ಟೀಂ ಇಂಡಿಯಾ ಅಭಿಮಾನಿಗಳಿಗೆ ಗುಡ್‌ ನ್ಯೂಸ್: 2028ರ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್‌ ಸೇರ್ಪಡೆ ಖಚಿತ

By Naveen Kodase  |  First Published Oct 14, 2023, 12:41 PM IST

ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನಲ್ಲಿ 5 ಕ್ರೀಡೆಗಳನ್ನು ಸೇರ್ಪಡೆಗೊಳಿಸುವ ಪ್ರಸ್ತಾವನೆಗೆ ಒಪ್ಪಿಗೆ ಲಭಿಸಿದೆ. ಭಾನುವಾರದಿಂದ ಮುಂಬೈನಲ್ಲಿ ಐಒಸಿ ಅಧಿವೇಶನ ನಡೆಯಲಿದ್ದು, ಅದರಲ್ಲಿ ಹೊಸ ಕ್ರೀಡೆಗಳ ಸೇರ್ಪಡೆ ಅಧಿಕೃತಗೊಳ್ಳಲಿದೆ.


ಮುಂಬೈ(ಅ.14): 2028ರ ಲಾಸ್‌ ಏಂಜಲೀಸ್‌ ಒಲಿಂಪಿಕ್ಸ್‌ಗೆ ಕ್ರಿಕೆಟ್‌ ಸೇರ್ಪಡೆ ಇದೀಗ ಖಚಿತವಾಗಿದೆ. ಶುಕ್ರವಾರ ಅಂತಾರಾಷ್ಟ್ರೀಯ ಒಲಿಂಪಿಕ್ಸ್‌ ಸಮಿತಿ(ಐಒಸಿ) ಕಾರ್ಯಕಾರಿ ಸಮಿತಿ ಸಭೆಯಲ್ಲಿ ಕ್ರಿಕೆಟ್ ಸೇರಿದಂತೆ 5 ಕ್ರೀಡೆಗಳನ್ನು ಸೇರ್ಪಡೆಗೊಳಿಸುವ ಪ್ರಸ್ತಾವನೆಗೆ ಒಪ್ಪಿಗೆ ಲಭಿಸಿದೆ. ಭಾನುವಾರದಿಂದ ಮುಂಬೈನಲ್ಲಿ ಐಒಸಿ ಅಧಿವೇಶನ ನಡೆಯಲಿದ್ದು, ಅದರಲ್ಲಿ ಹೊಸ ಕ್ರೀಡೆಗಳ ಸೇರ್ಪಡೆ ಅಧಿಕೃತಗೊಳ್ಳಲಿದೆ.

ಐಒಸಿ ಅಧ್ಯಕ್ಷ ಥಾಮಸ್‌ ಬಾಚ್‌ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕ್ರಿಕೆಟ್‌, ಬೇಸ್‌ಬಾಲ್‌-ಸಾಫ್ಟ್‌ಬಾಲ್‌, ಫ್ಲಾಗ್‌ ಫುಟ್ಬಾಲ್‌, ಲ್ಯಾಕ್ರೋಸ್‌(ಸಿಕ್ಸಸ್‌) ಹಾಗೂ ಸ್ಕ್ವ್ಯಾಶ್‌ ಕ್ರೀಡೆಗಳನ್ನು ಸೇರ್ಪಡೆಗೊಳಿಸುವ ಪ್ರಸ್ತಾವನೆಗೆ ಒಪ್ಪಿಗೆ ಲಭಿಸಿತು. ಇದನ್ನು ಸ್ವತಃ ಬಾಚ್‌ ಖಚಿತಪಡಿಸಿದ್ದಾರೆ. ಆದರೆ ಕ್ರಿಕೆಟ್‌ ಸೇರ್ಪಡೆ ಸದ್ಯಕ್ಕೆ 2028ರ ಒಲಿಂಪಿಕ್ಸ್‌ಗೆ ಮಾತ್ರ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ. 1900ರ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಮೊದಲ ಬಾರಿ ಕ್ರಿಕೆಟ್‌ ಆಡಿಸಲಾಗಿತ್ತು. ಆ ಬಳಿಕ ಯಾವುದೇ ಕ್ರೀಡಾಕೂಟದಲ್ಲೂ ಕ್ರಿಕೆಟ್‌ ಇರಲಿಲ್ಲ.

