ಟೀಂ ಇಂಡಿಯಾಗೆ ವಾಪಸ್‌ ಆಗುವತ್ತ ಹಾರ್ದಿಕ್‌ ದಿಟ್ಟಹೆಜ್ಜೆ

By Kannadaprabha News  |  First Published Apr 15, 2022, 7:55 AM IST

* ಐಪಿಎಲ್‌ನಲ್ಲಿ ಭರ್ಜರಿ ಪ್ರದರ್ಶನ ತೋರುತ್ತಿರುವ ಹಾರ್ದಿಕ್‌ ಪಾಂಡ್ಯ

* ಅದ್ಭುತ ಪ್ರದರ್ಶನದ ಮೂಲಕ ಟೀಂ ಇಂಡಿಯಾಗೆ ಕಮ್‌ಬ್ಯಾಕ್ ಮಾಡುವತ್ತ ಪಾಂಡ್ಯ ದಿಟ್ಟ ಹೆಜ್ಜೆ

* ಸತತ ಎರಡು ಅರ್ಧಶತಕ ಬಾರಿಸಿ ಮಿಂಚಿದ ಹಾರ್ದಿಕ್ ಪಾಂಡ್ಯ


ಮುಂಬೈ(ಏ.15): ಟಿ20 ವಿಶ್ವಕಪ್‌ (ICC T20 World Cup), ಕಳೆದ ಆವೃತ್ತಿ ಐಪಿಎಲ್‌ನಲ್ಲಿ ಕಳಪೆ ಲಯದಿಂದಾಗಿ ಟೀಕೆಗೆ ಗುರಿಯಾಗಿದ್ದ ತಾರಾ ಆಲ್ರೌಂಡರ್‌ ಹಾರ್ದಿಕ್‌ ಪಾಂಡ್ಯ (Hardik Pandya) 15ನೇ ಆವೃತ್ತಿಯ ಐಪಿಎಲ್‌ನಲ್ಲಿ (IPL 2022) ಅಭೂತಪೂರ್ವ ಲಯದಲ್ಲಿದ್ದು, ಮತ್ತೊಂದು ಅವಕಾಶಕ್ಕಾಗಿ ಟೀಂ ಇಂಡಿಯಾದ (Team India) ಕದ ತಟ್ಟುತ್ತಿದ್ದಾರೆ. ಗುಜರಾತ್‌ ಟೈಟಾನ್ಸ್‌ನ (Gujarat Titans) ನಾಯಕರಾಗಿರುವ ಹಾರ್ದಿಕ್‌ ಈ ಬಾರಿ ಆಡಿರುವ ಎಲ್ಲಾ ಪಂದ್ಯಗಳಲ್ಲಿ ಮಿಂಚಿದ್ದು, ಒಟ್ಟು 228 ರನ್‌ ಕಲೆ ಹಾಕಿದ್ದಾರೆ. 

ಕಳೆದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್‌ (Sunrisers Hyderabad) ವಿರುದ್ಧ 50 ರನ್‌ ಗಳಿಸಿದ್ದ ಅವರು, ಗುರುವಾರ ರಾಜಸ್ಥಾನ ರಾಯಲ್ಸ್‌ (Rajasthan Royals) ವಿರುದ್ಧ ಅಜೇಯ 87 ರನ್‌ ಸಿಡಿಸಿದರು. ರಾಯಲ್ಸ್‌ ವಿರುದ್ಧದ ಇನ್ನಿಂಗ್ಸ್‌ನಲ್ಲಿ 8 ಬೌಂಡರಿ, 4 ಸಿಕ್ಸರ್‌ಗಳಿದ್ದವು. ಇನ್ನು ಬೌಲಿಂಗ್‌ನಲ್ಲೂ ಹಾರ್ದಿಕ್ ಪಾಂಡ್ಯ ಒಂದು ವಿಕೆಟ್ ಕಬಳಿಸಿ ಗಮನ ಸೆಳೆದರು.

Tap to resize

Latest Videos

ಅಗ್ರಸ್ಥಾನಕ್ಕೆ ಗುಜರಾತ್‌ ಲಗ್ಗೆ

ನವಿ ಮುಂಬೈ: ಮಧ್ಯಮ ಕ್ರಮಾಂಕದ ಮನಮೋಹಕ ಬ್ಯಾಟಿಂಗ್‌, ವೇಗಿಗಳ ಮಾರಕ ಬೌಲಿಂಗ್‌ ದಾಳಿಯ ನೆರವಿನಿಂದ ಗುಜರಾತ್‌ ಟೈಟಾನ್ಸ್‌ ಗುರುವಾರ ನಡೆದ ರಾಜಸ್ಥಾನ ರಾಯಲ್ಸ್‌ ವಿರುದ್ಧದ ಪಂದ್ಯದಲ್ಲಿ 37 ರನ್‌ಗಳ ಗೆಲುವು ಸಾಧಿಸಿ, ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಮೊದಲ ಸ್ಥಾನದಲ್ಲಿದ್ದ ರಾಜಸ್ಥಾನ ರಾಯಲ್ಸ್‌ 3ನೇ ಸ್ಥಾನಕ್ಕೆ ಕುಸಿದಿದೆ.

