
ದುಬೈ: ಸೆ.14ರಂದು ಭಾರತೀಯ ಆಟಗಾರರ 'ನೋ ಶೇಕ್ ಹ್ಯಾಂಡ್ 'ನಿಂದಾಗಿ ಭಾರೀ ಮುಖಭಂಗಕ್ಕೆ ಒಳಗಾಗಿದ್ದ ಪಾಕಿಸ್ತಾನ ಕ್ರಿಕೆಟ್ ತಂಡ ಮತ್ತೆ ಅವಮಾನಕ್ಕೊಳಗಾಗಿದೆ. ಭಾರತೀಯರು ಹಸ್ತಲಾಘವ ಮಾಡದೇ ಇರುವುದಕ್ಕೆ ಕಾರಣರಾದ ಮ್ಯಾಚ್ ರೆಫಿ ಆಂಡಿ ಪೈಕ್ರಾಫ್ಟ್‌ರನ್ನು ವಜಾಗೊಳಿಸಿ ಎಂದು 2ನೇ ಬಾರಿ ಐಸಿಸಿಗೆ ಪತ್ರ ಬರೆದರೂ, ಪಾಕ್ ಬೇಡಿಕೆಗೆ ಮನ್ನಣೆ ಸಿಕ್ಕಿಲ್ಲ. ರೆಫ್ರಿ ವಜಾ ಸಾಧ್ಯವಿಲ್ಲ ಐಸಿಸಿ, ಅದೇ ರೆಫ್ರಿಯನ್ನು ಬುಧವಾರದ ಪಾಕಿಸ್ತಾನ-ಯುಎಇ ಪಂದ್ಯಕ್ಕೆ ನೇಮಿಸಿದ್ದು ಪಾಕ್‌ಗೆ ನುಂಗಲಾರದ ತುತ್ತಾಯಿತು. ಈ ನಡುವೆ ರೆಫ್ರಿ ವಜಾಗೆ ಪಾಕ್ ಪಟ್ಟುಹಿಡಿದಿದ್ದರಿಂದ ಪಂದ್ಯ 1 ಗಂಟೆ ತಡವಾಗಿ ಆರಂಭಗೊಂಡಿತು.
ಭಾರತೀಯ ಆಟಗಾರರ ಜೊತೆ ಹಸ್ತಲಾಘವ ಮಾಡಬಾರದು ಎಂದು ಪಾಕಿಸ್ತಾನ ನಾಯಕ ಸಲ್ಮಾನ್ ಆಘಾಗೆ ರೆಫ್ರಿ ಪೈ ಕ್ರಾಫ್ಟ್ ಸೂಚಿಸಿದ್ದರು ಎಂದು ಪಾಕ್ ಆರೋಪಿಸಿತ್ತು. ಇದರ ವಿರುದ್ಧ ಸೆ.15ರಂದು ಮೊದಲ ಬಾರಿ ಐಸಿಸಿಗೆ ದೂರು ನೀಡಿತ್ತು. ಆದರೆ ಪೈಕ್ರಾಫ್ಟ್ ವಿರುದ್ಧ ಐಸಿಸಿ ಕ್ರಮ ಕೈಗೊಂಡಿರಲಿಲ್ಲ. ಹೀಗಾಗಿ ಮಂಗಳವಾರ ಮತ್ತೊಮ್ಮೆ ಐಸಿಸಿಗೆ ಪತ್ರ ಬರೆದಿದ್ದ ಪಾಕ್, ರೆಫ್ರಿಯನ್ನು ವಜಾಗೊಳಿಸದಿದ್ದರೆ ಟೂರ್ನಿಯನ್ನು ಬಹಿಷ್ಕರಿಸುವುದಾಗಿ ಎಚ್ಚರಿಸಿತ್ತು. ಇದಕ್ಕೂ ಐಸಿಸಿ ಮನ್ನಣೆ ನೀಡಿಲ್ಲ. ತನ್ನ ಪಂದ್ಯಗಳಿಗಾದರೂ ರೆಫ್ರಿಯನ್ನು ಬದಲಾಯಿಸಿ ಎಂಬ ಪಾಕ್ ಬೇಡಿಕೆಯನ್ನೂ ಐಸಿಸಿ ತಿರಸ್ಕರಿಸಿತು. ಹಸ್ತಲಾಘದ ವಿಚಾರದಲ್ಲಿ ರೆಫ್ರಿ ಯಾವುದೇ ತಪ್ಪು ಮಾಡಿಲ್ಲ. ಪಂದ್ಯದ ನಿರ್ದಿಷ್ಟ ಪ್ರೋಟೋಕಾಲ್‌ಗಳನ್ನು ನಿಯಂತ್ರಿಸುವುದು ರೆಫ್ರಿಯ ಕೆಲಸವಲ್ಲ. ಪಂದ್ಯಾವಳಿಯ ಆಯೋಜಕರು ಮತ್ತು ಸಂಬಂಧಿತ ತಂಡದ ವ್ಯವಸ್ಥಾಪಕರಿಗೆ ಸಂಬಂಧಿಸಿದ ವಿಷಯವಾಗಿದೆ ಎಂದು ಐಸಿಸಿ ತಿಳಿಸಿದೆ.
