
ಬೆಂಗಳೂರು: ಐಪಿಎಲ್ 2027ರ ಆಟಗಾರರ ರಿಟೆನ್ಷನ್ ಗಡುವಿಗೂ ಮುನ್ನವೇ ಆಟಗಾರರ ಟ್ರೇಡ್ ಮಾರುಕಟ್ಟೆಯಲ್ಲಿ ಭಾರೀ ಸಂಚಲನ ಸೃಷ್ಟಿಯಾಗಿದೆ. ಮುಂಬೈ ಇಂಡಿಯನ್ಸ್ (MI) ತಂಡದ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರನ್ನು ಪಂಜಾಬ್ ಕಿಂಗ್ಸ್ (PBKS) ತಂಡಕ್ಕೆ ವರ್ಗಾಯಿಸುವ ಒಪ್ಪಂದ ಬಹುತೇಕ ಅಂತಿಮ ಹಂತ ತಲುಪಿದೆ ಎಂದು ವರದಿಯೊಂದು ತಿಳಿಸಿದೆ. ಈ ಡೀಲ್‌ನಲ್ಲಿ ಭಾರತದ ವೇಗದ ಬೌಲರ್ ಅರ್ಶದೀಪ್ ಸಿಂಗ್ ಮತ್ತು ವಿಕೆಟ್ ಕೀಪರ್ ಬ್ಯಾಟರ್ ವಿಷ್ಣು ವಿನೋದ್ ಮುಂಬೈ ಇಂಡಿಯನ್ಸ್ ತಂಡ ಸೇರಲಿದ್ದಾರೆ ಎನ್ನಲಾಗಿದೆ.
ಐಪಿಎಲ್ 2026ರ ಟೂರ್ನಿ ಮುಕ್ತಾಯಗೊಂಡ ಬಳಿಕ ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ತಂಡವನ್ನು ತೊರೆಯಲಿದ್ದಾರೆ ಎಂಬ ಊಹಾಪೋಹಗಳು ಕೇಳಿಬರುತ್ತಿದ್ದವು. ಹಲವು ಫ್ರಾಂಚೈಸಿಗಳು ಅವರನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ಮಾತುಕತೆ ನಡೆಸಿವೆ ಎಂಬ ವರದಿಗಳೂ ಪ್ರಕಟವಾಗಿದ್ದವು. ಇದೀಗ 'ಸ್ಪೋರ್ಟ್ಸ್‌ಸ್ಟಾರ್' ವರದಿಯ ಪ್ರಕಾರ, ಮುಂಬೈ ಇಂಡಿಯನ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳ ಉನ್ನತ ಆಡಳಿತ ಮಂಡಳಿಗಳ ನಡುವೆ ಈ ಟ್ರೇಡ್ ಕುರಿತು ಬಹುತೇಕ ಒಮ್ಮತ ಮೂಡಿದೆ.
ರಿಕಿ ಪಾಂಟಿಂಗ್ ಕೋಚ್ ಆಗಿರುವ ಪಂಜಾಬ್ ಕಿಂಗ್ಸ್ ತಂಡವು ಮುಂಬೈ ಇಂಡಿಯನ್ಸ್ ಜೊತೆಗಿನ ಮಾತುಕತೆಯಲ್ಲಿ ಸಾಕಷ್ಟು ಪ್ರಗತಿ ಸಾಧಿಸಿದೆ. ಪ್ರಸ್ತಾವಿತ ಒಪ್ಪಂದದ ಪ್ರಕಾರ, ಹಾರ್ದಿಕ್ ಪಾಂಡ್ಯ ಪಂಜಾಬ್ ಕಿಂಗ್ಸ್ ತಂಡಕ್ಕೆ ತೆರಳಲಿದ್ದು, ಭಾರತದ ವೇಗದ ಬೌಲರ್ ಅರ್ಶದೀಪ್ ಸಿಂಗ್ ಮತ್ತು ವಿಕೆಟ್ ಕೀಪರ್ ಬ್ಯಾಟರ್ ವಿಷ್ಣು ವಿನೋದ್ ಮುಂಬೈ ಇಂಡಿಯನ್ಸ್ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ. ಆದರೆ, ಈ ಸಂಭಾವ್ಯ ಆಟಗಾರರ ವರ್ಗಾವಣೆ ಕುರಿತು ಮುಂಬೈ ಇಂಡಿಯನ್ಸ್ ಅಥವಾ ಪಂಜಾಬ್ ಕಿಂಗ್ಸ್ ಫ್ರಾಂಚೈಸಿಗಳು ಈವರೆಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಹೀಗಾಗಿ ಟ್ರೇಡ್ ಒಪ್ಪಂದ ಅಂತಿಮಗೊಂಡಿದೆ ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ.
