ಗುವಾಹಟಿ ಟೆಸ್ಟ್: ಹರಿಣಗಳ ಬಾಲಂಗೋಚಿಗಳ ಆಟಕ್ಕೆ ಬೆಚ್ಚಿಬಿದ್ದ ಭಾರತ!

Naveen Kodase   | Kannada Prabha
Published : Nov 24, 2025, 09:24 AM IST
India vs South Africa Day 2 Guwahati Test

ಸಾರಾಂಶ

ಭಾರತ ವಿರುದ್ಧದ 2ನೇ ಟೆಸ್ಟ್‌ನಲ್ಲಿ ದಕ್ಷಿಣ ಆಫ್ರಿಕಾದ ಬಾಲಗೋಂಚಿ ಬ್ಯಾಟರ್‌ಗಳಾದ ಸೆನುರನ್‌ ಮುತ್ತುಸ್ವಾಮಿ (109) ಮತ್ತು ಮಾರ್ಕೊ ಯಾನ್ಸನ್‌ (93) ಅವರ ಅಮೋಘ ಆಟದಿಂದ ತಂಡವು 489 ರನ್‌ಗಳ ಬೃಹತ್ ಮೊತ್ತ ಕಲೆಹಾಕಿದೆ. ಎರಡನೇ ದಿನದಾಟದ ಅಂತ್ಯಕ್ಕೆ ಭಾರತ ವಿಕೆಟ್ ನಷ್ಟವಿಲ್ಲದೆ 9 ರನ್ ಗಳಿಸಿದೆ.

ಗುವಾಹಟಿ: ಟೇಲ್‌ಎಂಡರ್ಸ್‌ ಅಂದರೆ ಬಾಲಗೋಂಚಿ ಬ್ಯಾಟರ್‌ಗಳ ಸಾಹಸದಿಂದ ಭಾರತ ವಿರುದ್ಧ 2ನೇ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ 489 ರನ್‌ಗಳ ಬೃಹತ್‌ ಮೊತ್ತ ಕಲೆಹಾಕಿರುವ ದಕ್ಷಿಣ ಆಫ್ರಿಕಾ, ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದ್ದು ಈಗಾಗಲೇ ಗೆಲುವಿನ ಮೇಲೆ ಕಣ್ಣಿಟ್ಟಿದೆ.

ಕೊನೆಯ 4 ವಿಕೆಟ್‌ಗೆ 243 ರನ್ ಕಲೆಹಾಕಿದ ಹರಿಣಗಳು

ಕೊನೆ 4 ವಿಕೆಟ್‌ಗೆ ಬರೋಬ್ಬರಿ 243 ರನ್‌ ಸೇರಿಸಿದ ದಕ್ಷಿಣ ಆಫ್ರಿಕಾ, ಭಾರತವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಮಂದ ಬೆಳಕಿನ ಕಾರಣ 2ನೇ ದಿನದಾಟವನ್ನು ನಿಗದಿತ ಸಮಯಕ್ಕಿಂತ ಕೊಂಚ ಮೊದಲೇ ಮುಕ್ತಾಯಗೊಳಿಸಿದಾಗ, ಭಾರತ 6.1 ಓವರಲ್ಲಿ ವಿಕೆಟ್‌ ನಷ್ಟವಿಲ್ಲದೆ 9 ರನ್‌ ಗಳಿಸಿತ್ತು. ಇನ್ನೂ480 ರನ್‌ ಹಿನ್ನಡೆಯಲ್ಲಿದ್ದು, ಫಾಲೋ ಆನ್‌ ತಪ್ಪಿಸಿಕೊಳ್ಳಲು 280 ರನ್‌ ಕಲೆಹಾಕಬೇಕಿದೆ.

ಮೊದಲ ದಿನದಂತ್ಯಕ್ಕೆ 6 ವಿಕೆಟ್‌ಗೆ 247 ರನ್‌ ಗಳಿಸಿದ್ದ ದ.ಆಫ್ರಿಕಾಕ್ಕೆ, ಸೆನುರನ್‌ ಮುತ್ತುಸ್ವಾಮಿ ಹಾಗೂ ಕೈಲ್‌ ವೆರ್ರೆನಾ 2ನೇ ದಿನ ಆಸರೆಯಾದರು. ಇವರಿಬ್ಬರು ತಂಡದ ಮೊತ್ತವನ್ನು 300 ರನ್‌ ದಾಟಿಸಿದರು. 7ನೇ ವಿಕೆಟ್‌ಗೆ ಮೂಡಿಬಂದ 88 ರನ್‌ ಜೊತೆಯಾಟವನ್ನು ಜಡೇಜಾ ಮುರಿದಾಗ, ಭಾರತ ಸ್ವಲ್ಪ ನಿಟ್ಟುಸಿರುವ ಬಿಟ್ಟಿತು. ಕೀಪರ್‌ ವೆರ್ರೆನಾ 45 ರನ್‌ ಗಳಿಸಿ ಔಟಾದಾಗ ತಂಡದ ಮೊತ್ತ 334 ರನ್‌. ಆ ಬಳಿಕ ಕ್ರೀಸ್‌ಗಿಳಿದ ಮಾರ್ಕೊ ಯಾನ್ಸನ್‌ ಕೂಡ ಭಾರತೀಯರನ್ನು ಕಾಡಿದರು. ಮುತ್ತುಸ್ವಾಮಿ ಜೊತೆಗೂಡಿ, 8ನೇ ವಿಕೆಟ್‌ಗೆ 97 ರನ್‌ ಸೇರಿಸಿದರು.

