
ಮುಂಬೈ: ದುಲೀಪ್ ಟ್ರೋಫಿ ಕ್ರಿಕೆಟ್ ಟೂರ್ನಿಗೆ ಸಿದ್ಧವಾಗುತ್ತಿರುವ ಈಸ್ಟ್ ಝೋನ್ ತಂಡದಲ್ಲಿ ಒಂದು ಆಯ್ಕೆ ಈಗ ದೊಡ್ಡ ಚರ್ಚೆಗೆ ಕಾರಣವಾಗಿದೆ. ಕೇವಲ 15 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿಯನ್ನು ಈಸ್ಟ್ ಝೋನ್ ತಂಡದ ಉಪನಾಯಕನಾಗಿ ನೇಮಕ ಮಾಡಿದ್ದೇ ಈ ಚರ್ಚೆಗೆ ಮೂಲ. ಖ್ಯಾತ ಕ್ರಿಕೆಟ್ ಕಾಮೆಂಟೇಟರ್ ಹರ್ಷ ಭೋಗ್ಲೆ ಈ ನಿರ್ಧಾರವನ್ನು ಕಟುವಾಗಿ ಟೀಕಿಸಿದ್ದಾರೆ.
ಪೂರ್ವ ಝೋನ್ ತಂಡದಲ್ಲಿ ಇಶಾನ್ ಕಿಶನ್ ನಾಯಕರಾಗಿದ್ದು, ಹಲವು ಅನುಭವಿ ಆಟಗಾರರಿದ್ದಾರೆ. ಹೀಗಿರುವಾಗ, ರೆಡ್-ಬಾಲ್ ಕ್ರಿಕೆಟ್‌ನಲ್ಲಿ ಹೇಳಿಕೊಳ್ಳುವಂತಹ ಅನುಭವ ಇಲ್ಲದ ವೈಭವ್‌ಗೆ ಉಪನಾಯಕನ ಪಟ್ಟ ನೀಡಿದ್ದೇಕೆ ಎಂದು ಹರ್ಷ ಭೋಗ್ಲೆ ಪ್ರಶ್ನಿಸಿದ್ದಾರೆ.
ಈ ಬಗ್ಗೆ ತಮ್ಮ 'ಎಕ್ಸ್' ಖಾತೆಯಲ್ಲಿ ಬರೆದುಕೊಂಡಿರುವ ಅವರು, "ಸೀನಿಯರ್ ರೆಡ್-ಬಾಲ್ ತಂಡಕ್ಕೆ ವೈಭವ್ ಸೂರ್ಯವಂಶಿಯನ್ನು ಉಪನಾಯಕನಾಗಿ ನೇಮಿಸಿದ್ದರ ಹಿಂದಿನ ತರ್ಕ ಏನು ಎಂಬುದು ನನಗೆ ಎಷ್ಟೇ ಯೋಚಿಸಿದರೂ ಅರ್ಥವಾಗುತ್ತಿಲ್ಲ. ಆತ ಈವರೆಗೆ ಆಡಿದ 12 ಇನ್ನಿಂಗ್ಸ್‌ಗಳಲ್ಲಿ ಕೇವಲ 17.25ರ ಸರಾಸರಿಯಲ್ಲಿ 207 ರನ್ ಗಳಿಸಿದ್ದಾನೆ. ಅವನಲ್ಲಿ ಅಸಾಧಾರಣ ಪ್ರತಿಭೆ ಇದೆ, ಅದರಲ್ಲಿ ಅನುಮಾನವೇ ಇಲ್ಲ. ಆದರೆ ರೆಡ್-ಬಾಲ್ ಕ್ರಿಕೆಟ್‌ನಲ್ಲಿ ಆತ ಇನ್ನೂ ಸಾಕಷ್ಟು ಕಲಿಯಬೇಕಿದೆ" ಎಂದು ಹೇಳಿದ್ದಾರೆ.
I wonder what the thinking is behind making Sooryavanshi vice-captain of a senior red ball team. He has played 12 innings for 207 runs @ 17.25. His talent is extraordinary but there is a learning curve and he is at the bottom of it in red ball cricket.