Latest Videos

undefined

ICC World Cup 2023: ಭಾರತ ಎದುರು ಪಾಕ್‌ಗೆ ಟಿ20 ವಿಶ್ವಕಪ್‌ ಆಟ ಮರುಕಳಿಸುವ ತುಡಿತ!

ಕಾಂಪೌಂಡ್‌ ಇಲ್ಲ: ಭಾರತಕ್ಕೆ ನಿರಾಸೆ

2028ರ ಒಲಿಂಪಿಕ್ಸ್‌ನಲ್ಲಿ ಆರ್ಚರಿ ಕಾಂಪೌಂಡ್‌ ಸ್ಪರ್ಧೆಯನ್ನು ಸೇರಿಸುವ ಬಗ್ಗೆ ವಿಶ್ವ ಆರ್ಚರಿ ಸಂಸ್ಥೆ ಕಳೆದ ವರ್ಷ ಪ್ರಸ್ತಾವನೆ ಸಲ್ಲಿಸಿದ್ದರೂ, ಐಒಸಿ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಅದಕ್ಕೆ ಒಪ್ಪಿಗೆ ಲಭಿಸಿಲ್ಲ. ಆರ್ಚರಿಯ ರೀಕರ್ವ್‌ ಸ್ಪರ್ಧೆಯನ್ನು ಈಗಾಗಲೇ ಒಲಿಂಪಿಕ್ಸ್‌ನಲ್ಲಿ ಆಡಿಸಲಾಗುತ್ತಿದೆ. ಆದರೆ ಕಾಂಪೌಂಡ್‌ ವಿಭಾಗವನ್ನು ಸೇರ್ಪಡೆಗೊಳಿಸುವ ಪ್ರಯತ್ನ ಮತ್ತೆ ವಿಫಲವಾಗಿದೆ. ಇದರಿಂದ ಭಾರತಕ್ಕೆ ಹಿನ್ನಡೆಯಾಗುವುದು ಖಚಿತ. ಇತ್ತೀಚೆಗಷ್ಟೇ ಏಷ್ಯಾಡ್‌ನಲ್ಲಿ ಭಾರತದ ಕಾಂಪೌಂಡ್‌ ಆರ್ಚರ್‌ಗಳು ಐದೂ ಸ್ಪರ್ಧೆಗಳಲ್ಲಿ ಚಿನ್ನ ಗೆದ್ದು ಕ್ಲೀನ್‌ ಸ್ವೀಪ್‌ ಮಾಡಿದ್ದರು. ಇದೇ ವೇಳೆ ಬಾಕ್ಸಿಂಗ್‌ ಸೇರ್ಪಡೆ ಬಗ್ಗೆ ಐಒಸಿ ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲ.

ಇಂದು ಮೋದಿ ಚಾಲನೆ

ಅಂ.ರಾ. ಒಲಿಂಪಿಕ್‌ ಸಮಿತಿಯ 141ನೇ ಅಧಿವೇಶನ ಮುಂಬೈನಲ್ಲಿ ಅ.15ರಿಂದ(ಭಾನುವಾರ) ಆರಂಭಗೊಳ್ಳಲಿದೆ. ಶನಿವಾರ ಸಂಜೆ ಪ್ರಧಾನಿ ನರೇಂದ್ರ ಮೋದಿ ಅಧಿವೇಶನಕ್ಕೆ ಚಾಲನೆ ನೀಡಲಿದ್ದು, ಅ.17ರ ವರೆಗೆ ಅಧಿವೇಶನ ನಡೆಯಲಿದೆ. ಭಾರತ ಒಲಿಂಪಿಕ್‌ ಸಂಸ್ಥೆ ಸೇರಿದಂತೆ ವಿವಿಧ ಕ್ರೀಡಾ ಒಕ್ಕೂಟಗಳ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ.

'ರೆಕಾರ್ಡ್ ಇರೋದೇ ಬ್ರೇಕ್ ಮಾಡೋಕೆ': ಭಾರತ ಎದುರಿನ ಪಂದ್ಯಕ್ಕೂ ಮುನ್ನ ಬಾಬರ್ ಅಜಂ ವಾರ್ನಿಂಗ್..!

