ಸಂಜು-ಅಭಿಷೇಕ್ ಓಪನ್ನರ್; ವೈಭವ್ ಔಟ್, ಭುವಿ ಇನ್..! ಕಿವೀಸ್ ಎದುರಿನ ಮೊದಲ ಟಿ20 ಪಂದ್ಯಕ್ಕೆ ಬಲಿಷ್ಠ ಭಾರತ ಸಂಭಾವ್ಯ ತಂಡ ಪ್ರಕಟ..!

Published : Oct 20, 2026, 05:31 PM IST
Team India

ಸಾರಾಂಶ

ಅಕ್ಟೋಬರ್ 22ರಿಂದ ಕ್ರೈಸ್ಟ್‌ಚರ್ಚ್‌ನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಐದು ಪಂದ್ಯಗಳ ಟಿ20 ಸರಣಿ ಆರಂಭವಾಗಲಿದೆ. ಶ್ರೇಯಸ್ ಅಯ್ಯರ್ ನೇತೃತ್ವದ ತಂಡದಲ್ಲಿ ಭುವನೇಶ್ವರ್ ಕುಮಾರ್ ಕಣಕ್ಕಿಳಿಯಲಿದ್ದು, ವೈಭವ್ ಸೂರ್ಯವಂಶಿಗೆ ಅವಕಾಶ ಸಿಗುವ ಸಾಧ್ಯತೆ ಕಡಿಮೆಯಿದೆ. ವೇಗದ ಬೌಲಿಂಗ್‌ಗೆ ನೆರವಾಗುವ ಪಿಚ್‌ನಲ್ಲಿ ಭಾರತ ಕೆಲ ಬದಲಾವಣೆಗಳೊಂದಿಗೆ ಕಣಕ್ಕಿಳಿಯಲಿದೆ.

ಬೆಂಗಳೂರು: ಭಾರತ ಹಾಗೂ ವೆಸ್ಟ್ ಇಂಡೀಸ್ ಎದುರಿನ ಟಿ20 ಸರಣಿ ಮುಕ್ತಾಯವಾಗಿದ್ದು, ಇದೀಗ ಶ್ರೇಯಸ್ ಅಯ್ಯರ್ ಅಯ್ಯರ್ ನೇತೃತ್ವದ ಟೀಂ ಇಂಡಿಯಾ, ಬಲಿಷ್ಠ ನ್ಯೂಜಿಲೆಂಡ್ ಸವಾಲಿಗೆ ಸಜ್ಜಾಗಿದೆ. ಇದೇ ಅಕ್ಟೋಬರ್ 22ರಿಂದ ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಐದು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ಕ್ರೈಸ್ಟ್‌ಚರ್ಚ್‌ನಲ್ಲಿ ಆರಂಭವಾಗಲಿದೆ. ಭಾರತದ ವಾತಾವರಣಕ್ಕೆ ಹೋಲಿಸಿದರೆ ನ್ಯೂಜಿಲೆಂಡ್‌ನ ವಾತಾವರಣ ಸಾಕಷ್ಟು ವಿಭಿನ್ನವಾಗಿರಲಿದೆ. ಹೀಗಾಗಿ ಭಾರತಕ್ಕೆ ದೊಡ್ಡ ಸವಾಲು ಎದುರಾಗಲಿದೆ. ಹೀಗಾಗಿ ಮೊದಲ ಪಂದ್ಯದಲ್ಲಿ ಭಾರತ ತಂಡವು ಕೆಲವೊಂದು ಬದಲಾವಣೆಗಳೊಂದಿಗೆ ಕಣಕ್ಕಿಳಿಯುವ ಸಾಧ್ಯತೆ ದಟ್ಟವಾಗಿದೆ.

ವೈಭವ್ ಸೂರ್ಯವಂಶಿಗೆ ಮತ್ತೆ ನಿರಾಸೆ:

ಇನ್ನು ವೆಸ್ಟ್ ಇಂಡೀಸ್ ಎದುರಿನ ಐದೂ ಟಿ20 ಪಂದ್ಯಗಳಲ್ಲೂ ವೈಭವ್ ಸೂರ್ಯವಂಶಿ ಬೆಂಚ್ ಕಾಯಿಸಿದ್ದರು. ಇದರ ಬೆನ್ನಲ್ಲೇ ಮಾತನಾಡಿದ್ದ ಟೀಂ ಇಂಡಿಯಾ ನಾಯಕ ಶ್ರೇಯಸ್ ಅಯ್ಯರ್, ವೈಭವ್ ಸೂರ್ಯವಂಶಿ ಅವಕಾಶಕ್ಕಾಗಿ ಮತ್ತಷ್ಟು ಸಮಯ ಕಾಯಬೇಕಾಗುತ್ತದೆ ಎಂದು ಹೇಳಿದ್ದರು. ಹೀಗಾಗಿ ಕಿವೀಸ್ ಎದುರಿನ ಸರಣಿಯಲ್ಲೂ 15 ವರ್ಷದ ವೈಭವ್ ಸೂರ್ಯವಂಶಿಗೆ ಹೆಚ್ಚಿನ ಅವಕಾಶ ಸಿಗುವ ಸಾಧ್ಯತೆ ಕಡಿಮೆಯಿದೆ. ಹೀಗಾದಲ್ಲಿ ಕಿವೀಸ್ ಎದುರಿನ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಪರ ಅಭಿಷೇಕ್ ಶರ್ಮಾ ಹಾಗೂ ಸಂಜು ಸ್ಯಾಮ್ಸನ್ ಆರಂಭಿಕರಾಗಿ ಕಣಕ್ಕಿಳಿಯಲಿದ್ದಾರೆ. ಇನ್ನು ಮೂರನೇ ಕ್ರಮಾಂಕದಲ್ಲಿ ಇಶಾನ್ ಕಿಶನ್ ಕಣಕ್ಕಿಳಿದರೆ, ನಾಲ್ಕನೇ ಕ್ರಮಾಂಕದಲ್ಲಿ ನಾಯಕ ಶ್ರೇಯಸ್ ಅಯ್ಯರ್ ಬ್ಯಾಟ್ ಮಾಡಲಿಳಿಯಲಿದ್ದಾರೆ. ಇನ್ನು ಐದನೇ ಕ್ರಮಾಂಕದಲ್ಲಿ ಉಪನಾಯಕ ತಿಲಕ್ ವರ್ಮಾ ಕಣಕ್ಕಿಳಿಯಲಿದ್ದಾರೆ. ಹೀಗಾಗಿ ಟಾಪ್-5 ಪಟ್ಟಿಯಲ್ಲಿ ಯಾವುದೇ ಬದಲಾವಣೆಗಳಾಗುವ ಸಾಧ್ಯತೆ ಕಡಿಮೆಯಿದೆ.

