T20 World Cup ಇಂಗ್ಲೆಂಡ್‌-ಪಾಕಿಸ್ತಾನ ಫೈನಲ್‌ಗೆ ಮಳೆ ಭೀತಿ! ಪಂದ್ಯ ರದ್ದಾದ್ರೆ ಟ್ರೋಫಿ ಯಾರಿಗೆ..?

By Naveen KodaseFirst Published Nov 12, 2022, 12:01 PM IST
Highlights

* ಐಸಿಸಿ ಟಿ20 ವಿಶ್ವಕಪ್ ಫೈನಲ್ ಪಂದ್ಯ ಆರಂಭಕ್ಕೆ ಕ್ಷಣಗಣನೆ
* ಪ್ರಶಸ್ತಿಗಾಗಿ ಇಂಗ್ಲೆಂಡ್-ಪಾಕಿಸ್ತಾನ ತಂಡಗಳು ಸೆಣಸಾಟ
* ಫೈನಲ್ ಪಂದ್ಯಕ್ಕೆ ಮಳೆರಾಯ  ಅಡ್ಡಿಪಡಿಸುವ ಸಾಧ್ಯತೆ

ಮೆಲ್ಬರ್ನ್‌(ನ.12): ಇಂಗ್ಲೆಂಡ್‌ ಹಾಗೂ ಪಾಕಿಸ್ತಾನ 2022ರ ಟಿ20 ವಿಶ್ವಕಪ್‌ನ ಜಂಟಿ ವಿಜೇತರಾಗಬಹುದು. ಐಸಿಸಿ ಟಿ20 ವಿಶ್ವಕಪ್ ಫೈನಲ್ ಪಂದ್ಯವು ನವೆಂಬರ್ 13ರಂದು ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆಯಬೇಕಿದೆ. ಆದರೆ ಬಹುನಿರೀಕ್ಷಿತ ಫೈನಲ್‌ಗೆ ಮಳೆ ಅಡ್ಡಿಯಾಗುವ ಸಾಧ್ಯತೆ ದಟ್ಟವಾಗಿದೆ. ಭಾನುವಾರ ಮೆಲ್ಬರ್ನ್‌ನಲ್ಲಿ ಮಳೆ ಸುರಿಯುವ ಸಾಧ್ಯತೆ ಶೇ.95ರಷ್ಟಿದೆ. ಸೋಮವಾರ ಮೀಸಲು ದಿನವಿದ್ದರೂ, ಅಂದೂ ಭಾರೀ ಮಳೆ ಮುನ್ಸೂಚನೆ ಇರುವ ಕಾರಣ ಪಂದ್ಯ ರದ್ದಾದರೂ ಅಚ್ಚರಿಯಿಲ್ಲ ಎನ್ನಲಾಗುತ್ತಿದೆ.

ನಿಯಮದ ಪ್ರಕಾರ ನಾಕೌಟ್‌ ಪಂದ್ಯದಲ್ಲಿ ಎರಡೂ ಇನ್ನಿಂಗ್ಸಲ್ಲಿ ಕನಿಷ್ಠ ತಲಾ 10 ಓವರ್‌ ಆಟ ನಡೆದರಷ್ಟೇ ಫಲಿತಾಂಶ ಹೊರಬೀಳಲಿದೆ. ಈ ನಡುವೆ ಐಸಿಸಿ ಪಂದ್ಯವನ್ನು ನಡೆಸಲು ಹಲವು ಸಿದ್ಧತೆಗಳನ್ನು ಮಾಡಿಕೊಂಡಿದೆ. ಭಾನುವಾರ ಪಂದ್ಯ ಸ್ಥಗಿತಗೊಂಡರೆ ಸೋಮವಾರ ಸ್ಥಳೀಯ ಕಾಲಮಾನ ಮಧ್ಯಾಹ್ನ 3ಕ್ಕೇ ಪಂದ್ಯ ಮರು ಆರಂಭಗೊಳ್ಳಲಿದೆ. ಪಂದ್ಯ ಮುಕ್ತಾಯಗೊಳಿಸಲು ಒಟ್ಟಾರೆ 4 ಗಂಟೆಗಳ ಕಾಲ ಹೆಚ್ಚುವರಿ ಸಮಯಾವಕಾಶವೂ ಸಿಗಲಿದೆ. ಇಷ್ಟಾಗಿಯೂ ತಲಾ 10 ಓವರ್‌ ಪಂದ್ಯ ನಡೆಸಲು ಸಾಧ್ಯವಾಗದೆ ಹೋದರೆ ಎರಡೂ ತಂಡಗಳಿಗೆ ಟ್ರೋಫಿ ಹಂಚಲಾಗುತ್ತದೆ.

ಇದೇ ವೇಳೆ ಮೆಲ್ಬರ್ನ್‌ ಕ್ರಿಕೆಟ್‌ ಮೈದಾನ(ಎಂಸಿಜಿ)ಯಿಂದ ಐದೂವರೆ ಕಿ.ಮೀ. ದೂರದಲ್ಲಿರುವ, ಮೇಲ್ಚಾವಣಿ ಹೊಂದಿರುವ ಮಾರ್ವೆಲ್‌ ಕ್ರೀಡಾಂಗಣಕ್ಕೆ ಫೈನಲ್‌ ಸ್ಥಳಾಂತರ ಸಾಧ್ಯವಿಲ್ಲ ಎಂದು ಐಸಿಸಿ ಸ್ಪಷ್ಟಪಡಿಸಿದೆ. ಫುಟ್ಬಾಲ್‌, ರಗ್ಬಿ ಸೇರಿ ವಿವಿಧ ಕ್ರೀಡೆಗಳಿಗೆ ಬಳಕೆಯಾಗುವ ಕ್ರೀಡಾಂಗಣದಲ್ಲಿ ತರಾತುರಿಯಲ್ಲಿ ಡ್ರಾಪ್‌ ಇನ್‌ ಪಿಚ್‌ ಅಳವಡಿಸಲು ಸಾಧ್ಯವಿಲ್ಲ ಎಂದು ಐಸಿಸಿ ಹೇಳಿದೆ.