ಮೊದಲು ಬ್ಯಾಟ್‌ ಮಾಡಿದ ಗುಜರಾತ್‌ ಆರಂಭಿಕ ಆಘಾತದ ಹೊರತಾಗಿಯೂ 20 ಓವರಲ್ಲಿ 4 ವಿಕೆಟ್‌ಗೆ 192 ರನ್‌ ಕಲೆಹಾಕಿತು. ಬ್ಯಾಟಿಂಗ್‌ ಸ್ನೇಹಿ ಪಿಚ್‌ನಲ್ಲಿ ಈ ಮೊತ್ತವನ್ನು ಬೆನ್ನತ್ತವುದು ಅಸಾಧ್ಯವೇನೂ ಆಗಿರಲಿಲ್ಲ. ಜೋಸ್‌ ಬಟ್ಲರ್‌ ತಮ್ಮ ಇನ್ನಿಂಗ್ಸ್‌ ಕಟ್ಟಿದ ರೀತಿ, ರಾಯಲ್ಸ್‌ ಸುಲಭವಾಗಿ ಗೆಲ್ಲಲಿದೆ ಎನ್ನುವ ಭಾವನೆ ಮೂಡಿಸಿತ್ತು. ಆದರೆ ಲಾಕಿ ಫಗ್ರ್ಯೂಸನ್‌ ಹಾಗೂ ಚೊಚ್ಚಲ ಪಂದ್ಯವಾಡಿದ ಯಶ್‌ ದಯಾಳ್‌, ರಾಯಲ್ಸ್‌ ಲೆಕ್ಕಾಚಾರವನ್ನು ತಲೆಕೆಳಗಾಗಿಸಿದರು. ಪಡಿಕ್ಕಲ್‌(0) ಔಟಾದ ಬಳಿಕ ಬಟರ್‌ ಕೇವಲ 24 ಎಸೆತಗಳಲ್ಲಿ 8 ಬೌಂಡರಿ, 3 ಸಿಕ್ಸರ್‌ನೊಂದಿಗೆ 54 ರನ್‌ ಸಿಡಿಸಿದರು. ಮೊದಲ 4 ಓವರಲ್ಲಿ ರಾಯಲ್ಸ್‌ 49 ರನ್‌ ಗಳಿಸಿತ್ತು. ಇದರಲ್ಲಿ ಬಟ್ಲರ್‌ ಒಬ್ಬರೇ 48 ರನ್‌ ಸಿಡಿಸಿದರು.

IPL 2022 ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ ಗುಜರಾತ್ ಟೈಟಾನ್ಸ್

3ನೇ ಕ್ರಮಾಂಕದಲ್ಲಿ ಆರ್‌.ಅಶ್ವಿನ್‌ರನ್ನು ಕಣಕ್ಕಿಳಿಸಿ ಅಚ್ಚರಿ ಮೂಡಿಸಿದ ರಾಯಲ್ಸ್‌ ಪ್ರಯೋಗ ಕೈಹಿಡಿಯಲಿಲ್ಲ. ಅಶ್ವಿನ್‌ ಔಟಾದ ಬೆನ್ನಲ್ಲೇ ಬಟ್ಲರ್‌ ಸಹ ಪೆವಿಲಿಯನ್‌ ದಾರಿ ಹಿಡಿದರು. ಫಗ್ರ್ಯೂಸನ್‌ರ ಆಕರ್ಷಕ ಯಾರ್ಕರ್‌ ಎಸೆತಕ್ಕೆ ಬೌಲ್ಡ್‌ ಆದರು. ಆ ಬಳಿಕ ರಾಯಲ್ಸ್‌ ಹಳಿ ತಪ್ಪಿತು. ಹೆಟ್ಮೇಯರ್‌(29), ರಿಯಾನ್‌(18), ನೀಶಮ್‌(17) ಭರವಸೆ ಮೂಡಿಸಿದರಾದರೂ ತಂಡವನ್ನು ಗೆಲುವಿನ ಸನಿಹಕ್ಕೂ ಕರೆದೊಯ್ಯಲಿಲ್ಲ. ಗುಜರಾತ್‌ ಪರ ಫಗ್ರ್ಯೂಸನ್‌ ಹಾಗೂ ಯಶ್‌ ತಲಾ 3 ವಿಕೆಟ್‌ ಕಿತ್ತರು.

ಹಾರ್ದಿಕ್‌ ಆರ್ಭಟ: 15 ರನ್‌ಗೆ 2 ವಿಕೆಟ್‌ ಕಳೆದುಕೊಂಡಿದ್ದ ಗುಜರಾತ್‌ಗೆ ಹಾರ್ದಿಕ್‌ ಪಾಂಡ್ಯ ಆಸರೆಯಾದರು. ಗಿಲ್‌(13) ಔಟಾದ ಬಳಿಕ 4ನೇ ವಿಕೆಟ್‌ಗೆ ನಾಯಕನ ಜೊತೆ ಕ್ರೀಸ್‌ ಹಂಚಿಕೊಂಡ ಕರ್ನಾಟಕದ ಅಭಿನವ್‌ ಮನೋಹರ್‌(43 ರನ್‌, 28 ಎಸೆತ, 4 ಬೌಂಡರಿ, 2 ಸಿಕ್ಸರ್‌) 86 ರನ್‌ ಜೊತೆಯಾಟದಲ್ಲಿ ಭಾಗಿಯಾದರು. ಕೊನೆಯಲ್ಲಿ ಡೇವಿಡ್‌ ಮಿಲ್ಲರ್‌ 14 ಎಸೆತಗಳಲ್ಲಿ 31 ರನ್‌ ಸಿಡಿಸಿದರೆ, ಸತತ 2ನೇ ಅರ್ಧಶತಕ ದಾಖಲಿಸಿದ ಹಾರ್ದಿಕ್‌ 52 ಎಸೆತಗಳಲ್ಲಿ 8 ಬೌಂಡರಿ, 4 ಸಿಕ್ಸರ್‌ನೊಂದಿಗೆ 87 ರನ್‌ ಗಳಿಸಿ ಔಟಾಗದೆ ಉಳಿದರು.

click me!