
ಬೆಂಗಳೂರು: 2027ರ ಐಪಿಎಲ್ ಟೂರ್ನಿಗೆ ಎಲ್ಲಾ ಫ್ರಾಂಚೈಸಿಗಳು ಭರ್ಜರಿ ಸಿದ್ದತೆ ಆರಂಭಿಸಿವೆ. ಹೀಗಿರುವಾಗಲೇ ಗುಜರಾತ್ ಟೈಟಾನ್ಸ್ ಪಾಳಯದಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ. 2027ರ ಐಪಿಎಲ್ ಮಿನಿ ಹರಾಜಿಗೂ ಮುನ್ನ ಮಾಜಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ಇಬ್ಬರು ಬಿಗ್ ಹಿಟ್ಟರ್‌ಗಳನ್ನು ಕೈಬಿಡಲು ಸಿದ್ದತೆ ನಡೆಸಿದೆ.
2027ರ ಇಂಡಿಯನ್ ಪ್ರೀಮಿಯರ್ ಲೀಗ್ ಆಟಗಾರರ ಮಿನಿ ಹರಾಜು ಮುಂಬರುವ ಡಿಸೆಂಬರ್‌ನಲ್ಲಿ ನಡೆಯಲಿದೆ. ಇದಕ್ಕೂ ಮೊದಲು ಎಲ್ಲಾ 10 ಫ್ರಾಂಚೈಸಿಗಳು ಯಾವ ಆಟಗಾರರನ್ನು ಉಳಿಸಿಕೊಳ್ಳಬೇಕು, ಯಾವ ಆಟಗಾರರನ್ನು ಕೈಬಿಡಬೇಕು ಎನ್ನುವುದನ್ನು ಅಳೆದುತೂಗಿ ಲೆಕ್ಕಚಾರ ಹಾಕಲಾರಂಭಿಸಿವೆ. ನವೆಂಬರ್ ತಿಂಗಳ ಮಧ್ಯದವರೆಗೂ ಆಟಗಾರರ ರೀಟೈನ್, ರಿಲೀಸ್‌ಗೆ ಬಿಸಿಸಿಐ ಅವಕಾಶ ನೀಡಿದೆ.
ಇದೇ ಕಾರಣಕ್ಕೆ ಎಲ್ಲಾ ಫ್ರಾಂಚೈಸಿಗಳು ಯಾವ ಆಟಗಾರರನ್ನು ರಿಲೀಸ್ ಮಾಡಬೇಕು. ಯಾವ ಆಟಗಾರರನ್ನು ಯಾವ ತಂಡಕ್ಕೆ ಟ್ರೇಡ್ ಮಾಡಬೇಕು ಎಂದು ಲೆಕ್ಕಾಚಾರ ಹಾಕುತ್ತಿವೆ. ಹೀಗಿರುವಾಗಲೇ ಕಳೆದ ಸೀಸನ್‌ನ ರನ್ನರ್ ಅಪ್ ಗುಜರಾತ್ ಟೈಟಾನ್ಸ್ ಫ್ರಾಂಚೈಸಿಯು ಮುಂಬರುವ ಐಪಿಎಲ್ ಮಿನಿ ಹರಾಜಿಗೂ ಮುನ್ನ ದೇಶಿ ಕ್ರಿಕೆಟ್‌ನ ಬಿಗ್ ಹಿಟ್ಟರ್ ಶಾರುಕ್ ಖಾನ್ ಹಾಗೂ ಕಿವೀಸ್ ಮೂಲದ ಗನ್ ಫೀಲ್ಡರ್ ಗ್ಲೆನ್ ಫಿಲಿಫ್ಸ್ ಅವರನ್ನು ರಿಲೀಸ್ ಮಾಡಲು ಮುಂದಾಗಿದೆ ಎಂದು ವರದಿಯಾಗಿದೆ.
2026ರ ಐಪಿಎಲ್ ಟೂರ್ನಿಯುದ್ದಕ್ಕೂ ಅಭೂತಪೂರ್ವ ಪ್ರದರ್ಶನ ತೋರಿದ್ದ ಗುಜರಾತ್ ಟೈಟಾನ್ಸ್ ತಂಡವು ಫೈನಲ್ ಪ್ರವೇಶಿಸಿತ್ತು. ಆದರೆ ಫೈನಲ್‌ನಲ್ಲಿ ಆರ್‌ಸಿಬಿಗೆ ಶರಣಾಗುವ ಮೂಲಕ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಪಿಟಿಐ ವರದಿಯ ಪ್ರಕಾರ ಇದೀಗ ಗುಜರಾತ್ ತಂಡವು ತನ್ನ ಕಾಂಬಿನೇಷನ್‌ನಲ್ಲಿ ಹೆಚ್ಚಿನ ಬದಲಾವಣೆ ಮಾಡದಿರಲು ತೀರ್ಮಾನಿಸಿದೆ. ಹೀಗಾಗಿ ತನ್ನ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳಾದ ಶಾರುಕ್ ಖಾನ್ ಹಾಗೂ ಗ್ಲೆನ್ ಫಿಲಿಫ್ಸ್ ಅವರನ್ನು ಮಾತ್ರ ತಂಡದಿಂದ ರಿಲೀಸ್ ಮಾಡಲು ಜಿಟಿ ತೀರ್ಮಾನಿಸಿದೆ ಎಂದು ವರದಿಯಾಗಿದೆ.
