
ನವದೆಹಲಿ: ಟೀಂ ಇಂಡಿಯಾ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಹಾಗೂ ನತಾಶಾ ಸ್ಟ್ಯಾಂಕೋವಿಚ್ ಇದೀಗ ಪರಸ್ಪರ ಸಮ್ಮತಿಯ ಮೇರೆಗೆ ದಾಂಪತ್ಯ ಜೀವನದಿಂದ ಬೇರ್ಪಟ್ಟಿದ್ದಾರೆ. ಈ ವಿಚಾರವನ್ನು ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ತಮ್ಮ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಜುಲೈ 18ರ ಸಂಜೆ ಖಚಿತಪಡಿಸಿದ್ದರು.
ಕಳೆದ ಕೆಲ ದಿನಗಳಿಂದಲೂ ಹಾರ್ದಿಕ್ ಪಾಂಡ್ಯ ಹಾಗೂ ನತಾಶಾ ಸ್ಟ್ಯಾಂಕೋವಿಚ್ ಇಬ್ಬರೂ ಡಿವೋರ್ಸ್ ಪಡೆದುಕೊಳ್ಳಲಿದ್ದಾರೆ ಎನ್ನುವ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಲೇ ಇತ್ತು. ಹೀಗಿದ್ದೂ ಹಾರ್ದಿಕ್ ಪಾಂಡ್ಯ ಆಗಲಿ ಅಥವಾ ನತಾಶ ಸ್ಟ್ಯಾಂಕೋವಿಚ್ ಆಗಲಿ ಈ ವಿಚಾರವಾಗಿ ತುಟಿಬಿಚ್ಚಿರಲಿಲ್ಲ. ಹಾರ್ದಿಕ್ ಪಾಂಡ್ಯ ಕಳೆದ ಕೆಲ ವರ್ಷಗಳಿಂದ ಟೀಂ ಇಂಡಿಯಾದ ಪ್ರಮುಖ ಆಲ್ರೌಂಡರ್ ಆಗಿ ಗಮನ ಸೆಳೆದಿದ್ದಾರೆ. ಇನ್ನೊಂದೆಡೆ ಮಾಡೆಲ್ ಕ್ಷೇತ್ರದಿಂದ ಬಂದ ರಷ್ಯಾ ಮೂಲದ ನತಾಶಾ ಸ್ಟ್ಯಾಂಕೋವಿಚ್ ಅವರೊಂದಿಗೆ 2020ರ ಜನವರಿ 1ರಂದು ಹಾರ್ದಿಕ್ ಪಾಂಡ್ಯ ಸಿನಿಮೀಯ ಶೈಲಿಯಲ್ಲಿ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದರು. ಈ ಜೋಡಿಗೆ ನಾಲ್ಕು ವರ್ಷದ ಅಗಸ್ತ್ಯ ಎನ್ನುವ ಗಂಡು ಮಗು ಕೂಡಾ ಇದೆ.
ಡಿವೋರ್ಸ್ ಖಚಿತಪಡಿಸಿದ ಹಾರ್ದಿಕ್ ಪಾಂಡ್ಯ ನತಾಶ ಜೋಡಿ, ಫ್ಯಾನ್ಸ್‌ಗೆ ವಿಶೇಷ ಮನವಿ!
ಹಾರ್ದಿಕ್ ಪಾಂಡ್ಯ ಹಾಗೂ ನತಾಶಾ ಸ್ಟ್ಯಾಂಕೋವಿಚ್ ಒಟ್ಟಾಗಿಯೇ ಇನ್‌ಸ್ಟಾಗ್ರಾಂನಲ್ಲಿ ತಾವು ಬೇರ್ಪಡುವ ಸುದ್ದಿಯನ್ನು ಖಚಿತಪಡಿಸಿದ್ದು, "4 ವರ್ಷಗಳ ಕಾಲ ಒಟ್ಟಿಗಿದ್ದು ನಾನು ಹಾಗೂ ನತಾಶಾ ಇಬ್ಬರು ಪರಸ್ಪರ ಸಮ್ಮತಿ ಮೇರೆಗೆ ಬೇರೆ ಬೇರೆಯಾಗಲು ನಿರ್ಧರಿಸಿದ್ದೇವೆ. ನಾವು ಒಟ್ಟಿಗೇ ಇರಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಹೀಗಾಗಿ ಇಬ್ಬರ ಒಳಿತನ್ನು ಗಮನದಲ್ಲಿಟ್ಟುಕೊಂಡು ಈ ತೀರ್ಮಾನಕ್ಕೆ ಬಂದಿದ್ದೇವೆ. ಇದು ನನ್ನ ಬದುಕಿನ ಕಠಿಣ ನಿರ್ಧಾರ" ಎಂದು ಪಾಂಡ್ಯ ಬರೆದುಕೊಂಡಿದ್ದಾರೆ.