— Harsha Bhogle (@bhogleharsha) July 30, 2026
ಈಸ್ಟ್ ಝೋನ್ ತಂಡಕ್ಕಾಗಿ ವೈಭವ್ ಸೂರ್ಯವಂಶಿ, ಅನುಭವಿ ಬಂಗಾಳ ಓಪನರ್ ಅಭಿಮನ್ಯು ಈಶ್ವರನ್ ಜೊತೆ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಐಪಿಎಲ್ ಮತ್ತು ಸೀಮಿತ ಓವರ್‌ಗಳ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿರುವ ವೈಭವ್, ಫಸ್ಟ್ ಕ್ಲಾಸ್ ಕ್ರಿಕೆಟ್‌ನಲ್ಲಿ (8 ಪಂದ್ಯಗಳಿಂದ 207 ರನ್, ಗರಿಷ್ಠ ಸ್ಕೋರ್ 93) ತಮ್ಮ ಸಾಮರ್ಥ್ಯ ಸಾಬೀತುಪಡಿಸಲು ದುಲೀಪ್ ಟ್ರೋಫಿ ಒಂದು ಉತ್ತಮ ಅವಕಾಶವಾಗಿದೆ. ವೈಭವ್ ತಂಡದಲ್ಲಿರುವ ಏಕೈಕ ಬಿಹಾರ ಆಟಗಾರ ಎನಿಸಿಕೊಂಡಿದ್ದಾರೆ.
ಇನ್ನು, ಭಾರತೀಯ ತಂಡದ ವೇಗಿಗಳಾದ ಮೊಹಮ್ಮದ್ ಶಮಿ ಮತ್ತು ಮುಕೇಶ್ ಕುಮಾರ್ ಅವರ ಸೇರ್ಪಡೆ ಈಸ್ಟ್ ಝೋನ್ ತಂಡದ ಬೌಲಿಂಗ್ ವಿಭಾಗಕ್ಕೆ ದೊಡ್ಡ ಬಲ ನೀಡಿದೆ. 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ ಬಳಿಕ ಭಾರತ ತಂಡದಿಂದ ಹೊರಗುಳಿದಿರುವ ಮೊಹಮ್ಮದ್ ಶಮಿ, ಇದೀಗ ದುಲೀಪ್ ಟ್ರೋಫಿ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ತೋರುವ ಮೂಲಕ ಟೀಂ ಇಂಡಿಯಾಗೆ ಕಮ್‌ಬ್ಯಾಕ್ ಮಾಡುವ ವಿಶ್ವಾಸದಲ್ಲಿದ್ದಾರೆ. ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ಕೇವಲ ಇನ್ನೊಂದೇ ವರ್ಷ ಬಾಕಿ ಇರುವುದರಿಂದ ಶಮಿ, ಶತಾಯಗತಾಯ ಭಾರತ ತಂಡ ಕೂಡಿಕೊಳ್ಳಲು ಶಕ್ತಿಮೀರಿ ಪ್ರಯತ್ನ ಪಡುವ ನಿರೀಕ್ಷೆಯಿದೆ.
ಟೂರ್ನಿ ಆಗಸ್ಟ್ 23ರಿಂದ ಬೆಂಗಳೂರಿನ ಬಿಸಿಸಿಐ ಸೆಂಟರ್‌ನಲ್ಲಿ ಆರಂಭಗೊಳ್ಳಲಿದ್ದು, ಒಟ್ಟು 6 ವಲಯ ತಂಡಗಳು ಪಾಲ್ಗೊಳ್ಳಲಿವೆ.
ಇಶಾನ್ ಕಿಶನ್ (ನಾಯಕ), ವೈಭವ್ ಸೂರ್ಯವಂಶಿ (ಉಪನಾಯಕ), ಅಭಿಮನ್ಯು ಈಶ್ವರನ್, ಸುದೀಪ್ ಘರಾಮಿ, ಮೊಹಮ್ಮದ್ ಶಮಿ, ಮುಕೇಶ್ ಕುಮಾರ್, ಶಹಬಾಜ್ ಅಹ್ಮದ್, ಸೂರಜ್ ಜೈಸ್ವಾಲ್, ವಿರಾಟ್ ಸಿಂಗ್, ಕುಮಾರ್ ಕುಶಾಗ್ರ, ಶಿಖರ್ ಮೋಹನ್, ಸುಭ್ರಾಂಶು ಸೇನಾಪತಿ, ಅಭಿಜಿತ್ ಸರ್ಕಾರ್, ಅನುಕುಲ್ ರಾಯ್, ಡೆನಿಶ್ ದಾಸ್.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.