2025ರ ಐಪಿಎಲ್ ಮೆಗಾ ಹರಾಜಿನಲ್ಲಿ 4 ಕೋಟಿ ರುಪಾಯಿ ನೀಡಿ ಶಾರುಕ್ ಖಾನ್ ಅವರನ್ನು ಗುಜರಾತ್ ಟೈಟಾನ್ಸ್ ಫ್ರಾಂಚೈಸಿಯು ತನ್ನ ತೆಕ್ಕೆಗೆ ಸೆಳೆದುಕೊಂಡಿತ್ತು. ಇನ್ನು ಗ್ಲೆನ್ ಫಿಲಿಫ್ಸ್‌ಗೆ 2 ಕೋಟಿ ರುಪಾಯಿ ನೀಡಿ ಖರೀದಿಸಿತ್ತು. ಇವರಿಬ್ಬರನ್ನು ಕೈಬಿಟ್ಟರೇ ಗುಜರಾತ್ ಬಳಿ ಆರು ಕೋಟಿ ರುಪಾಯಿ ಉಳಿಯಲಿದೆ. ಇದಕ್ಕೆ ಬದಲಾಗಿ ಬಲಿಷ್ಠ ಮಧ್ಯಮ ಕ್ರಮಾಂಕದ ಬ್ಯಾಟರ್ ಹುಡುಕಾಟದಲ್ಲಿದೆ.
2025ರ ಐಪಿಎಲ್‌ನಲ್ಲಿ ಶಾರುಕ್ ಖಾನ್ ಗುಜರಾತ್ ಪರ 15 ಪಂದ್ಯಗಳನ್ನಾಡಿ ಒಂದು ಅರ್ಧಶತಕ ಸಹಿತ ಕೇವಲ 179 ರನ್ ಬಾರಿಸಿದ್ದರು. ಇನ್ನು ಕಳೆದ ಸೀಸನ್‌ನಲ್ಲಿ ಶಾರುಕ್ 9 ಪಂದ್ಯಗಳನ್ನಾಡಿ ಕೇವಲ 43 ರನ್ ಗಳಿಸಿ ನಿರಾಸೆ ಮೂಡಿಸಿದ್ದರು. ಇನ್ನೊಂದೆಡೆ 2025ರ ಐಪಿಎಲ್‌ನಲ್ಲಿ ಫಿಲಿಫ್ಸ್‌ಗೆ ಆಡಲು ಒಂದೇ ಒಂದು ಪಂದ್ಯದಲ್ಲಿ ಅವಕಾಶ ಸಿಕ್ಕಿರಲಿಲ್ಲ. ಕಳೆದ ಸೀಸನ್‌ನಲ್ಲಿ ಕಿವೀಸ್ ಆಟಗಾರ 6 ಪಂದ್ಯಗಳಿಂದ ಕೇವಲ 67 ರನ್ ಗಳಿಸಿ ನಿರಾಸೆ ಮೂಡಿಸಿದ್ದರು.
ನ್ಯೂಜಿಲೆಂಡ್ ಮೂಲದ ಗನ್ ಫೀಲ್ಡರ್ ಹಾಗೂ ಉಪಯುಕ್ತ ಬ್ಯಾಟಿಂಗ್ ಆಲ್ರೌಂಡರ್ ಆಗಿರುವ ಗ್ಲೆನ್ ಫಿಲಿಫ್ಸ್‌ಗೆ ಹೆಚ್ಚಿನ ಅವಕಾಶ ಗುಜರಾತ್ ಟೈಟಾನ್ಸ್ ತಂಡದಲ್ಲಿ ಸಿಕ್ಕಿರಲಿಲ್ಲ. ಮೈದಾನದಲ್ಲಿ ಪಾದರಸದಷ್ಟೇ ಚುರುಕಾಗಿರುವ ಹಾಗೂ ಎಂತಹ ಕಠಿಣ ಕ್ಯಾಚ್ ಆಗಿದ್ದರೂ ಸುಲಭವಾಗಿ ಹಿಡಿಯುವ ಗ್ಲೆನ್ ಫಿಲಿಫ್ಸ್ ಅವರನ್ನು ಮುಂಬರುವ ಐಪಿಎಲ್ ಮಿನಿ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಖರೀದಿಸುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.