ಮುತ್ತುಸ್ವಾಮಿ ಟೆಸ್ಟ್‌ ಕ್ರಿಕೆಟ್‌ನಲ್ಲಿ ಚೊಚ್ಚಲ ಶತಕ

ಈ ನಡುವೆ, ಮುತ್ತುಸ್ವಾಮಿ ಟೆಸ್ಟ್‌ ಕ್ರಿಕೆಟ್‌ನಲ್ಲಿ ಚೊಚ್ಚಲ ಶತಕ ದಾಖಲಿಸಿದರು. ಇತ್ತೀಚೆಗೆ ಪಾಕಿಸ್ತಾನ ವಿರುದ್ಧದ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ಆಧಾರದ ಮೇಲೆ ತಂಡಕ್ಕೆ ಆಯ್ಕೆಯಾಗಿದ್ದ ಮುತ್ತುಸ್ವಾಮಿ, ತಮ್ಮ ಆಯ್ಕೆ ಸಮರ್ಥಿಸಿಕೊಂಡರು. 206 ಎಸೆತಗಳನ್ನು ಎದುರಿಸಿದ ಸೆನುರನ್‌, 10 ಬೌಂಡರಿ ಹಾಗೂ 2 ಸಿಕ್ಸರ್‌ಗಳೊಂದಿಗೆ 109 ರನ್‌ ಗಳಿಸಿ ಔಟಾಗುವ ಹೊತ್ತಿಗೆ, ದ.ಆಫ್ರಿಕಾದ ಸ್ಕೋರ್‌ 400 ರನ್‌ ದಾಟಿತ್ತು.

ಸೆನುರನ್‌ ಔಟಾದ ಬಳಿಕ ಆಕ್ರಮಣಕಾರಿ ಆಟಕ್ಕೆ ಒತ್ತು ನೀಡಿದ ಯಾನ್ಸನ್‌, 91 ಎಸೆತದಲ್ಲಿ 93 ರನ್‌ ಸಿಡಿಸಿದರು. ಅವರ ಇನ್ನಿಂಗ್ಸಲ್ಲಿ ಒಟ್ಟು 6 ಬೌಂಡರಿ, 7 ಸಿಕ್ಸರ್‌ಗಳಿದ್ದವು. ದ.ಆಫ್ರಿಕಾ ಮೊದಲ ಇನ್ನಿಂಗ್ಸಲ್ಲಿ 151.1 ಓವರ್‌ ಬ್ಯಾಟ್‌ ಮಾಡಿತು. ಭಾರತ ಪರ ಕುಲ್ದೀಪ್‌ 4, ಜಡೇಜಾ 2 ವಿಕೆಟ್‌ ಕಿತ್ತರು. ಸ್ಪಿನ್ನರ್‌ಗಳಿಗಿಂತ ಹೆಚ್ಚು ಓವರ್‌ಗಳನ್ನು ವೇಗಿಗಳು ಎಸೆಯಬೇಕಾಯಿತು. ಬೂಮ್ರಾ 32 ಹಾಗೂ ಸಿರಾಜ್‌ 30 ಓವರ್‌ ಬೌಲ್‌ ಮಾಡಿದರು. ಬೌಲಿಂಗ್‌ ಆಲ್ರೌಂಡರ್‌ ನಿತೀಶ್‌ ರೆಡ್ಡಿಗೆ ಕೇವಲ 6 ಓವರ್‌ ನೀಡಲಾಯಿತು.

ಮೊದಲ ಇನ್ನಿಂಗ್ಸ್‌ ಆರಂಭಿಸಿದ ಭಾರತ ಪರ ಕ್ರೀಸ್‌ಗಿಳಿದ ಯಶಸ್ವಿ ಜೈಸ್ವಾಲ್‌ 7, ರಾಹುಲ್‌ 2 ರನ್‌ ಗಳಿಸಿ ಔಟಾಗದೆ ಉಳಿದಿದ್ದಾರೆ. 3ನೇ ದಿನದಾಟದಲ್ಲಿ ಫಾಲೋ ಆನ್‌ ತಪ್ಪಿಸಿಕೊಳ್ಳುವುದು ಭಾರತದ ಮೊದಲ ಗುರಿಯಾಗಿರಲಿದೆ.

ಸ್ಕೋರ್‌: ದ.ಆಫ್ರಿಕಾ ಮೊದಲ ಇನ್ನಿಂಗ್ಸ್‌ 489/10 (ಮುತ್ತುಸ್ವಾಮಿ 109, ಯಾನ್ಸನ್‌ 93, ಕುಲ್ದೀಪ್‌ 4-115), ಭಾರತ (2ನೇ ದಿನದಂತ್ಯಕ್ಕೆ) 9/0

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮೇಲ್ಮನವಿ ಅರ್ಜಿ ವಜಾಗೊಳಿಸಿದ ಹೈಕೋರ್ಟ್, ಡಿ.7ಕ್ಕೆ ಕರ್ನಾಟಕ ಕ್ರಿಕೆಚ್ ಸಂಸ್ಥೆ ಚುನಾವಣೆ
ಕಾಂಗರೂ ನಾಡಲ್ಲಿ ಶತಕದ ಬರ ನೀಗಿಸಿಕೊಂಡ ಜೋ ರೂಟ್! ಕೊನೆಗೂ ತಪ್ಪಿದ ಹೇಡನ್ 'ಬೆತ್ತಲೆ ಸೇವೆ'!