ಭಾರತಕ್ಕೀಗ ಹೊಸ ತಂಡ ಕಟ್ಟುವ ಸವಾಲು; 2024ರ ಟಿ20 ವಿಶ್ವಕಪ್‌ಗೆ ಈಗಿನಿಂದಲೇ ಸಿದ್ದತೆ..!

ಬಾಬರ್ ಅಜಂ ನೇತೃತ್ವದ ಪಾಕಿಸ್ತಾನ ತಂಡವು ಟಿ20 ವಿಶ್ವಕಪ್ ಟೂರ್ನಿಯ ಮೊದಲೆರಡು ಪಂದ್ಯಗಳಲ್ಲಿ ಸೋಲು ಅನುಭವಿಸಿದರೂ, ಇದಾದ ಬಳಿಕ ಫಿನಿಕ್ಸ್‌ನಂತೆ ಎದ್ದುನಿಂತು ಸತತ 3 ಪಂದ್ಯ ಗೆದ್ದು ಸೆಮೀಸ್‌ಗೆ ಲಗ್ಗೆಯಿಟ್ಟಿತ್ತು. ಇನ್ನು ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್ ಎದುರು 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿ ಫೈನಲ್‌ಗೆ ಲಗ್ಗೆಯಿಟ್ಟಿದೆ. ಇನ್ನೊಂದೆಡೆ ಇಂಗ್ಲೆಂಡ್ ತಂಡ ಕೂಡಾ ಐರ್ಲೆಂಡ್ ಎದುರು ಆಘಾತಕಾರಿ ಸೋಲಿನ ಬಳಿಕವೂ ಅದ್ಭುತ ಪ್ರದರ್ಶನದ ಮೂಲಕ ಸೆಮೀಸ್‌ಗೆ ಲಗ್ಗೆಯಿಟ್ಟಿತ್ತು. ಎರಡನೇ ಸೆಮಿಫೈನಲ್‌ನಲ್ಲಿ ಬಲಿಷ್ಠ ಭಾರತ ತಂಡದ ಎದುರು 10 ವಿಕೆಟ್‌ಗಳ ಜಯ ಸಾಧಿಸುವ ಮೂಲಕ ಫೈನಲ್‌ಗೆ ಲಗ್ಗೆಯಿಟ್ಟಿದ್ದು, ಎರಡನೇ ಚುಟುಕು ವಿಶ್ವಕಪ್ ಎತ್ತಿ ಹಿಡಿಯುವ ವಿಶ್ವಾಸದಲ್ಲಿದೆ.

ಪಶ್ಚಿಮ ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಸ್ಟ್ರೇಲಿಯಾ ಭಾಗಗಳಲ್ಲಿ ಅಕ್ಟೋಬರ್ ಹಾಗೂ ನವೆಂಬರ್ ತಿಂಗಳಿನಲ್ಲಿ ಸಾಧಾರಣ ಮಳೆಯಾಗುವುದು ಸಾಮಾನ್ಯವೆನಿಸಿದೆ. ಈ ಬಾರಿಯ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಸೂಪರ್ 12 ಹಂತದ ಮೂರು ಪಂದ್ಯಗಳಾದ ನ್ಯೂಜಿಲೆಂಡ್-ಆಫ್ಘಾನಿಸ್ತಾನ, ಆಫ್ಘಾನಿಸ್ತಾನ-ಐರ್ಲೆಂಡ್ ಹಾಗೂ ಆಸ್ಟ್ರೇಲಿಯಾ-ಇಂಗ್ಲೆಂಡ್ ನಡುವಿನ ಪಂದ್ಯಗಳು ಮಳೆಯಿಂದಾಗಿ ರದ್ದಾಗಿದ್ದವು. ಇನ್ನು ಇಂಗ್ಲೆಂಡ್ ಹಾಗೂ ಐರ್ಲೆಂಡ್ ನಡುವಿನ ಪಂದ್ಯಕ್ಕೂ ಮಳೆ ಅಡ್ಡಿ ಪಡಿಸಿತ್ತು. ಆಗ ಡೆಕ್ವರ್ಥ್ ಲೂಯಿಸ್ ನಿಯಮದನ್ವಯ ಐರ್ಲೆಂಡ್ ತಂಡವು ಗೆಲುವಿನ ನಗೆ ಬೀರಿತ್ತು. ಇನ್ನು ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಪಂದ್ಯಕ್ಕೂ ಮಳೆರಾಯ ಅಡ್ಡಿಪಡಿಸಿತ್ತಾದರೂ, ಡೆಕ್ವರ್ಡ್‌ ಲೂಯಿಸ್ ನಿಯಮದನ್ವಯ ಟೀಂ ಇಂಡಿಯಾ 5 ವಿಕೆಟ್‌ಗಳ ಜಯ ಸಾಧಿಸಿತ್ತು.

click me!