ಯುಎಇ ವಿರುದ್ಧ ಬುಧವಾರ ಪಾಕಿಸ್ತಾನ 41 ರನ್ ಗೆಲುವು ಸಾಧಿಸಿತು. ಇದರೊಂದಿಗೆ ಪಾಕ್ 'ಎ' ಗುಂಪಿನ 2ನೇ ತಂಡವಾಗಿ ಸೂಪರ್ -4 ಪ್ರವೇಶಿಸಿದ್ದು, ಸೆ.21ರಂದು ಮತ್ತೆ ಭಾರತ ವಿರುದ್ಧ ಸೆಣಸಾಡಲಿದೆ. ಮೊದಲು ಬ್ಯಾಟ್ ಮಾಡಿದ ಪಾಕ್ 9 ವಿಕೆಟ್‌ಗೆ 146 ರನ್ ಗಳಿಸಿತು. ಸ್ಪರ್ಧಾತ್ಮಕ ಗುರಿ ಬೆನ್ನತ್ತಿ ಯುಎಇ ತಂಡ 17.4 ಓವರ್ ಗಳಲ್ಲಿ 105 ರನ್‌ಗೆ ಆಲೌಟಾಗಿ ಟೂರ್ನಿಯಿಂದ ಹೊರಬಿತ್ತು.
ಭಾರತ-ಪಾಕ್ ಏಷ್ಯಾಕಪ್ ಪಂದ್ಯದ ವೇಳೆ ನಡೆದನೋ ಹ್ಯಾಂಡ್ ಶೇಕ್ ಘಟನೆಗೆ ಮ್ಯಾಚ್ ರೆಫ್ರಿ ಆ್ಯಂಡಿ ಪೈಕ್ರಾಫ್ಟ್ ತನ್ನ ತಂಡದ ಕ್ಷಮೆ ಕೇಳಿದ್ದಾರೆ ಎಂದು ಪಾಕಿಸ್ತಾನ ಹೇಳಿಕೊಂಡಿದೆ. ಪೈ ಕ್ರಾಫ್ಟ್ ಕ್ಷಮೆ ಬಗ್ಗೆ ಐಸಿಸಿ, ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಯಾವುದೇ ಮಾಹಿತಿ ನೀಡಿಲ್ಲವಾದರೂ, ಪಾಕ್ ಕ್ರಿಕೆಟ್ ಮಂಡಳಿ ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದೆ. 'ಆಟಗಾರರ ಹಸ್ತಲಾಘವ ನಿಷೇಧಿಸಿದ್ದಕ್ಕೆ ಐಸಿಸಿಯ ವಿವಾದಾತ್ಮಕ ಮ್ಯಾಚ್ ರೆಫ್ರಿ ಆ್ಯಂಡಿ ಪೈಕ್ರಾಫ್ಟ್ ಪಾಕಿಸ್ತಾನ ಕ್ರಿಕೆಟ್ ತಂಡದ ವ್ಯವಸ್ಥಾಪಕ ಮತ್ತು ನಾಯಕರ ಬಳಿ ಕ್ಷಮೆಯಾಚಿಸಿದ್ದಾರೆ' ಎಂದಿದೆ.
ರೆಫ್ರಿಯನ್ನು ವಜಾಗೊಳಿಸಲು ಪಟ್ಟು ಹಿಡಿದಿದ್ದ ಪಾಕ್, ಇಲ್ಲದಿದ್ದರೆ ಯುಎಇ ವಿರುದ್ಧ ಪಂದ್ಯ ಆಡಲ್ಲ ಎಂದು ಹೇಳಿತ್ತು. ಐಸಿಸಿ ನಿರ್ಧಾರ ಪ್ರತಿಭಟಿಸಿ ಆಟಗಾರರ ತಮ್ಮ ಹೋಟೆಲ್ ನಲ್ಲೇ ಉಳಿದುಕೊಂಡಿದ್ದರು. ಆದರೆ ಐಸಿಸಿ ರೆಫ್ರಿಯನ್ನು ವಜಾಗೊಳಿಸದೇ ಇದ್ದಾಗ ಪಾಕ್ ಅನಿವಾರ್ಯವಾಗಿ ಯುಎಇ ವಿರುದ್ಧ ಪಂದ್ಯ ಆಡಬೇಕಾಯಿತು. ಆದರೆ ಮೈದಾನಕ್ಕೆ ಆಟಗಾರರು ತಡವಾಗಿ ಆಗಮಿಸಿದರು. ನಿಯಮ ಪ್ರಕಾರ, ಆಟಗಾರರು ಪಂದ್ಯ ಆರಂಭಕ್ಕೆ 2 ಗಂಟೆ ಮುನ್ನ ಮೈದಾನದಲ್ಲಿ ಹಾಜರಿರಬೇಕು. ಪಾಕ್ ತಡವಾಗಿ ಬಂದ ಕಾರಣ ಪಂದ್ಯ ಭಾರತೀಯ ಕಾಲಮಾನ ರಾತ್ರಿ 8ರ ಬದಲು, 9ಕ್ಕೆ ಆರಂಭಗೊಂಡಿತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.