ಇನ್ನು ಆಲ್ರೌಂಡರ್‌ಗಳಾಗಿ ನಿತೀಶ್ ಕುಮಾರ್ ರೆಡ್ಡಿ ಹಾಗೂ ಅಕ್ಷರ್ ಪಟೇಲ್ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯಲಿದ್ದಾರೆ. ಇನ್ನು ನಮನ್ ಧೀರ್‌ಗೆ ವಿಶ್ರಾಂತಿ ಸಿಗಲಿದ್ದು, ಅವರ ಬದಲಿಗೆ ಶಿವಂ ದುಬೆ ಆಡುವ ಹನ್ನೊಂದರ ಬಳಗವನ್ನು ಕೂಡಿಕೊಳ್ಳಲಿದ್ದಾರೆ. ಹೀಗಾಗಿ ಮೂವರು ಆಲ್ರೌಂಡರ್‌ಗಳು ತಂಡದಲ್ಲಿ ಸ್ಥಾನ ಪಡೆಯುವುದು ಬಹುತೇಕ ಖಚಿತ.

ಭುವನೇಶ್ವರ್ ಕುಮಾರ್‌ಗೆ ಸಿಗಲಿದೆ ಚಾನ್ಸ್:

ಇನ್ನು ವೆಸ್ಟ್ ಇಂಡೀಸ್ ಎದುರಿನ ಕೊನೆಯ ಟಿ20 ಪಂದ್ಯದ ಮೂಲಕ ಬರೋಬ್ಬರಿ 4 ವರ್ಷಗಳ ಬಳಿಕ ಟೀಂ ಇಂಡಿಯಾಗೆ ಕಮ್‌ಬ್ಯಾಕ್ ಮಾಡಿದ್ದ ಅನುಭವಿ ವೇಗಿ ಭುವನೇಶ್ವರ್ ಕುಮಾರ್‌ಗೆ ಬೌಲಿಂಗ್ ಮಾಡುವ ಅವಕಾಶ ಸಿಕ್ಕಿರಲಿಲ್ಲ. ಆ ಪಂದ್ಯ ಮಳೆಯಿಂದ ರದ್ದಾಗಿತ್ತು. ಇದೀಗ ಭುವಿ ಭಾರತ ವೇಗದ ದಾಳಿಯನ್ನು ಮುನ್ನಡೆಸಲಿದ್ದು, ಇವರಿಗೆ ಅರ್ಶದೀಪ್ ಸಿಂಗ್ ಹಾಗೂ ಪ್ರಿನ್ಸ್ ಯಾದವ್ ಸಾಥ್ ನೀಡಲಿದ್ದಾರೆ. ಅಂದಹಾಗೆ ನ್ಯೂಜಿಲೆಂಡ್ ಪಿಚ್ ವೇಗದ ಬೌಲಿಂಗ್‌ಗೆ ಹೆಚ್ಚಿನ ನೆರವು ನೀಡುತ್ತದೆ ಎನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ.

ಮೊದಲ ಟಿ20 ಪಂದ್ಯಕ್ಕೆ ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂ ಆಯ್ಕೆ ಮಾಡಿದ ಬಲಿಷ್ಠ ಸಂಭಾವ್ಯ ತಂಡ ಹೀಗಿದೆ:

ಸಂಜು ಸ್ಯಾಮ್ಸನ್, ಅಭಿಷೇಕ್ ಶರ್ಮಾ, ಇಶಾನ್ ಕಿಶನ್, ಶ್ರೇಯಸ್ ಅಯ್ಯರ್(ನಾಯಕ), ತಿಲಕ್ ವರ್ಮಾ, ನಿತೀಶ್ ಕುಮಾರ್ ರೆಡ್ಡಿ, ಶಿವಂ ದುಬೆ, ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್, ಅರ್ಶದೀಪ್ ಸಿಂಗ್, ಪ್ರಿನ್ಸ್ ಯಾದವ್.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಭಾರತ ತಂಡದಲ್ಲಿ ಸ್ಥಾನ ಸಿಗಲಿಲ್ಲ, ಈಗ ರಣಜಿ ಪಂದ್ಯಕ್ಕೂ ಗೈರು! ಈಗ ಇಂಟ್ರೆಸ್ಟಿಂಗ್ ಮಾಹಿತಿ ಬಿಚ್ಚಿಟ್ಟ ಕೋಚ್
ಟಿ20 ಕ್ರಿಕೆಟ್‌ನಲ್ಲಿ ವಿಶ್ವದಾಖಲೆ ಬರೆದ ಕನ್ನಡತಿ..! ಜಿಂಬಾಬ್ವೆ ಎದುರು ಇತಿಹಾಸ ಬರೆದ ನಿಕಿ ಪ್ರಸಾದ್