ಇನ್ನು ಟಿ20 ಕ್ರಿಕೆಟ್‌ನಲ್ಲಿ ಜಸ್ಪ್ರೀತ್ ಬುಮ್ರಾ ಎಷ್ಟೊಂದು ಅಪಾಯಕಾರಿ ಬೌಲರ್ ಎನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಅದೇ ರೀತಿ ಎಡಗೈ ವೇಗಿ ಅರ್ಶದೀಪ್ ಸಿಂಗ್ ಕೂಡಾ ಪವರ್‌ಪ್ಲೇ ಹಾಗೂ ಡೆತ್ ಓವರ್‌ನಲ್ಲಿ ಮಿಂಚಿನ ದಾಳಿ ನಡೆಸುವ ಕ್ಷಮತೆ ಹೊಂದಿರುವ ವೇಗಿಯಾಗಿದ್ದಾರೆ. ಈ ಇಬ್ಬರೂ ಒಂದೇ ತಂಡದಲ್ಲಿದ್ದರೇ, ಎದುರಾಳಿ ಪಾಳಯದ ಬ್ಯಾಟರ್‌ಗಳ ಎದೆಯಲ್ಲಿ ನಡುಕ ಹುಟ್ಟೋದು ಗ್ಯಾರಂಟಿ. ಹೀಗಾಗಿ ಹಾರ್ದಿಕ್ ಪಾಂಡ್ಯ ಕೊಟ್ಟು ಅರ್ಶದೀಪ್ ಕರೆ ತರಲು ಮುಂಬೈ ಫ್ರಾಂಚೈಸಿ ಒಲವು ತೋರಿದೆ ಎನ್ನಲಾಗಿದೆ.
🚨 THE BIGGEST IPL TRADE. 🚨
HARDIK IN PUNJAB. 💵
ARSHDEEP IN MUMBAI. 🤯
- Hardik Pandya could be traded to Punjab Kings with Arshdeep Singh and Vishnu Vinod moving to Mumbai Indians. (The Hindu). https://t.co/WBrxq4l3N5
— Mufaddal Vohra (@mufaddal_vohra) November 3, 2026
ಇದಕ್ಕೂ ಮೊದಲು ರಾಜಸ್ಥಾನ್ ರಾಯಲ್ಸ್ (RR), ಚೆನ್ನೈ ಸೂಪರ್ ಕಿಂಗ್ಸ್ (CSK) ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡಗಳು ಹಾರ್ದಿಕ್ ಪಾಂಡ್ಯ ಅವರನ್ನು ಖರೀದಿಸಲು ಆಸಕ್ತಿ ತೋರಿವೆ ಎಂಬ ವರದಿಗಳು ಪ್ರಕಟವಾಗಿದ್ದವು. ಈ ಪೈಕಿ ಕೆಕೆಆರ್ ಮಾತ್ರ ಮುಂಬೈ ಇಂಡಿಯನ್ಸ್ ಜೊತೆ ಮುಂದುವರಿದ ಹಂತದ ಮಾತುಕತೆ ನಡೆಸಿತ್ತು ಎನ್ನಲಾಗಿದೆ. ಹಾರ್ದಿಕ್ ಅವರನ್ನು ಬಿಟ್ಟುಕೊಡುವ ಬದಲಿಗೆ ಕೋಲ್ಕತ್ತಾ ತಂಡದಿಂದ ಹರ್ಷಿತ್ ರಾಣಾ ಮತ್ತು ಅಂಗ್‌ಕೃಷ್ ರಘುವಂಶಿ ಅವರನ್ನು ಪಡೆಯಲು ಮುಂಬೈ ಇಂಡಿಯನ್ಸ್ ಆಸಕ್ತಿ ತೋರಿತ್ತು. ಆದರೆ, ಈ ಇಬ್ಬರು ಆಟಗಾರರನ್ನು ಬಿಟ್ಟುಕೊಡಲು ಕೆಕೆಆರ್ ಸಿದ್ಧವಿರಲಿಲ್ಲ ಎಂದು ವರದಿಯಾಗಿತ್ತು.