ಎಲ್ಲಾ ಮಾದರಿ ಕ್ರಿಕೆಟ್‌ಗೆ ಇಂಗ್ಲೆಂಡ್‌ನ ಕುಕ್‌ ನಿವೃತ್ತಿ

ಲಂಡನ್‌: ಇಂಗ್ಲೆಂಡ್‌ನ ಮಾಜಿ ನಾಯಕ ಅಲಿಸ್ಟರ್‌ ಕುಕ್‌ ತಮ್ಮ 2 ದಶಕಗಳ ಕ್ರಿಕೆಟ್‌ ಬದುಕಿಗೆ ತೆರೆ ಎಳೆದಿದ್ದಾರೆ. 38 ವರ್ಷದ ಕುಕ್‌ ಶುಕ್ರವಾರ ಎಲ್ಲಾ ಮಾದರಿ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದರು. 2003ರಲ್ಲಿ ಕೌಂಟಿ ಕ್ರಿಕೆಟ್‌ ಆಡಲು ಆರಂಭಿಸಿದ್ದ ಕುಕ್‌, 2006ರಲ್ಲಿ ಇಂಗ್ಲೆಂಡ್‌ ತಂಡಕ್ಕೆ ಪಾದಾರ್ಪಣೆ ಮಾಡಿದ್ದರು. 2018ರಲ್ಲಿ ಟೆಸ್ಟ್‌ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರೂ ಎಸೆಕ್ಸ್‌ ಕೌಂಟಿ ತಂಡದ ಪರ ಆಟ ಮುಂದುವರಿಸಿದ್ದರು. ಕ್ರಿಕೆಟ್‌ ವೃತ್ತಿಬದುಕಿನಲ್ಲಿ ಕುಕ್‌ 562 ಪಂದ್ಯಗಳನ್ನಾಡಿದ್ದು, 88 ಶತಕ, 168 ಅರ್ಧಶತಕಗಳೊಂದಿಗೆ 34045 ರನ್‌ ಗಳಿಸಿದ್ದಾರೆ.

ರಾಷ್ಟ್ರೀಯ ಟಿ20ಗೆ ರಾಜ್ಯ ಮಹಿಳಾ ತಂಡ ಪ್ರಕಟ

ಬೆಂಗಳೂರು: ಅ.19ರಿಂದ 30ರ ವರೆಗೆ ವಡೋದರಾದಲ್ಲಿ ನಡೆಯಲಿರುವ ಹಿರಿಯ ಮಹಿಳೆಯರ ರಾಷ್ಟ್ರೀಯ ಟಿ20 ಟೂರ್ನಿಗೆ ಕರ್ನಾಟಕ ತಂಡ ಪ್ರಕಟಗೊಂಡಿದ್ದು, ಅನುಭವಿ ಆಟಗಾರ್ತಿ ವೇದಾ ಕೃಷ್ಣಮೂರ್ತಿ ತಂಡವನ್ನು ಮುನ್ನಡೆಸಲಿದ್ದಾರೆ. 15 ಸದಸ್ಯೆಯರ ತಂಡಕ್ಕೆ ಯುವ ಕ್ರಿಕೆಟರ್ ಶ್ರೇಯಾಂಕ ಪಾಟೀಲ್‌ ಮೊದಲ ಬಾರಿಗೆ ಉಪನಾಯಕಿಯಾಗಿ ನೇಮಕಗೊಂಡಿದ್ದಾರೆ.

ತಂಡ: ವೇದಾ(ನಾಯಕಿ), ಶ್ರೇಯಾಂಕ, ದಿವ್ಯಾ, ವೃಂದಾ, ರೋಶಿನಿ, ಪ್ರತ್ಯುಷಾ ಕುಮಾರ್‌, ಪ್ರತ್ಯುಷಾ ಸಿ., ಶಿಶಿರ ಗೌಡ, ಪುಷ್ಪಾ, ಸಹನಾ, ಪ್ರೇರಣಾ, ಚಾಂದಸಿ, ಸಂಜನಾ, ರಾಜೇಶ್ವರಿ ಗಾಯಕ್ವಾಡ್‌, ರೋಹಿತಾ.
 

click me!