ರಲ್ಲಿ
341 ರನ್: ಪಾಕಿಸ್ತಾನ ವಿರುದ್ದ 2006ರಲ್ಲಿ
337 ರನ್: ಆಸ್ಟ್ರೇಲಿಯಾ ವಿರುದ್ದ 2007ರಲ್ಲಿ
333 ರನ್: ಆಸ್ಟ್ರೇಲಿಯಾ ವಿರುದ್ದ 2017ರಲ್ಲಿ
329 ರನ್: ದಕ್ಷಿಣ ಆಫ್ರಿಕಾ ವಿರುದ್ಧ 1996ರಲ್ಲಿ
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಹಾಲಿ ಚಾಂಪಿಯನ್ ದಕ್ಷಿಣ ಆಫ್ರಿಕಾ ತಂಡವು ಇದೀಗ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು 2-0 ಅಂತರದಲ್ಲಿ ಕ್ಲೀನ್‌ಸ್ವೀಪ್ ಮಾಡಿದೆ. ಕೋಲ್ಕತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಹರಿಣಗಳ ಪಡೆ 30 ರನ್ ಅಂತರದ ರೋಚಕ ಗೆಲುವು ಸಾಧಿಸಿದರೆ, ಗುವಾಹಟಿಯಲ್ಲಿ 408 ರನ್ ಅಂತರದ ಭಾರೀ ಗೆಲುವು ದಾಖಲಿಸಿದೆ.
ಇನ್ನು ಗೌತಮ್ ಗಂಭೀರ್ ಮಾರ್ಗದರ್ಶನದಲ್ಲಿ ಟೀಂ ಇಂಡಿಯಾ ತವರಿನಲ್ಲಿ ಆಡಿದ 9 ಪಂದ್ಯಗಳ ಪೈಕಿ 5 ಪಂದ್ಯಗಳಲ್ಲಿ ಸೋಲು ಅನುಭವಿಸಿದೆ. ಇದಕ್ಕಿಂತ ಮುಖ್ಯವಾಗಿ ನ್ಯೂಜಿಲೆಂಡ್ ಎದುರು 3-0 ಹಾಗೂ ದಕ್ಷಿಣ ಆಫ್ರಿಕಾ ಎದುರು 2-0 ಅಂತರದಲ್ಲಿ ವೈಟ್‌ವಾಷ್ ಅನುಭವಿಸುವ ಮೂಲಕ ಭಾರತ ಟೆಸ್ಟ್ ತಂಡವು ಪಾತಾಳಕ್ಕೆ ಕುಸಿಯುವಂತೆ ಮಾಡಿದ್ದಾರೆ ಎನ್ನುವ ಆರೋಪ ಗಂಭೀರ್ ಮೇಲಿದೆ. ಭಾರತ ಟೆಸ್ಟ್ ತಂಡವನ್ನು ಪಾತಾಳಕ್ಕೆ ಕುಸಿಯುವಂತೆ ಮಾಡಿದ ಗಂಭೀರ್ ಹಾಗೂ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್‌ಗೆ ಭಾರತ ರತ್ನ ನೀಡಿ ಎಂದು ನೆಟ್ಟಿಗರು ವ್ಯಂಗ್ಯವಾಡಿದ್ದಾರೆ.
ಇನ್ನು ಐರ್ಲೆಂಡ್ ಕ್ರಿಕೆಟ್ ತಂಡವು ತನ್ನ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಯ ಮೂಲಕ, ನಮ್ಮ ಎಲ್ಲಾ ಅಭಿಮಾನಿಗಳ ಗಮನಕ್ಕೆ, ನಾವು ಗೌತಮ್ ಗಂಭೀರ್ ಅವರನ್ನು ನಮ್ಮ ತಂಡದ ಹೊಸ ಹೆಡ್‌ಕೋಚ್ ಆಗಿ ನೇಮಿಸಿಕೊಳ್ಳುವುದಿಲ್ಲ. ಆ ಹುದ್ದೆ ಈಗಾಗಲೇ ಭರ್ತಿಯಾಗಿದೆ ಮತ್ತು ನಾವು 2025ರಲ್ಲಿ 75% ಪಂದ್ಯಗಳನ್ನು ಗೆದ್ದಿದ್ದೇವೆ ಎಂದು ಗೌತಿ ಕಾಲೆಳೆದಿದೆ.
ಭಾರತ ಟೆಸ್ಟ್ ತಂಡವನ್ನು ಉಳಿಸಲು ಇಂದೇ ಗೌತಮ್ ಗಂಭೀರ್ ಅವರ ತಲೆದಂಡ ಮಾಡಿ ಎಂದು ನೆಟ್ಟಿಗರೊಬ್ಬರು ಆಗ್ರಹಿಸಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.