ರಾಜಸ್ಥಾನ್ ರಾಯಲ್ಸ್ ಜೊತೆಗಿನ ಮಾತುಕತೆಯಲ್ಲಿ ಯಶಸ್ವಿ ಜೈಸ್ವಾಲ್ ಮತ್ತು ರವಿ ಬಿಷ್ಣೋಯ್ ಅವರನ್ನು ಪಡೆಯಲು ಮುಂಬೈ ಆಸಕ್ತಿ ಹೊಂದಿತ್ತು ಎನ್ನಲಾಗಿದೆ. ಆದರೆ, ಈ ಚರ್ಚೆಯಲ್ಲಿ ಹೆಚ್ಚಿನ ಪ್ರಗತಿ ಕಂಡುಬಂದಿರಲಿಲ್ಲ. ಇನ್ನು ಚೆನ್ನೈ ಸೂಪರ್ ಕಿಂಗ್ಸ್ ಜೊತೆಗಿನ ಮಾತುಕತೆಯಲ್ಲಿ ಪ್ರತಿಭಾವಂತ ಬ್ಯಾಟರ್ ಆಯುಷ್ ಮ್ಹಾತ್ರೆ ಅವರನ್ನು ಪಡೆಯಲು ಮುಂಬೈ ಇಂಡಿಯನ್ಸ್ ಬಯಸಿತ್ತು. ಆದರೆ, ಚೆನ್ನೈ ಫ್ರಾಂಚೈಸಿ ಈ ಪ್ರಸ್ತಾವನೆಯನ್ನು ಸ್ಪಷ್ಟವಾಗಿ ತಿರಸ್ಕರಿಸಿತ್ತು ಎಂದು ವರದಿಯಾಗಿದೆ.
ಐಪಿಎಲ್ 2026ರ ಟೂರ್ನಿ ಮುಕ್ತಾಯದ ಬಳಿಕ ಹಾರ್ದಿಕ್ ಪಾಂಡ್ಯ ಸ್ಪರ್ಧಾತ್ಮಕ ಕ್ರಿಕೆಟ್‌ನಿಂದ ದೂರ ಉಳಿದಿದ್ದಾರೆ. ಐಪಿಎಲ್ 2027ಕ್ಕೂ ಮುನ್ನ ಅವರು ಮತ್ತೆ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳುವ ಸಾಧ್ಯತೆ ಕಡಿಮೆ ಎಂದು ಕೆಲವು ಮಾಧ್ಯಮ ವರದಿಗಳು ಹೇಳಿವೆ.
ಒಟ್ಟಿನಲ್ಲಿ, ಹಾರ್ದಿಕ್ ಪಾಂಡ್ಯ ಅವರ ಭವಿಷ್ಯ ಮತ್ತು ಮುಂಬೈ ಇಂಡಿಯನ್ಸ್ ತಂಡದೊಂದಿಗೆ ಅವರ ಮುಂದಿನ ಒಡನಾಟದ ಬಗ್ಗೆ ಕುತೂಹಲ ಹೆಚ್ಚಾಗಿದೆ. ಆದರೆ, ಈ ಎಲ್ಲ ಬೆಳವಣಿಗೆಗಳಿಗೆ ಫ್ರಾಂಚೈಸಿಗಳ ಅಧಿಕೃತ ಘೋಷಣೆಯೇ ಅಂತಿಮ ಸ್ಪಷ್ಟನೆ ನೀಡಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.