ಇನ್ನು ಮುಂದುವರೆದು, "ನಮಗೆ ಅಗಸ್ತ್ಯ ಎನ್ನುವ ಮಗನಿದ್ದಾನೆ. ನಾವಿಬ್ಬರೂ ಪೋಷಕರಾಗಿಯೇ ಇದ್ದು ಅಗಸ್ತ್ಯ ಸಂತೋಷವಾಗಿರಲು ಸಾಧ್ಯವಿರುವಷ್ಟು ಪ್ರಯತ್ನಿಸುತ್ತೇವೆ. ಇಂತಹ ಕಠಿಣ ಸಮಯದಲ್ಲಿ ನಮ್ಮ ಖಾಸಗಿತನವನ್ನು ಗೌರವಿಸಿ’ ಎಂದು ಪಾಂಡ್ಯ ಮನವಿ ಮಾಡಿಕೊಂಡಿದ್ದಾರೆ.
ಗೌತಮ್ ಗಂಭೀರ್ ಕೇಳಿದ್ದು ಈ 5 ಸಹಾಯಕ ಸಿಬ್ಬಂದಿ; ಕೇವಲ ಒಬ್ಬರಿಗಷ್ಟೇ ಗ್ರೀನ್ ಸಿಗ್ನಲ್ ಕೊಟ್ಟ ಬಿಸಿಸಿಐ..!
ಹಾರ್ದಿಕ್ ಪಾಂಡ್ಯ ಹಾಗೂ ನತಾಶಾ ಸ್ಟ್ಯಾಂಕೋವಿಚ್ ಇಬ್ಬರೂ ಮದುವೆಯಾದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸಕ್ರಿಯವಾಗಿದ್ದರು. ಇಬ್ಬರೂ ಜತೆಜತೆಯಾಗಿಯೇ ಸೋಷಿಯಲ್ ಮೀಡಿಯಾಗಳಲ್ಲಿ ತಮ್ಮ ಫೋಟೋಗಳನ್ನು ಶೇರ್ ಮಾಡುವ ಮೂಲಕ ಗಮನ ಸೆಳೆಯುತ್ತಾ ಬಂದಿದ್ದರು. ಆದರೆ ಕಳೆದ ಕೆಲ ತಿಂಗಳುಗಳಿಂದ ಹಾರ್ದಿಕ್ ಪಾಂಡ್ಯ ಹಾಗೂ ನತಾಶಾ ಸ್ಟ್ಯಾಂಕೋವಿಚ್ ಅವರ ದಾಂಪತ್ಯ ಜೀವನದಲ್ಲಿ ಬಿರುಕು ಬಿಟ್ಟಿದೆ ಎನ್ನುವಂತಹ ಮಾತುಗಳು ಕೇಳಿ ಬಂದಿದ್ದವು. ಇನ್ನು 17ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ತಂಡದ ನಾಯಕರಾದರೂ ಸಹ ನತಾಶಾ ಸ್ಟೇಡಿಯಂ ಸ್ಟ್ಯಾಂಡ್‌ನಲ್ಲಿ ಕಾಣಿಸಿಕೊಂಡಿರಲಿಲ್ಲ. ಇನ್ನು ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲೂ ನತಾಶಾ, ಪಾಂಡ್ಯ ಜತೆ ವೆಸ್ಟ್ ಇಂಡೀಸ್ ಹಾಗೂ ಅಮೆರಿಕಗೆ ಪ್ರವಾಸ ಮಾಡಿರಲಿಲ್ಲ. ಹಲವು ಊಹಾಪೋಹಗಳಿಗೆ ಹಾರ್ದಿಕ್ ಪಾಂಡ್ಯ ಕೊನೆಗೂ ತೆರೆ ಎಳೆದಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.